ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸ್ತ್ರೀಯ ಸ್ಥಾನ ಸಿಕ್ಕರೂ ಹುಸಿಯಾದ ನಿರೀಕ್ಷೆ

Last Updated 30 ಜುಲೈ 2017, 5:30 IST
ಅಕ್ಷರ ಗಾತ್ರ

ಶಿವಮೊಗ್ಗ: ಶಾಸ್ತ್ರೀಯ ಭಾಷೆ ಸ್ಥಾನ, ಮಾನ ದೊರೆತರೆ ಕನ್ನಡಕ್ಕೆ ಉಜ್ವಲ ಭವಿಷ್ಯವಿದೆ ಎನ್ನುವ ಎಲ್ಲ ನಿರೀಕ್ಷೆಗಳೂ ಹುಸಿಯಾಗಿವೆ ಎಂದು ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು. ಕರ್ನಾಟಕ ಸಂಘದ ಸಭಾಂಗಣದಲ್ಲಿ ಶನಿವಾರ 2016ನೇ ಸಾಲಿನ ಪುಸ್ತಕ ಬಹುಮಾನ ವಿತರಿಸಿ ಮಾತನಾಡಿದರು.

ಅಂತರ್ಜಾಲ ಬಳಕೆ, ದೃಶ್ಯ ಮಾಧ್ಯಮ ಭರಾಟೆಯ ನಡುವೆ ಪುಸ್ತಕಗಳ ಓದಿನ ಆಸಕ್ತಿ ಕಡಿಮೆಯಾಗಿದೆ. ಜನರ ನೆನಪಿನ ಭಾವಕೋಶಗಳು ಸತ್ತುಹೋಗಿವೆ. ನಾಡಗೀತೆ, ರಾಷ್ಟ್ರಗೀತೆ ಹಾಡುವುದು ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ ಎನ್ನುವ ಮನೋಭಾವ ಬೇರೂರಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಸಂಘಗಳು ಮಾತ್ರ ಸಾಹಿತ್ಯ ಚಟುವಟಿಕೆಗಳನ್ನು ಸೃಜನಾತ್ಮಕವಾಗಿ ನಡೆಸಿಕೊಂಡು ಬರುತ್ತಿವೆ. ಧಾರವಾಡ, ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ಇಂತಹ ಸಂಘಗಳನ್ನು ಕಾಣಬಹುದು. ಶಿವಮೊಗ್ಗ ಕರ್ನಾಟಕ ಸಂಘ 100 ವರ್ಷಗಳತ್ತ ದಾಪುಗಾಲು ಹಾಕುತ್ತಿದೆ. ಒಂದು ಸಂಸ್ಥೆ ಗುಣಾತ್ಮಕ, ಕ್ರಿಯಾಶೀಲ ಚಟುವಟಿಕೆ ದೀರ್ಘಕಾಲ ನಡೆಸಿಕೊಂಡು ಬರುವುದು ಸವಾಲಿನ ಕೆಲಸ ಎಂದು ಶ್ಲಾಘಿಸಿದರು.

ಸಂಘ ಬಹುಮಾನ ನೀಡಿದ 12 ಪುಸ್ತಕಗಳು ವಿಭಿನ್ನ ಆಯಾಮ ಹೊಂದಿವೆ. ಸಮಾಜಮುಖಿ ಚಿಂತನೆಯ ವಿಷಯವಸ್ತು ಒಳಗೊಂಡಿವೆ. ಅಂತರ್ಜಲ ಬಳಕೆ, ವೈದ್ಯಕೀಯ ವಿಜ್ಞಾನ, ಪ್ರವಾಸ ಕಥನ ಸೇರಿದಂತೆ ಹಲವು ರೀತಿಯ ವಸ್ತು, ವಿಷಯಗಳೂ ಕನ್ನಡದಲ್ಲಿ ಮುದ್ರಣಗೊಂಡಿರುವುದು ಕನ್ನಡ ಸಾಹಿತ್ಯ ಲೋಕ ಮತ್ತಷ್ಟು ಶ್ರೀಮಂತಗೊಳ್ಳಲು ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

12 ಲೇಖಕರಿಗೆ ಬಹುಮಾನದ ಪುರಸ್ಕಾರ: ಈ ಸಮಯದಲ್ಲಿ ಲೇಖಕಿ ರೇಖಾ ಕಾಖಂಡಕಿ ಅವರ ‘ವೈವಸ್ವತ’ ಕಾದಂಬರಿಗೆ ಕುವೆಂಪು ಬಹುಮಾನ, ಡಿ.ಎನ್.ಶ್ರೀನಾಥ್ ಅವರ ‘ಅಸ್ಸಾಮಿ ಕತೆಗಾರ್ತಿಯರ ಆಯ್ದ ಕಥೆಗಳು’ ಅನುವಾದಿತ ಕೃತಿಗೆ ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ, ಮಧುರಾ ಕರ್ಣಮ್ ಅವರ ‘ಆಲದ ನೆರಳು’ ಕೃತಿಗೆ ಎಂ.ಕೆ.ಇಂದಿರಾ (ಮಹಿಳಾ ಲೇಖಕರು), ಡಾ.ಮಿರ್ಜಾ ಬಷೀರ್‌ ಅವರ ‘ಜಿನ್ನಿ’ ಕೃತಿಗೆ ಪಿ.ಲಂಕೇಶ್‌ (ಮುಸ್ಲಿಂ ಲೇಖಕರು),  ಲೇಖಕ ವಾಸುದೇವ ನಾಡಿಗ್‌ ಅವರ ‘ಅಲೆ ತಾಕಿದರೆ ದಡ’ ಕವನ ಸಂಕಲನಕ್ಕೆ ಡಾ.ಜಿ.ಎಸ್. ಶಿವರುದ್ರಪ್ಪ, ಡಾ.ಜಿ.ಎಸ್.ಭಟ್ಟ ಅವರ ‘ಮಲೆಯ ಮಾತು’ ಅಂಕಣ ಬರಹಕ್ಕೆ ಡಾ.ಹಾ.ಮಾ. ನಾಯಕ, ಎಚ್.ಬಿ.ಇಂದ್ರ ಕುಮಾರ್ ಅವರ ‘ಕಾಣದ ಕಡಲು’ ಕಥಾ ಸಂಕಲನಕ್ಕೆ ಡಾ.ಯು.ಆರ್. ಅನಂತಮೂರ್ತಿ, ಸುಬ್ರಾವ ಕುಲಕರ್ಣಿ ಅವರ ‘ಓಕುಳಿ ಹಾಗೂ ಇತರ ನಾಟಕಗಳು’ ನಾಟಕಕ್ಕೆ ಡಾ.ಕೆ.ವಿ. ಸುಬ್ಬಣ್ಣ, ಎಂ.ಜಾನಕಿ ಬ್ರಹ್ಮಾವರ ಅವರ ‘ನೈಲ್ ನದಿಯ ನಾಡಿನಲ್ಲಿ’ ಪ್ರವಾಸ ಕಥನಕ್ಕೆ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ,  ಡಾ.ಎ.ಎಸ್.ಕುಮಾರ ಸ್ವಾಮಿ ಅವರ ‘ಅಂತರ್ಜಲ ಬಳಕೆ’ ವಿಜ್ಞಾನ ಕೃತಿಗೆ ಹಸೂಡಿ ವೆಂಕಟಶಾಸ್ತ್ರಿ, ಮತ್ತೂರು ಸುಬ್ಬಣ್ಣ ಅವರ ‘ಮಕ್ಕಳ ಕಥಾಲೋಕ’ ಮಕ್ಕಳ ಸಾಹಿತ್ಯ ಕೃತಿಗೆ ಡಾ.ನಾ. ಡಿಸೋಜ, ಲೇಖಕ ಡಾ.ಎಚ್.ಎಸ್. ಮೋಹನ್ ಅವರ ‘ವೈದ್ಯ ವಿನೂತನ’ ವೈದ್ಯ ಸಾಹಿತ್ಯಕ್ಕೆ ಡಾ.ಎಚ್.ಡಿ. ಚಂದ್ರಪ್ಪಗೌಡ ಬಹುಮಾನ ನೀಡಿ ಗೌರವಿಸಲಾಯಿತು.

ಪ್ರತಿ ಬಹುಮಾನಕ್ಕೂ ತಲಾ ₹ 10 ಸಾವಿರ ನಗದು ನೀಡಲಾಯಿತು. ಬಹುಮಾನ ಸ್ವೀಕರಿಸಿ ಮಾತನಾಡಿದ ಕವಿ ವಾಸುದೇವ ನಾಡಿಗ್, ‘ಬದುಕಿನಲ್ಲಿ ಕಾವ್ಯ ಬಹಳಷ್ಟು ಕಲಿಸಿಕೊಟ್ಟಿದೆ. ಜೀವನದ ಎಲ್ಲ ಕ್ಷಣ, ಅನುಭವಗಳನ್ನೂ ಕಾವ್ಯದ ಮೂಲಕವೇ ಹೇಳುವ ಪರಿಪಾಠ ರೂಢಿಸಿದ್ದು ಶಿವಮೊಗ್ಗದ ಈ ನೆಲ. ಇಲ್ಲಿನ ಶಿಕ್ಷಕ ಸಮೂಹ ಒಡನಾಡಿಗಳು’ ಎಂದು ಸ್ಮರಿಸಿದರು. ಸಂಘದ ಅಧ್ಯಕ್ಷ ಡಿ.ಎಸ್‌. ಮಂಜುನಾಥ್, ಕಾರ್ಯದರ್ಶಿ ಎಚ್‌.ಎಸ್‌.ನಾಗಭೂಷಣ್, ಸಹ ಕಾರ್ಯದರ್ಶಿ ಅಂಬಿಕಾ ದೇವರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT