ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಉಸಿರಾಗಿಸಿಕೊಂಡ ಯಶ್‌ ಪಾಲ್‌

Last Updated 25 ಜುಲೈ 2017, 19:11 IST
ಅಕ್ಷರ ಗಾತ್ರ
ADVERTISEMENT

ನವದೆಹಲಿ: ಕೊನೆಯವರೆಗೂ ವಿಜ್ಞಾನವನ್ನೇ ಉಸಿರಾಗಿಸಿಕೊಂಡ ಯಶ್‌ ಪಾಲ್‌ ವಿಜ್ಞಾನಿ ಮಾತ್ರವಾಗಿರಲಿಲ್ಲ. ಸಮಾಜಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಜ್ಞಾನದ ನಿಧಿಯಾಗಿದ್ದರು.

‘ಯಶ್‌ ಪಾಲ್‌ ಸಿಂಗ್‌’  ಅವರು ಸೂರ್ಯನಿಂದ ಹೊರಹೊಮ್ಮವ ವಿಶ್ವ ಕಿರಣಗಳ (ಕಾಸ್ಮಿಕ್ ರೇಸ್‌) ಅಧ್ಯಯನ ಕ್ಷೇತ್ರದಲ್ಲಿ  ಬಹುದೊಡ್ಡ ಹೆಸರು. ಹಾಗಂತ  ಅವರ ಕಾರ್ಯಕ್ಷೇತ್ರ  ಪ್ರಯೋಗಾಲಯದ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಲಿಲ್ಲ. ಪ್ರಯೋಗಾಲಯಗಳಿಗಿಂತ  ಸದಾ ಜನರ ಮಧ್ಯೆ ಇರುತ್ತಿದ್ದ ಅಪರೂಪದ ವಿಜ್ಞಾನಿ ಅವರಾಗಿದ್ದರು.

ವಿಜ್ಞಾನಿ, ಶಿಕ್ಷಣ ತಜ್ಞ,  ಉತ್ತಮ ಆಡಳಿಗಾರ, ಚತುರ ಮಾತುಗಾರ, ಸದಾ ಸಮಾಜದ ಒಳಿತಿಗಾಗಿ ತುಡಿಯುತ್ತಿದ್ದ  ಬಹುಮುಖ ವ್ಯಕ್ತಿತ್ವದ ಸಂಗಮದಂತಿದ್ದ ಅವರು ನೇರ ನಡೆ, ನುಡಿಗಳಿಗಾಗಿ ಹೆಸರಾಗಿದ್ದರು. ಭಾರತದ ವಿಜ್ಞಾನ ಕ್ಷೇತ್ರದ ಪಿತಾಮಹರಾದ  ಡಾ. ಹೋಮಿ ಜಹಾಂಗೀರ್‌ ಭಾಭಾ, ಡಾ. ವಿಕ್ರಂ ಸಾರಾಭಾಯ್‌, ಸತೀಶ್‌ ಧವನ್‌ ಅವರಂತಹ ಮೇರು ವ್ಯಕ್ತಿಗಳ ಒಡನಾಟದಿಂದ ಅವರಿಗೆ ಈ ಅಪೂರ್ವ ವ್ಯಕ್ತಿತ್ವ ದಕ್ಕಿತ್ತು. ಯಶ್‌ ಪಾಲ್‌ ಅವರ ಪೂರ್ಣ ಹೆಸರು ಯಶ್‌ ಪಾಲ್‌ ಸಿಂಗ್‌. ಆದರೆ, ಅವರೆಂದೂ ತಮ್ಮ ಹೆಸರಿನ ಮುಂದೆ  ಸಿಂಗ್‌ ಎಂದು ಬರೆದುಕೊಳ್ಳಲಿಲ್ಲ. ಅದು ಅವರಿಗೂ ಇಷ್ಟವೂ ಇರಲಿಲ್ಲ.ಯಶ್‌ ಪಾಲ್‌ ಹುಟ್ಟಿದ್ದು (1926) ಝಾಂಗ್‌ ಎಂಬ ಹಳ್ಳಿಯಲ್ಲಿ. ಅದು ಈಗ ಪಾಕಿಸ್ತಾನದಲ್ಲಿದೆ.  

ನಿಯಮ ಬದಲಿಸಿದ ಟಾಟಾ ಸಂಸ್ಥೆ:  ದೆಹಲಿ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದಾಗಲೇ ದೇಶದ ಪ್ರತಿಷ್ಠಿತ ಮುಂಬೈ ಟಾಟಾ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಕೊಂಡರು. ಅದು ಅವರ ಜೀವನದ ದೊಡ್ಡ ತಿರುವು.

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌ ಸಂಸ್ಥೆಯಲ್ಲಿ ವಿಶ್ವಕಿರಣಗಳ ಬಗ್ಗೆ ಅಧ್ಯಯನ ನಡೆಸಿದರು.
ಇನ್ನೂ ಎಂ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಪಾಲ್‌ ಅವರಿಗೆ ನಿಯಮಾವಳಿ ಪ್ರಕಾರ ಪ್ರವೇಶ ನೀಡುವಂತಿರಲಿಲ್ಲ. ಆದರೆ, ಟಾಟಾ ಸಂಸ್ಥೆ ಪಾಲ್‌ ಅವರಿಗಾಗಿಯೇ ಮೊದಲ ಬಾರಿಗೆ ನಿಯಮಾವಳಿ  ಸಡಿಲಿಸಿತ್ತು.

ಪಾಲ್ ಅವರ ಪಾಂಡಿತ್ಯಕ್ಕೆ ಮಾರುಹೋದ ಹಿರಿಯ ವಿಜ್ಞಾನಿ ಸತೀಶ್‌ ಧವನ್‌ ಅವರು ಭಾರತದ ಬಾಹ್ಯಾಕಾಶ ಯೋಜನೆಯಲ್ಲಿ ಕೆಲಸ ಮಾಡಲು ಆಹ್ವಾನ ನೀಡಿದರು. ಧವನ್‌ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಅಹಮದಾಬಾದ್‌ನಲ್ಲಿ ಪ್ರತಿಷ್ಠಿತ ಬಾಹ್ಯಾಕಾಶ  ಕೇಂದ್ರವನ್ನು ಸ್ಥಾಪಿಸಿದ ಪಾಲ್‌ ಅವರು ಉಪಗ್ರಹ ಆಧಾರಿತ  ಸಂವಹನ ವ್ಯವಸ್ಥೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ನಂತರ ಯೋಜನಾ ಆಯೋಗ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಮತ್ತು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಅಧ್ಯಕ್ಷರಂಥ   ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡರು. ನಿವೃತ್ತಿಯ ನಂತರ ಸುಮ್ಮನೆ ಕೂರುವ ಜಾಯಮಾನ ಅವರದ್ದಾಗಿರಲಿಲ್ಲ.

ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕೆ ಅಣಿಯಾದರು.  ದೂರದರ್ಶನದ ಮೂಲಕ ವಿಜ್ಞಾನವನ್ನು  ಜನರ ಮನೆಗೆ ತಲುಪಿಸಿದರು. ಟಿ.ವಿಗಳಲ್ಲಿ ವಿಜ್ಞಾನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಪಾಲ್ಗೊಂಡು ಪರಿಚಿತರಾಗಿದ್ದರು. ಅವರ ಸಮಕಾಲೀನರು ನೆಮ್ಮದಿಯ ನಿವೃತ್ತಿಯ ಜೀವನ ಸಾಗಿಸುವಾಗ  ಇಳಿ ವಯಸ್ಸಿನಲ್ಲೂ ಬೀದಿಗಿಳಿದ ಇವರು ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ  ಕಾನೂನು ಸಮರ ಸಾರಿದ್ದರು. ಅಂತಿಮವಾಗಿ ಅದರಲ್ಲಿ ಜಯ ಸಾಧಿಸಿದರು.

ಅವರ ಹೋರಾಟದ ಫಲವಾಗಿ ಛತ್ತೀಸಗಡದಲ್ಲಿಯ 112 ನಕಲಿ ವಿಶ್ವವಿದ್ಯಾಲಯಗಳು ಬಾಗಿಲು ಮುಚ್ಚಬೇಕಾಯಿತು. ಪಾಲ್‌ ಅವರು ಡಾ. ಹೋಮಿ ಜಹಾಂಗೀರ್‌ ಭಾಭಾ, ಡಾ. ವಿಕ್ರಂ ಸಾರಾಭಾಯ್‌, ಸತೀಶ್‌ ಧವನ್‌ ಅವರಂತಹ ದಿಗ್ಗಜ ವಿಜ್ಞಾನಿಗಳ  ತಲೆಮಾರಿನ ಕೊನೆಯ ಕೊಂಡಿಯಾಗಿದ್ದರು. ಅದೆಲ್ಲದಕ್ಕೂ ಹೆಚ್ಚಾಗಿ ಅವರು ವಿಜ್ಞಾನ ಯೋಗಿಯಾಗಿದ್ದರು.

ಸಾವಿನ ದವಡೆಯಿಂದ ಪಾರಾದವರು...
ಪಾಲ್‌ ತಮ್ಮ ಬಾಲ್ಯ, ಶಾಲಾ ದಿನಗಳನ್ನು ಕಳೆದದ್ದೆಲ್ಲ  ಪಾಕಿಸ್ತಾನ ಮತ್ತು ಬಲೂಚಿಸ್ತಾನದ ಕ್ವೆಟ್ಟಾದಲ್ಲಿ.  ಒಮ್ಮೆ ಬಾಲಕ ಯಶ್‌ ಹಾಗೂ ಸಹೋದರ ಭೂಕಂಪದ ಅವಶೇಷಗಳ ಅಡಿ ಸಿಲುಕಿ ಸಾವಿನ ದವಡೆಯಿಂದ ಪಾರಾಗಿದ್ದರು. ಶಾಲೆಯಲ್ಲಿ ಶಿಕ್ಷಕರು ಕೇಳಿದ ಎಲ್ಲ ಪ್ರಶ್ನೆಗಳಿಗೂ ಪಟಪಟನೇ  ಉತ್ತರಿಸುತ್ತಿದ್ದ. ಆತನ ಜಾಣತನ ಆತನಿಗೆ ‘ಮೋಟಾ ಸಿರ್‌’  (ದೊಡ್ಡ ತಲೆ) ಎಂಬ ಅಡ್ಡ ಹೆಸರು ತಂದು ಕೊಟ್ಟಿತು.  ಪಸ್ತೂನ್‌ ಹಾಗೂ ಹಜಾರಾದಲ್ಲಿಯ ಶಾಲಾ ಸಹಪಾಠಿಗಳು    ಪ್ರೀತಿಯಿಂದ ‘ಮೋಟಾ ಸಿರ್‌’ ಎಂದು ಛೇಡಿಸುತ್ತಿದ್ದರು. ಪಾಕಿಸ್ತಾನದಲ್ಲಿ  ಪದವಿ ಶಿಕ್ಷಣ ಪೂರೈಸಿದ ನಂತರ ಭಾರತದ ವಿಭಜನೆ ವೇಳೆ ಅವರು ಉನ್ನತ ವ್ಯಾಸಂಗಕ್ಕೆ ಭಾರತಕ್ಕೆ ಬಂದರು. ಹಾಗೆ ಬಂದವರು  ಪಾಕಿಸ್ತಾನಕ್ಕೆ ಮರಳಲಿಲ್ಲ. ಇಲ್ಲಿಯೇ ಬದುಕು ಕಟ್ಟಿಕೊಂಡರು.

ಭೌತವಿಜ್ಞಾನಿ ಯಶ್ ಪಾಲ್‌ ನಿಧನ
 ದೇಶದ ಖ್ಯಾತ ಭೌತ ವಿಜ್ಞಾನಿ ಹಾಗೂ ಪದ್ಮವಿಭೂಷಣ ಪುರಸ್ಕೃತ ಶಿಕ್ಷಣ ತಜ್ಞ ಪ್ರೊ. ಯಶ್‌ ಪಾಲ್‌ (90) ಸೋಮವಾರ ರಾತ್ರಿ ನಿಧನರಾಗಿದ್ದಾರೆ. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಉತ್ತರ ಪ್ರದೇಶದ  ನೊಯಿಡಾದ ಆಸ್ಪತ್ರೆಗೆ ಸೇರಿಸಲಾಗಿತ್ತು.  ಅಲ್ಲಿಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಲೋಧಿ ರಸ್ತೆಯಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಮಂಗಳವಾರ ಅಂತ್ಯಕ್ರಿಯೆ ನಡೆಯಿತು. ಅವರ ಪುತ್ರ ರಾಹುಲ್‌ ಪಾಲ್‌ ಕೂಡ  ಜೈವಿಕ ತಂತ್ರಜ್ಞಾನ ಇಲಾಖೆಯಲ್ಲಿ ವಿಜ್ಞಾನಿಯಾಗಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಪಾಲ್ ಅವರ ಕೊಡುಗೆಗಾಗಿ ಸರ್ಕಾರ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮ ವಿಭೂಷಣ’ ನೀಡಿ ಗೌರವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT