ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿ

Last Updated 5 ಆಗಸ್ಟ್ 2017, 20:09 IST
ಅಕ್ಷರ ಗಾತ್ರ

ನವದೆಹಲಿ: ನಿರೀಕ್ಷೆಯಂತೆ ಎನ್‌ಡಿಎ ಅಭ್ಯರ್ಥಿ ವೆಂಕಯ್ಯ ನಾಯ್ಡು ದೇಶದ 13ನೇ ಉಪ ರಾಷ್ಟ್ರಪತಿಯಾಗಿ  ಆಯ್ಕೆಯಾಗಿದ್ದಾರೆ. ಚಲಾವಣೆಯಾದ ಮತಗಳಲ್ಲಿ ಮೂರನೇ ಎರಡರಷ್ಟನ್ನು ಪಡೆಯುವ ಮೂಲಕ ವಿರೋಧ ಪಕ್ಷಗಳ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರನ್ನು ಸುಲಭವಾಗಿ ಸೋಲಿಸಿದ್ದಾರೆ.

ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಅಧಿಕಾರದ ಅವಧಿ ಇದೇ 10ಕ್ಕೆ ಕೊನೆಗೊಳ್ಳಲಿದ್ದು, ನಾಯ್ಡು ಅವರು 11ರಂದು ಪ್ರಮಾಣವಚನ ಸ್ವೀಕರಿಸುವರು.

ಶನಿವಾರ ನಡೆದ ಚುನಾವಣೆಯಲ್ಲಿ 771 ಸಂಸದರು ಮತಚಲಾವಣೆ ಮಾಡಿದ್ದರು. ಈ ಪೈಕಿ 516 ಮತಗಳು ನಾಯ್ಡು ಅವರಿಗೆ ಬಂದಿವೆ. ಗಾಂಧಿ ಅವರಿಗೆ 244 ಮತಗಳು ಬಿದ್ದಿವೆ. 11 ಮತಗಳು ತಿರಸ್ಕೃತಗೊಂಡಿವೆ. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಮಾತ್ರ ಮತದಾನ ಹಕ್ಕು  ಹೊಂದಿದ್ದಾರೆ. ಎರಡೂ ಸದನಗಳ ಸದಸ್ಯರ ಬಲ 790.

ಆದರೆ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ತಲಾ ಎರಡು ಸ್ಥಾನಗಳು ಖಾಲಿ ಇವೆ. ನ್ಯಾಯಾಲಯದ ತೀರ್ಪಿನ ಅನುಸಾರ ಬಿಜೆಪಿಯ ಒಬ್ಬರು ಲೋಕಸಭಾ ಸದಸ್ಯರಿಗೆ ಮತದಾನಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಒಟ್ಟು 785 ಸಂಸದರು ಮತದಾನ ಅರ್ಹತೆ ಹೊಂದಿದ್ದರು. ಆದರೆ, 14 ಸದಸ್ಯರು ಮತದಾನ ಮಾಡಿಲ್ಲ.

‘ಕೃಷಿ ಹಿನ್ನೆಲೆಯಿಂದ ಬಂದ ನಾನು ಈ ಹುದ್ದೆಗೆ ಏರುತ್ತೇನೆ ಎಂದು  ಯೋಚಿಸಿಯೇ ಇರಲಿಲ್ಲ. ದೇಶದ ರಾಜಕಾರಣದಲ್ಲಿ ಕೃಷಿಗೆ ಹೆಚ್ಚು ಪ್ರಾತಿನಿಧ್ಯ ಇಲ್ಲ’ ಎಂದು  ಚುನಾಯಿತರಾದ ನಂತರ  ವೆಂಕಯ್ಯ ನಾಯ್ಡು ಹೇಳಿದರು.
‘ಯಾವುದೇ ಪಕ್ಷಪಾತ ಮಾಡದೆ,  ಎಲ್ಲ ಸದಸ್ಯರ ಸಹಕಾರ ಪಡೆದು  ರಾಜ್ಯಸಭೆಯನ್ನು ನಿರ್ವಹಿಸುತ್ತ, ನೀತಿ ನಿಯಮಗಳ ಅನುಸಾರ ಸದನದ ಗೌರವವನ್ನು ಎತ್ತಿ ಹಿಡಿಯುತ್ತೇನೆ’ ಎಂದು ಅವರು ಹೇಳಿದರು.


ಅಭಿನಂದನೆ: ನಾಯ್ಡು ಅವರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ನಾಯ್ಡು ಅವರು ಶ್ರದ್ಧೆ ಮತ್ತು ಬದ್ಧತೆಯುಳ್ಳ ಉಪ ರಾಷ್ಟ್ರಪತಿಯಾಗಿ ದೇಶಕ್ಕೆ ಸೇವೆ ಸಲ್ಲಿಸಲಿದ್ದಾರೆ’ ಎಂದರು.
ಮತ ಎಣಿಕೆ ಸಂದರ್ಭದಲ್ಲಿ ಉಪಸ್ಥಿತರಿದ್ದ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಕೂಡ  ನಾಯ್ಡು ಅವರಿಗೆ ಶುಭ ಹಾರೈಸಿದರು.
ನಾಯ್ಡುಗೆ ಅಭಿನಂದನೆ ಸಲ್ಲಿಸಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ  ಗುಲಾಂ ನಬಿ ಆಜಾದ್‌, ಹೊಸ ಉಪರಾಷ್ಟ್ರಪತಿ ಅವರು ಸದನದಲ್ಲಿ ಎಲ್ಲ ಪಕ್ಷಗಳ ಮುಖಂಡರಿಗೂ ತಮ್ಮ ಅಭಿಪ್ರಾಯ ತಿಳಿಸಲು ಸಮಾನ ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರಪತಿ ಚುನಾವಣೆಗೆ ಹೋಲಿಸಿದರೆ, ಈ ಚುನಾವಣೆಯಲ್ಲಿ ಸಂಸತ್‌ ವಿಭಾಗದಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿಗೆ 19 ಹೆಚ್ಚು ಮತಗಳು ಬಂದಿವೆ ಎಂದು ಆಜಾದ್‌ ಹೇಳಿದರು.


ಮೇಲ್ಮನೆಯಲ್ಲಿ ಶಾಸನಗಳನ್ನು ಮತ್ತು ಸರ್ಕಾರದ ನೀತಿಗಳನ್ನು ಪರಿಣಾಮಕಾರಿಯಾಗಿ ಪರಿಶೀಲನೆಗೆ ಒಳಪಡಿಸಲು ಪಕ್ಷವು ನೂತನ ಉಪ ರಾಷ್ಟ್ರಪತಿ/ಸಭಾಪತಿಗೆ ಎಲ್ಲ ಬೆಂಬಲ ನೀಡಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು.

20 ಸಂಸದರಿಂದ ಅಡ್ಡಮತದಾನ?

ಕನಿಷ್ಠ 20 ಸಂಸದರು ಅಡ್ಡಮತದಾನ ಮಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ನಾಯ್ಡುಗೆ 502 ಮತ ಸಿಗಲಿವೆ ಎಂದು ಬಿಜೆಪಿ ನಿರೀಕ್ಷಿಸಿತ್ತು.  ಅನಾರೋಗ್ಯದ ಕಾರಣದಿಂದ ಮತದಾನ ಮಾಡದೇ ಇದ್ದ  ಕೇಂದ್ರ ಸಚಿವರಾದ ವಿಜಯ್‌ ಗೋಯಲ್‌ ಮತ್ತು ಸನ್ವರ್‌ಲಾಲ್‌ ಜಾಟ್‌ ಅವರ ಮತಗಳೂ ಇದರಲ್ಲಿ ಸೇರಿತ್ತು. ಹಾಗಿದ್ದರೂ ನಾಯ್ಡು ಅವರಿಗೆ 516 ಮತಗಳು ಬಂದಿವೆ.

**

ಮತ ಹಾಕದವರು
ಮತದಾನದ ಮಾಡದ 14 ಸಂಸದರ ಪೈಕಿ ಟಿಎಂಸಿಯ ನಾಲ್ವರು, ಬಿಜೆಪಿ, ಕಾಂಗ್ರೆಸ್‌, ಐಯುಎಂಎಲ್‌ನ ತಲಾ ಇಬ್ಬರು ಸೇರಿದ್ದಾರೆ. ಎನ್‌ಸಿಪಿ, ಪಿಎಂಕೆಯ ತಲಾ ಒಬ್ಬ,  ನಾಮಕರಣಗೊಂಡ ಒಬ್ಬ ಸದಸ್ಯ ಹಾಗೂ ಇನ್ನೊಬ್ಬ ಪಕ್ಷೇತರ ಸದಸ್ಯ  ಮತದಾನ ಮಾಡಲಿಲ್ಲ.

**

ರಾಷ್ಟ್ರಪತಿ ಕೈ ಬಲಪಡಿಸಲು ಮತ್ತು ಸಭಾಪತಿಯಾಗಿ ರಾಜ್ಯಸಭೆಯ ಘನತೆ ಎತ್ತಿಹಿಡಿಯಲು  ಶ್ರಮಿಸುತ್ತೇನೆ.
–ವೆಂಕಯ್ಯ ನಾಯ್ಡು

**

ಮುಕ್ತ ಯೋಚನೆ, ಮುಕ್ತ ಅಭಿವ್ಯಕ್ತಿ, ಬಹುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯಲು ಸ್ಪರ್ಧಿಸಿದ್ದೆ.

ಗೋಪಾಲಕೃಷ್ಣ ಗಾಂಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT