ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರಗಳ ಬೆನ್ನಟ್ಟಿದ ಬೆರಗು

ಮ್ಯಾಂಚೆಸ್ಟರಿನಲ್ಲಿ 1871ರ ಕನ್ನಡ ಪತ್ರ...
Last Updated 5 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮಾಂಚೆಸ್ಟರ್ ವಿಶ್ವವಿದ್ಯಾಲಯದ ಹೆಸರು ವಿಜ್ಞಾನ ಪಠ್ಯಗಳಲ್ಲಿ ಪದೇ ಪದೇ ಬರುವುದಕ್ಕೆ ಕಾರಣವಿಲ್ಲದೇ ಇಲ್ಲ. ಕಳೆದ ಇನ್ನೂರು ವರ್ಷಗಳಲ್ಲಿ ವಿಜ್ಞಾನ ಬೆಳೆದು ಬಂದ ಹಾದಿಯನ್ನು ಗುರುತಿಸುವಾಗ ಹಲವಾರು ಮೈಲುಗಲ್ಲುಗಳು ಈ ವಿಶ್ವವಿದ್ಯಾಲಯದಲ್ಲಿಯೇ ಎಡತಾಕುತ್ತವೆ. ಇಂತಹದೊಂದು ಮೈಲುಗಲ್ಲಿಯ ಹೆಸರು ಆರ್ಥರ್ ಶ್ಯೂಸ್ಟರ್ (1851-1934).

ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಭೌತ ವಿಜ್ಞಾನ ವಿಭಾಗದಲ್ಲಿ ಶ್ಯೂಸ್ಟರ್‌ಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ಪ್ರದರ್ಶಿಸಲಾಗಿದೆ. ಉದಾಹರಣೆಗೆ ಅವರು ತೆಗೆದ ಎಕ್ಸ್ ರೇ ಚಿತ್ರ. ಕಾಲು ಮುರಿದುಕೊಂಡಿದ್ದ ಕಪ್ಪೆಯ ಮೂಳೆಗಳು ಮತ್ತೆ ಜೋಡಣೆಯಾಗಿರುವುದನ್ನು ತೋರಿಸುತ್ತದೆ. ಪೂರ್ಣಗ್ರಹಣದ ಅವಧಿಯಲ್ಲಿ ಅವರು ಕಂಡುಹಿಡಿದ ಧೂಮಕೇತುವಿನ ವಿಷಯವಿದೆ.

ಈ ಪ್ರದರ್ಶಿಕೆಗಳು ನನಗೆ ಆಸಕ್ತಿಯನ್ನುಂಟು ಮಾಡಿದ್ದಕ್ಕೆ ಮುಖ್ಯ ಕಾರಣವೊಂದಿದೆ. ಅಂದಿನ ದಿನಗಳಲ್ಲಿ ಖಗೋಳ ವಿಜ್ಞಾನದ ಉಪಕರಣಗಳು ಬಹಳ ಜನಪ್ರಿಯವಾಗಿದ್ದವು. ಪೂರ್ಣ ಸೂರ್ಯಗ್ರಹಣ ವೀಕ್ಷಿಸುವುದು ಬಹಳ ಪ್ರಮುಖ ಪ್ರಯೋಗವಾಗಿತ್ತು. ಇದಕ್ಕಾಗಿ ಶ್ಯೂಸ್ಟರ್ ಇಂಗ್ಲೆಂಡಿನಿಂದ ಸಯಾಂಗೆ ಮಾಡಿದ ಪ್ರಯಾಣದ ವಿವರಗಳು ಅಲ್ಲಿದ್ದವು. ಸಯಾಂ ಮಹಾರಾಜನೊಡನೆ ತೆಗೆಸಿಕೊಂಡ ಗ್ರೂಪ್ ಫೋಟೊ ಇತ್ತು. ಆ ಮಹಾರಾಜ ಕೊಟ್ಟ ಮೆಚ್ಚುಗೆ ಪತ್ರವೂ ಇತ್ತು.

ಈ ಪತ್ರ ನೋಡಿದ ಕೂಡಲೇ ನನಗೆ ಅದು ಕನ್ನಡ ಎನ್ನಿಸಿತು. ಸಯಾಂ ದೊರೆ ಐದನೆಯ ರಾಮನಿಗೆ ಕನ್ನಡ ಬರುತ್ತಿತ್ತೇ? ಅಥವಾ ಅದು ನನ್ನ ಭ್ರಮೆಯೋ? ದಕ್ಷಿಣ ಏಷ್ಯಾದ ಭಾಷೆಗಳ ಲಿಪಿಗಳಲ್ಲಿ ಹೋಲಿಕೆ ಇರುತ್ತದೆ. ಆದ್ದರಿಂದ ಇದೂ ಅಂತಹುದೇ ಒಂದು ಎಂದು ಭಾವಿಸಿ ಹೇಗಾದರೂ ಆಗಲಿ ಆಮೇಲೆ ಪರಿಶೀಲಿಸೋಣ ಎಂದು ಫೋಟೊ ತೆಗೆದಿಟ್ಟುಕೊಂಡೆ.

ಆ ಚಿತ್ರವನ್ನು ನಿಧಾನವಾಗಿ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕೆಲವೊಂದು ಪದಗಳು ಸ್ಪಷ್ಟವಾಗಿ ಕಂಡವು. ಹೆಂಡ್ತಿ, ಅತ್ತಿಗೆ, ಚಿಕ್ಕಪ್ಪ, ಸಾವಿರ ರುಪಾಯಿ... ಇಷ್ಟೊಂದು ಪದಗಳು ಕೇವಲ ಸಾಮ್ಯದಿಂದ ದೊರಕಲಾರವು. 1871ನೇ ಇಸ್ವಿ ಮಾರ್ಚ್ ತಾರೀಕು 12 ಎಂದು ಸ್ಪಷ್ಟವಾಗಿ ನಮೂದಿಸಿತ್ತು. ಇನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ವಾಕ್ಯಪುಂಜಗಳು ಕಂಡವು. ಆದರೆ, ಅದು ಮೋಡಿ ಅಕ್ಷರ. ಇದನ್ನು ಓದುವುದು ಹೇಗೆ?

ಅನೇಕರನ್ನು ವಿಚಾರಿಸಿದೆ. ಅದು ಕನ್ನಡವೇ, ಅನುಮಾನವೇ ಇಲ್ಲ ಎಂದಾದರೂ ಪೂರ್ಣಪಾಠವನ್ನು ಓದಿ ಕೊಡುವವರು ಸಿಗಲಿಲ್ಲ. ಕೆಳದಿಯ ಡಾ.ವೆಂಕಟೇಶ ಜೋಯಿಸ್ ಈ ಕೆಲಸವನ್ನು ಒಂದೇ ದಿನದಲ್ಲಿ ಮಾಡಿಕೊಟ್ಟರು. ಚಿತ್ರ ಕಳಿಸಿದ 24 ಗಂಟೆಯ ಒಳಗೆ ಇ-ಮೇಲ್‌ನಲ್ಲಿ ಪೂರ್ಣಪಾಠ ಬಂದಿತು.

ಪತ್ರದ ಒಕ್ಕಣೆ ಹೀಗಿದೆ.

ಚಿರಂಜೀವಿ ಒಡ್ತೊಲಿಮೆಮೆಚ್ಯಾದರ್ರ‍ಿಗೆ ಅಣ್ಣನಾದ ಸಾಲ್ವದೆಂರಮಚ್ಯಾಹನು ಮಾಡುವ ಆಶಿರ್ವಾದ. ಸಂ ೧೮೭೧ ನೆಯ್ಸಿವಿ ಮಾರ್ಚಿ ತಾರಿಕು ೧೨ನೆ ವರೇಗೆ ನಾನು ಕುಂದಾಪುರ ಬಂಗಲೆಯಲ್ಲು ಕ್ಷೇಮದಲ್ಲುಯಿದ್ದೆನೆ. ತಮ್ಮ ಯಲ್ಲವರ ಕ್ಷೇಮ ಸಮಾಚಾರಕ್ಕೆ ಬರ್ಸಿಕಳುಹಿಸಬೇಕು. ತರುವಾಯ ಅಣ್ಣಯ್ಯನ ಅಕ್ಸೆಗಳು ಯಿದ್ರ ಕೆಳಗೆ ವಿವರಿಸುತ್ತೆನೆಯೆನೆಂದೆ ನಿನ್ನ ಮಾವನಾದ ವೈತಾನ ಲಿಂಗು ಅವನದ್ದು ಚಿಪ್ಪನ ಹೆಂಡ್ತಿಯು ಅವಳ ಹೆಸ್ರು ಗೊತ್ತಿಲ್ಲಂತ್ತೆಹೇಳಿಯಿದ್ದಾರ್ರೆ ನಿನ್ನ ಹೆಂಡ್ತಿಯ ದೊಡ್ಡಾಕ್ಕಳು ಹೆಂಜಮರಿಯೆಂಬವಳು ತನಗೆ ಮುದುವೆಯಾಗದೆ ಕೆಂತ್ತ ಅವಳ ಅಪ್ಪನ ಕೈಯ ಮತ್ತು ಅವಳ ಹಿರೇಅಕ್ಕನ ಕೈಯ್ಯ ಮಾತನಾಡಿದದಲ್ಲಿ ಅವರು ನನ್ನ ಆಸ್ತಿಯಲ್ಲಿ ಬರೆದುಕೊಡಬೇಕಂತ್ತ ವಾಸ್ತೆವಯ್ಯನ (ವಾಸುದೇವ) ಅಂಗಡಿ ಬಾಗಲಲ್ಲಿ ಹೇಳಿದ್ದಾಗಿತ್ತು.

ಆ ಸಮಯದಲ್ಲಿ ವಾಸ್ತೆವ|ಸಮಕ್ಕೆರೆ ಅತ್ತೆಯಮ್ಮ ಚಿಂದಿಕರುಚ್ಚಾಳು ಮತ್ತು ರಾಜೆಶ್ರಿ ನನ್ನ ಚಿಕ್ಕ ತಂದೆಯಾದ ಪೋರ್ಸುಮೆಚ್ಚಾವರ್ರು ನಮ್ಮ ಅಕ್ಕಮನವರ್ರು ಸದ್ರಿ (ಸಿಕ್ರ) ಮಾವಯ್ಯ ನಕಯ್ಯ ನಿನ್ನ ಅತ್ತಿಗೆಗೆ ನನಗೆ ಕೊಡಬೇಕಂತ ಹೇಳಿದ್ದಕ್ಕೆ ನಿನ್ನ ಮಾವನಾದ ಕೈಕೊಠರಾಗ ಯನ್ನವಂವರ ಪಕ್ಷದವರು ಅವರ ಮನೆಯ ಹೆಣ್ಣು ಬೇಕಾದ್ರೆ ನಮ್ಮ ಮನೆಯ ಆಸ್ತಿ ಬರಕೊಡಬೇಕೆಂತ್ತ ಹೆಳಿದ್ದಾಗಿ ನಿಮ್ಮ ತಂದೆಯವರ್ರು ಧಾರವಾಡಕ್ಕೆ ಕಾಗದ ಬರದಿದ್ರು ನಮಗೆ ಆಸ್ತಿ ಬರಕೊಟ್ಟು ಹೆಣ್ಣು ತರುವದಾದ್ರೆ ಬೇಡವೆಂತ ನನ್ನ ತಂದೆಯವರು ಹೆಳಿದ್ರಿಂದ್ರ ನಾನು ಅದ್ರ ಆಶೆಯ ಬಿಟ್ಟೆ. ನಾನು ಬಿಟ್ಟಂತಾದನ್ನು ಆ ಹೆಣ್ಣಿಗೆ ನಿನಗು ತರುವಂತಾದಕ್ಕೆ ಕಾರಣವೇನು - -------ಯಂದು ತಿಳಿಯುವುದಿಲ್ಲ. - ಒಂದುವೆಳೆ ಬೆಡದಂತೆ ಹೆಣ್ಣು ನಿನು ತಂದಿದ್ದೆ ನೀನು ನನ್ನ ಅಣ್ಣನ ಮಗನಲ್ಲ ನಾನು ನಿನ್ನ ಅಣ್ಣನ ಮಗನ ನೀನು ಆ ಹೆಣ್ಣಿಗೆ ತರುವುದಿಲ್ಲಗಿದೆ ------- ದ ನಮಗೆ ನಮ್ಮ ತಂದೆಗೆ ತಮ್ಮ ಹೆಂಡ್ತಿರೆಲಾ  ತಮ್ಮ ಹೆಂಡ್ತಿದಿದ್ದಾದ್ರಿಂದಲು ರೆಜೊಮೆರೆಯೆಂಬ ಹೆಂಣುನನಗೆ ಸಿಕ್ಕತ್ತಿತ್ತೆ. ಆದ್ರೂ ಚಿಂತಿಲ್ಲ. ನಿನ್ನ ಮಗನಿಗೆ ತಂದ ಹೆಂಣಿನ ಹೊಸ್ತಾದವಾಗಿ (ನಿಮ್ಮ) ತಮ್ಮ ಆಸ್ತಿಯ ಪೈಕಿ ಯಿ ಹೆಣ್ಣಿನ ತಂದೆಗೆಯಾನೆ (ಯಾಕೆ) ಅವರ ಹಿರಿಮೆಗಳುಜಂಜಿಪ್ರಚೊ ಹೆಂಡ್ತಿಗೆ------- ಕೊಟ್ಟಿದ್ರಿ ಆ ಆಸ್ತಿ ಆ ಪಟ್ಟಿ ನಕ್ಲು ತಮ್ಮ ಪತ್ತ ಯಿರಬೇಕು.

ಆ ನಕ್ಲನ್ನು ತಪಿಶಿಲವಾರು ಕಳುಹಿಸಬೇಕಾಗಿ ನಮ್ಮ ತಂದೆಯ ಸಮನಾದ ಚಿಕ್ಕಪ್ಪಯ್ಯನವರೆ ಆ ನಕ್ಲು ಕೂಡ್ಲೆ ಕಳುಹ್ಸಿಬೇಕಾಗಿ ಅಪೇಕ್ಷಿಸುತ್ತೇನೆ. ನನಗೆ ಬೇಕಂತ ನನ್ನ ತಾಯಮ್ಮನವರು ನನ್ನ ತಾಯಿಯ ಮಕ್ಕಳು ಕಾಲಾದರೆಳ್ಯದಲ್ಲಿ ಸದ್ರಿಯವ ತಾಯಿಯು ನನ್ನ ತಾಯಿಗೆ ನೊಡ್ಲಿಕ್ಕೆ ಬಂದಿದ್ಲು.  ಸಮಯದಲ್ಲಿ ನನ್ನ ತಾಯಿಯು ಸದ್ರಿ ಅವಳ ತಾಯಿ ಪತ್ತ ಮಾತ್ತನಾಡುವಾಗ್ಯೆ ನಾನು ಅವರ ಸಮೀಪ ಯಿದ್ದೆ.  ಅವರು ಮಾಡಿದ ಪ್ರಸ್ತಾಪು ಯಾವದೆಂದರೆ ನೀನು ನಿನ್ನಯಿಬ್ಬರು ಹೆಣ್ಣುಮಕ್ಕಳನ್ನು ನಮ್ಮ ಮನೆಯಲಿ ಕೊಟ್ಟಿದಾದ್ರೆ ದೇವರದಯದಿಂದ ಯೇನು ಕಡಿಮೆಯಾಗುತ್ತಿದ್ದಿಲ್ಲಯೆಂದಿನ ಹಾಗೆ ಅವರಿ ಸಮವಾಗಿ ನಡೆಯುತ್ತಿತ್ತು ಯಂತ್ತಾ ನ್ನ ತಾಯಿಯು ಮತ್ತು ಸದ್ರಿಯ ಎರಡನೆ ಪುಟ- ಚಿರಂಜಿವಿ ಬರ‍್ತೆರ್ಯಯಮೆಚ್ಯಾರ್ರ‍ರಿಗೆ ಸದ್ರಿ ಅವಳ ತಾಯಿವರರ್ರ ಹತ್ರ ಮಾಡನಾಡಿದ್ಲು - ಯಿದಕ್ಕೆ ಯಿ ರೊಜಿಮೆರಿಯ ತಾಯಿಯು ಸುಮ್ಮನೆ ಯಿದ್ಲು.  ಅದಕ್ಕೆ ತಕ್ಕ ಉತ್ರಕೊಡಲ್ಲ ಮತ್ತು ಅವಳಿಂದ ಯಿಗಾ ನನ್ನ- ಹಿಡಿದಾದ್ರೆ ಅವಳು ಹ್ಯಾಗಾದು, ಚಿನ್ನ ಅನ್ನ ತಿಂದು ಯಿರಬಹುದಿತ್ತು ಮತ್ತು ಅವಳು ಯಿಷ್ಟರವರೆಗೆ ನನ್ನ ಸಮೀಪ ಯಿದ್ರೆ ಶುಮಾರು ೧ ಸಾವಿರ ರೂಪಾಯಿಯ ಚಿನ್ನವನ್ನು ಮೈಯಮೇಲೆ ಯಿರಬಹುದಿತ್ತು.  ಸಿಕ್ಕ ಅಸ್ಟನ್ನು ನನ್ಗೆ ಬೆಡವೆಂತ  ಹೆಳಿದರಿಂದಾ ನಾನು ಬಿಟ್ಟಯಿಲ್ಲ ಯಿಲ್ಲದಿದ್ರೆ ನಾನು ಎಂದು ಬಿಡುತ್ತಿದ್ದಿಲ್ಲ.

ಶ್ಯೂಸ್ಟರ್‌ಗಾಗಲೀ ಭೌತವಿಜ್ಞಾನಕ್ಕಾಗಲೀ ಸಂಬಂಧವೇ ಇಲ್ಲದ ಈ ವಿಚಿತ್ರವಾದ ವಿಷಯಗಳು ಇನ್ನಷ್ಟು ಕುತೂಹಲ ಕೆರಳಿಸಿದವು. ಆದ್ದರಿಂದ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಗ್ರಂಥಪಾಲಕರನ್ನು ಸಂಪರ್ಕಿಸಿದೆ. ಅವರು ಹಳೆಯ ಕಡತಗಳನ್ನು ಕೆದಕಿ ಪ್ರೊಫೆಸರ್ ರಾಬಿನ್ ಮಾರ್ಷಲ್ ಅವರನ್ನು ಸಂಪರ್ಕಿಸಿದರು. ಭೌತ ವಿಜ್ಞಾನದ ಪ್ರೊಫೆಸರ್ ಆಗಿದ್ದ ಅವರು ನಿವೃತ್ತಿಯ ನಂತರ ಪ್ಯಾರಿಸ್‌ನಲ್ಲಿ ನೆಲೆಸಿದ್ದರು.

ಆದರೆ ಆಗಾಗ್ಗೆ ಮ್ಯಾಂಚೆಸ್ಟರ್‌ಗೆ ಬಂದು ಹೋಗುತ್ತಿದ್ದುದರಿಂದ ಹಲವಾರು ತಿಂಗಳ ಬಳಿಕ ಆ ಪತ್ರದ ಹೈ ರೆಸಲ್ಯೂಷನ್ ಚಿತ್ರ ಕಳಿಸಿದರು. ಅದರ ಬಗ್ಗೆ ಪೂರ್ಣ ವಿವರ ತಿಳಿಯದೇ ಅದನ್ನು ಪ್ರದರ್ಶಿಸಿದ್ದಕ್ಕಾಗಿ ವಿಷಾದ ವ್ಯಕ್ತಪಡಿಸಿ, ಶ್ಯೂಸ್ಟರ್ ಅವರ ಭಾರತ ಭೇಟಿಯ ವಿವರಗಳನ್ನೂ ಕೊಟ್ಟರು. ಶ್ಯೂಸ್ಟರ್ ಅವರ ಮೊಮ್ಮಕ್ಕಳು 1980ರಲ್ಲಿ ಶ್ಯೂಸ್ಟರ್‌ನ ಅನೇಕ ಹಸ್ತ ಪ್ರತಿಗಳನ್ನೂ, ಚಿತ್ರಗಳನ್ನೂ ಗ್ರಂಥಾಲಯಕ್ಕೆ ಕೊಟ್ಟರು. ಅವನ್ನು ವಿಂಗಡಿಸಿ ಪ್ರದರ್ಶನಕ್ಕೆ ಅಣಿ ಮಾಡುವ ಜವಾಬ್ದಾರಿ ರಾಬಿನ್ ಅವರದ್ದೇ ಆಗಿತ್ತು. ಸಯಾಂನಿಂದ ಬಂದಿರಬೇಕು ಎಂದು ಊಹಿಸಿದ್ದರು. ಅಷ್ಟೇ ಅಲ್ಲ ಅದನ್ನು ತಲೆ ಕೆಳಕಾಗಿ ಇಟ್ಟಿಲ್ಲ ತಾನೇ ಎಂದೂ ವಿಚಾರಿಸಿಕೊಂಡರು.

ಆರ್ಥರ್ ಶ್ಯೂಸ್ಟರ್ ಹುಟ್ಟಿದ್ದು ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ. ಯಹೂದಿಯಾಗಿ ಹುಟ್ಟಿದ್ದರೂ ಈ ಕುಟುಂಬ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿತು.  ಹದಿಹರೆಯದಲ್ಲಿ ಮ್ಯಾಂಚೆಸ್ಟರ್‌ಗೆ ಬಂದ ಆರ್ಥರ್ ಕಾಲೇಜು ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಂದುವರೆಸಿದರು. ಹೈಡಲ್ ಬರ್ಗ್‌ನಲ್ಲಿ ಗುಸ್ತಾಫ್‌ ಕಿರ್ಕಾಫ್ ಅವರ ಮಾರ್ಗದರ್ಶನದಲ್ಲಿ ರೋಹಿತ ಅಧ್ಯಯನ (spectroscopy) ದಲ್ಲಿ ಪಿ.ಎಚ್.ಡಿ ಪದವಿ ಪಡೆದು ಮತ್ತೆ ಮ್ಯಾಂಚೆಸ್ಟರ್‌ಗೆ ಬಂದು ತಾನು ಓದಿದ ಆವೆನ್ಸ್ ಕಾಲೇಜಿನಲ್ಲಿ (ಸಂಬಳವಿಲ್ಲದ) ಡೆಮಾನ್ಸ್ಟ್ರೇಟರ್ ಹುದ್ದೆಗೆ ಸೇರಿದರು. ಧನವಂತರಾಗಿದ್ದುದರಿಂದ ಉಪಕರಣಗಳನ್ನು ಸ್ವಂತ ಖರ್ಚಿನಲ್ಲಿಯೇ ಕೊಂಡು ಸಂಶೋಧನೆಯನ್ನು ಮುಂದುವರೆಸಿದರು. ಇವರ ಸಂಶೋಧನೆಯ ವ್ಯಾಪ್ತಿಯಲ್ಲಿ ಭೌತ ವಿಜ್ಞಾನ ಮಾತ್ರವಲ್ಲದೆ ಗಣಿತ, ರಸಾಯನ ವಿಜ್ಞಾನ, ದೃಷ್ಟಿ ಶಾಸ್ತ್ರ, ಎಕ್ಸ್-ರೇ ವಿಜ್ಞಾನ ಇನ್ನೂ ಅನೇಕ ಶಾಖೆಗಳು ಸೇರಿದ್ದವು.

1875ರಲ್ಲಿ ಸಯಾಂ ಮೂಲಕ ಹಾದು ಹೋದ ಚಂದ್ರನ ನೆರಳಿನ ಪಥದಲ್ಲಿ ನಿಂತು ಪೂರ್ಣ ಸೂರ್ಯಗ್ರಹಣವನ್ನು ಚಿತ್ರೀಕರಿಸುವ ತಂಡದಲ್ಲಿ ಆರ್ಥರ್ ಅಲ್ಲದೆ ರಾಫೆಲ್ ಮಲ್‌ಡೋಲಾ ಮುಂತಾದ ಹಲವಾರು ವೀಕ್ಷಕರಿದ್ದರು. ಫೆಬ್ರುವರಿ 11ರಂದು ಸ್ಟೀಮರ್ ಸೂರತ್ ಎಂಬ ಹಡಗು ಇಂಗ್ಲೆಂಡಿನಿಂದ ಹೊರಟಿತು. ಸೂಯೆಜ್‌ನಲ್ಲಿ ಹಡಗಿಗೆ ಅಪಘಾತವಾಯಿತು. ಅದರ ಪ್ರೊಪೆಲ್ಲರ್ ಬ್ಲೇಡ್‌ಗಳಲ್ಲಿ ಮೂರು ನಿರುಪಯುಕ್ತವಾದವು. ಹಾಗಾಗಿ ಇಡೀ ತಂಡವೇ ಬೇರೊಂದು ಹಡಗನ್ನು ಹತ್ತಬೇಕಾಯಿತು.

ಆರ್ಥರ್ ಅವರ ಭಾರತದ ಸಂಬಂಧ ಇಲ್ಲಿಂದಲೇ ಆರಂಭವಾಗುತ್ತದೆ. ತಂಡದಲ್ಲಿ ಐದು ಜನರಿದ್ದರು. ಮೂವರು ಬ್ರಿಟಿಷರು. ನಾಲ್ಕನೆಯವ ಭಾರತೀಯ. ಇವನ ಹೆಸರು ಎಲ್ಲೂ ಉಲ್ಲೇಖವಾಗಿಯೇ ಇಲ್ಲ. ಆದರೆ ಫೋಟೊಗ್ರಫಿಯಲ್ಲಿ ಈತ ನುರಿತವನು. ವಿಖ್ಯಾತ ಖಗೋಳ ವಿಜ್ಞಾನಿ ವಾರೆನ್ ಡಿ ಲಾರ‍್ಯೂ ಅವರಲ್ಲಿ ಫೋಟೊಗ್ರಫಿ ಕಲಿತವನು. ಇನ್ನೊಬ್ಬನ ಹೆಸರು ರಫ಼ೈಲ್ ಮೆಲ್ಡೋಲಾ ಅದು ಭಾರತೀಯರ ಹೆಸರಿನಂತಿಲ್ಲ.

ಶ್ಯೂಸ್ಟರ್ ಮತ್ತು ಮೆಲ್ಡೋಲಾ ನಡುವೆ ಒಂದು ವಾಗ್ವಾದ ನಡೆದಿತ್ತು. ಹಡಗು ಬದಲಿಸಬೇಕಾದ ಸಂದರ್ಭವನ್ನು ವಿವರಿಸಿ ಶ್ಯೂಸ್ಟರ್ ಸರ್ಕಾರಕ್ಕೆ ತಂತಿ ಸಂದೇಶ ಕಳಿಸಿದ್ದುದು ಮೆಲ್ಡೋಲಾಗೆ ಸರಿ ಬೀಳಲಿಲ್ಲ. ಆ ಕೆಲಸವನ್ನು ತಾನು ಮಾಡಬೇಕಾಗಿದ್ದುದು; ಶ್ಯೂಸ್ಟರ್ ಅಲ್ಲ ಎಂದಾತ ವಾದಿಸಿದ.

ಎಸ್.ಎಸ್. ಬರೋಡ ಎಂಬ ಹಡಗನ್ನು ಹತ್ತಿ ಪ್ರಯಾಣ ಮುಂದುವರೆಸಿದ ತಂಡ ಗಾಲೆಯಲ್ಲಿ ಪೂರ್ವ ನಿರ್ಧಾರಿತ ಆದೇಶದಂತೆ ಬೇರೆ ಬೇರೆ ದಿಕ್ಕಿಗೆ ಹೊರಟವು. ಭಾರತೀಯ ಇನ್ನೊಂದು ತಂಡದಲ್ಲಿದ್ದು ಗ್ರಹಣ ವೀಕ್ಷಣೆಗೆ ಬೇರೊಂದು ಸ್ಥಳಕ್ಕೆ ಹೊರಟು ಹೋದದ್ದರಿಂದ ಆತನ ಬಗ್ಗೆ ಮುಂದೆ ಎಲ್ಲೂ ಪ್ರಸ್ತಾಪವೇ ಇಲ್ಲ.

ಹಾಗೇ ಪ್ರಯಾಣ ಮುಂದುವರೆಸಿ ಶ್ಯೂಸ್ಟರ್ ಸಯಾಂ ತಲುಪುವ ದಾರಿಯಲ್ಲೆಲ್ಲೂ ಭಾರತವನ್ನು ಮುಟ್ಟಲಿಲ್ಲ. ಏಪ್ರಿಲ್‌ನಲ್ಲಿ ಗ್ರಹಣದ ಕೆಲಸಗಳೆಲ್ಲಾ ಮುಗಿದ ಮೇಲೆ ಸಯಾಂ ರಾಜನಿಂದ ಬೀಳ್ಗೊಡುಗೆ ಪಡೆದ ಶ್ಯೂಸ್ಟರ್ ಮೇ ತಿಂಗಳಲ್ಲಿ ಕೋಲ್ಕತ್ತ ತಲುಪಿದರು.  ಅಲ್ಲಿದ್ದ ಬ್ರಿಟಿಷರೊಡನೆ ಕೆಲಕಾಲ ಕಳೆದು ಶಿಮ್ಲಾಕ್ಕೆ ಹೊರಟರು. ಶಿಮ್ಲಾದ ಗೌರ್ನಮೆಂಟ್ ಹೌಸ್‌ನಲ್ಲಿ ಒಂದು ಔತಣಕೂಟ ಏರ್ಪಡಿಸಲಾಗಿತ್ತು.  ಶಿಮ್ಲಾ ಬೇಸಿಗೆ ರಾಜಧಾನಿ. ಮೇ ತಿಂಗಳಲ್ಲಿ ಸಾಕಷ್ಟು ಬ್ರಿಟಿಷರು ಅಲ್ಲಿ ಸೇರಿದ್ದರು. ಲಾರ್ಡ್ ನಾರ್ತ್‌ಬ್ರೂಕ್ ಎಂಬುವವರು ವೈಸ್‌ರಾಯ್; ಅವರ ಆಪ್ತ ಕಾರ್ಯದರ್ಶಿ ಕ್ಯಾಪ್ಟನ್ ಬೇರಿಂಗ್ ಅವರ ಪರಿಚಯ ಔತಣಕೂಟದಲ್ಲಿಯೇ ಆಯಿತು. ಶ್ಯೂಸ್ಟರ್ ಅವರ ಖಗೋಳ ವಿಜ್ಞಾನದ ಹಿನ್ನೆಲೆ ಅರಿತು ಅವರು ಮುಖ್ಯವಾದ ವಿಷಯವೊಂದನ್ನು ಚರ್ಚಿಸಿದರು. ಈ ಬಗ್ಗೆ ಅನೇಕ ವರ್ಷಗಳ ಕಾಲ ಪತ್ರ ವ್ಯವಹಾರ ನಡೆಯಿತು. ವಿಷಯ ಮದ್ರಾಸ್ ವೀಕ್ಷಣಾಲಯಕ್ಕೆ ಸಂಬಂಧಿಸಿದ್ದು. ಅದನ್ನು ಕೊಡೈಕೆನಾಲ್‌ಗೆ ಸ್ಥಳಾಂತರಿಸುವ ಬಗ್ಗೆ ಸಲಹೆ ಬೇಕಿತ್ತು. ಕೊಡೈಕೆನಾಲ್ ಬದಲು ಶಿಮ್ಲಾವನ್ನೇ ಶಿಫಾರಸು ಮಾಡಬಹುದೇ?  ಇದು ಆಗ ಎದ್ದಿದ್ದ ಪ್ರಶ್ನೆ.

1875ರ ಜುಲೈನಲ್ಲಿ ಶ್ಯೂಸ್ಟರ್ ಬರೆದ ಪತ್ರದಿಂದ ಕೆಳಕಂಡ ಅಂಶಗಳು ತಿಳಿಯುತ್ತವೆ- ಶಿಮ್ಲಾಗೆ ಸ್ಥಳಾಂತರಿಸುವ ಬಗ್ಗೆ ಅಭಿಪ್ರಾಯವನ್ನು ಸೂಚಿಸಬೇಕು ಎಂದು ಅದೇ ದಿನ ಪತ್ರ ಬಂದಿತ್ತು. ಅದರ ಉತ್ತರವಾಗಿ ಶ್ಯೂಸ್ಟರ್ ಶಿಮ್ಲಾ ಬೇಡ. ಅದರ ಬದಲು ಪಂಜಾಬ್‌ನ ಯಾವುದಾದರೂ ಸ್ಥಳ ಆಯ್ಕೆ ಮಾಡಬೇಕು ಎಂದು ಸೂಚಿಸಿದ್ದರು. ಮಳೆಯ ಕಾರಣ ಉಂಟಾಗುವ ತೊಂದರೆಗಳನ್ನು ಅವರು ವಿವರಿಸಿದ್ದರು. ಜೊತೆಗೆ ಅದೇ ದಿನ ತಾವು ಶಿಮ್ಲಾದಿಂದ ಹೊರಡುತ್ತಿರುವುದನ್ನೂ ಸೂಚಿಸಿ, ಮುಂದಿನ ಪತ್ರಗಳೇನೇ ಬಂದರೂ ಅವು ತಮ್ಮನ್ನು ತಲುಪುವ ವ್ಯವಸ್ಥೆ ಆಗಿದೆ ಎಂದು ಬರೆದಿದ್ದರು. ಅಂದರೆ ಶಿಮ್ಲಾದಲ್ಲಿ ಎರಡು ತಿಂಗಳು ತಂಗಿದ್ದರು.

ಶಿಮ್ಲಾದಿಂದ ಮುಂಬಯಿವರೆಗಿನ ಯಾತ್ರೆ ಕಾಲ್ನಡಿಗೆಯದು ಎಂಬುದೊಂದು ವಿಶೇಷ. ಆದರೆ, ಅಂದಿನ ಸಂದರ್ಭ ಬೇರೆ. ದಾರಿಯುದ್ದಕ್ಕೂ ಇದ್ದ ಬ್ರಿಟಿಷ್ ಅಧಿಕಾರಿಗಳ ಬಂಗಲೆಗಳಲ್ಲಿ ಅವರಿಗೆ ರಾಜಾತಿಥ್ಯವೇ ದೊರಕಿದ್ದಿರಬೇಕು. ಕೊಡೈಕೆನಾಲ್‌ಗೆ ಸೌರ ವೀಕ್ಷಣಾಲಯವನ್ನು ಸ್ಥಳಾಂತರಿಸುವ ಕುರಿತು ಮುಂದೆಯೂ ಅನೇಕ ಕಾಗದ ಪತ್ರಗಳು ವಿನಿಮಯವಾದವು. 50 ವರ್ಷಗಳ ನಂತರ ಶ್ಯೂಸ್ಟರ್ ಬರೆದ ಪುಸ್ತಕದಲ್ಲಿ ಈ ವಿಷಯವಿದೆ. 1899ರಲ್ಲಿ ಕೊಡೈಕೆನಾಲ್‌ನಲ್ಲಿ ಸೌರ ವೀಕ್ಷಣಾಲಯ ಕಾರ್ಯಾರಂಭ ಮಾಡಿತು.

ಶ್ಯೂಸ್ಟರ್ ಮತ್ತು ಭಾರತದ ನಂಟು ಇಷ್ಟೇ. ಹಾಗಾದರೆ ಕನ್ನಡದ ಈ ಕಾಗದ ಬಂದುದೆಲ್ಲಿಂದ? ಯಾರಿಗೆ? ಈ ಕಾಗದದ ಮೇಲಿರುವ ತಾರೀಕು 12ನೇ ಮಾರ್ಚ್ 1871.  ಆದ್ದರಿಂದ ಇದಕ್ಕೂ ಶ್ಯೂಸ್ಟರ್‌ನಿಗೂ ಸಂಬಂಧ ಇರುವುದು ಸಾಧ್ಯವೇ ಇಲ್ಲ. ಅಲ್ಲದೇ ಇದರಲ್ಲಿ ವೈಜ್ಞಾನಿಕ ಅಂಶಗಳೂ ಇಲ್ಲ; ಭೌತವಿಜ್ಞಾನ ವಿಭಾಗದ ಆಡಳಿತಕ್ಕೂ ಸಂಬಂಧಪಟ್ಟಿಲ್ಲ. ಕಾಗದದ ಒಕ್ಕಣೆಯಿಂದ ಮೇಚ್ಛಾದ ಎಂಬುದು ವಂಶದ ಹೆಸರು. ಬಾದ್‌ತೋಲೀಂ ಅಥವಾ ಬಾರ್‌ತೋಲೀಂ ಎಂಬ ವ್ಯಕ್ತಿ ಮ್ಯಾಂಚೆಸ್ಟರ್‌ನಲ್ಲಿದ್ದವನು. ಆತನ ಹೆಂಡತಿಯ ಹೆಸರು ರೋಸ್‌ಮೇರಿ. ಕನ್ನಡದಲ್ಲಿ ಬರೆಯುವಾಗ ಅಪಭ್ರಂಶಕ್ಕೆ ಒಳಗಾದ ಕ್ರಿಶ್ಚಿಯನ್ ಹೆಸರುಗಳಿವು ಎಂದು ಊಹಿಸಬಹುದು. ಇವು ಪೋರ್ಚುಗೀಸರ ಹೆಸರೂ ಇರಬಹುದು. ಏಕೆಂದರೆ ಕಾಗದದಲ್ಲಿ ಪ್ರಸ್ತಾಪವಾಗಿರುವ ಕುಂದಾಪುರ ಆಗ ಪೋರ್ಚುಗೀಸರ ಹಿಡಿತದಲ್ಲಿತ್ತು.

ಪ್ರೊಫೆಸರ್ ರಾಬಿನ್ ಮಾರ್ಷಲ್ ಅವರು ತಿಳಿಸಿದಂತೆ 1871ರಲ್ಲಿ ಮ್ಯಾಂಚೆಸ್ಟರ್‌ನ ಭೌತವಿಜ್ಞಾನ ವಿಭಾಗದಲ್ಲಿ ದೊಡ್ಡ ಬದಲಾವಣೆಯಾಗಿತ್ತು. ಕ್ವೇ ರಸ್ತೆಯಲ್ಲಿದ್ದ ಹಳೆಯ ಕಟ್ಟಡದಿಂದ ಆಕ್ಸ್‌ಫರ್ಡ್ ರೋಡ್‌ನಲ್ಲಿ ಹೊಸ ಕಟ್ಟಡಕ್ಕೆ ಭೌತವಿಜ್ಞಾನದ ಜೊತೆಗೆ ರಸಾಯನ ವಿಜ್ಞಾನ, ಗಣಿತ, ಭಾಷಾ ವಿಭಾಗಗಳೂ ಸ್ಥಳಾಂತರಗೊಂಡವು. ಆಗ ಈ ಕಾಗದ ಹೇಗೋ ಸೇರಿಕೊಂಡಿರಬೇಕು.

ರಾಬಿನ್ ಮಾರ್ಷಲ್ ಅವರು ಕಳಿಸಿಕೊಟ್ಟ ಫೋಟೊದಲ್ಲಿ ಕೊನೆಯಲ್ಲಿ ಎಂ.ಕೆ. ವೆಬ್‌ಷ್ಟರ್ ಎಂಬ ಹೆಸರಿದೆ. ಇಂಗ್ಲಿಷ್‌ನ ವೆಬ್‌ಸ್ಟರ್‌ನ ಅಪಭ್ರಂಶ ಇದು ಎಂದು ಊಹಿಸಬಹುದು. ರಾಬಿನ್ ಅವರು ಭೌತವಿಜ್ಞಾನ ವಿಭಾಗದ ಇತಿಹಾಸವನ್ನೇ ರಚಿಸಿದ್ದಾರೆ. ಅವರ ಪ್ರಕಾರ ವೆಬ್‌ಸ್ಟರ್ ಎಂಬ ಹೆಸರಿನ ವ್ಯಕ್ತಿ ಆ ಇಸವಿಗಳಲ್ಲಿ ವಿಶ್ವವಿದ್ಯಾಲಯದಲ್ಲಿ ಇರಲಿಲ್ಲ. ಬಾರ್ತ್‌ಲೋಮಯೋ ಎಂಬ ಹೆಸರೂ ಇಲ್ಲ. ಅವರ ಪ್ರಕಾರ 1936ರಲ್ಲಿ ಒಬ್ಬ ಭಾರತೀಯ ವಿದ್ಯಾರ್ಥಿ ಇದ್ದದ್ದು ಮಾತ್ರ ದಾಖಲೆ ಇದೆ. (ಈತ ಮುಸ್ಲಿಂ; ಮುಂದೆ ಒಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾದ).

ಹಾಗಾದರೆ ಈ ಕಾಗದದ ಸೃಷ್ಟಿಕರ್ತ ಯಾರು? ಕುಂದಾಪುರದವನೇ? ಧಾರವಾಡದವನೇ?  ಮ್ಯಾಂಚೆಸ್ಟರ್‌ನಲ್ಲಿದ್ದವರು ಯಾರು?- ಈ ಎಲ್ಲ ಪ್ರಶ್ನೆಗಳೂ ಸದ್ಯಕ್ಕಂತೂ ಪ್ರಶ್ನೆಗಳೇ ಆಗಿವೆ. ಮುಂದೆ ಎಂದಾದರೂ ಈ ರಹಸ್ಯ ತಿಳಿಯಬಹುದು. ಅಥವಾ ಇಂಗ್ಲೆಂಡಿಗೆ ವಲಸೆ ಹೋದ ಅಸಂಖ್ಯಾತ ಕ್ರಿಶ್ಚಿಯನ್ ಕುಟುಂಬಗಳಲ್ಲಿ ಇದೂ ಒಂದು ಇದ್ದಿರಬಹುದು. ಇಲ್ಲಿಯೂ ಸಲ್ಲದೆ ಅಲ್ಲಿಯೂ ಸಲ್ಲದೆ ಅನಾಮಧೇಯರಾಗಿಯೇ ಬದುಕು ಪೂರೈಸಿರಲೂಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT