ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರಲ್ಲಿ ಮನೋಬಲ ಕುಸಿಯುತ್ತಿದೆ

Last Updated 22 ಜುಲೈ 2017, 10:30 IST
ಅಕ್ಷರ ಗಾತ್ರ

ಉಡುಪಿ: ಪೊಲೀಸರಲ್ಲಿ ಆತ್ಮಸ್ಥೈಯ  ಹಾಗೂ ಪರಿಸರ ಬಗ್ಗೆ ಕಾಳಜಿ ಮೂಡಿಸುವ ವಿವಿಧ ಉದ್ದೇಶಗಳನ್ನು ಒಳಗೊಂಡ 15 ದಿನಗಳ  1750 ಕಿ.ಮಿ. ಸೈಕಲ್  ಯಾತ್ರೆಯನ್ನು  ಹಮ್ಮಿಕೊಳ್ಳಲಾಗಿದೆ ಎಂದು ಕೆಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 52 ಮಂದಿ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿ ಪಡೆ ಕರ್ನಾಟಕ ದರ್ಶನ ಸೈಕಲ್ ಯಾತ್ರೆ ಮೂಲಕ ಶುಕ್ರವಾರ ಸಂಜೆ ಉಡುಪಿ  ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪೊಲೀಸ್ ಸಿಬ್ಬಂದಿಗಳ ಮನೋಬಲ ಕುಸಿಯುತ್ತಿ ರುವುದರಿಂದ ಆತ್ಮಹತ್ಯೆ, ರಾಜೀನಾಮೆ ಹೀಗೆ ಹತ್ತು ಹಲವು ಪ್ರಕರಣಗಳು ಪೊಲೀಸ್ ಇಲಾಖೆಯಲ್ಲಿ  ಹೆಚ್ಚಾಗಿ ಕಂಡು ಬರುತ್ತಿದೆ. ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 360  ಪೊಲೀಸ್‌ ಹುದ್ದೆ ಗಳು ಹಲವು ಕಾರಣದಿಂದಾಗಿ ಖಾಲಿಯಾಗಿವೆ. ಆದ್ದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡಿಸಲು ಸೈಕಲ್ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 12 ಬೆಟಾಲಿಯನ್, 2 ತರಬೇತಿ ಶಾಲೆ, ಐ.ಆರ್.ಬಿ ಜೊತೆಗೆ 56 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಬೀದರ್‌ನಿಂದ ಉಡುಪಿಗೆ 1225 ಕಿ.ಮೀ ಕ್ರಮಿಸಲಾಗಿದೆ. ಇನ್ನು ಹಾಸನ ಮಾರ್ಗವಾಗಿ ಜುಲೈ 22ರಂದು ತೆರಳಿ ಬೆಂಗಳೂರಿನ ವಿಧಾನ ಸೌದದಲ್ಲಿ ಕರ್ನಾಟಕ ಸೈಕಲ್ ಯಾತ್ರೆಯನ್ನು ಮುಕ್ತಾಯಗೊಳಿಸಲಾಗುತ್ತದೆ ಎಂದರು.

ಪ್ರತಿನಿತ್ಯ ಮುಂಜಾನೆ 4 ಗಂಟೆಗೆ ಪ್ರಯಾಣ ಆರಂಭಿಸಿ ಸಂಜೆ 5 ಗಂಟೆಯಿಂದ ವಿಶ್ರಾಂತಿಯನ್ನು ಪಡೆಯಲಾಗುತ್ತದೆ. ಬೆಳಗ್ಗಿನ ಜಾವ ಸಸ್ಯಾಹಾರಿಗಳಿಗೆ ಬ್ರೆಡ್ ಹಾಗೂ ದಾಲ್, ಮಾಂಸಾಹಾರಿಗಳಿಗೆ ಬ್ರೆಡ್ ಜಾಮ್ ಹಾಗೂ ಮೊಟ್ಟೆಯನ್ನು ನೀಡಲಾಗುತ್ತದೆ. ಸುಮಾರು 50 ಕಿ.ಮೀ. ಕ್ರಮಿಸಿದ ನಂತರ ಉಪಹಾರ ಸೇವಿಸಿ ಮತ್ತೆ ಸಂಜೆ 3 ಗಂಟೆಗೆ ಭೋಜನ ಮಾಡಿ ವಿಶ್ರಾಂತಿ ಪಡೆದುಕೊಳ್ಳುತ್ತೇವೆ. ದಿನಕ್ಕೆ ಸರಾಸರಿ 175–180 ಕಿಮಿ ದೂರವನ್ನು  ಕ್ರಮಿಸಲಾಗುತ್ತದೆ. 25ರಿಂದ 30 ವರ್ಷದ ಯುವಕರ ತಂಡವನ್ನು ಹೊಂದಿದೆ  ಎಂದು ತಿಳಿಸಿದ್ದಾರೆ.

ಕರ್ನಾಟಕ ದರ್ಶನ ಯಾತ್ರೆ
ಜುಲೈ 12ರಂದು ಬೀದರ್‌ನಿಂದ ಆರಂಭವಾಗಿ ಕಲಬುರ್ಗಿ, ವಿಜಯಪುರ, ಗದಗ, ಕೊಪ್ಪಳ, ಹಂಪಿ, ಶಿವಮೊಗ್ಗ, ಉಡುಪಿ, ಹಾಸನ, ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತಿದೆ. ಪ್ರತಿ ಜಿಲ್ಲೆಯ ಕೇಂದ್ರದಲ್ಲಿ  60 ಗಿಡಗಳನ್ನು ನೆಡುತ್ತಿದ್ದೇವೆ. ಬಯಲು ಶೌಚ ಮುಕ್ತ, ಕನ್ನಡ ಉಳಿಸಿ ಬೆಳೆಸಿ ಹೀಗೆ ಹಲವು ರೀತಿಯಾದ ಸಾಮಾಜಿಕ  ಅರಿವು ಮೂಡಿಸಲಾಗಿದೆ ಎಂದರು. ಗುಪ್ತಚರ ಇಲಾಖೆ ವರಿಷ್ಠಾಧಿಕಾರಿ ಕ್ಯಾಪ್ಟನ್ ಅಯ್ಯಪ್ಪ, ಉಪನಿರೀಕ್ಷಕ ಮುಪ್ಪಣ್ಣ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT