ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌: ಹೂಗಳ ಕಂಪು–ಕುವೆಂಪು ನೆನಪು

ಗಾಜಿನಮನೆಯಲ್ಲಿ ಕುಪ್ಪಳಿಯ ಕವಿಮನೆಯ ಸೊಬಗು, ಸಸ್ಯಕಾಶಿಯಲ್ಲಿ ಜೋಗದ ಸಿರಿ
Last Updated 4 ಆಗಸ್ಟ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲೀಗ ಕವಿ ಕುವೆಂಪು ಜಪ. ಇಲ್ಲಿನ ಗಾಜಿನಮನೆಯೊಳಗೊಂಡದು ಕವಿ ಮನೆಯ ಪ್ರತಿಕೃತಿ ತಲೆಯೆತ್ತಿದೆ. ಅದರ ಹಿಂಭಾಗದಲ್ಲಿ ಕವಿಶೈಲದ ಕಲ್ಲುಕಂಬಗಳು ಎದ್ದುನಿಂತಿವೆ. ಕವಿಮನೆಯ ಪಕ್ಕದಲ್ಲಿ ಜೋಗದ ಸಿರಿ ಅವತರಿಸಿದೆ.

ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಸಿಕ್ಕಿ 50 ವರ್ಷಗಳು ತುಂಬಿದ ಸಂದರ್ಭವನ್ನು ಸ್ಮರಿಸುವ ಸಲುವಾಗಿ, ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಈ ಗೌರವ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಬದುಕು ಬರಹಗಳನ್ನು ಮೆಲುಕು ಹಾಕಲಾಗುತ್ತಿದೆ.

ಹೂಗಳಲ್ಲಿ ಅರಳಿದೆ ಕವಿಸ್ಮಾರಕ: ಕುಪ್ಪಳಿಯಲ್ಲಿರುವ ಕುವೆಂಪು ಅವರ ಮನೆಯ (ಕವಿಸ್ಮಾರಕ) ಮಾದರಿಯನ್ನು ಗಾಜಿನಮನೆಯಲ್ಲಿ ಗುಲಾಬಿ ಹೂವುಗಳಿಂದ ನಿರ್ಮಿಸಲಾಗಿದೆ. ಕೆಂಪು, ಬಿಳಿ, ಹಳದಿ ಹಾಗೂ ತಿಳಿ ಕೇಸರಿ ಬಣ್ಣದ ಗುಲಾಬಿ ಹೂಗಳಲ್ಲಿ ಮೈದಳೆದ ಮಲೆನಾಡಿ ಸಾಂಪ್ರದಾಯಿಕ ಮನೆ ಇಲ್ಲಿಗೆ ಭೇಟಿ ನೀಡುವವರ ಕಣ್ಣಿಗೆ ಹಬ್ಬವನ್ನುಂಟುಮಾಡಿದೆ. ಮನೆಯಂಗಳದ ಹೂದೋಟದ ನಡುವೆ ಕುರ್ಚಿಯಲ್ಲಿ ಆಸೀನರಾಗಿರುವ ಕುವೆಂಪು ಅವರ ಮೂರ್ತಿ, ನಿಸರ್ಗದ ಮಡಿಲಿನಲ್ಲಿ ಅವರು ಕಳೆದ ದಿನಗಳನ್ನು ಮತ್ತೆ ನೆನಪಿಸುವಂತಿದೆ.

ಜೋಗದ ಸಿರಿ: ಕವಿ ಮನೆಯ ಪಕ್ಕದಲ್ಲೇ ಶಿವಮೊಗ್ಗ ಜಿಲ್ಲೆಯ ಪ್ರಖ್ಯಾತ ಜೋಗ ಜಲಪಾತದ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ. ಬಗೆ ಬಗೆಯ ಹೂವುಗಳಿಂದ ಅಲಂಕೃತವಾದ ಈ ಜಲಪಾತದಲ್ಲಿ ಹರಿದು ಬರುವ ಜಲಧಾರೆ ನಿಸರ್ಗದ ವರ್ಣನೆಗೆ ಹೆಸರುವಾಸಿಯಾದ ಕವಿಯ ಸ್ಮರಣೆಗೆ ರಂಗು ತುಂಬಿದೆ.

ಬಣ್ಣದ ಲೋಕ: ಭಾರತ– ಅಮೆರಿಕ ಹೈಬ್ರಿಡ್‌ ಬೀಜಗಳನ್ನು ಬಳಸಿ ಬೆಳೆಸಿದ ಹೂವಿನ ಗಿಡಗಳು ಈ ಬಾರಿಯ ಆಕರ್ಷಣೆ. ಗ್ರಾಫೈಟ್‌ ಕ್ಯಾಕ್ಟಸ್‌, ಎಕೈನೊ ಕ್ಯಾಕ್ಟಸ್‌ನಂತ ಪಾಪಸುಕಳ್ಳಿ ಜಾತಿಯ ಗಿಡಗಳು, ನೇರಳೆ, ಹಳದಿ, ಬಿಳಿ, ಕೇಸರಿ ಗುಲಾಬಿ ಗಿಡಗಳು, ಅಕಿಮಿನೋಸ್‌, ಆಂಟೀರಿಯನಂ, ಕೋಳಿಜುಟ್ಟು, ಪ್ಯಾನ್ಸಿ, ಸಾಲ್ವಿಯಾ, ಬಗೆ ಬಗೆಯ ಸೇವಂತಿ, ಬಿಗೋನಿಯಾ, ಹೆಲಿಯುಟ್ರೊಪಿಯಂ, ಆಂಜಿಲೋನಿಯಾ, ಹೆಲಿಕ್ರೈಸಂ, ಸಿಲೋಷಿಯ, ಪ್ಲಾಕ್ಸ್‌ ಸಾಲ್ವಿಯಾ, ಜಿನಿಯ, ಸದಾಪುಷ್ಪ ಜಾತಿಯ ಹೂಗಳು ಇಲ್ಲಿ ನಳನಳಿಸುತ್ತಿವೆ.

ಮೀನಿಯೇಚರ್‌ ಉದ್ಯಾನ: ಗಾಜಿನ ಮನೆಯ ಬಳಿ ಮೀನಿಯೇಚರ್‌ ಉದ್ಯಾನವನ್ನು ಇಲ್ಲಿನ ತೋಟಗಾರಿಕಾ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ನಿರ್ಮಿಸಿದ್ದಾರೆ. ಬಿದಿರು, ಐಸ್‌ಕ್ಯಾಂಡಿ ಕಡ್ಡಿ, ಉರುಟು ಕಲ್ಲು, ಹುಲ್ಲು ಹಾಸು ಬಳಸಿ 25 ಪುಟ್ಟ ಕಲಾಕೃತಿಗಳನ್ನು ಅವರು ರಚಿಸಿದ್ದಾರೆ. ಮನೆಯಂಗಳದಲ್ಲಿ ಕೈತೋಟವನ್ನು ಹೇಗೆ ನಿರ್ಮಿಸಬಹುದು ಎಂಬುದನ್ನು ಬಿಂಬಿಸಿದ್ದಾರೆ.

ಬಿದಿರಿನ ಪಿರಮಿಡ್‌: ಪಿರಮಿಡ್‌ ಆಕಾರದಲ್ಲಿ ಮಣ್ಣಿನ ದಿಬ್ಬ ರಚಿಸಿ, ಅದರ ನಡುವೆ ತೂಗುಗಳನ್ನು ಹೊಂದಿರುವ ಕೊಳವೆಯನ್ನು ಜೋಡಿಸಿ, ಆ ಪಿರಮಿಡ್‌ಗೆ ಬಿದಿರಿನ ಚೌಕಟ್ಟನ್ನು ಜೋಡಿಸುವ ಮೂಲಕ ಸಸಿಗಳನ್ನು ಬೆಳೆಸುವ ವಿಧಾನವನ್ನು ಇಲ್ಲಿ ಪ್ರದರ್ಶಿಸಲಾಗಿದೆ.

‘ಬಿದಿರಿನ ಪಿರಮಿಡ್‌ನಲ್ಲಿ ಸೊಪ್ಪು ತರಕಾರಿ, ಗೆಡ್ಡೆ, ಹೂಗಿಡಗಳನ್ನು ಬೆಳೆಸಬಹುದು. ಇದಕ್ಕೆ ಸ್ವಲ್ಪ ಜಾಗದಲ್ಲಿ ಕಡಿಮೆ ನೀರು ಬಳಸಿ ಉತ್ತಮ ಫಸಲು ಪಡೆಯುವ ಸುಲಭೋಪಾಯವಿದು. ಇದಕ್ಕೆ ಹೆಚ್ಚು ಶ್ರಮದ ಅಗತ್ಯವೂ ಇಲ್ಲ’ ಎಂದು ವಿದ್ಯಾರ್ಥಿಗಳು ತಿಳಿಸಿದರು.

ಟೊಮೆಟೊ, ಮೆಣಸಿನಕಾಯಿ, ಬದನೆ, ಎಲೆಕೋಸು, ಸೂರೆಕಾಯಿ, ಹೀರೆಕಾಯಿಯಂತಹ ತರಕಾರಿಗಳನ್ನು ಬಸಳೆ, ಹರಿವೆ, ಪುದಿನ, ಕೊತ್ತಂಬರಿ ಸೊಪ್ಪುಗಳನ್ನು ತಾರಸಿಯ ಮೇಲೆ ಬೆಳೆಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ತಾರಸಿಯಲ್ಲಿ ಟೊಮೆಟೊ ಬೆಳೆಯುವ ಬಗ್ಗೆ ಕೆಲವು ಮಹಿಳೆಯರು ಆಸಕ್ತಿಯಿಂದ ವಿಚಾರಿಸುತ್ತಿದ್ದುದು ಕಂಡು ಬಂತು.

ಮಾರಾಟ ಮಳಿಗೆಗಳು: ಸೊಪ್ಪು ತರಕಾರಿ ಬೀಜಗಳು, ಹೂವಿನ ಗಿಡಗಳು, ತೋಟಗಾರಿಕಾ ಉಪಕರಣಗಳು, ಸಾವಯವ ಗೊಬ್ಬರ, ತೋಟಗಾರಿಕಾ ಉತ್ಪನ್ನಗಳ ಮಾರಾಟ ಮಳಿಗೆಗಳೂ ಇವೆ. ಅಂಗಾಶ ಕೃಷಿಯ ಮೂಲಕ ಬೆಳೆಸಿದ ಸಣ್ಣ ಗಾತ್ರದ ಆಲಂಕಾರಿಕಾ ಗಿಡಗಳೂ ಮಾರಾಟಕ್ಕಿವೆ.

ಪ್ರದರ್ಶನ ಉದ್ಘಾಟನೆ: ರಾಜ್ಯಪಾಲ ವಜುಭಾಯಿ ವಾಲಾ ಅವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು. ಕುವೆಂಪು ಅವರು ಹೂವುಗಳ ಕುರಿತು ರಚಿಸಿರುವ ಆಯ್ದ ಕವನಗಳ ಸಂಕಲನವನ್ನು ರಾಜ್ಯಪಾಲರು ಬಿಡುಗಡೆ ಮಾಡಿದರು.

(ಹೂ ಕಮಾನುಗಳ ನಡುವೆ ಕುವೆಂಪು ಭಾವಚಿತ್ರ)

**

ಹೂಗಳ ಜತೆಗೆ ಕವಿಗಳ ಸಾಲು

ತೋಟಗಾರಿಕಾ ಇಲಾಖೆ ಹಾಗೂ ಮೈಸೂರು ಉದ್ಯಾನಕಲಾ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿಡುವ ಈ ಫಲಫುಷ್ಪ ಪ್ರದರ್ಶನದಲ್ಲಿ ಬಣ್ಣಬಣ್ಣದ ಹೂಗಳ ಸೊಬಗಿನ ನಡುವೆಯ ಕುವೆಂಪು ಅವರ ಕವಿತೆಗಳ ಮಾಧುರ್ಯವನ್ನೂ ಸವಿಯಬಹುದು...

ಕೆಂಪಿನ ಹೂಗಳು,
ಹಳದಿಯ ಹೂಗಳು,
ಕುಂಕುಮ ರಾಗದ ಹೂವುಗಳು
ಕವಿತೆಗಳಂದದಿ
ಹೃದಯವ ಸೆಳೆವುವು
ಮೋಹಿಸಿ ಕವಿಮನವ...
ಎಂಬ ಕುವೆಂಪು ಅವರ ಕವನದ ಸಾಲುಗಳು ಫುಷ್ಪ ಪ್ರದರ್ಶನವನ್ನು ಉದ್ದೇಶಿಸಿಯೇ ಬರೆದಂತಿವೆ.

ಉದ್ಯಾನದಲ್ಲಿ ಸದ್ಯ ಆಗಮನಿ..
ನೋಡು ಈ ಗುಲಾಬಿ
ಅತ್ಯಂತ ಈಚಿನದೋ ತಾಯಿಯೀ ಅವತಾರ
ದೇವಿಗೆ ನಮಸ್ಕರಿಸು ಆಗು ಉದ್ಧಾರ
ಇಲ್ಲಿ ಎಲ್ಲದಕೂ ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ಎಂಬ ಕವಿತೆಯ ಸಾಲು ಇಲ್ಲಿನ ಹೂವುಗಳಲ್ಲಿ ಹೊಸ ಅರ್ಥ ಹುಡುಕಲು ಪ್ರೇರಣೆ ನೀಡುತ್ತದೆ.
ಗಾಜಿನ ಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ,
‘ಭಾಷಾ ತ್ರಿಶೂಲವೀ ತ್ರಿಭಾಷಾ ಸೂತ್ರ
ಬಾಲಕರ ರಕ್ಷಿಸೈ ಹೇ ತ್ರಿನೇತ್ರ’
ಎಂಬ ಕುವೆಂಪು ಅವರ ಕವಿತೆಯ ಸಾಲುಗಳು ನಮ್ಮನ್ನು ಎದುರುಗೊಳ್ಳುತ್ತದೆ.

**

ಲಾಲ್‌ಬಾಗ್‌ ನಂಟು ಮೆಲುಕು ಹಾಕಿದ ಕುವೆಂಪು ಪುತ್ರಿ

ಅಪ್ಪನ ಜೊತೆ ಲಾಲ್‌ಬಾಗ್‌ಗೆ ಭೇಟಿ ನೀಡುತ್ತಿದ್ದ ನೆನಪುಗಳನ್ನು ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ ಅವರು ಮೆಲುಕು ಹಾಕಿದರು.

‘ತಂದೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಆಗಾಗ ಬೆಂಗಳೂರಿಗೆ ಬರುತ್ತಿದ್ದರು. ಆಗ ತೋಟಗಾರಿಕಾ ಇಲಾಖೆಯ ಅಧಿಕಾರಿಯಾಗಿದ್ದ ಮರಿಗೌಡ ಅವರು ಲಾಲ್‌ಬಾಗ್‌ಗೆ ನಮ್ಮನ್ನು ಆಹ್ವಾನಿಸುತ್ತಿದ್ದರು. ತಂದೆಯ ಜೊತೆ ಇಲ್ಲಿ ಸುತ್ತಾಡಿದ ನೆನಪು ಈಗಲೂ ಹಸಿರಾಗಿದೆ’ ಎಂದು ತಾರಿಣಿ ತಿಳಿಸಿದರು.

‘ಮರಿಗೌಡ ಅವರು ಊಟಿಯಿಂದತರಿಸಿದ್ದ ‘ಮ್ಯಾಗ್ನೊಲಿಯಾ ಗ್ರಾಂಡಿಫ್ಲೋರಾ’ ಹೂವಿನ ಗಿಡವೊಂದನ್ನು ನಮ್ಮ ತಂದೆಗೆ ನೀಡಿದ್ದರು. ಅದನ್ನು ನಮ್ಮಮ್ಮ ಮೈಸೂರಿನ ಮನೆಯಂಗಳಲ್ಲಿ (ಉದಯರವಿ) ಬೆಳೆಸಿದ್ದರು. ಅಮ್ಮ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದ ಆ ಗಿಡವನ್ನು ಕೆಲವು ವರ್ಷದ ಹಿಂದೆ ಕಳೆದುಕೊಂಡೆವು. ಅದರ ಕಸಿ ಈಗಲೂ ಇದೆ’ ಎಂದರು.

ಕುವೆಂಪು ಅವರ ಮೊಮ್ಮಗಳು ತಮಾಲ, ಅಜ್ಜನ ಜೊತೆ ಇಲ್ಲಿ ಸುತ್ತಾಡಿದ ನೆನಪನ್ನು ಹಂಚಿಕೊಂಡರು.

**

ಕುವೆಂಪು ಭೇಟಿಯ ಮೆಲುಕು

ಕುವೆಂಪು ಅವರು 1952 ಸೆಪ್ಟೆಂಬರ್‌ 23ರಂದು ಲಾಲ್‌ಬಾಗ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತೆಗೆಸಿಕೊಂಡಿದ್ದ ಚಿತ್ರವನ್ನು ಪ್ರದರ್ಶಿಸಲಾಗಿದೆ. ಅವರು ಉದ್ಯಾನದ ಕುರಿತು ಬರೆದ ಕವಿತೆಯ

‘ಬಾ, ನಮಸ್ಕರಿಸು
ಸೌಂದರ್ಯರೂಪಿ ಭಗವಂತನಿಲ್ಲಿ ಪುಷ್ಪವೇಷಿ
ಬಣ್ಣಬಣ್ಣವಾಶೀರ್ವದಿಸೆ,
ಬರಿಯ ಉದ್ಯಾನವಲ್ತೊ ಇದು ಪುಷ್ಪಕಾಶಿ
ಎಂಬ ಸಾಲುಗಳನ್ನು ಅದರ ಪಕ್ಕದಲ್ಲಿ ಪ್ರದರ್ಶಿಸಲಾಗಿದೆ.

**

₹ 50 ವಯಸ್ಕರ ಪ್ರವೇಶದರ

₹ 20 ಮಕ್ಕಳ ಪ್ರವೇಶದರ

ಆಗಸ್ಟ್‌ 4, 7, 8, 9, 10,11,14ರಂದು ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ

**

ಈ ಬಾರಿ ಫಲಪುಷ್ಪ ಪ್ರದರ್ಶನದ ವಿಷಯ ಚೆನ್ನಾಗಿದೆ. ಅಚ್ಚುಕಟ್ಟಾಗಿ ಹೂಗಳನ್ನು ವಿನ್ಯಾಸಗೊಳಿಸಿದ್ದಾರೆ. ಹೂವುಗಳ ಜೊತೆಗೆ ಕುವೆಂಪು ಸಾಹಿತ್ಯವನ್ನೂ ತಿಳಿದುಕೊಳ್ಳಬಹುದು
–ರಾಮಮೂರ್ತಿ, ಆರ್‌.ಟಿ.ನಗರ ನಿವಾಸಿ

*

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನಕ್ಕೆ ಪ್ರತಿವರ್ಷವೂ ಬರುತ್ತೇನೆ. ಈ ಬಾರಿಯೂ ಚೆನ್ನಾಗಿದೆ. ಬೋನ್ಸಾಯ್‌ ಗಾರ್ಡನ್‌ನಲ್ಲಿರುವ ಕೊಳದ ನೀರನ್ನು ಸ್ವಚ್ಛಗೊಳಿಸಿದರೆ ಒಳ್ಳೆಯದಿತ್ತು.
–ಲಕ್ಷ್ಮೀ ಸುಬ್ರಹ್ಮಣ್ಯ, ಆರ್‌.ಟಿ.ನಗರ

*

ಕುವೆಂಪು ಅವರ ಮನೆ ತುಂಭಾ ಚೆನ್ನಾಗಿ ಮೂಡಿಬಂದಿದೆ. ವರ್ಷಕ್ಕೊಂದು ಹೊಸ ವಿಷಯವನ್ನು ಆಧರಿಸಿ ಫಲಪುಷ್ಪ ಪ್ರದರ್ಶನ ಏರ್ಪಡಿಸುವುದು ಉತ್ತಮ ಸಂಪ್ರದಾಯ.

–ವಿಜಯಲಕ್ಷ್ಮಿ

*

ನಾನು ಫಲಪುಷ್ಪ ಪ್ರದರ್ಶನ ನೋಡುತ್ತಿರುವುದು ಇದೇ ಮೊದಲು. ಭಾರತಕ್ಕೆ ನಾಲ್ಕೈದು ಬಾರಿ ಬಂದಿದ್ದೇನೆ. ಈ ಬಾರಿ ಸವಿನೆನಪಿನೊಂದಿಗೆ ತಾಯ್ನಾಡಿಗೆ ಮರಳುತ್ತೇನೆ.
–ಕೇಲಿಗ್‌, ಲಂಡನ್‌

*

ಮದುವೆ ಸಮಾರಂಭದ ಸಲುವಾಗಿ ಬೆಂಗಳೂರಿಗೆ ಬಂದಿದ್ದೆವು. ಇದೇ ಸಂದರ್ಭದಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸುವ ಭಾಗ್ಯ ಸಿಕ್ಕತು. ನಮ್ಮ ಮುಂಬೈನಲ್ಲಿ ಇಂತಹ ಅವಕಾಶವಿಲ್ಲ.
–ಪ್ರಾಚಿ ಭಂಬಾನಿ, ಮುಂಬೈ ನಿವಾಸಿ

ಫಲಪುಷ್ಪ ಪ್ರದರ್ಶನ ಮೂಲಕ ಒಬ್ಬ ಕವಿಯ ನೆನಪು ಜನರ ಮನಸ್ಸಿನಲ್ಲಿ ಸದಾ ಹಸಿರಾಗಿ ಉಳಿಯುವಂತೆ ಮಾಡುವುದು ನಿಜಕ್ಕೂ ಅದ್ಭುತ ಚಿಂತನೆ. ಇಲ್ಲಿನ ಹೂಗಳ ಲೋಕವಂತೂ ಮನೋಜ್ಞ.
–ಅರುಲ್‌, ಚೆನ್ನೈ

*

ಫಲಪುಷ್ಪ ಪ್ರದರ್ಶನ ವೀಕ್ಷಿಸಿದಾಗ ಮನಸ್ಸೂ ಹೂವಿನಂತೆ ಅರಳುತ್ತದೆ. ಈ ಬಾರಿ ಕುವೆಂಪು ಅವರ ಕುರಿತೂ ಬಹಳಷ್ಟು ತಿಳಿದುಕೊಂಡೆ.
–ಸುದರ್ಶನ, ಜಯನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT