ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತು ಪರಿಸ್ಥಿತಿ ಬಗೆಗಿನ ಕಥೆಯೊಂದೇ ಅಲ್ಲ...

Last Updated 28 ಜುಲೈ 2017, 13:48 IST
ಅಕ್ಷರ ಗಾತ್ರ

ಚಿತ್ರ: ಇಂದು ಸರ್ಕಾರ್
ನಿರ್ದೇಶನ: ಮಧುರ್ ಭಂಡಾರ್ಕರ್
ತಾರಾಗಣ: ಅನುಪಮ್ ಖೇರ್, ಕೀರ್ತಿ ಕುಲ್ಹಾರಿ, ನೀಲ್ ನಿತಿನ್ ಮುಕೇಶ್, ಟೊಟಾ ರಾಯ್ ಚೌಧುರಿ
ನಿರ್ಮಾಣ: ಭರತ್ ಷಾ

ಭಾರತವು ಪ್ರಜಾತಂತ್ರ ವ್ಯವಸ್ಥೆ ಅಳವಡಿಸಿಕೊಂಡ ನಂತರದ ಅತ್ಯಂತ ಮಹತ್ವದ ಕಾಲಘಟ್ಟಗಳಲ್ಲಿ 1975ರಿಂದ 1977ರವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯೂ ಒಂದು. ಈ ಅವಧಿ ಕೊನೆಗೊಂಡು ನಲವತ್ತು ವರ್ಷಗಳು ಕಳೆದಿವೆ.

ಆ ಕಾಲದ ಸ್ವಾತಂತ್ರ್ಯ ಪ್ರಿಯರು ಅನುಭವಿಸಿದ ಆತಂಕ, ತುರ್ತು ಪರಿಸ್ಥಿತಿ ವಿರುದ್ಧ ಅವರಲ್ಲಿ ಮಡುಗಟ್ಟಿದ್ದ ಆಕ್ರೋಶ, ತೀರಾ ಸಾಮಾನ್ಯರಲ್ಲಿ ವ್ಯಕ್ತವಾಗುತ್ತಿದ್ದ ಭಾವನೆಗಳು ಏನು ಎಂಬುದನ್ನು ಆ ಇಪ್ಪತ್ತೊಂದು ತಿಂಗಳುಗಳನ್ನು ತೀವ್ರವಾಗಿ ಅನುಭವಿಸಿದವರು ಮಾತ್ರವೇ ಸ್ಪಷ್ಟವಾಗಿ ಹೇಳಬಲ್ಲರೇನೋ. ಶುಕ್ರವಾರ ತೆರೆಗೆ ಬಂದಿರುವ, ಮಧುರ್ ಭಂಡಾರ್ಕರ್ ನಿರ್ದೇಶನದ ‘ಇಂದು ಸರ್ಕಾರ್’ ಚಿತ್ರವು ತುರ್ತು ಪರಿಸ್ಥಿತಿಯ ಕಾಲವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು, ಕೆಲವು ಕಾಲ್ಪನಿಕ ವ್ಯಕ್ತಿಗಳ ಮೂಲಕ ಜನರ ಸಂಕಟ, ಆಕ್ರೋಶಗಳನ್ನು ಪರದೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದೆ. ಅಂದಹಾಗೆ ಈ ಸಿನಿಮಾವು, ತುರ್ತು ಪರಿಸ್ಥಿತಿ ವೇಳೆ ನಡೆದ ರಾಜಕೀಯ ವಿದ್ಯಮಾನಗಳನ್ನು ಅನುಕ್ರಮವಾಗಿ ತೋರಿಸುವ ಚಿತ್ರ ಅಲ್ಲ.

ಚಿತ್ರದ ಮುಖ್ಯ ಪಾತ್ರವಾಗಿರುವ ಇಂದು ಸರ್ಕಾರ್ (ಕೀರ್ತಿ ಕುಲ್ಹಾರಿ) ಸಂಕೋಚ ಸ್ವಭಾವದ ಹೆಣ್ಣುಮಗಳು. ಈಕೆಗೆ ಅರಳು ಹುರಿದಂತೆ ಮಾತನಾಡಲು ಬಾರದು. ಈಕೆ ಮದುವೆಯಾಗುವುದು ಸರ್ಕಾರಿ ನೌಕರ ನವೀನ್‌ ಸರ್ಕಾರ್‌ನನ್ನು (ಟೊಟಾ ರಾಯ್ ಚೌಧುರಿ).
ಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ದೆಹಲಿಯ ತುರ್ಕಮಾನ್‌ ಗೇಟ್‌ ಪ್ರದೇಶದ ಜನರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ತೀರ್ಮಾನವನ್ನು ಸರ್ಕಾರ ಕೈಗೊಳ್ಳುತ್ತದೆ. ಅದನ್ನು ಅಲ್ಲಿನ ಜನ ಪ್ರತಿಭಟಿಸುತ್ತಾರೆ. ಆಗ ಜನರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸುತ್ತಾರೆ, ಗುಂಡು ಹಾರಿಸುತ್ತಾರೆ. ಈ ಸಂದರ್ಭದಲ್ಲಿ ಆ ಪ್ರದೇಶಕ್ಕೆ ಬಂದಿದ್ದ ಇಂದು, ಇಬ್ಬರು ಪುಟಾಣಿಗಳನ್ನು ಕಾಪಾಡುತ್ತಾಳೆ. ಅವರನ್ನು ತನ್ನ ಮನೆಗೆ ಕರೆತರುತ್ತಾಳೆ, ಅವರ ಪಾಲಕರನ್ನು ಹುಡುಕಿ, ಅವರಿಗೆ ಒಪ್ಪಿಸೋಣ ಎಂಬ ಇರಾದೆಯಿಂದ.

ಆದರೆ, ಆ ಮಕ್ಕಳನ್ನು ಮನೆಗೆ ಕರೆತಂದಿದ್ದು ಪತಿ ನವೀನ್‌ಗೆ ಇಷ್ಟವಾಗುವುದಿಲ್ಲ. ಮಕ್ಕಳನ್ನು ಆದಷ್ಟು ಬೇಗ ಶಿಬಿರವೊಂದಕ್ಕೆ ಕಳುಹಿಸಬೇಕು ಎಂದು ನವೀನ್ ಸೂಚಿಸುತ್ತಾನೆ. ಇಲ್ಲಿಂದ ಸಿನಿಮಾ ತಿರುವು ಪಡೆಯುತ್ತದೆ. ಸಂಕೋಚ ಸ್ವಭಾವದ ಇಂದು, ವ್ಯವಸ್ಥೆಯ ವಿರುದ್ಧ ಬಂಡೇಳುವ ಧೈರ್ಯ ಬೆಳೆಸಿಕೊಳ್ಳುತ್ತಾಳೆ.

ತುರ್ತು ಪರಿಸ್ಥಿತಿಯ ವಿರುದ್ಧ, ವಿದೇಶಿ ಪ್ರತಿನಿಧಿಗಳ ಎದುರು ಧ್ವನಿ ಎತ್ತುವ ಇಂದು ಸರ್ಕಾರ್‌ಳನ್ನು ಜೈಲಿಗೆ ತಳ್ಳಲಾಗುತ್ತದೆ. ನ್ಯಾಯಾಲಯದಲ್ಲಿ ಇದರ ವಿಚಾರಣೆ ವೇಳೆ ಇಂದು, ‘ಎಲ್ಲರೂ ಸುಮ್ಮನೆ ಕುಳಿತಿದ್ದಾಗ, ಯಾರಾದರೂ ಗಟ್ಟಿಯಾಗಿ ಮಾತನಾಡಲೇಬೇಕಲ್ಲ’ ಎನ್ನುತ್ತಾಳೆ.
ಹಾಗಿದ್ದ ಹೆಣ್ಣುಮಗಳು ಹೀಗಾಗುವುದು ಹೇಗೆ ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು.
ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಕೆಲವರು ಭೂಗತವಾಗಿ ಪತ್ರಿಕೆಗಳನ್ನು ಹೊರತಂದಿದ್ದು, ಅಂತಹ ಪತ್ರಿಕೆಗಳು ಎಲ್ಲಿಂದ ಪ್ರಕಟವಾಗುತ್ತವೆ ಎಂಬುದನ್ನು ಪತ್ತೆ ಮಾಡಲು ಸರ್ಕಾರ ಮುಂದಾಗಿದ್ದು, ಸರ್ಕಾರದ ವಿರೋಧಿಗಳನ್ನು ಬಂಧಿಸಿದ್ದು, ಜನರನ್ನು ಬಲವಂತವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದು, ತುರ್ತು ಸ್ಥಿತಿ ವಿರೋಧಿಸಿದ ಕೆಲವು ರಾಜಕೀಯ ಪ್ರಮುಖರು ವೇಷ ಮರೆಸಿಕೊಂಡು ಸರ್ಕಾರದ ವಿರುದ್ಧ ಹೋರಾಟ ಸಂಘಟಿಸಿದ್ದು, ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ಮೇಲೆ ನಿರ್ಬಂಧ ವಿಧಿಸಿದ್ದು... ಇವೆಲ್ಲವನ್ನೂ ಚರಿತ್ರೆ ದಾಖಲಿಸಿದೆ. ಈ ಎಲ್ಲವೂ ‘ಇಂದು ಸರ್ಕಾರ್‌’ನಲ್ಲಿ ಕಾಣಿಸುತ್ತವೆ.

ಈ ಸಿನಿಮಾದಲ್ಲಿ ಬರುವ ನಾನಾಜಿ ಪ್ರಧಾನ್ (ಅನುಪಮ್‌ ಖೇರ್‌) ಎನ್ನುವ ವ್ಯಕ್ತಿ, ಕೆಲವು ಕ್ರಾಂತಿಕಾರಿಗಳನ್ನು ಸಂಪರ್ಕಿಸಿ, ಅವರನ್ನು ಸರ್ಕಾರದ ವಿರುದ್ಧ ಅಹಿಂಸಾತ್ಮಕ ಹೋರಾಟಕ್ಕೆ ಅಣಿಗೊಳಿಸುತ್ತಾನೆ. ಸಂಜಯ್ ಗಾಂಧಿ ಅವರನ್ನು ಹೋಲುವ ವ್ಯಕ್ತಿಯೊಬ್ಬ ಈ ಸಿನಿಮಾದುದ್ದಕ್ಕೂ ಬರುತ್ತಾನೆ. ಆತನನ್ನು ಮಂತ್ರಿಗಳು, ರಾಜಕೀಯ ಮುಖಂಡರು ‘ಚೀಫ್‌’ ಎಂದು ಕರೆಯುತ್ತಾರೆ. ತುರ್ತು ಪರಿಸ್ಥಿತಿ ವೇಳೆ ಪೊಲೀಸರು ಅತಿರೇಕದಿಂದ ವರ್ತಿಸಿದ್ದರು ಎನ್ನುವ ವರದಿಗಳು ಸಾಕಷ್ಟಿವೆ. ಆದರೆ ಪೊಲೀಸರ ಇಂತಹ ವರ್ತನೆಯನ್ನು ಪೂರ್ತಿಯಾಗಿ ಒಪ್ಪದ ಪೊಲೀಸ್‌ ಪಾತ್ರವನ್ನೂ ಸಿನಿಮಾ ಕಟ್ಟಿಕೊಟ್ಟಿದೆ. ಆದರೆ, ತುರ್ತು ಪರಿಸ್ಥಿತಿ ಹೇರಿದ ಕ್ರಮವನ್ನು ಅಂದಿನ ಆಡಳಿತ ವರ್ಗದಲ್ಲಿ ಯಾರೂ ವಿರೋಧಿಸಿಯೇ ಇರಲಿಲ್ಲವೇ ಎಂಬ ಪ್ರಶ್ನೆಗೆ ಈ ಸಿನಿಮಾದಲ್ಲಿ ಉತ್ತರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT