ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜನೆಯ ಪೊಟ್ಟಣದಲ್ಲಿ ಹಾಸ್ಯದ ಗುಳಿಗೆ

Last Updated 4 ಆಗಸ್ಟ್ 2017, 14:24 IST
ಅಕ್ಷರ ಗಾತ್ರ

ಚಿತ್ರ: ರಾಜ್‌ ವಿಷ್ಣು

ನಿರ್ದೇಶನ: ಕೆ. ಮಾದೇಶ್‌
ನಿರ್ಮಾಪಕರು: ರಾಮು
ತಾರಾಬಳಗ: ಶರಣ್‌, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಸಾಧುಕೋಕಿಲ, ವೈಭವಿ ಶಾಂಡಿಲ್ಯ, ಸುಚೇಂದ್ರಪ್ರಸಾದ್‌

ತರುಣನೊಬ್ಬ ಮನದನ್ನೆಯನ್ನು ಪ್ರೀತಿಸುವಾಗ ಹೇಗೆ ಅವಾಂತರ ಸೃಷ್ಟಿಸಿಕೊಳ್ಳುತ್ತಾನೆ. ತನ್ನ ಅಪ್ಪ, ತಾತ ಒಪ್ಪಿದ ಹುಡುಗಿ ಪ್ರೀತಿಸಲು ಮತ್ತು ಆ ಪ್ರೀತಿ ಉಳಿಸಿಕೊಳ್ಳಲು ಯಾವೆಲ್ಲ ನಾಟಕವಾಡುತ್ತಾನೆ ಎನ್ನುವುದನ್ನು ‘ರಾಜ್‌ ವಿಷ್ಣು’ ಚಿತ್ರದಲ್ಲಿ ನಿರ್ದೇಶಕ ಕೆ. ಮಾದೇಶ್‌ ನಗೆಬುಗ್ಗೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ತಮಿಳಿನ ‘ರಜನಿ ಮುರುಗ’ ಚಿತ್ರದ ಕಥೆಯನ್ನು ತಮ್ಮದೇ ರೀತಿಯಲ್ಲಿ ಒಗ್ಗಿಸಿಕೊಂಡು ಪ್ರೇಕ್ಷಕರಿಗೆ ನಗುವಿನ ರಸದೌತಣ ಉಣಬಡಿಸಿದ್ದಾರೆ.

ಶ್ರಮವಹಿಸಿ ದುಡಿಯದೆ ಸುಖಜೀವನ ನಡೆಸಬೇಕೆಂದು ಪ್ರತಿಕ್ಷಣವೂ ಹಂಬಲಿಸುವ ರಾಜ್‌ ವಿಷ್ಣು(ಶರಣ್‌) ಈ ಸಿನಿಮಾದ ಕೇಂದ್ರಬಿಂದು. ಆತನ ಮೈಗಳ್ಳತನದ ಬಗ್ಗೆ ಅಪ್ಪ, ಅಮ್ಮ ಸೇರಿದಂತೆ ಕುಟುಂಬದ ಎಲ್ಲರಿಗೂ ಬೇಸರ. ಅವರು ವಿವೇಕದ ಎಚ್ಚರಿಕೆ ನೀಡುವುದು ಉಂಟು.

ಆದರೆ, ತಾತನಿಗೆ ಮೊಮ್ಮಗನ ಮೇಲೆ ಬೆಟ್ಟದಷ್ಟು ಪ್ರೀತಿ. ಮತ್ತೊಂದೆಡೆ ಅವನ ಎಲ್ಲ ಕೆಲಸಕ್ಕೂ ಬೆಂಬಲವಾಗಿ ನಿಲ್ಲುವ ಸ್ನೇಹಿತ ಶಂಕರ್(ಚಿಕ್ಕಣ್ಣ). ರಾಜ್‌ ವಿಷ್ಣು ಬದುಕಿನಲ್ಲಿ ಲಾವಣ್ಯಾಳ(ವೈಭವಿ ಶಾಂಡಿಲ್ಯ) ಪ್ರವೇಶವಾಗುತ್ತಿದ್ದಂತೆ ಅವನ ದಿನಚರಿಯಲ್ಲಿಯೂ  ಬದಲಾವಣೆ. ಅವಳ ಪ್ರೀತಿ ಪಡೆಯಲು ಆತ ನಡೆಸುವ ಕಸರತ್ತುಗಳೇ ಈ ಚಿತ್ರಕಥೆಯಲ್ಲಿನ ಸ್ವಾರಸ್ಯ.

ನಾಯಕಿಯ ತಂದೆ ಡಾ.ರಾಜ್‌ಕುಮಾರ್‌ ಅಭಿಮಾನಿ. ನಾಯಕನ ತಂದೆಗೆ ವಿಷ್ಣುವರ್ಧನ್‌ ಅಂದರೆ ಪಂಚಪ್ರಾಣ. ನಾಯಕ ಮಗುವಿದ್ದಾಗಲೇ ಅವನಿಗೆ ತನ್ನಿಷ್ಟದ ನಟನ ಹೆಸರಿಡಬೇಕು ಎಂದು ಈ ಇಬ್ಬರೂ ಪರಸ್ಪರ ವಾಕ್ಸಮರ ನಡೆಯುತ್ತಾರೆ. ಕೊನೆಗೆ, ತಾತ ಸಂಜೀವಪ್ಪ(ಶ್ರೀನಿವಾಸಮೂರ್ತಿ) ಮಗುವಿಗೆ ‘ರಾಜ್‌ ವಿಷ್ಣು‘ ಎಂದು ಹೆಸರಿಡುತ್ತಾರೆ.

ಚಿತ್ರದ ಮೊದಲಾರ್ಧ ರಾಜ್‌ ವಿಷ್ಣು ತನ್ನ ಪ್ರೇಯಸಿಯ ಮನಸೆಳೆಯಲು ನಡೆಸುವ ಕಸರತ್ತಿನಲ್ಲಿಯೇ ಮುಗಿದುಹೋಗುತ್ತದೆ. ದ್ವಿತೀಯಾರ್ಧದಲ್ಲಿ ಪ್ರೀತಿಯೊಂದಿಗೆ ತಾತ ಮತ್ತು ಮೊಮ್ಮಗನ ನಡುವಿನ ಭಾವುಕ ಸನ್ನಿವೇಶಗಳು ಪ್ರೇಕ್ಷಕರಿಗೆ ಕಾಡುತ್ತವೆ.

ಮಕ್ಕಳು ವಿದೇಶದಲ್ಲಿ ನೆಲೆನಿಂತು ಕೈತುಂಬಾ ದುಡಿಯಬೇಕು ಎಂಬುದು ಪೋಷಕರ ಹಂಬಲ. ಕೊನೆಗೊಂದು ದಿನ ಅವರು ತಾಯ್ನಾಡಿಗೆ ಬರಲು ಹಿಂದೇಟು ಹಾಕಿದಾಗ ಹಿರಿಯರು ಅನುಭವಿಸುವ ಸಂಕಷ್ಟದ ಬಗ್ಗೆ ಹೇಳುವಲ್ಲಿಯೂ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

‘ಅಧ್ಯಕ್ಷ’ ಚಿತ್ರದಲ್ಲಿ ಶರಣ್‌ ಮತ್ತು ಚಿಕ್ಕಣ್ಣ ಜೋಡಿ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಆ ನಗುವಿನ ಯಾತ್ರೆ ‘ರಾಜ್‌ ವಿಷ್ಣು’ವಿನಲ್ಲಿಯೂ ಮುಂದುವರಿದಿದೆ. ಇಬ್ಬರು ಪೈಪೋಟಿಗೆ ಬಿದ್ದವರಂತೆ ನಟಿಸಿರುವುದು ಚಿತ್ರದ ಧನ್ಯಾತ್ಮಕ ಅಂಶ. ಈ ಇಬ್ಬರ ಕಾಮಿಡಿ ಇಮೇಜ್‌ ಅನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಸಫಲರಾಗಿದ್ದಾರೆ. 

ತಾತನ ಪಾತ್ರದಲ್ಲಿ ಶ್ರೀನಿವಾಸಮೂರ್ತಿ ಇಷ್ಟವಾಗುತ್ತಾರೆ. ವೈಭವಿ ಶಾಂಡಿಲ್ಯ ತಮಗೆ ಸಿಕ್ಕಿರುವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸಾಧುಕೋಕಿಲ ಹರಿತವಾದ ಸಂಭಾಷಣೆ ಮೂಲಕ ನಗುವಿನ ಅಲೆ ಎಬ್ಬಿಸುತ್ತಾರೆ. ಖಳನಟನ ಪಾತ್ರದಲ್ಲಿ ಭಜರಂಗಿ ಲೋಕಿ ಗಮನಸೆಳೆಯುತ್ತಾರೆ. ರಾಜೇಶ್‌ ಕಟ್ಟ ಅವರ ಛಾಯಾಗ್ರಹಣ ಚಿತ್ರದ ಕೆಲವು ದೃಶ್ಯಗಳಿಗಷ್ಟೇ ಸೀಮಿತವಾಗಿದೆ. ಅರ್ಜುನ್‌ ಜನ್ಯ ಸಂಯೋಜನೆಯ ಹಾಡುಗಳು ಕೇಳುಗರಿಗೆ ಕಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT