ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಅರಳಿದ ಅಭಿಷೇಕ್‌...

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ಕ್ರಿಕೆಟ್‌ ಲೋಕದ ಹೊಸ ಚಿಗುರು ಬೀದರ್‌ನ ಅಭಿಷೇಕ್‌ ರೆಡ್ಡಿ.

ಬದ್ಧತೆ ಮತ್ತು ಅರ್ಪಣಾ ಭಾವದಿಂದ ಕ್ರೀಡೆಯಲ್ಲಿ ನೈಪುಣ್ಯ ಸಾಧಿಸಿ ಯಶಸ್ಸಿನ ಹಾದಿಯಲ್ಲಿ ಅಡಿ ಇಡುತ್ತಿರುವ ಬಲಗೈ ಬ್ಯಾಟ್ಸ್‌ಮನ್‌ ಅಭಿಷೇಕ್‌, ರಾಜ್ಯ ಕ್ರಿಕೆಟ್‌ನ ಭರವಸೆಯಾಗಿ ಗೋಚರಿಸಿದ್ದಾರೆ.

2006ರಲ್ಲಿ ಹೈದರಾಬಾದ್‌ ವಿರುದ್ಧ ಆಡುವ ಮೂಲಕ 13 ವರ್ಷದೊಳಗಿನವರ ಕ್ರಿಕೆಟ್‌ಗೆ ಕಾಲಿಟ್ಟ ಅಭಿಷೇಕ್‌, ಚೊಚ್ಚಲ ಪಂದ್ಯದಲ್ಲೇ 91ರನ್‌ ಗಳಿಸಿ ಗಮನ ಸೆಳೆದಿದ್ದರು. ಆ ನಂತರ 16, 19 ಮತ್ತು 23 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಗಳಲ್ಲೂ ಅಪೂರ್ವ ಆಟ ಆಡಿ ತಮ್ಮೊಳಗಿನ ಪ್ರತಿಭೆಯನ್ನು ಜಗಜ್ಜಾಹೀರುಗೊಳಿಸಿದ್ದರು.

19 ವರ್ಷದೊಳಗಿನವರ ಟೂರ್ನಿ ಗಳಲ್ಲಿ ರಾಜ್ಯ ತಂಡವನ್ನು ಮುನ್ನಡೆಸಿದ್ದ ಬಸವಕಲ್ಯಾಣದ ಪ್ರತಿಭೆ, ವಿನೂ ಮಂಕಡ್ ಮತ್ತು ಕೂಚ್‌ ಬೆಹಾರ್‌ ಟೂರ್ನಿಗಳಲ್ಲಿ ಕ್ರಮವಾಗಿ ಮೌಲ್ಯಯುತ ಬ್ಯಾಟ್ಸ್‌ಮನ್‌ ಮತ್ತು ಶ್ರೇಷ್ಠ ಬೌಲರ್‌ ಗೌರವ ಗಳಿಸಿ ಕ್ರಿಕೆಟ್‌ ಪಂಡಿತರ ಹುಬ್ಬೇರುವಂತೆ ಮಾಡಿದ್ದರು.

2013ರ ಶಫಿ ದಾರಾಶ ಟೂರ್ನಿಯಲ್ಲಿ ಮೂರು ಪಂದ್ಯಗಳಿಂದ 443ರನ್‌ ಸಂಗ್ರಹಿಸಿ ಮಿಂಚಿದ್ದ ಅಭಿಷೇಕ್‌ 19ನೇ ವಯಸ್ಸಿನಲ್ಲೇ ರಾಜ್ಯ ರಣಜಿ ತಂಡಕ್ಕೆ ಆಯ್ಕೆಯಾಗಿದ್ದರು.

2014 ಅಭಿಷೇಕ್‌ ಪಾಲಿಗೆ ಸ್ಮರಣೀಯ ವರ್ಷವಾಗಿತ್ತು. ಕೆಎಸ್‌ಸಿಎ ಮೊದಲ ಡಿವಿಷನ್‌ ಲೀಗ್‌ನಲ್ಲಿ 1000ಕ್ಕೂ ಅಧಿಕ ರನ್‌ಗಳನ್ನು ಸಿಡಿಸಿದ್ದ ಅವರು ಈ ಸಾಧನೆ ಮಾಡಿದ ರಾಜ್ಯದ ಮೊದಲ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿ ದ್ದರು. 2015ರ ಇರಾನಿ ಟ್ರೋಫಿಯಲ್ಲಿ ಭಾರತ ಇತರೆ ತಂಡದ ವಿರುದ್ಧ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅಭಿಷೇಕ್‌, ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಸಂಭ್ರಮಿಸಿದ್ದರು.

ಅದೇ ವರ್ಷ ಕೆಎಸ್‌ಸಿಎ ಮೊದಲ ಡಿವಿಷನಲ್‌ ಲೀಗ್‌ನಲ್ಲಿ ಪಾರಮ್ಯ ಮೆರೆದಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌, ಹೋದ ವರ್ಷ ರಣಜಿ ಟ್ರೋಫಿಯಲ್ಲಿ ಆಡಿ ಸೈ ಎನಿಸಿಕೊಂಡಿದ್ದರು. ಅವರು ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ದಾಖಲಿಸಿದ್ದರು. ಹೋದ ವರ್ಷ ಕರ್ನಾಟಕ ಪ್ರೀಮಿಯರ್‌ ಲೀಗ್‌ ವೇಳೆ ಗಾಯಗೊಂಡು 10 ತಿಂಗಳ ಕಾಲ ಅಂಗಳದಿಂದ ದೂರ ಉಳಿದಿದ್ದ ಅವರು ಈಗ ಮತ್ತೆ ಸದ್ದು ಮಾಡಿದ್ದಾರೆ.

ಹೋದ ವಾರ ನಡೆದಿದ್ದ ಶಫಿ ದಾರಾಶಾ ಟೂರ್ನಿಯ ಬೆಂಗಳೂರು ವಲಯ ವಿರುದ್ಧದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಅವರು ಟೂರ್ನಿಯಲ್ಲಿ ಗರಿಷ್ಠ ರನ್‌ ಗಳಿಸಿದ ಆಟಗಾರ ಎಂಬ ಹಿರಿಮೆಯನ್ನೂ ಹೊಂದಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ನಿಮಗಾಗಿದ್ದ ಗಾಯದ ಬಗ್ಗೆ ಹೇಳಿ?

ಕೆಪಿಎಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್‌ ತಂಡದಲ್ಲಿದ್ದೆ. ಸೆಪ್ಟೆಂಬರ್‌ 20ರಂದು ನಡೆದಿದ್ದ ಬಳ್ಳಾರಿ ಟಸ್ಕರ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಮಳೆ ಸುರಿದಿತ್ತು. ಫೀಲ್ಡಿಂಗ್‌ ಮಾಡುವಾಗ ಜಾರಿ ಬಿದ್ದಿದ್ದರಿಂದ ಬಲ ಮಂಡಿಗೆ ಬಲವಾದ ಪೆಟ್ಟು ಬಿದ್ದಿತ್ತು. ಗಾಯಗೊಂಡ ನಂತರ ವಿಶ್ರಾಂತಿ ಪಡೆದಿದ್ದರೆ ಎಲ್ಲವೂ ಸರಿ ಹೋಗುತ್ತಿತ್ತೇನೊ. ಆದರೆ ಬ್ಯಾಟಿಂಗ್‌ ಮಾಡಲು ಮುಂದಾಗಿದ್ದು ತಪ್ಪು ನಿರ್ಧಾರ ವಾಗಿತ್ತು. ಇದರಿಂದಾಗಿ 10 ತಿಂಗಳ ಕಾಲ ಅಂಗಳದಿಂದ ದೂರ ಉಳಿಯಬೇಕಾಗಿ ಬಂತು.

* ಶಸ್ತ್ರ ಚಿಕಿತ್ಸೆಯ ನಂತರ ನೀವು ಎದುರಿಸಿದ ಕಷ್ಟಗಳೇನು?

ಘಟನೆ ನಡೆದ ಎರಡು ತಿಂಗಳ ನಂತರ ಮುಂಬೈನ ಕೋಕಿಲಾ ಬೆನ್‌ ಆಸ್ಪತ್ರೆಗೆ ದಾಖಲಾದೆ. ನವೆಂಬರ್‌ 24ರಂದು ಬಲ ಮಂಡಿಯ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಚಿಕಿತ್ಸೆಯ ನಂತರ ನೆಲಕ್ಕೆ ಕಾಲಿಡುವುದೇ ಕಷ್ಟ ಅನಿಸಿತ್ತು. ಮೂರು ತಿಂಗಳ ಕಾಲ ನರಕಯಾತನೆ ಅನು ಭವಿಸಿದ್ದೆ. ಇನ್ನೆಂದೂ ಕ್ರಿಕೆಟ್‌ ಆಡಲು ಆಗುವುದೇ ಇಲ್ಲ ಎಂದು ಒಮ್ಮೊಮ್ಮೆ ಅನಿಸುತ್ತಿತ್ತು. ಹೀಗಿದ್ದರೂ ಎದೆಗುಂದಲಿಲ್ಲ. ನಿಧಾನವಾಗಿ ನಡೆದಾಡಲು ಶುರು ಮಾಡಿದೆ. ಬಳಿಕ ಅಭ್ಯಾಸವನ್ನೂ ಆರಂಭಿ ಸಿದೆ. ಈಗ ಎಲ್ಲವೂ ಸರಿಹೋಗುತ್ತಿದೆ.

* ಗಾಯದಿಂದ ಚೇತರಿಸಿಕೊಂಡ ಬಳಿಕ ಶಫಿ ದಾರಾಶಾ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿ ಮಿಂಚಿದ್ದೀರಿ. ಇದು ಹೇಗೆ ಸಾಧ್ಯವಾಯಿತು?

ಶಸ್ತ್ರ ಚಿಕಿತ್ಸೆಯ ನಂತರ ಕ್ರಿಕೆಟ್‌ ನೋಡುವುದನ್ನೆ ಬಿಟ್ಟಿದ್ದೆ. ಚೇತರಿಸಿ ಕೊಂಡ ಬಳಿಕ ನಾನು ಆಡಿದ್ದ ಹಳೆಯ ಪಂದ್ಯಗಳ ವಿಡಿಯೊ ತುಣುಕುಗಳನ್ನು ನೋಡಿದೆ. ಇದರಿಂದ ಮನೋಬಲ ಹೆಚ್ಚಿತು. ಶಫಿ ದಾರಾಶಾ ಟೂರ್ನಿ ನನ್ನ ಪಾಲಿಗೆ ತುಂಬಾ ಮಹತ್ವದ್ದಾಗಿತ್ತು. ಸಾಮರ್ಥ್ಯ ಸಾಬೀತು ಪಡಿಸಲು ಇದನ್ನು ವೇದಿಕೆಯಾಗಿ ಪರಿಗಣಿಸಿದ್ದೆ. ಬೇಗನೆ ವಿಕೆಟ್‌ ಒಪ್ಪಿಸದೆ ದೊಡ್ಡ ಇನಿಂಗ್ಸ್‌ ಕಟ್ಟ ಬೇಕು ಎಂದು ದೃಢವಾಗಿ ನಿಶ್ಚಯಿಸಿ ಅಂಗಳಕ್ಕಿಳಿದಿದ್ದೆ. ಹೀಗಾಗಿ ದ್ವಿಶತಕದ ಸಾಧನೆ ಮೂಡಿಬಂತು.

* ಇರಾನಿ ಟ್ರೋಫಿಯಲ್ಲಿ ಆಡಿದ ಅನುಭವ ಹೇಗಿತ್ತು?

2014ರಲ್ಲಿ ನಡೆದಿದ್ದ ಸಿ.ಕೆ. ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಶತಕ ಸಿಡಿಸಿ ಮಿಂಚಿದ್ದೆ. ಹೀಗಾಗಿ ಇರಾನಿ ಟ್ರೋಫಿಯಲ್ಲಿ ಆಡುವ ಅವಕಾಶ ಲಭ್ಯವಾಗಿತ್ತು. ಪದಾರ್ಪಣೆ ಪಂದ್ಯದಲ್ಲೇ 54ರನ್‌ ಗಳಿಸಿ ಆಯ್ಕೆ ಸಮಿತಿ ಇಟ್ಟಿದ್ದ ನಂಬಿಕೆ ಉಳಿಸಿಕೊಂಡಿದ್ದೆ.

* ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರ ಬಗ್ಗೆ ಹೇಳಿ?

ಇರಾನಿ ಟ್ರೋಫಿಯ ನಂತರ ಅದೇ ವರ್ಷ ನಡೆದ ಬುಚ್ಚಿ ಬಾಬು ಕ್ರಿಕೆಟ್‌ ಟೂರ್ನಿಯಲ್ಲಿ ಹಿಮಾಚಲ ಪ್ರದೇಶ ವಿರುದ್ಧ 135ರನ್‌ ಗಳಿಸಿದ್ದೆ. ಹೀಗಾಗಿ ರಾಜಸ್ಥಾನ ವಿರುದ್ಧ ರಣಜಿಗೆ ಪದಾರ್ಪಣೆ ಮಾಡುವ ಅವಕಾಶ ಸಿಕ್ಕಿತು. ಮೊದಲ ಪ್ರಯತ್ನದಲ್ಲೇ ಅರ್ಧಶತಕ ಸಿಡಿಸಿದ್ದು ಖುಷಿ ನೀಡಿತು.

* ಈ ಬಾರಿ ರಾಬಿನ್‌ ಉತ್ತಪ್ಪ ರಾಜ್ಯ ತಂಡ ತೊರೆದಿದ್ದಾರೆ. ಇದರಿಂದ ರಣಜಿ ತಂಡದಲ್ಲಿ ಸ್ಥಾನ ಗಳಿಸುವ ನಿಮ್ಮ ಹಾದಿ ಸುಲಭವಾಯಿತಲ್ಲವೆ?

ಖಂಡಿತವಾಗಿಯೂ ಇಲ್ಲ. ನಮ್ಮದು ಶ್ರೇಷ್ಠ ತಂಡ. ಹೀಗಾಗಿ ಒಂದು ಸ್ಥಾನಕ್ಕಾಗಿ ಐದು ಇಲ್ಲವೇ ಆರು ಮಂದಿಯ ನಡುವೆ ಸ್ಪರ್ಧೆ ಇರುತ್ತದೆ. ಆದ್ದರಿಂದ ಯಾರ ಹಾದಿಯೂ ಸುಲಭವಲ್ಲ. ಮೀರ್‌ ಕೌನೈನ್‌ ಅಬ್ಬಾಸ್‌, ಶಿಶಿರ್‌ ಭವಾನೆ, ಅರ್ಜುನ್‌ ಹೊಯ್ಸಳ ಅವರೂ ತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಹೀಗಾಗಿ ಎಲ್ಲಾ ಟೂರ್ನಿಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಬೇಕು.

* ಈಗ ಅಭ್ಯಾಸದಲ್ಲಿ ಏನಾದರೂ ಬದಲಾವಣೆ ಮಾಡಿಕೊಂಡಿದ್ದೀರಾ?

ಬಲಗಾಲಿನ ಮಂಡಿಯಲ್ಲಿ ಇನ್ನೂ ಸ್ವಲ್ಪ ನೋವಿದೆ. ಹೀಗಾಗಿ ದಿನದಲ್ಲಿ ಎರಡು ಗಂಟೆ ಸರಳ ವ್ಯಾಯಾಮಗಳನ್ನು ಮಾಡುತ್ತೇನೆ. ಜೊತೆಗೆ ಒಂದು ಗಂಟೆ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದೇನೆ. ಈ ವೇಳೆ ಬಲಗಾಲಿನ ಮೇಲೆ ಹೆಚ್ಚು ಭಾರ ಬೀಳದ ಹಾಗೆ ಎಚ್ಚರವಹಿಸುತ್ತಿದ್ದೇನೆ.

* ರಾಜ್ಯ ರಣಜಿ ತಂಡದ ನೂತನ ಕೋಚ್‌ಗಳ ಬಗ್ಗೆ ಹೇಳಿ?

ಪಿ.ವಿ. ಶಶಿಕಾಂತ್‌ ಸರ್‌ ಮತ್ತು ಜಿ.ಕೆ. ಅನಿಲ್‌ ಕುಮಾರ್‌ ಸರ್‌ ಅವರು ಎಲ್ಲಾ ಆಟಗಾರರಿಗೂ ಚಿರಪರಿಚಿತರು. ಈ ಹಿಂದೆ ವಿವಿಧ ವಯೋಮಿತಿ ಯೊಳಗಿನ ವರ ತಂಡಗಳ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಕಲಿತ ಬಹುತೇಕರು ಈಗ ತಂಡದಲ್ಲಿದ್ದಾರೆ.

**

ಟೆನಿಸ್‌ ಕಲಿಯಲು ಬಂದು ಕ್ರಿಕೆಟಿಗನಾದೆ

10 ವರ್ಷದವನಾಗಿದ್ದಾಗ ಬೆಂಗಳೂರಿಗೆ ಬಂದೆ. ಮೊದಲು ಟೆನಿಸ್‌ನಲ್ಲಿ ಆಸಕ್ತಿ ಇತ್ತು. ಹೀಗಾಗಿ ಈ ಕ್ರೀಡೆಯಲ್ಲಿ ತರಬೇತಿ ಪಡೆಯಲು ನಿರ್ಧರಿಸಿದ್ದೆ. ಆಗ ಪ್ರವೇಶ ಸಿಗಲಿಲ್ಲ. ಹೀಗಾಗಿ ಅರಮನೆ ರಸ್ತೆಯಲ್ಲಿರುವ ಜಯಪ್ರಕಾಶ್‌ ಅಕಾಡೆಮಿಯಲ್ಲಿ ಆಯೋಜನೆಯಾಗಿದ್ದ ಕ್ರಿಕೆಟ್‌ ಶಿಬಿರಕ್ಕೆ ಸೇರಿದೆ. ಅಲ್ಲಿಂದ ಈ ಕ್ರೀಡೆಯಲ್ಲಿ ಆಸಕ್ತಿ ಬೆಳೆಯಿತು. ನಂತರ ಶಂಕರ್‌ ಸರ್‌ ಅವರು ಯಂಗ್‌ ಲಯನ್ಸ್‌ ಕ್ಲಬ್‌ನಲ್ಲಿ ಆಡುವ ಅವಕಾಶ ಕೊಟ್ಟರು. ಬಳಿಕ ಬೆಂಗಳೂರು ಅಕೇಷನಲ್ಸ್‌ ಕ್ಲಬ್‌ ಸೇರಿದೆ. ಅಲ್ಲಿ ವಿಜಯ್‌ ಮದ್ಯಾಲ್ಕರ್‌ ಸರ್‌ ಪ್ರತಿಭೆಗೆ ಸಾಣೆ ಹಿಡಿದರು. ನೂರುದ್ದೀನ್‌ ಮತ್ತು ನಾಸಿರುದ್ದೀನ್‌ ಅವರಿಂದಲೂ ಸಾಕಷ್ಟು ಕೌಶಲಗಳನ್ನು ಕಲಿತೆ.

**

ನೋವು ಮರೆಸಿದ ಬೆಂಬಲ

ಶಸ್ತ್ರ ಚಿಕಿತ್ಸೆಯ ನಂತರ ಕ್ರಿಕೆಟ್‌ ಬದುಕು ಅಂತ್ಯಗೊಳ್ಳಬಹುದು ಎಂಬ ಆತಂಕ ಎದುರಾಗಿತ್ತು. ಈ ಹಂತದಲ್ಲಿ ಅಪ್ಪ ಮಾಣಿಕ್‌ ರೆಡ್ಡಿ, ಅಮ್ಮ ರಾಧಾ ಮತ್ತು ಅಣ್ಣ ಲಕ್ಷ್ಮಿಕಾಂತ್ ಅವರು ಬೆಂಬಲವಾಗಿ ನಿಂತರು. ಸ್ನೇಹಿತರ ಸಹಕಾರ ಮತ್ತು ಫಿಸಿಯೊ ಶ್ರೀರಂಗ ಮತ್ತು ಟ್ರೈನರ್‌ ಪ್ರಶಾಂತ್‌ ಪೂಜಾರ ಅವರ ನೆರವೂ ನನ್ನಲ್ಲಿ ಹೊಸ ಸ್ಫೂರ್ತಿ ತುಂಬಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT