ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಪೊರೇಟಿಗರ ಹಾಡುಗಾರಿಕೆ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಸದಾ ಸೂಟು, ಬೂಟು, ಟೈ ಧರಿಸಿ ಕಾರ್ಪೊರೇಟ್ ಗತ್ತಿನಲ್ಲೇ ಇರುವ ಸಿಇಒಗಳು ‌ಕಳೆದ ಶನಿವಾರ ಹಾಡುಗಾರರಾಗಿ ಬದಲಾಗಿಬಿಟ್ಟಿದ್ದರು.

ಐಟಿಸಿ ಗಾರ್ಡೇನಿಯಾದಲ್ಲಿ ಜೆನೆಸಿಸ್ ಫೌಂಡೇಷನ್ ಆಯೋಜಿಸಿದ್ದ ‘ಸಿಇಒ ಸಿಂಗ್ ಫಾರ್ ಜಿಎಫ್ ಕಿಡ್ಸ್‌’ ಕಾರ್ಯಕ್ರಮದಲ್ಲಿ ಒಬ್ಬರ ನಂತರ ಒಬ್ಬರಂತೆ ಸಿಇಒಗಳು ಹಾಡಿದ್ದೇ ಹಾಡಿದ್ದು, ತಾಳ ಲಯದ ಪರಿಚಯಗಳಿಲ್ಲದಿದ್ದರೂ ವೃತ್ತಿನಿರತ ಹಾಡುಗಾರರಂತೆ ಕಣ್ಮುಚ್ಚಿ, ಮನತುಂಬಿ, ಭಾವಪರವಶರಾಗಿ ಹಾಡಿದರು.

ಹೃದಯ ಸಂಬಂಧಿ ಸಮಸ್ಯೆ ಇರುವ ಮಕ್ಕಳ ಚಿಕಿತ್ಸೆಗೆ 17 ವರ್ಷಗಳಿಂದ ನೆರವಾಗುತ್ತಿರುವ ಜೆನೆಸಿಸ್, ನಗರದಲ್ಲಿ ಎರಡನೇ ಬಾರಿ ‘ಸಿಇಒ ಸಿಂಗ್ ಫಾರ್ ಜಿಎಫ್ ಕಿಡ್ಸ್‌’ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಜೆನೆಸಿಸ್‌ನ ಸಂಸ್ಥಾಪಕಿ ಪ್ರೇಮಾ ಸಾಗರ್ ಜೆನೆಸಿಸ್, ಇಲ್ಲಿಯವರೆಗೆ 1,200ಕ್ಕೂ ಹೆಚ್ಚು ಹೃದ್ರೋಗಿ ಮಕ್ಕಳಿಗೆ ಸಹಾಯ ಮಾಡಿದ್ದೇವೆ ಎಂಬ ಮಾಹಿತಿ ನೀಡಿದರು. ಇದಕ್ಕೆ ಪೂರಕವಾಗಿ ಸಂಸ್ಥೆಯಿಂದ ನೆರವು ಪಡೆದ ಮಕ್ಕಳ ವಿಡಿಯೊಗಳನ್ನೂ ತೋರಿಸಲಾಯಿತು.

ವಿವಿಧ ಕಂಪೆನಿಗಳ 11 ಮಂದಿ ಸಿಇಒಗಳು ತಲಾ ಎರಡು ಹಾಡು ಹಾಡಿದರು. ಹಲವರು ತಮ್ಮದೇ ಸ್ವರಚಿತ ಕವನಗಳಿಗೆ ರಾಗ ಕಟ್ಟಿ ಹಾಡಿ ಕೇಳುಗರು ಮೂಗಿನ ಬೆರಳಿಡುವಂತೆ ಮಾಡಿಬಿಟ್ಟರು. ಇನ್ನು ಕೆಲವರು ಗಿಟಾರ್ ಹಿಡಿದು ಪಕ್ಕಾ ರಾಕ್‌ಸ್ಟಾರ್‌ಗಳಂತೆ ಕಾರ್ಯಕ್ರಮಕ್ಕೆ ರಂಗು ತುಂಬಿದರು. ಮುಚ್ಚಿದ ಬಾಗಿಲ ಬೋರ್ಡ್‌ ರೂಮ್‌ನ ಗಾಂಭೀರ್ಯದಿಂದ ಹೊರಬಂದು ಹಾಡಿ, ಕುಣಿದರು.

(ಸ್ಕೇಲ್ ಚೇಂಜ್ ನೆಟ್‌ವರ್ಕ್‌ನ ಸಂಜಯ್ ಪುರೋಹಿತ್)

ಹದಿನೇಳು ವರ್ಷಗಳಿಂದ ತಮ್ಮದೇ ಬ್ಯಾಂಡ್ ಕಟ್ಟಿಕೊಂಡು ಹವ್ಯಾಸಕ್ಕಾಗಿ ಹಾಡುತ್ತಿದ್ದ ಹಾಸ್ಮಾಟ್ ಆಸ್ಪತ್ರೆ ಸಮೂಹದ ಸಿಇಒ ಥಾಮಸ್ ಚಾಂಡಿ ಅವರು ಹಾಡಿದ ಅರ್ಜೆಂಟೀನಾದ ಹಾಡು ಕೇಳುಗರ ಕಾಲು ಕುಣಿಯುವಂತೆ ಮಾಡಿತು. ವಯಸ್ಸು 75 ಮೀರಿದ್ದರೂ ಅವರು ಹಾಡಿದ ರೀತಿ, ಹಾಡುವಾಗಿನ ಅವರ ಆಂಗಿಕ ಅಭಿನಯ ಸಭಾಂಗಣದಲ್ಲಿ ನೆರೆದಿದ್ದ ಕೇಳುಗರಲ್ಲೂ ಸ್ಫೂರ್ತಿ ತುಂಬಿತು. ನಂತರ ವೇದಿಕೆ ಏರಿದ ಲೈಫ್‌ ಕೋಚ್ ವೆಲ್‌ಸೆನ್‌ ಎಕ್ಸ್‌ಫರ್ಟ್ ಸಂಸ್ಥೆಯ ಸಿಇಒ ಸುಜಾತಾ ಕೇಳ್ಕರ್‌ ತಮ್ಮ ಸಹೊದ್ಯೋಗಿ ರಚಿಸಿದ ಕವನಕ್ಕೆ ತಾವೇ ರಾಗ ಸಂಯೋಜಿಸಿ ಪ್ರಸ್ತುತಪಡಿಸಿದ ಹಾಡು ಪ್ರೇಕ್ಷಕರ ತಲೆದೂಗಿಸಿತು.

ಕೆಲವು ವರ್ಷಗಳಿಂದ ‘ಮಿನಿಸ್ಟರಿ ಆಫ್ ಬ್ಲೂಸ್’ ಹೆಸರಿನ ಬ್ಯಾಂಡ್‌ನೊಡನೆ ಗುರುತಿಸಿಕೊಂಡಿರುವ ಹಿಮಾಲಯ ಡ್ರಗ್‌ ಕಂಪೆನಿಯ ಸಿಇಒ ಫಿಲಿಪ್ ಹೇಡನ್ ಅವರ ಗಿಟಾರ್ ವಾದನ ಅದ್ಭುತ ಎನ್ನುವಂತಿತ್ತು. ಕೇಳುಗರು ಎದ್ದು ಕುಣಿಯುಂತೆ ಗಿಟಾರ್ ನುಡಿಸಿದರು ಅವರು. ನಾರ್ಡ್‌ಸನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಪ್ರೊತಿಕ್‌ ದಾಸ್ ಹಾಡಿದ ಹಾಡಿಗೆ ಕೇಳುಗರೂ ದನಿ ಸೇರಿಸಿದರು.

ಕಾರ್ಯಕ್ರಮ ಪ್ರಾರಂಭವಾಗುವುದಕ್ಕೆ ಮೊದಲು ನರ್ವಸ್ ಆಗಿದ್ದ ಲೆನೊವೊ ಇಂಡಿಯಾದ ಮುಖ್ಯಸ್ಥೆ ಪೂರ್ಣಿಮಾ ಮತನ್ ಜಾಜ್‌ ಸಂಗೀತದ ಅಲೆ ಎಬ್ಬಿಸಿದರು. ತಮ್ಮನ್ನು ತಾವು ‘ಬಾತ್‌ರೂಂ ಸಿಂಗರ್’ ಎಂದು ಕರೆದುಕೊಂಡಿದ್ದ ಪೂರ್ಣಿಮಾ, ಅವರ ಮಾತನ್ನು ಅವರೇ ಸುಳ್ಳಾಗಿಸಿದರು.

ಉತ್ತಮ ಸಂಗೀತಕ್ಕೆ ಕೇಳುಗರೂ ಉತ್ತಮವಾಗಿ ಪ್ರತಿಕ್ರಿಯಿಸಿದರು. ದುಂಡು ಮೇಜುಗಳ ಸುತ್ತ ಕುಳಿತಿದ್ದ ನಗರದ ಹಲವು ಕಂಪೆನಿಗಳ ಸಿಇಒಗಳು, ತಮ್ಮಿಷ್ಟದ ಬಿಯರ್‌, ವೋಡ್ಕಾ ಸವಿಯುತ್ತಾ ವೃತ್ತಿಮಿತ್ರರ ಸಂಗೀತವನ್ನು ಆಸ್ವಾದಿಸುತ್ತಿದ್ದರು. ನಿರೂಪಕಿ ಹಾಡುಗಾರರ ಹೆಸರು ಹೇಳುತ್ತಿದ್ದಂತೆ ಕೂಗಿ ಕಿರುಚಿ, ಚಪ್ಪಾಳೆ ತಟ್ಟಿ ಉತ್ಸಾಹ ತುಂಬುತ್ತಿದ್ದರು.

ಕಾರ್ಯಕ್ರಮ ಮುಗಿದಾಗ ಹಾಡುಗಾರರಿಗೂ, ಪ್ರೇಕ್ಷಕರಿಗೂ ಸಣ್ಣ ಮಕ್ಕಳ ಜೀವ ಉಳಿಸುವ ಕಾರ್ಯದಲ್ಲಿ ನೆರವಾದ ಧನ್ಯತೆ ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT