ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವ್ಯಾಸ ಅರಳಿದ ಪರಿ

Last Updated 28 ಜುಲೈ 2017, 19:30 IST
ಅಕ್ಷರ ಗಾತ್ರ

ಬಾಲ್ಯದಿಂದಲೂ ನನಗೆ ಪ್ರಬಂಧರಚನೆ, ಭಾಷಣ, ಚರ್ಚಾಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ ಬಲವಾಗಿತ್ತು. ಶಾಲೆಯಲ್ಲಿ ಪ್ರಬಂಧ ಬರೆಯುವ ಸ್ಪರ್ಧೆಗಳಲ್ಲಿ ತಪ್ಪದೆ ಭಾಗವಹಿಸುತ್ತಿದ್ದೆ. ಆದರೆ ವೇದಿಕೆ ಮೇಲೆ ನಿಂತು ಮಾತನಾಡಲು ಧೈರ್ಯ ಸಾಲದೆ ಭಾಷಣಸ್ಪರ್ಧೆಗಳಿಂದ ದೂರವುಳಿಯುತ್ತಿದ್ದೆ. ಪದವಿ ಮುಗಿಯುತ್ತಿದ್ದಂತೆ ಸಂಸಾರ ಸಾಗರದಲ್ಲಿ ಈಜ ತೊಡಗಿದೆ. ಕೆಲವು ವರ್ಷ ಮನೆ, ಸಂಸಾರವೆಂದಷ್ಟೇ ಇದ್ದೆ. ಭಾಷಣಕಲೆ ತರಬೇತಿ ಪಡೆದು ಹಂತಹಂತವಾಗಿ ಮೇಲೇರಿ ಈಗ ನಿರೂಪಣೆ, ವ್ಯಕ್ತಿತ್ವ ವಿಕಸನ ತರಗತಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ತರಬೇತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾ ಒಬ್ಬ ಭಾಷಣಗಾರ್ತಿಯಾಗಿ ಗುರುತಿಸಿಕೊಂಡು ನನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದೇನೆ.

ಮಗ ಪಿ.ಯು.ಸಿ. ಮಾಡಲು ಹೊರಗಡೆ ಹೋಗುವವನಿದ್ದ. ಅವನಿಲ್ಲದಾಗ ಬೇಸರ ಕಾಡಬಾರದೆಂದು ಪತಿಯ ಸಲಹೆಯಂತೆ ದೂರಶಿಕ್ಷಣದ ಮೂಲಕ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿ ಎಂಬ ಕೋರ್ಸಿಗೆ ಸೇರಿದೆ. ಮಗ ಕಾಲೇಜ್ ಕಲಿಯಲು ಹಾಸ್ಟೆಲ್ ಸೇರುತ್ತಿದ್ದಂತೆ ನಾನು ಪರೀಕ್ಷೆಗಾಗಿ ಉತ್ತಮ ಸಿದ್ಧತೆ ಮಾಡಿಕೊಂಡೆ. ಮಾನಸಿಕ ಸಮಸ್ಯೆಗಳಿಗೆ ಸಮಾಧಾನ ಹೇಳುವ ಆಪ್ತಸಮಾಲೋಚಕಿಯಾಗಿರುವೆ. ಜೊತೆಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆ ಯುವ ಹವ್ಯಾಸವನ್ನೂ ರೂಢಿಸಿಕೊಂಡಿದ್ದೇನೆ. ಮನೆ ಗೆಲಸ, ಆಪ್ತಸಮಾಲೋಚನೆ, ಓದು, ಬರವಣಿಗೆ, ಬಾನುಲಿ ಕಾರ‍್ಯಕ್ರಮಗಳು, ಸಭೆ-ಸಮಾರಂಭ, ಶಾಲಾ-ಕಾಲೇಜುಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋಗುತ್ತೇನೆ. ಕೆಲವೊಂದು ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ನಾನು ಟೀವಿಗಳಿಂದ ಬಲು ದೂರ. ಮೊಬೈಲ್, ವಾಟ್ಸ್ಯಾಪ್ ಚಟ, ಆಟ ಇಲ್ಲವೆಂದೇ ಹೇಳಬಹುದು. ಯಾರೊಂದಿಗೂ ಸುಮ್ಮನೆ ಹರಟುವ ಅಭ್ಯಾಸವಿಲ್ಲ. ಮನೆಯ ಸಕಲ ಕೆಲಸಗಳನ್ನೂ ಮನೆಗೆಲಸದವರಿಲ್ಲದೆ ಖುಷಿಯಿಂದ ಮಾಡುತ್ತಿರುವೆ. ಅಡುಗೆ–ತಿಂಡಿ ಮಾಡುತ್ತಾ ದೊರೆಯುವ ಬಿಡುವಿನ ವೇಳೆಯಲ್ಲಿ ನನ್ನ ಹವ್ಯಾಸಗಳನ್ನು ಪೋಷಿಸಿಕೊಳ್ಳುತ್ತಿರುವೆ. ರಾತ್ರಿ ಬೇಗನೆ ಮಲಗಿ ಬೆಳಿಗ್ಗೆ ಬೇಗ ಏಳುವುದು, ಮೊದಲೇ ಯೋಜಿಸಿ ಎಲ್ಲದಕ್ಕೂ ವೇಳೆಯನ್ನು ಹೊಂದಿಸಿಕೊಳ್ಳುವುದರಿಂದ ಬೇಕಾದಷ್ಟು ಸಮಯ ದೊರೆಯುತ್ತಿದೆ. ಇದೇ ರಟ್ಟಾಗುತ್ತಿರುವ ನನ್ನ ಸಮಯದ ಉಳಿತಾಯದ ಗುಟ್ಟು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT