ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳಿ ಬಂದ ಬಣ್ಣದ ಜೋಳ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಕಳೆದ ಬಾರಿ ಮಳೆ ಕೈಕೊಟ್ಟ ಪರಿಣಾಮ ಕಾವೇರಿ ಬಯಲಿನಲ್ಲಿ ಸೂತಕದ ವಾತಾವರಣ. ಸದಾ ಭತ್ತ ಮತ್ತು ಕಬ್ಬಿನ ಹಸಿರು ಹೊದ್ದು ಮಲಗಿರುತ್ತಿದ್ದ ಹೊಲಗದ್ದೆಗಳು ಪಾಳು ಬಿದ್ದಿವೆ. ಪ್ರತಿ ಬಾರಿಯ ಬೇಸಿಗೆಯಲ್ಲಿ ಬಿತ್ತುತ್ತಿದ್ದ ಹೆಸರು, ಉದ್ದಿಗೂ ಎಳ್ಳುನೀರು ಬಿಟ್ಟಾಗಿದೆ. ‘ಮಳೆ ಹೋಯ್ತು ಅನ್ನಿ! ಬೆಳೆ ಇಲ್ಲ. ಕೂಲಿ ಕೆಲಸಕ್ಕೆ ಸಿಟಿಗೆ ಹೋಗಬೇಕು ಕಣಾ’ ಎಂಬ ರೈತರ ನೋವಿನ ಮಾತು ಸಾಮಾನ್ಯ.

ಆದರೆ, ಕೊಳ್ಳೇಗಾಲ ತಾಲ್ಲೂಕಿನ ಹೊಸಮಾಲಂಗಿಯ ಅಭಿಲಾಷ್‌ ಅವರ ಮುಖದಲ್ಲಿ ಮಂದಹಾಸ. ‘ಒಳ್ಳೆ ಬೆಳೆ ಸಾರ್. ನನ್ನ ನೋಡಿ ನಕ್ಕವರು ಇವತ್ತು ಹೊಲಕ್ಕೆ ಬಂದು ಶಭಾಷ್ ಅಂತಿದ್ದಾರೆ’ ಎನ್ನುತ್ತಾರೆ. ಅಭಿಲಾಷ್‌ ಅವರ ಹೊಲದಲ್ಲಿ ಬೆಳೆದು ನಿಂತ ಬಣ್ಣದ ಮುಸುಕಿನ ಜೋಳದಿಂದ ಹೊಲದ ರಂಗು ಹಚ್ಚಿದೆ.

ಮರಳಿ ಮಣ್ಣಿಗೆ: ಎಚ್.ಆರ್. ಅಭಿಲಾಷ್ 23 ವರ್ಷದ ಯುವಕ. ಮೊಬೈಲ್, ವಾಟ್ಸಪ್, ಸಿನಿಮಾದ ಗುಂಗಿನಲ್ಲಿ ಇವರ ವಾರಗೆಯ ಹುಡುಗರು ಮುಳುಗಿದ್ದರೆ, ಇವರು ದೇಸಿ ಬೀಜಗಳ ಹುಡುಕಾಡುವುದು, ಬೆಳೆಯುವುದರಲ್ಲಿ ಬ್ಯುಸಿ. ಪದವಿ ಮುಗಿಸಿದ ನಂತರ, ನೌಕರಿಗೆ ಪೇಟೆಯ ದಾರಿ ಹಿಡಿಯದೆ ಒಕ್ಕಲು ತನಕ್ಕೆ ಬಂದರು. ಅಪ್ಪ ರೇಚಣ್ಣ ರೈತ ಸಂಘದ ಸಕ್ರಿಯ ಕಾರ್ಯಕರ್ತ; ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬೀಜ ಸಂರಕ್ಷಕ. ಅಪ್ಪ ನೊಟ್ಟಿಗೆ ಬೀಜ ಮೇಳಗಳಿಗೆ

ಹೋಗುತ್ತಿದ್ದ ಅಭಿಲಾಷ್‌ ಅವರಿಗೂ ಬೀಜದ ನಂಟು ಬೆಳೆಯಿತು. ಆದಿವಾಸಿ ಹಳ್ಳಿಗರು ಪ್ರದರ್ಶನಕ್ಕೆ ತರುತ್ತಿದ್ದ ಬಣ್ಣ ಬಣ್ಣದ ಮುಸುಕಿನಜೋಳ ಅಭಿಲಾಷ್‌ ಅವರನ್ನು ಆಕರ್ಷಿಸಿತು. ತಮ್ಮ ಹೊಲದಲ್ಲೂ ಇವನ್ನು ಬೆಳೆಸುವ ಆಸೆ ಹುಟ್ಟುಹಾಕಿತು.

ವಿಷಮುಕ್ತ ಕೃಷಿಯನ್ನು ಕಲಿಯಲೆಂದು ರೈತ ನಾಯಕ ಎಂ.ಡಿ.ನಂಜುಂಡಸ್ವಾಮಿಯವರು ಕಟ್ಟಿದ ಅಮೃತ ಭೂಮಿಗೆ ಹೋದರು. ಒಂದು ವರ್ಷ ಅಲ್ಲಿ ತರಬೇತಿಯನ್ನೂ ಪಡೆದರು. ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಪೋಡುಗಳಿಂದ ಸಂಗ್ರಹಿಸಿ ತಂದ ಬಣ್ಣದ ಮುಸುಕಿನ ಜೋಳವನ್ನು ಅಲ್ಲಿ ಬೆಳೆಯಲಾಗಿತ್ತು. ಯಾವುದೇ ರಾಸಾಯನಿಕ ಬಳಸದೆ, ಹುಲುಸಾಗಿ ಬೆಳೆದಿದ್ದ ಈ ಜೋಳ ಅಭಿಲಾಷ್‌ ಅವರ ಗಮನ ಸೆಳೆಯಿತು. ಅಮೃತ ಭೂಮಿಗೆ ಬಂದವರೆಲ್ಲಾ ಬಣ್ಣದ ಮುಸುಕಿನಜೋಳದ ಗುಣಗಾನ ಮಾಡುತ್ತಿದ್ದುದು ಅಭಿಲಾಷ್‌ ಅವರಲ್ಲಿ ಅದನ್ನು ಬೆಳೆಸುವ ಆಸೆಯನ್ನು ಮತ್ತಷ್ಟು ಹೆಚ್ಚಿಸಿತು. ತರಬೇತಿ ಮುಗಿಸಿ, ಊರಿಗೆ ಬರುವ ಹೊತ್ತಿಗೆ ಬೇಸಿಗೆಯೂ ಕಾಲಿಟ್ಟಿತ್ತು.

ಕೊಳವೆ ಬಾವಿ ಆಶ್ರಯದಲ್ಲಿ ತೋಟ ಮಾಡಿದ್ದ ಅಪ್ಪ ಬೇಸಿಗೆಯಲ್ಲಿ ಗಿಡಗಳನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದರು. ದೇಸಿ ಮುಸುಕಿನ ಜೋಳದ ಹುಚ್ಚು ಹಿಡಿಸಿಕೊಂಡಿದ್ದ, ಮಗ ಅಭಿಲಾಷನಿಗೆ ಮಳೆಗಾಲದವರೆಗೂ ಕಾಯುವ ತಾಳ್ಮೆ ಇರಲಿಲ್ಲ. ಹಿಂಗಾರಿ ಜೋಳದ ರೀತಿ ಬೇಸಿಗೆಯಲ್ಲೇ ಬಣ್ಣದ ಜೋಳ ಬೆಳೆಯಲು ಅಪ್ಪನ ಮನವೊಲಿಸಿದರು.

(‘ನೋಡಿ ಸಾರ್, ಹೇಗಿದೆ ನಮ್ಮ ಹೊಲದಲ್ಲಿ ಬೆಳೆದ ಮುಸುಕಿನ ಜೋಳ?)

ಬೀಜ ಇಲ್ಲ ಸಾ!: ಮಾವಿನ ತೋಟದ ನಡುವಿನ ಎರಡು ಎಕರೆ ಖಾಲಿ ಜಾಗದಲ್ಲಿ ಬಣ್ಣದ ಮುಸುಕಿನ ಜೋಳ ಬೆಳೆಯಲು ತೀರ್ಮಾನಿಸಿದ್ದಾಯಿತು. ಅಮೃತಭೂಮಿಯಲ್ಲೂ ಹೆಚ್ಚು ಬೀಜ ಇರಲಿಲ್ಲ. ಬೀಜ ಹುಡುಕಿ ಅಭಿಲಾಷ್‌ ಅವರ ಸವಾರಿ ಬಿಳಿಗಿರಿರಂಗನ ಬೆಟ್ಟದ ಕಡೆ ಹೊರಟಿತು.

ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಕೃಷಿ ವೈವಿಧ್ಯಕ್ಕೆ ಹೆಸರುವಾಸಿ. ಇಲ್ಲಿನ ಸೋಲಿಗರ ಪೋಡುಗಳಲ್ಲಿ (ಪೋಡು ಎಂದರೆ ಸೋಲಿಗರು ನೆಲೆಸಿರುವ ಹಳ್ಳಿ) ಇವತ್ತಿಗೂ ಹತ್ತಾರು ತರದ ಮೂಲ ತಳಿಗಳನ್ನು ಕಾಣಬಹುದು. ಅಪ್ಪಟ ಕಂದು, ಹಳದಿ, ಬಿಳಿ ಬಣ್ಣದ ತಳಿಗಳೊಟ್ಟಿಗೆ ಒಂದೇ ಮುಸುಕಿನ ಜೋಳದ ತೆನೆಯಲ್ಲಿ ಕಂದು, ಹಳದಿ, ಬಿಳಿ ಬಣ್ಣ ಮಿಶ್ರಗೊಂಡ ವರ್ಣಮಯ ತಳಿಗಳನ್ನು ಸೋಲಿಗರೂ ಜೋಪಾನ ಮಾಡಿಟ್ಟಿದ್ದಾರೆ.ಕರಿ, ಬಿಳಿ ಬೀಜ ಮಿಶ್ರಿತವಾದ ‘ಮಲೆ ಜೋಳ’, ಸಣ್ಣ ತೆನೆಯ ಗುಂಡು ಕಾಳಿನ ಮಾಸಲು ಕೆಂಪಿನ ‘ಕುರಿಪಿಕ್ಕೆ ಜೋಳ’, ಕಪ್ಪೆ ಕಣ್ಣ ಜೋಳ, ಕೆಂಪು ಇಲಿಗಾ, ಸಣ್ಣ ಜೋಳ, ಕೂರೆ ಜೋಳ, ಕೆಂಪು ಜೋಳ, ಬಿಳಿ ಜೋಳ... ಹೀಗೆ ಮುಸುಕಿನ ಜೋಳದ ತಳಿಗಳ ಹೆಸರಿನ ಪಟ್ಟಿ ಬೆಳೆಯುತ್ತದೆ. ತಳಿಯಿಂದ ತಳಿಗೆ ಪರಾಗಸ್ಪರ್ಶಕ್ರಿಯೆ ನಡೆದು ಚಿತ್ತ ಚಿತ್ತಾರದ ತೆನೆಯ ತಳಿಗಳು ಸೃಷ್ಟಿಯಾಗಿವೆ.

ಇಂಥ ರಂಗಿನ ಜೋಳ ಹುಡುಕಿ ಬೆಟ್ಟಕ್ಕೆ ಬಂದ ಅಭಿಲಾಷ್‌ ಅವರಿಗೆ ನಿರಾಸೆ ಕಾದಿತ್ತು. ‘ಹೋದ ವರ್ಷ ಮಳೆನೇ ಇಲ್ಲ ಸಾ! ನಂಗೇ ಬೀಜ ಇಲ್ಲ’ ಎಂದು ಸೋಲಿಗ ರೈತರು ಕೈ ಚೆಲ್ಲಿದರು. ಮಾದೇಗೌಡರ ಜೊತೆ ಪೋಡುಗಳಲ್ಲೆಲ್ಲಾ ಸುತ್ತಾಡಿ, ಅಭಿಲಾಷ್‌ ಬೀಜ ಸಿಗದೆ ಊರಿಗೆ ಮರಳಿದರು. ಬೀಜ ಹುಡುಕಾಟದ ತಮ್ಮ ಪಡಿಪಾಟಲನ್ನು ಅಮೃತಭೂಮಿಯಲ್ಲಿ ಜೊತೆಗಾರನಾಗಿದ್ದ ಗೆಳೆಯ ಬೆಳವಾಡಿ ನವೀನ್‌ ಅವರಿಗೆ ಹೇಳಿದರು. ಅರಕಲಗೂಡು ಬಳಿಯ ಹುಟ್ಟೂರಿಗೆ ಹಿಂತಿರುಗಿ, ಕೃಷಿಯಲ್ಲಿ ತೊಡಗಿದ್ದ ನವೀನ್ ಅಮೃತಭೂಮಿಯಿಂದ ಬರುವಾಗ ಒಂದಷ್ಟು ಬಣ್ಣದ ಮುಸುಕಿನಜೋಳದ ಬೀಜಗಳನ್ನು ತಂದು ತಮ್ಮ ಸಂಬಂಧಿಕರೊಬ್ಬರಿಗೆ ಕೊಟ್ಟಿದ್ದರು. ಅವರಿಂದ ಇಪ್ಪತ್ತು ಸೇರು ಬೀಜ ಎರವಲು ಪಡೆಯಲಾಯಿತು.

ಮರಳಿ ಬಂದ ಜೋಳ; ಮಾರ್ಚ್‌ ಆರಂಭದಲ್ಲಿ ಸಾಲಿನಿಂದ ಸಾಲಿಗೆ ಒಂದೂವರೆ ಅಡಿ ಮತ್ತು ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರ ಕೊಟ್ಟು ಮುಸುಕಿನ ಜೋಳದ ಬೀಜಗಳನ್ನು ಬಿತ್ತಲಾಯಿತು. ಪೈರು ಬೆಳವಣಿಗೆ ಹಂತಕ್ಕೆ ಬರುವ ಹೊತ್ತಿಗೆ, ಕೊಳವೆಬಾವಿ ಬಿಕ್ಕಲು ಶುರುವಾಯಿತು. ತುಂತುರು ನೀರಾವರಿ ಮೂಲಕ ಸಿಕ್ಕಷ್ಟೇ ನೀರನ್ನು ಪೈರುಗಳಿಗೆ ನೀಡಲಾಯಿತು. ಬರ ನಿರೋಧಕ ಗುಣವಿದ್ದ ಮುಸುಕಿನ ಜೋಳ ಆರು ಅಡಿ ಎತ್ತರದವರೆಗೂ ಬೆಳೆದು ನಿಂತಿತು.

ನೀರಿನ ಕೊರತೆಯ ದೆಸೆಯಿಂದ ಇಳುವರಿ ಕುಂಠಿತವಾಗಿದೆ. ಎಕರೆಗೆ 6 ಕ್ವಿಂಟಾಲ್ ಬೀಜ ಸಿಕ್ಕಿದೆ; ಅದೂ ಹೊರಗಿನ ಒಳಸುರಿಗಳಿಲ್ಲದೆ. ‘ನಾವು ಸರಿಯಾಗಿ ಕಳೆ ಕೂಡ ತೆಗೀಲಿಲ್ಲ. ಇಲ್ಲ ಅಂದ್ರೆ ಇನ್ನ ಚೆನ್ನಾಗಿ ಬೆಳೆಯೋದು. ಎಕರೆಗೆ 10-15 ಕ್ವಿಂಟಾಲ್ ಆರಾಮಾಗಿ ಬೆಳೀಬಹುದು. ಈ ಜೋಳ ಎತ್ತರ ಬೆಳೆಯೋದ್ರಿಂದ, ಹೆಚ್ಚು ಹಸಿರಾಗಿರುವುದರಿಂದ ದನಕರುಗಳಿಗೆ ಒಳ್ಳೆಯ ಮೇವಾಗುತ್ತದೆ...’ ರೇಚಣ್ಣ ಬಣ್ಣದ ಮುಸುಕಿನಜೋಳಕ್ಕೆ ಶಭಾಷ್ ಹೇಳುತ್ತಾರೆ.

ನಿಸರ್ಗದ ಕಲಾಕೃತಿ; ಬಣ್ಣದ ಮುಸುಕಿನ ಜೋಳ ಕಟಾವು ಮಾಡಿ, ಮನೆಗೆ ತಂದ ನಂತರ ಇದು ಹಳ್ಳಿಗರ ಆಕರ್ಷಣೆಯ ವಸ್ತುವಾಗಿದೆ. ಮಾಮೂಲಿ ಹಳದಿ ಬಣ್ಣದ ಹೈಬ್ರೀಡ್ ಜೋಳ ನೋಡಿದ್ದ ಹಳ್ಳಿಗರು, ಇದರ ರಂಗುರಂಗಿನ ಬಣ್ಣಕ್ಕೆ ಮನಸೋತಿದ್ದಾರೆ. ‘ಈ ಜೋಳ ನೋಡೋಕೆ ಜನ ಬರ್ತಿದಾರೆ. ನಮಗೂ ಬೀಜ ಕೊಡಿ ಎಂದು ಕೇಳ್ತಿದಾರೆ. ಬಂದವರು ಒಂದರೆಡು ತೆನೆ ತಮ್ಮ ಟಿ.ವಿ ಮೇಲೆ ಇಡೋಕೆ, ಮನೆಯವರಿಗೆ ತೋರಿಸೋಕೆ ತಗೊಂಡು ಹೋಗ್ತಿದಾರೆ...’ ಆಭಿಲಾಷ್‌ ಅವರ ಅಮ್ಮ ರಾಜೇಶ್ವರಿ ಹೆಮ್ಮೆಯಿಂದ ಹೇಳುತ್ತಾರೆ.

ಸಾವಯವಕ್ಕೆ ಒಗ್ಗುವ ಬಣ್ಣದ ಮುಸುಕಿನ ಜೋಳ ನಾಲ್ಕರಿಂದ ನಾಲ್ಕೂವರೆ ತಿಂಗಳ ಬೆಳೆ. ಒಂದಾಳೆತ್ತರ ಮೀರಿ ಬೆಳೆಯುವ ಈ ಜೋಳಕ್ಕೆ ಕನಿಷ್ಠ ಮೂರು ಒಳ್ಳೆಯ ಮಳೆಯಾದರೂ ಬೇಕು. ಹೆಚ್ಚು ಮಳೆಯಾದರೆ ಇಳುವರಿಯೂ ಹೆಚ್ಚು. ಈ ಜೋಳದ ಕಾಳು ಹೆಚ್ಚು ಸಿಹಿಯಾಗಿರುವುದರಿಂದ ಹಕ್ಕಿ, ಹಂದಿಗಳ ಕಾಟ ಇದ್ದೇ ಇದೆ.

ಬಣ್ಣದ ಮುಸುಕಿನ ಜೋಳದಿಂದ ಮುದ್ದೆ, ದೋಸೆ, ರೊಟ್ಟಿ, ಉಪ್ಪಿಟ್ಟು ಮಾಡುತ್ತಾರೆ. ಹುರಿದು ಪಾಪ್‍ಕಾರ್ನ್ ಕೂಡ ಮಾಡಬಹುದು. ಸಹಜ ಸಮೃದ್ದ ಬಳಗದ ಆಶಾಕುಮಾರಿ ಬಣ್ಣದ ಮುಸುಕಿನ ಜೋಳದಿಂದ ಲಡ್ಡು, ಪಕೋಡ, ಇಡ್ಲಿ, ದೋಕ್ಲ, ಹಪ್ಪಳ, ವಡೆ, ಗುಲಾಬ್ ಜಾಮೂನು ಮೊದಲಾದ ಹೊಸ ರುಚಿಗಳನ್ನು ಮಾಡುವ ಬಗೆಯನ್ನು ಆಸಕ್ತರಿಗೆ ಕಲಿಸಿಕೊಡುತ್ತಿದ್ದಾರೆ.

ಕರ್ನಾಟಕವೇ ಹೆಮ್ಮೆ ಪಡುವಂತಹ ಅಪರೂಪದ ಬಣ್ಣದ ಮುಸುಕಿನಜೋಳದ ಬಗ್ಗೆ ಕೃಷಿ ವಿಜ್ಞಾನಿಗಳಿಗೆ ಅಸಡ್ಡೆ. ಬಣ್ಣದ ಮುಸುಕಿನ ಜೋಳದ ವರ್ಗೀಕರಣ, ತಳಿ ಅಭಿವೃದ್ಧಿ, ಸೋಲಿಗರ ಜ್ಞಾನದ ದಾಖಲಾತಿ ಮಾಡಬೇಕಾದ ಕೃಷಿ ವಿಶ್ವವಿದ್ಯಾಲಯ ಕಣ್ಣು ಮುಚ್ಚಿ ಕುಳಿತಿದೆ.

ಅಭಿಲಾಷ್, ಬೆಳವಾಡಿ ನವೀನರಂತಹ ಬಿಸಿರಕ್ತದ ಹುಡುಗರು, ದೇಸಿ ಮುಸುಕಿನ ಜೋಳವನ್ನು ಹುಡುಕಿ, ಬೆಳೆದು, ಬೀಜ ಹಂಚುವ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದ ಉದ್ದಕ್ಕೂ ದೇಸಿ ಮುಸುಕಿನ ಜೋಳದ ಕಂಪು ಹಬ್ಬಿಸುವ ಉಮೇದು ಇವರದು. ನಗರದತ್ತ ಮುಖ ಮಾಡಿ ನಿಂತಿರುವ ಹಳ್ಳಿ ಯುವಕರು ಒಮ್ಮೆ ಇವರತ್ತ ನೋಡಬಾರದೇ?
ಹೆಚ್ಚಿನ ಮಾಹಿತಿಗೆ: 97397 6297

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT