ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಟೆಸ್ಟ್‌: ಬೃಹತ್‌ ಮೊತ್ತ ಪೇರಿಸಿದ ಕೊಹ್ಲಿ ಬಳಗ

ಹಾರ್ದಿಕ್‌ ಅಬ್ಬರ, ಶಮಿ ಮಿಂಚು; ಸಂಕಷ್ಟದಲ್ಲಿ ಶ್ರೀಲಂಕಾ
Last Updated 27 ಜುಲೈ 2017, 19:30 IST
ಅಕ್ಷರ ಗಾತ್ರ

ಗಾಲ್‌: ಗಾಲ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಗರ್ಜಿಸಿದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ (50; 49ಎ, 5ಬೌಂ, 3ಸಿ) ಅರ್ಧಶತಕ ಬಾರಿಸಿ ಪದಾರ್ಪಣೆ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಂಡರು.

ಹಾರ್ದಿಕ್‌ ಅವರ ಅಮೋಘ ಬ್ಯಾಟಿಂಗ್‌ ಹಾಗೂ ಮೊಹಮ್ಮದ್‌ ಶಮಿ (30; 30ಎ, 3ಸಿ) ಮತ್ತು (30ಕ್ಕೆ2) ಅವರ ಆಲ್‌ರೌಂಡ್‌ ಆಟದ ಸಹಾಯದಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ಪೇರಿಸಿದ್ದು, ಎರಡನೇ ದಿನವೇ ಗೆಲುವಿಗೆ ರಹದಾರಿ ಮಾಡಿಕೊಂಡಿದೆ.

3 ವಿಕೆಟ್‌ಗೆ 399ರನ್‌ಗಳಿಂದ ಗುರುವಾರ ಆಟ ಮುಂದುವರಿಸಿದ ವಿರಾಟ್‌ ಕೊಹ್ಲಿ ಬಳಗ ಮೊದಲ ಇನಿಂಗ್ಸ್‌ನಲ್ಲಿ 133.1 ಓವರ್‌ಗಳಲ್ಲಿ 600ರನ್‌ ಗಳಿಸಿ ಆಲೌಟ್‌ ಆಯಿತು. ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಆತಿಥೇಯ ಲಂಕಾ ತಂಡ ದಿನದಾಟದ ಅಂತ್ಯಕ್ಕೆ 44 ಓವರ್‌ಗಳಲ್ಲಿ 5 ವಿಕೆಟ್‌ಗೆ 154ರನ್‌ ಕಲೆಹಾಕಿದೆ. ಸಿಂಹಳೀಯ ನಾಡಿನ ತಂಡ ಇನ್ನು 446ರನ್‌ ಗಳಿಸಬೇಕಿದೆ.

ತಾಳ್ಮೆಯ ಆಟ: ಮೊದಲ ದಿನದಾಟದ ಅಂತ್ಯಕ್ಕೆ 144ರನ್‌ ಕಲೆಹಾಕಿ ಕ್ರೀಸ್‌ ಕಾಯ್ದುಕೊಂಡಿದ್ದ ಪೂಜಾರ ಮತ್ತು 39 ರನ್‌ ಬಾರಿಸಿದ್ದ ಅಜಿಂಕ್ಯ ರಹಾನೆ ಅವರು ಗುರುವಾರದ ಮೊದಲ ಅವಧಿಯಲ್ಲಿ ತಾಳ್ಮೆಯ ಆಟ ಆಡಿದರು. ಹೀಗಾಗಿ ನುವಾನ್‌ ಪ್ರದೀಪ್‌ ಹಾಕಿದ 92 ಮತ್ತು ರಂಗನಾ ಹೆರಾತ್‌ ಬೌಲ್‌ ಮಾಡಿದ 93ನೇ ಓವರ್‌ಗಳಲ್ಲಿ ಒಂದೂ ರನ್‌ ಬರಲಿಲ್ಲ.

ಪ್ರದೀಪ್‌ ಹಾಕಿದ 94ನೇ ಓವರ್‌ನ ಮೊದಲ ನಾಲ್ಕು ಎಸೆತಗಳನ್ನು ‘ಬೀಟ್‌’ ಮಾಡಿದ ರಹಾನೆ, ಮರು ಎಸೆತದಲ್ಲಿ ಬೌಂಡರಿ ಗಳಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಭ್ರಮ ಗರಿ ಗೆದರುವಂತೆ ಮಾಡಿದರು. ಪ್ರದೀಪ್‌ ಮಾಡಿದ 96ನೇ ಓವರ್‌ನ ಮೊದಲ ಎಸೆತವನ್ನು ಬೌಂಡರಿ ಗೆರೆ ದಾಟಿಸಿದ ಸೌರಾಷ್ಟ್ರದ ಪೂಜಾರ 150 ರನ್‌ಗಳನ್ನು ಪೂರೈಸಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 257 ಎಸೆತ.

ಬಳಿಕವೂ ಚಾಕಚಕ್ಯತೆಯಿಂದ ಆಡುತ್ತಿದ್ದ ಚೇತೇಶ್ವರ್‌, ದ್ವಿಶತಕ ಬಾರಿಸುತ್ತಾರೆ ಎಂದೇ ಅಂದಾಜಿಸಲಾಗಿತ್ತು. 98ನೇ ಓವರ್‌ನಲ್ಲಿ ಈ ನಿರೀಕ್ಷೆ ಹುಸಿಯಾಯಿತು. ಪ್ರದೀಪ್‌ ಬೌಲ್‌ ಮಾಡಿದ ಓವರ್‌ನ ಮೊದಲ ಎಸೆತದಲ್ಲಿ ಒಂದು ರನ್‌ ಗಳಿಸಿದ ಅವರು ನಾಲ್ಕನೇ ಎಸೆತದಲ್ಲಿ ವಿಕೆಟ್‌ ಕೀಪರ್‌ ನಿರೋಷನ್‌ ಡಿಕ್ವೆಲ್ಲಾಗೆ ವಿಕೆಟ್‌ ನೀಡಿ ಹೊರನಡೆದರು. ರಂಗನಾ ಹೆರಾತ್‌ ಅವರ 97ನೇ ಓವರ್‌ನ ಮೂರನೇ ಎಸೆತದಲ್ಲಿ ಬೌಂಡರಿ ಗಳಿಸಿ ಅರ್ಧಶತಕದ ಸಂಭ್ರಮ ಆಚರಿಸಿದ್ದ ರಹಾನೆ ಈ ಮೊತ್ತಕ್ಕೆ  ಏಳು ರನ್‌ ಸೇರಿಸಿ ಪೆವಿಲಿಯನ್‌ ಸೇರಿಕೊಂಡರು.

129 ಎಸೆತಗಳಲ್ಲಿ 3 ಬೌಂಡರಿ ಸಹಿತ 57ರನ್‌ ಗಳಿಸಿದ್ದ  ಅವರು ಲಾಹಿರು ಕುಮಾರ ಬೌಲ್‌ ಮಾಡಿದ 102ನೇ ಓವರ್‌ನ ಮೊದಲ ಎಸೆತವನ್ನು ಡ್ರೈವ್‌ ಮಾಡಲು ಯತ್ನಿಸಿ ಕೈ ಸುಟ್ಟುಕೊಂಡರು. ಅವರ ಬ್ಯಾಟಿಗೆ ತಾಗಿ  ಬಂದ ಚೆಂಡನ್ನು ಸ್ಲಿಪ್‌ನಲ್ಲಿದ್ದ ದಿಮುತ್‌ ಕರುಣಾರತ್ನೆ ಬಲಕ್ಕೆ ಬಾಗಿ ಸೊಗಸಾದ ರೀತಿಯಲ್ಲಿ ಹಿಡಿತಕ್ಕೆ ಪಡೆದರು. ಅಜಿಂಕ್ಯ ಔಟಾದಾಗ ತಂಡದ ಖಾತೆಯಲ್ಲಿ 432ರನ್‌ಗಳಿದ್ದವು.

ಜವಾಬ್ದಾರಿಯುತ ಇನಿಂಗ್ಸ್‌ : ಆರ್‌. ಅಶ್ವಿನ್‌, ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. 50ನೇ ಪಂದ್ಯ ಆಡುತ್ತಿರುವ ಅವರು ಅಮೋಘ ಸಾಮರ್ಥ್ಯ ತೋರಿ ನಾಯಕ ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು.

60 ಎಸೆತಗಳಲ್ಲಿ 7 ಬೌಂಡರಿ ಸಹಿತ 47ರನ್‌ ಕಲೆ ಹಾಕಿದ್ದ ಚೆನ್ನೈನ ಆಟಗಾರ ಅರ್ಧಶತಕದ ಹಾದಿಯಲ್ಲಿ ಎಡವಿದರು. ಬಲಗೈ ಬ್ಯಾಟ್ಸ್‌ಮನ್‌ ಅಶ್ವಿನ್‌, 116ನೇ ಓವರ್‌ನ ಮೊದಲ ಎಸೆತದಲ್ಲಿ ನುವಾನ್‌ ಪ್ರದೀಪ್‌ಗೆ ವಿಕೆಟ್‌ ಒಪ್ಪಿಸಿದರು.

ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ವೃದ್ಧಿಮಾನ್‌ ಸಹಾ (16; 32ಎ, 3ಬೌಂ) ಮತ್ತು ರವೀಂದ್ರ ಜಡೇಜ (15; 24ಎ, 2ಬೌಂ) ಕೂಡ ಬೇಗನೆ ಔಟಾದರು.

ಹಾರ್ದಿಕ್‌–ಶಮಿ ಮಿಂಚು: ಚೊಚ್ಚಲ ಟೆಸ್ಟ್‌ ಆಡಿದ ಹಾರ್ದಿಕ್‌ ಪಾಂಡ್ಯ ಮತ್ತು ಮೊಹಮ್ಮದ್‌ ಶಮಿ ಬಿರುಸಿನ ಆಟ ಆಡಿ ತಂಡದ ರನ್‌ ಗಳಿಕೆಗೆ ವೇಗ ತುಂಬಿದರು.ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದ ಇವರು 9ನೇ ವಿಕೆಟ್‌ಗೆ 62ರನ್‌ ಸೇರಿಸಿ ತಂಡದ ಮೊತ್ತ 570ರ ಗಡಿ ದಾಟುವಂತೆ ಮಾಡಿದರು.

ಶಮಿ ಔಟಾದ ನಂತರ ಬಂದ ಉಮೇಶ್‌ ಯಾದವ್‌ ಕೂಡ (ಔಟಾಗದೆ 11; 10ಎ, 1 ಬೌಂ, 1ಸಿ) ತೋಳರಳಿಸಿ ಆಡಿದರು. 134ನೇ ಓವರ್‌ ಬೌಲ್ ಮಾಡಿದ ಲಾಹಿರು ಕುಮಾರ ಮೊದಲ ಎಸೆತದಲ್ಲಿ ಪಾಂಡ್ಯ ವಿಕೆಟ್‌ ಉರುಳಿಸಿ ಭಾರತದ ಇನಿಂಗ್ಸ್‌ಗೆ ತೆರೆ ಎಳೆದರು.

ಆರಂಭಿಕ ಸಂಕಷ್ಟ: ಮೊದಲ ಇನಿಂಗ್ಸ್‌ ಆರಂಭಿಸಿದ ಲಂಕಾ ತಂಡ ಆರಂಭಿಕ ಸಂಕಷ್ಟ ಎದುರಿಸಿತು. ಎರಡನೇ ಓವರ್‌ ಬೌಲ್‌ ಮಾಡಿದ ಉಮೇಶ್‌ ಯಾದವ್‌, ಐದನೇ ಎಸೆತದಲ್ಲಿ ದಿಮುತ್‌ ಕರುಣಾರತ್ನೆ (2) ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿ ಪ್ರವಾಸಿ ಪಡೆಗೆ ಮೇಲುಗೈ ಒದಗಿಸಿದರು. ವೇಗಿ ಮೊಹಮ್ಮದ್‌ ಶಮಿ, 15ನೇ ಓವರ್‌ನ ಎರಡನೇ ಎಸೆತದಲ್ಲಿ ಧನುಷ್ಕಾ ಗುಣತಿಲಕ (16; 37ಎ, 2ಬೌಂ) ಮತ್ತು ಆರನೇ ಎಸೆತದಲ್ಲಿ ಕುಶಾಲ್‌ ಮೆಂಡಿಸ್‌ (0) ವಿಕೆಟ್‌ ಉರುಳಿಸಿ ಆತಿಥೇಯರ ಗಾಯದ ಮೇಲೆ ಉಪ್ಪು ಸವರಿದರು.

ಆದರೆ ಉಪುಲ್‌ ತರಂಗ (64; 93ಎ, 10ಬೌಂ) ಮತ್ತು ಏಂಜೆಲೊ ಮ್ಯಾಥ್ಯೂಸ್‌ (ಬ್ಯಾಟಿಂಗ್‌ 54; 91ಎ, 8ಬೌಂ, 1ಸಿ) ನಾಲ್ಕನೇ ವಿಕೆಟ್‌ಗೆ 57ರನ್‌ ಗಳಿಸಿ ತಂಡಕ್ಕೆ ಆಸರೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT