ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಡುವ ಹುಚ್ಚು ನಟನೆಗೆ ಹಚ್ಚಿತು

ನಾ ಕಂಡ ಬೆಂಗಳೂರು
Last Updated 31 ಜುಲೈ 2017, 12:05 IST
ಅಕ್ಷರ ಗಾತ್ರ

ಸಿನಿಮಾದಲ್ಲಿ ಪಾತ್ರ ಮಾಡಬೇಕು ಎಂದುಕೊಂಡೇ ಇರಲಿಲ್ಲ. ಮೈಸೂರಿನ ನೂರು ಅಡಿ ರಸ್ತೆಯ ಲಕ್ಷ್ಮಿ ಥಿಯೇಟರ್‌ ಬಳಿ ನಮ್ಮ ಮನೆ ಇತ್ತು. ತಾಯಿ, ಅಣ್ಣ ಮತ್ತು ನಾನು ಮೂವರೇ ಇದ್ದೆವು. ಮನೆಯಲ್ಲಿ ಸಂಗೀತದ ವಾತಾವರಣ ಇತ್ತು. ಅಮ್ಮ ಚೆನ್ನಾಗಿ ಹಾಡುತ್ತಿದ್ದರು. ಗ್ರಾಮಫೋನ್‌ನಲ್ಲಿ ಹಾಡು ಕೇಳೋದು ತುಂಬಾ ಇಷ್ಟವಾಗ್ತಿತ್ತು. ನನಗೂ ಗ್ರಾಮಫೋನ್‌ನಲ್ಲಿ ನನ್ನ ಸ್ವರ ಕೇಳಬೇಕು ಎಂಬ ಆಸೆಯಾಗಿ, ನನ್ನ ಸಂಬಂಧಿಗಳ ಹತ್ರ ಹೇಳ್ತಿದ್ದೆ. ‘ಆಯ್ತು ಹಾಡಿಸೋಣ ಬಿಡು’ ಅಂತ ಅವರೆಲ್ಲ ಹೇಳ್ತಿದ್ರು.

ಗ್ರಾಮಫೋನ್‌ನಲ್ಲಿ ನನ್ನ ಹಾಡು ಕೇಳುವ ಅವಕಾಶ ಬರದಿದ್ದರೂ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಹಾಡೋದು ನಡೀತಾನೇ ಇತ್ತು. ‘ಬಿಂದು ಬಿ.ಎ.’ ಅಂತ ಒಂದು ಸಿನಿಮಾ ಶುರುವಾಗಿತ್ತು. ಅಲ್ಲಿ ನಾಲ್ಕು ಹಾಡು ಹಾಡುವುದಕ್ಕೆ ನನ್ನನ್ನು ಆಯ್ಕೆ ಮಾಡಿದ್ರು. ಆದ್ರೆ ಆ ಸಿನಿಮಾ ನಿಂತೇ ಹೋಯ್ತು.

ಮಾಸ್ಟರ್‌ ವಾಯ್ಸ್‌ನವರು ಬಂದು ಹಾಡುಗಳ ರೆಕಾರ್ಡಿಂಗ್‌ ಮಾಡಿದ್ರು. ಅದು ಸುಗ್ಗಿ ಹಾಡು. ಯಾಕೋ ಹಾಡು ಅವರಿಗೆ ಇಷ್ಟವಾಗ್ಲಿಲ್ಲ. ‘ಈ ಹುಡುಗಿ ಹಾಡೋದು ಬೇಡ’ ಅಂತ ಹೇಳಿ ಹೊರಟುಹೋದ್ರು. ಆದರೆ ಮ್ಯೂಸಿಕ್‌ ಡೈರೆಕ್ಟರ್‌ ನನ್ನ ಹಾಡುಗಳ ರೆಕಾರ್ಡ್‌ ಹಿಡಿದು ಮದ್ರಾಸ್‌ಗೆ (ಈಗಿನ ಚೆನ್ನೈ) ಹೋದ್ರು. ‘ಸಂಗೀತದ ಜೊತೆ ಚೆನ್ನಾಗಿ ಪ್ರಾಕ್ಟೀಸ್‌ ಮಾಡು, ಹಾಡಲು ಕರೆದಾಗ ಮದ್ರಾಸಿಗೆ ಬರಬೇಕು’ ಎಂದು ಹೇಳಿ ಹೋದ್ರು. ಇನ್ನೇನು ಕರೀತಾರೆ ಅಂತ ಕಾಯ್ತಾ ಇದ್ದೆ. ಆದ್ರೆ ಆ ಕಂಪೆನಿ ನಿಂತೇ ಹೋಯ್ತು. ಅಲ್ಲಿಗೆ ನನ್ನ ಹಾಡುಗಾರಿಕೆಯೂ ನಿಂತು ಹೋಯ್ತು.

ಆಗ ನನಗೆ ಹತ್ತು ವರ್ಷ. ನಮ್ಮ ಪಕ್ಕದ ಮನೆಯ ಹುಡುಗಿಯೊಬ್ಬಳು ದಿನಾ ಬೆಳಿಗ್ಗೆ ಎದ್ದು ಎಲ್ಲಿಗೋ ಹೋಗ್ತಿದ್ಲು. ‘ಅಕ್ಕಾ ಅಕ್ಕಾ ಎಲ್ಲಿಗೆ ಹೋಗ್ತಿಯಾ’ ಅಂತ ಒಂದಿನ ಕೇಳಿದೆ. ಡಾನ್ಸ್‌ ಕಲಿಯಲು ಹೋಗೋದಾಗಿ ಆಕೆ ಹೇಳಿದ್ದೇ ತಡ ‘ನನ್ನನ್ನೂ ಡಾನ್ಸ್‌ ಕ್ಲಾಸಿಗೆ ಸೇರಿಸ್ಕೋ, ನಿನ್ನ ಮೇಷ್ಟ್ರಿಗೆ ಹೇಳು’ ಅಂತ ದುಂಬಾಲು ಬಿದ್ದೆ. ನಂತರ ಆಕೆಯ ಜೊತೆಗೇ ಹೋಗಿ ಕಿಟಕಿ ಮೇಲೆ ಹತ್ತಿ, ಅವರೆಲ್ಲ ಡಾನ್ಸ್‌ ಕಲಿಯುವುದನ್ನು ನೋಡುತ್ತಿದ್ದೆ.

ಒಂದಿನ ಆ ಹುಡುಗಿ ಡಾನ್ಸ್‌ ಮೇಷ್ಟ್ರು ಬಳಿ ಕರ್ಕೊಂಡು ಹೋಗಿ, ‘ಈಕೆ ಡಾನ್ಸ್‌ ಕಲೀಬೇಕಂತೆ’ ಅಂದ್ಲು. ‘ಸರಿ ನಿಂಗೆ ಡಾನ್ಸ್‌ ಬರುತ್ತೇನಮ್ಮಾ’ ಅಂತ ಮೇಷ್ಟ್ರು ಕೇಳಿದ್ರು. ನಾನು ದಿನಾ ಕಿಟಕಿಯಲ್ಲಿ ನೋಡಿದ್ನಲ್ಲ, ಅದನ್ನೆಲ್ಲ ಮಾಡಿ ತೋರಿಸಿದೆ. ‘ಓ ಪರ್ವಾಗಿಲ್ಲ, ಚೆನ್ನಾಗಿ ಡಾನ್ಸ್‌ ಮಾಡ್ತಿ’ ಅಂತ ಹೇಳಿ ಸೇರಿಸ್ಕೊಂಡ್ರು. ಹಾಗೆ ಡಾನ್ಸ್‌ ಕ್ಲಾಸ್‌ಗೆ ಸೇರಿಕೊಂಡೆ.

ಡಾನ್ಸ್‌ ಮೇಷ್ಟ್ರು ಚನ್ನವೀರ ಅಂತ. ನಮ್ಮದೊಂದು ಡಾನ್ಸ್‌ ತಂಡ ಇತ್ತು. ಕಮಲಾ ಅನ್ನೋ ಹುಡುಗಿ ಕೃಷ್ಣ, ನಾನು ರಾಧೆ. ಆ ವರ್ಷ ಧರ್ಮಸ್ಥಳದಲ್ಲಿ ದೀಪಾವಳಿ ಕಾರ್ಯಕ್ರಮಕ್ಕೆ ಡಾನ್ಸ್‌ ಷೋ ಕೊಡಲು ಹೋಗಿದ್ದೆವು. ಅಲ್ಲಿ ಕಾರ್ಯಕ್ರಮ ಮುಗಿದ ನಂತರ ಧರ್ಮಾಧಿಕಾರಿ ತಮ್ಮ ಕಚೇರಿಗೆ ಕರೆದು ಹಣ್ಣುಹಂಪಲು ಕೊಟ್ರು. ನನ್ನನ್ನು ಕರೆದು ‘ನಿನಗೆ ಉತ್ತಮ ಭವಿಷ್ಯ ಇದೆ’ ಅಂತ ಹೇಳಿದ್ರು. ನಂತರ ಅರಮನೆಗೆ ಸಂಗೀತಗಾರರ ಜೊತೆ ಕಾರ್ಯಕ್ರಮ ನೀಡಲು ಹೋಗುವುದೇ ಆಯ್ತು. ಹೀಗೆ ಸಂಗೀತಗಾರ್ತಿಯಾಗಬೇಕೆಂದು ಹೊರಟವಳು ನೃತ್ಯಗಾರ್ತಿಯಾದೆ.

ಅದೇ ಸಮಯದಲ್ಲಿ ಗುಬ್ಬಿ ನಾಟಕ ಕಂಪನಿಯವರು ಕರೆದು ಡಾನ್ಸ್‌ ಮಾಡ್ತಿಯಾ ಅಂತ ಕೇಳಿದ್ರು. ಹೂ ಅಂದೆ. ಗುಬ್ಬಿ ಕಂಪನಿಯಲ್ಲಿ ಪ್ರತಿ ನಾಟಕ ಪ್ರದರ್ಶನದಲ್ಲಿ ಮೊದಲಿಗೆ ರಂಗಪೂಜೆ ನಾನೇ ಮಾಡಬೇಕಿತ್ತು. ಅದೇ ಸಂದರ್ಭದಲ್ಲಿ ಮಹಾತ್ಮ ಪಿಕ್ಚರ್ಸ್‌ನವರು ‘ಶ್ರೀನಿವಾಸ ಕಲ್ಯಾಣ’ ಸಿನಿಮಾದಲ್ಲಿ ನನಗೆ ಅವಕಾಶ ನೀಡಿದ್ರು. ವೀರಭದ್ರಪ್ಪ ಅಂತ ವಿಲನ್‌ ಪಾತ್ರ ಮಾಡುವವರಿದ್ದರು.

ಅವರು ಒಂದಿನ ನನ್ನನ್ನು ಕರೆದು, ‘ಹೊಸ ಪಿಕ್ಚರ್ ಬರ್ತಿದೆ. ಅದರಲ್ಲಿ ನನ್ನ ಜೊತೆ ನೀನು ಹೊಲೆಯರ ಹುಡುಗಿಯ ಪಾತ್ರ ಮಾಡಬೇಕು. ಏನೂ ಭಯಪಡಬೇಡ’ ಅಂತ ಧೈರ್ಯ ತುಂಬಿದರು. ಅದರಲ್ಲಿ ನಟಿಸಿದೆ. ನಂತರ ಮಾಡರ್ನ್‌ ಥಿಯೇಟರ್‌ ನಿರ್ಮಾಣದ ‘ಕಾಳಿದಾಸ’ ಸಿನಿಮಾದಲ್ಲಿ ಅವಕಾಶ ಸಿಕ್ತು. ಹೊನ್ನಪ್ಪ ಭಾಗವತರ್‌, ಬಿ. ಸರೋಜಾ ದೇವಿ ಜೊತೆ ನಟಿಸಿದೆ. ಹೀಗೆ ಸಿನಿಮಾ ಪಯಣ ಅಡೆತಡೆಯಿಲ್ಲದೇ ಸಾಗಿತ್ತು.

ಸಿನಿಮಾಗೆ ಅವಕಾಶ ಸಿಗುತ್ತಿದ್ದಂತೆ ಮೈಸೂರಿನಿಂದ ಮದ್ರಾಸಿಗೆ ಓಡಾಡುವುದು ಅನಿವಾರ್ಯವಾಯ್ತು. ಹಾಗಾಗಿ ಮದ್ರಾಸಿನಲ್ಲಿ ಮನೆ ಮಾಡಿಕೊಂಡು ಅಲ್ಲೇ ಇದ್ದುಬಿಟ್ಟೆ. ನನ್ನ ಜೊತೆಗೆ ಸಂಬಂಧಿ ಮಹಿಳೆಯೊಬ್ಬರು ಸದಾ ಇರುತ್ತಿದ್ದರು. ನನ್ನಮ್ಮನಿಗೆ ನಾನು ಸಿನಿಮಾದಲ್ಲಿ ಪಾರ್ಟ್‌ ಮಾಡುವುದು ಇಷ್ಟ ಇರಲಿಲ್ಲ. ಹಾಡುವುದು ಖುಷಿ ಇತ್ತು. ‘ಬೇಕಿದ್ದರೆ ಶಾಲೆಗಳಲ್ಲಿ ಹಾಡಲು ಸೇರಿಸುತ್ತೇನೆ’ ಅಂತ ಹೇಳ್ತಿದ್ರು. ಮದ್ರಾಸಿನಲ್ಲಿ ಮೈನರ್‌ ಟ್ರಸ್ಟ್‌ ಪುರಂನ ರಾಜ್‌ಕುಮಾರ್‌ ಮನೆಯ ಬಳಿಯೇ ನನ್ನ ಮನೆ ಇತ್ತು. ನರಸಿಂಹರಾಜು ಮನೆ ಕೂಡಾ ಪಕ್ಕದಲ್ಲಿಯೇ ಇತ್ತು. ಬಾಲಣ್ಣ ಮತ್ತು ಲೀಲಾವತಿ ಮನೆ ಮಾತ್ರ ಸ್ವಲ್ಪ ದೂರದಲ್ಲಿತ್ತು.

ರಾಜ್‌ಕುಮಾರ್‌ ನನ್ನನ್ನು ತಂಗಿ ರೀತಿಕಾಣೋರು. ಅವರಿಗೆ ಶೂಟಿಂಗ್‌ ಮಧ್ಯೆ ಬ್ರೇಕ್‌ ಇದ್ದಾಗ ನನ್ನ ಹಾಸ್ಯ ದೃಶ್ಯಗಳನ್ನು ನೋಡುತ್ತಾ ನಗುತ್ತಿದ್ದರಂತೆ. ರಾಜ್‌ಕುಮಾರ್‌ ಮುಂತಾದ ದೊಡ್ಡ ನಟರ ಶೂಟಿಂಗ್‌ ಬಹಳ ಹೊತ್ತು ನಡೀತಿತ್ತು. ಆಗ ನಾನು, ರಾಮಚಂದ್ರಶಾಸ್ತ್ರಿ, ಕೆ.ಎಸ್‌. ಅಶ್ವತ್ಥ್‌, ಬಾಲಣ್ಣ, ನರಸಿಂಹರಾಜು, ಶ್ರೀನಾಥ್‌ ಎಲ್ಲ ಸೇರ್ಕೊಂಡು ಇಸ್ಪೀಟ್‌ ಆಡುತ್ತಿದ್ದೆವು. ರಾಜಣ್ಣ ಕೂಡಾ ಒಮ್ಮೊಮ್ಮೆ ಸೇರಿಕೊಳ್ತಿದ್ರು. ನಮ್ಮ ನಡುವೆ ಒಂದೇ ಒಂದು ಸಲವೂ ಜಗಳ ನಡೆದಿಲ್ಲ. ಶೂಟಿಂಗ್‌ ಸೆಟ್‌ನಲ್ಲಿ ಎಲ್ಲರೂ ಸಾಲಾಗಿ ಕುಳಿತು ಊಟ ಮಾಡುತ್ತಿದ್ದೆವು. ಒಂದೇ ಕುಟುಂಬದಂತೆ ಇದ್ದೆವು. ಕಲ್ಯಾಣ್‌ಕುಮಾರ್, ಉದಯಕುಮಾರ್‌, ದ್ವಾರಕೀಶ್‌ ಕೂಡಾ ಪ್ರೀತಿಯಿಂದ ಕಾಣೋರು.

ರಾಜಣ್ಣನ ಪತ್ನಿ ಪಾರ್ವತಮ್ಮ ಅವರ ಹೊಟ್ಟೆಯಲ್ಲಿ ಶಿವಣ್ಣ ಇದ್ದ. ಆಗ ಮನೆಯಲ್ಲಿ ಬೇಳೆ ಬೇಯುತ್ತಿದ್ದರೆ ಸಾಕು, ಅವರಿಗೆ ವಾಂತಿ ಬರುತ್ತಿತ್ತು. ಅದಕ್ಕೆ ಅವರು ನಮ್ಮನೆಗೆ ಬಂದುಬಿಡೋರು. ರಾಜಣ್ಣ ಬೆಂಗಳೂರಿಗೆ ಬಂದ ನಂತರವೂ ವರ್ಷಕ್ಕೊಮ್ಮೆ ಮನೆಗೆ ಕರೆದು ಊಟ ಹಾಕುತ್ತಿದ್ದರು. ಪಾರ್ವತಮ್ಮ ಕೂಡಾ ಅದೇ ಪರಂಪರೆ ಮುಂದುವರಿಸಿದ್ದರು.

ಪಂಢರೀಬಾಯಿ, ಲೀಲಾವತಿ, ಸರೋಜಾದೇವಿ ಎಲ್ಲರೂ ಮದ್ರಾಸಿನಲ್ಲೇ ವಾಸವಿದ್ದರು. ‘ಜೇನುಗೂಡು’ ಸಿನಿಮಾದಲ್ಲಿ ಉದಯಕುಮಾರ್‌ಗೆ ನಾಯಕಿಯಾಗಿದ್ದೆ. ಲೀಲಾವತಿ ಮೊದಲು ನಟಿಸಿದ ‘ಚಂಚಲ ಕುಮಾರಿ’ ಸಿನಿಮಾದಲ್ಲಿ ಆಕೆಯದಕ್ಕಿಂತ ದೊಡ್ಡ ಪಾತ್ರ ನನ್ನದೇ ಆಗಿತ್ತು. ಮೈಸೂರಿನಲ್ಲಿ ಶೂಟಿಂಗ್‌ ನಡೀತಿತ್ತು. ‘ಯಾರೋ ಮಂಗಳೂರಿನ ಹುಡುಗಿಯಂತೆ’ ಎಂದು ಪರಿಚಯ ಮಾಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ನಮ್ಮ ಗೆಳೆತನ ಹಾಗೆಯೇ ಮುಂದುವರಿದಿದೆ. ಮೊನ್ನೆಯಷ್ಟೇ ಆಕೆ ತೋಟದಲ್ಲಿ ಬೆಳೆದ ಮಾವಿನಹಣ್ಣು ಕಳಿಸಿಕೊಟ್ಟಿದ್ದಳು. ಬಿ.ಸರೋಜಾದೇವಿ ಆಗಾಗ ಫೋನ್‌ ಮಾಡಿ ಆ ದಿನಗಳನ್ನು ನೆನಪಿಸ್ತಿರ್ತಾಳೆ. ಬಿ.ವಿ.ರಾಧಾ, ಜಯಮ್ಮ ನಾವೆಲ್ಲ ಅಪರೂಪಕ್ಕೊಮ್ಮೆ ಸೇರುತ್ತೇವೆ. ನಾನು ಮಾತ್ರ ಇಂದಿಗೂ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದೇನೆ.

ಕಲ್ಪನಾ ತುಂಬಾ ಸಿಡುಕಿ, ಆದ್ರೆ ನನ್ನ ಮಾತು ಕೇಳೋಳು. ಆಕೆಯ ಕೊನೆಯ ದಿನಗಳಲ್ಲಿ ‘ಮನೆಮಗಳು’ ನಾಟಕದಲ್ಲಿ ನಾನೂ ಜೊತೆಯಾಗಿ ನಟಿಸಿದ್ದೆ. ‘ಲಕ್ಸಮ್ಮಾ ...’ ಅಂತಾ ಓಡಿ ಬಂದು ಮುದ್ದಿಸೋಳು.

ಕ್ರಮೇಣ ಬೆಂಗಳೂರಿನಲ್ಲೂ ಸಿನಿಮಾ ನಿರ್ಮಾಣ ಚಟುವಟಿಕೆಗಳು ಶುರುವಾದಾಗ ಮದ್ರಾಸಿನಿಂದ ಶೂಟಿಂಗ್‌ಗೆ ಬರಬೇಕಿತ್ತು. ಆಗ ನಮಗೆಲ್ಲ ಹೈಲ್ಯಾಂಡ್ಸ್‌ ಹೋಟೆಲಿನಲ್ಲಿ ರೂಮ್ ಮಾಡಿರುತ್ತಿದ್ದರು. ಮೂರ್ನಾಲ್ಕು ದಿನ ಅಲ್ಲೇ ಉಳಿದು ಶೂಟಿಂಗ್‌ ಮುಗಿದ ನಂತರ ಮತ್ತೆ ಮದ್ರಾಸಿಗೆ ಹೋಗುತ್ತಿದ್ದೆವು. ಆಗ ಕಂಠೀರವ ಸ್ಟುಡಿಯೊದಲ್ಲಿ ಹೆಚ್ಚು ಶೂಟಿಂಗ್‌ ನಡೀತಿತ್ತು. ಕ್ರಮೇಣ ಮನೆಗಳಲ್ಲಿ ಶೂಟಿಂಗ್‌ ಮಾಡುವ ಅಭ್ಯಾಸ ಶುರುವಾಯಿತು. ವೈಟ್‌ಹೌಸ್‌, ಆರ್‌.ಟಿ. ನಗರದ ರತನ್‌ಸಿಂಗ್‌ ಹೌಸ್‌ ಮುಂತಾದ ಕಡೆ ಶೂಟಿಂಗ್‌ ನಡೀತಿತ್ತು. ಆ ಹೊತ್ತಿಗಾಗಲೇ ಬೆಂಗಳೂರಿನಲ್ಲಿ ರೆಕಾರ್ಡಿಂಗ್‌ ಸ್ಟುಡಿಯೊಗಳು ಶುರುವಾಗಿ ಕನ್ನಡ ಸಿನಿಮಾಗಳು ಇಲ್ಲಿಯೇ ನಿರ್ಮಾಣವಾಗಲು ಶುರುವಾಯಿತು. 1996ರಲ್ಲಿ ಮದ್ರಾಸಿನಿಂದ ನನ್ನ ಕುಟುಂಬ ಇಲ್ಲಿಗೆ ಬಂತು. ವಿಜಯನಗರದ ಆರ್‌ಪಿಸಿ ಲೇಔಟ್‌ನಲ್ಲಿ ಮನೆ ಮಾಡಿದೆ.

ನಾನು ಶೂಟಿಂಗ್‌ ಬಿಟ್ಟರೆ ಬೇರೆಲ್ಲೂ ಓಡಾಡಿಲ್ಲ. ಶೂಟಿಂಗ್‌ ಜಾಗಕ್ಕೆ ಹೋಗಲು ಕಾರು ಕಳಿಸುತ್ತಿದ್ದರು. ಹಾಗಾಗಿ ಮನೆ, ಶೂಟಿಂಗ್‌ ಬಿಟ್ಟು ಬೇರೆಲ್ಲೂ ಹೋಗುವ ಅಭ್ಯಾಸವೇ ಇರಲಿಲ್ಲ. ಮಾವಿನ ಹಣ್ಣಿನ ಸೀಸನ್‌ನಲ್ಲಿ ಬಿನ್ನಿಮಿಲ್‌ ಬಳಿ ಮಾವಿನ ಮೇಳ ನಡೆಸೋರು. ಅಲ್ಲಿಗೆ ಹೋಗಿ ಬಗೆ ಬಗೆ ಮಾವು ತರುತ್ತಿದ್ದೆ. ಲೀಲಾವತಿ ಬಹಳ ವರ್ಷ ಕ್ವೀನ್ಸ್‌ ರಸ್ತೆಯ ಹೋಟೆಲೊಂದರಲ್ಲಿ ವಾಸವಿದ್ದರು. ಅಲ್ಲಿಗೆ ಹೋಗುತ್ತಿದ್ದೆ.
ನನ್ನ ಓರಗೆಯವರಲ್ಲಿ ನಾನೊಬ್ಬಳೇ ಈಗಲೂ ನಟನೆಯಲ್ಲಿ ತೊಡಗಿಕೊಂಡಿದ್ದೇನೆ.

ನಾ ಕಂಡ ಬೆಂಗಳೂರು
ಪರಿಚಯ: ಎಂ.ಎನ್‌. ಲಕ್ಷ್ಮೀದೇವಿ, ಹಾಸ್ಯ ಕಲಾವಿದೆ.
ಜನನ: 1936
ಹುಟ್ಟೂರು: ಮೈಸೂರು
ಮನೆ: ರಾಜರಾಜೇಶ್ವರಿ ನಗರ, ಐಡಿಯಲ್ ಬಡಾವಣೆ, ಬೆಂಗಳೂರು
ಕುಟುಂಬ: ಮಗ ಚಂದ್ರಶೇಖರ, ಮಗಳು ಯೋಗೀಶ್ವರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT