ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯರಾತ್ರಿಯ ಸೂರ್ಯನ ವರ್ಣ ವೈಭವ

Last Updated 5 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

* ಜಯಶ್ರೀ ದೇಶಪಾಂಡೆ

ಧೂಳಿ ಸಮಯವೆಂಬುದು ದಣಿದ ನಮ್ಮ ದೇಹ ಮತ್ತು ಮನಸ್ಸುಗಳನ್ನು ಮಂದಕಾಂತಿಯ ಪ್ರಭೆಗೆ ಒಡ್ಡಿ, ಒಮ್ಮೆ ನಕ್ಕು ಹಗುರವಾಗಲು ಇರುವ ಹೊತ್ತು. ಅದು ಭಾಸ್ಕರನು ದಿಗಂತದ ಅಂಚಿನಲ್ಲಿ ಮರೆಯಾಗುವ ಸಮಯವೂ ಹೌದು. ಆದರೆ ಸಂಜೆಯಾದೊಡನೆ ಮುಳುಗಿ ಹೋಗಲು ಒಲ್ಲೆನೆನ್ನುವ ಸೂರ್ಯನಿರುವ ಜಾಗಗಳೂ ಪ್ರಪಂಚದಲ್ಲಿ ಇವೆ. ರಾತ್ರಿಯ ಹನ್ನೆರಡು ಗಂಟೆ ಮೀರಿ ಹೋದರೂ, ತನ್ನ ಅನುದಿನದ ಅಸ್ತಂಗತನಾಗುವ ಕಾರ್ಯಕ್ರಮವನ್ನು ಅನಿರ್ದಿಷ್ಟವಾಗಿ ಮುಂದೂಡುತ್ತಾನೆ ಅವನು. ಝಗಮಗಿಸಿ ಕಾಣುಗರ ಕಣ್ಮನಗಳಲ್ಲಿ ಹಿಗ್ಗಿನ ಬುಗ್ಗೆಗಳನ್ನು ಏಳಿಸಿ, ಬೆರಗಿನ ನೋಟ, ಕೌತುಕ, ವಿಸ್ಮಯಗಳ ಮೋಡಿಯಿತ್ತು ಕುಳಿತ ಸ್ಥಳದಿಂದ ಕದಲಲಾಗದಂತೆ ಕಟ್ಟಿ ಹಾಕುವ ಭಾಸ್ಕರನ ಉರಿಚೆಂಡಿನ ಉಪಸ್ಥಿತಿ ಉತ್ತರ ಭೂಗೋಳಾರ್ಧದ ಹಲವೆಡೆ ಇವೆ. ಹೌದು, ಅವನು ಹೀಗೆ ನಡುರಾತ್ರಿ ಕಾಣಿಸಿಕೊಳ್ಳುವುದು ಅಲಾಸ್ಕಾ, ರಷ್ಯಾ, ನಾರ್ವೆ, ಕೆನಡಾ, ಸ್ವೀಡನ್, ಫಿನ್ಲೆಂಡ್ ಮತ್ತು  ಐಸ್ಲೆಂಡ್  ದೇಶಗಳಲ್ಲಿ.

ಇಂಥ ‘ಮಧ್ಯರಾತ್ರಿಯ ಸೂರ್ಯ' ನನ್ನ ಕಣ್ಣಿಗೆ ಬಿದ್ದದ್ದು ಫಿನ್ಲೆಂಡ್‌ನಲ್ಲಿ. ಈ ನಿಸರ್ಗ ವೈಚಿತ್ರ್ಯದ ಭೌಗೋಳಿಕ ಕಾರಣಗಳನ್ನು ಹೀಗೆ ದಾಖಲಿಸಬಹುದು. ಈ ಎಲ್ಲ ನಾಡುಗಳು ಉತ್ತರ ಧ್ರುವಕ್ಕೆ ಬಲು ಹತ್ತಿರದವಾಗಿದ್ದು ಅಕ್ಷಾಂಶ ರೇಖಾಂಶಗಳ ಪರಿಧಿ (ಫಿನ್ಲೆಂಡ್‌ಗೆ ಸಂಬಂಧಿಸಿದಂತೆ) ಅಂದಾಜು  60 - 34 ಡಿಗ್ರಿಗಳಷ್ಟು. ನಮ್ಮ ಭೂಮಿ ತನ್ನ ಅಕ್ಷಕ್ಕೆ  23 ಡಿಗ್ರಿಗಳಷ್ಟು ವಕ್ರಲಂಬ ಗತಿಯಲ್ಲಿ ಸೂರ್ಯ ಪ್ರದಕ್ಷಿಣೆ ಮಾಡುತ್ತಿದ್ದು ಉತ್ತರ ಧ್ರುವದಲ್ಲಿ ಸುಮಾರು ಜೂನ್, ಜುಲೈಗಳಲ್ಲಿ ಮತ್ತು ದಕ್ಷಿಣ ಧ್ರುವದಲ್ಲಿ ಡಿಸೆಂಬರ್ ಮತ್ತು ಅದರ ಹಿಂದು ಮುಂದಿನ ಹಲವು ತಿಂಗಳ ಸಮಯಗಳಲ್ಲಿ ಸೂರ್ಯ ದಿನದ ಇಪ್ಪತ್ನಾಲ್ಕು ಗಂಟೆಗಳವರೆಗೂ ಕ್ಷಿತಿಜದಲ್ಲಿ ಕಾಣುತ್ತಲೇ ಇರುತ್ತಾನೆ. ಧ್ರುವ ಪ್ರದೇಶದಿಂದ ಆಯಾ ದೇಶ ಎಷ್ಟು ದೂರವಿದೆ, ಯಾವ ಅಕ್ಷಾಂಶ/ರೇಖಾಂಶಗಳ ಮೇಲಿದೆ ಎನ್ನುವುದು ಸೂರ್ಯನು ಅಲ್ಲಿ ರಾತ್ರಿ ಕಾಣಿಸಿಕೊಳ್ಳುವ ಸಮಯವನ್ನು ನಿರ್ಧರಿಸುತ್ತದೆ.

'ಯೊಹಾನುಸ್' ಎಂಬುದು ಫಿನ್ನಿಷ್ ಜನ ಬೇಸಿಗೆಯಲ್ಲಿ ಬಲು ಕಾತರದಿಂದ ಕಾಯುವ ನಿಸರ್ಗ ಪರ್ವ. ಇದು ಮಧ್ಯರಾತ್ರಿ ಪ್ರಜ್ವಲಿಸುವ ಸೂರ್ಯನನ್ನು ಕಣ್ತುಂಬಿಸಿಕೊಳ್ಳುವ ದಿನವೂ ಹೌದು. ನಾವಿರುವ ಕುವೋಪಿಯೋ ನಗರದಲ್ಲಿ ಒಂದಿಡೀ ವಾರ ಸೂರ್ಯಾಸ್ತಮಾನ ಆಗುವ ಮಾತೇ ಇರಲಿಲ್ಲ. ಅನಂತರವೂ ದಿನದ ಇಪ್ಪತ್ತು ಇಪ್ಪತ್ತೆರಡು ಗಂಟೆಗಳ ಕಾಲ ಬೆಳಕು, ಒಂದೆರಡು ಗಂಟೆಗಳ ಮಬ್ಬು ಮಸುಕು ಅಷ್ಟೇ. ಮತ್ತೆ ಬಲುಬೇಗ ಆಕಾಶದಲ್ಲಿ ಸೂರ್ಯನ ಉಪಸ್ಥಿತಿ. ಇಲ್ಲಿ ಈ ದಿನಗಳಲ್ಲಿ ರಾತ್ರಿಯನ್ನು ಕತ್ತಲಾಗಿಸಿಕೊಳ್ಳಬೇಕೆಂದರೆ ಕಿಟಕಿಗಳಿಗೆಲ್ಲ ದಟ್ಟ ಗಾಢ ವರ್ಣದ ಪರದೆಗಳನ್ನು ಹಾಕಿ ಮುಚ್ಚುವುದೊಂದೇ ದಾರಿ. 'ಮಿಡ್ ಸಮ್ಮರ್ ಡೇ' ಅನ್ನಿಸಿಕೊಳ್ಳುವ ಯೋಹಾನುಸ್ ಜೂನ್ ತಿಂಗಳ 21 ಅಥವಾ 23ರ ಸುಮಾರಿಗೆ ಬಂದಿಳಿಯುತ್ತದೆ.

ಪ್ರತಿ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ  ಶುರುವಾಗುವ ಮೈ ಕೊರೆಯುವ ಚಳಿ, ಅದನ್ನು ಹಿಂಬಾಲಿಸಿ ಇಡೀ ನಾಡನ್ನೇ ಆವರಿಸುತ್ತಾ  ಆರೆಂಟಡಿಯಷ್ಟು ಎತ್ತರಕ್ಕೆ ದಟ್ಟ ಬಿಳಿ ಹಿಮವನ್ನು ಹರಡುತ್ತದೆ. ತಾಪಮಾನ ಶೂನ್ಯದಿಂದ ಕೆಳಗೆ ಮೂವತ್ತು ನಲವತ್ತು ಡಿಗ್ರಿಗಳಷ್ಟು ಇಳಿಯುತ್ತದೆ. ಇಲ್ಲಿನ ಸಮಸ್ತವನ್ನೂ ಮೇ- ಜೂನ್ ಬರುವವರೆಗೆ ಶ್ವೇತವರ್ಣದ ಹೊದಿಕೆಯಲ್ಲಿ ಮುಚ್ಚಿ ಹಾಕುವ ಖತರ್ನಾಕ್ ಚಳಿಗಾಲ ಇಲ್ಲಿಯದು. ಚಳಿಗೆ ಬೇಸತ್ತ ಇಲ್ಲಿನವರು 'ದಯಮಾಡಿಸು ಹಿಮವೇ, ಇನ್ನು ಹೊರಟು ಹೋಗು'  ಅನ್ನುತ್ತಾ ಬೀಳ್ಕೊಡುತ್ತಾರೆ.

ಸುತ್ತಮುತ್ತಲ ಅರಣ್ಯವಿಡೀ ಅದೇ ಆಗ ಚಿಗುರಿದ ಚೆಂದೆಲರಿನ ಹಸಿರನ್ನು ಆಹ್ವಾನಿಸುತ್ತ ಅದರ ಸಂಕೇತವಾಗಿ ಒಂದು 'ಬಾನ್ ಫೈರ್' ಬೆಂಕಿಯುರಿಸುತ್ತಾರೆ. ಅದರೊಂದಿಗೆ ನದಿ ಅಥವಾ ಸರೋವರದ ದಂಡೆಯಲ್ಲಿ ಮಧ್ಯರಾತ್ರಿಯಲ್ಲಿ ತನ್ನ ಪ್ರಭೆಯುಕ್ಕಿಸಿ ಹೊಳೆದು ನಗುವ ಸೂರ್ಯನ ಸೃಷ್ಟಿಯಾಟವನ್ನು ಬಗೆಬಗೆ ರಸದೂಟ, ಪೇಯ, ಪಾನೀಯಗಳೊಂದಿಗೆ ಸವಿಯುತ್ತಾರೆ. ಪರಿಚಿತರೊಬ್ಬರು ನೀಡಿದ್ದ  ಇಂಥದೊಂದು ಪಾರ್ಟಿಯ ಆಹ್ವಾನವನ್ನು ತಪ್ಪಿಸಿಕೊಳ್ಳುವುದುಂಟೆ?

ಒಂದು ಸರೋವರದ ದಂಡೆಯಲ್ಲಿ ಅವರ ಸಮ್ಮರ್ ಕಾಟೇಜಿನಲ್ಲಿ ನಡೆಸಿದ ಈ 'ಯೊಹಾನುಸ್' ಬೇಸಿಗೆ ಕೂಟಕ್ಕೆ ಹೋಗಿದ್ದೆವು. ಹಾಗೆ ಗುಲ್ಲು ಗಲಾಟೆ, ಸದ್ದು ಗದ್ದಲಗಳ ಗೌಜಿಯನ್ನು ಅಷ್ಟಾಗಿ ಬಯಸದ ಫಿನ್ನಿಷ್ ಜನರ ಈ ಶಾಂತಿಪ್ರಿಯ ನಮೂನೆ ಯಾರಿಗೂ ಇಷ್ಟವಾಗಬಹುದಾದ ಗುಣವೇ. ಇವರೇನೇ ಮಾಡಿದರೂ ಅದರಲ್ಲೊಂದು ಶಿಸ್ತು, ವ್ಯವಸ್ಥೆಯ ಅಚ್ಚುಕಟ್ಟುತನ ಎದ್ದು ಕಾಣುತ್ತದೆ.  ಸಂಜೆಯ ಆರಕ್ಕೆ ಶುರುವಿಟ್ಟುಕೊಂಡ ಸ್ನೇಹಕೂಟಕ್ಕೆ ನಡು ನಡುವೆ ವಿಶಿಷ್ಟ ಫಿನ್ನಿಷ್ (ಅಂದ ಹಾಗೆ ಇವರು ತಮ್ಮ ನಾಡನ್ನು ಸುವೊಮಿ ಎಂದು ಕರೆಯುತ್ತಾರೆ.

ಇವರ ಸಂಸ್ಕೃತಿ ಸುವೊಮಿ... ಭಾಷೆ ಎಷ್ಟೇ ವೈವಿಧ್ಯಪೂರಿತ ಪ್ರಾದೇಶಿಕ ಸೊಗಡಿನದ್ದಾಗಿರಲಿ ಅದು ಸುವೊಮಿಯೇ) ಪದ್ಧತಿಯ ಅಡುಗೆ ಮಾಡಿದ್ದರೂ ಶಾಕಾಹಾರಿಗಳಾದ ನಮಗೆಂದೇ ವಿಶೇಷ ಮುತುವರ್ಜಿಯಲ್ಲಿ ಮಾಡಿಟ್ಟಿದ್ದ ಸುವೊಮಿ ಸಿಹಿಗಳಿದ್ದುವು. ಲೆಪ್ಪ ಎಂಬ ಬ್ರೆಡ್ಡು, ಹಣ್ಣುಹಂಪಲು, ಬಗೆ ಬಗೆಯ ಚಿಪ್ಸ್, ನಾನಾ ಬಗೆಯ ಜ್ಯೂಸುಗಳು, ಬಾಸ್ಮತಿ ಅಕ್ಕಿಯ ಅನ್ನ ಮೊಸರು! ಒಟ್ಟಿನಲ್ಲಿ ಭೂರಿ ಭೋಜನ. ಊಟದ ನಂತರ 'ಕ್ರೂಕೆಟ್' ಅನ್ನುವ ಆಟವಾಡಿದರು. ಇದರಲ್ಲಿ ನೆಲದಲ್ಲಿ ನೆಟ್ಟ ಹಲವೆಂಟು ತಂತಿಯ ಪುಟ್ಟ ಗೋಲ್ ಪಾಸ್‌ಗಳಲ್ಲಿ ಚೆಂಡನ್ನು ಬ್ಯಾಟಿನಿಂದ ಉರುಳಿಸಿ ದಾಟಿಸಬೇಕು. ಎಲ್ಲಾ ಗೋಲ್ ಮೊದಲು ಪಾಸ್ ಮಾಡಿದವರು ವಿಜೇತರು!

ಮಧ್ಯರಾತ್ರಿ ಮೋಡಗಳೇನಾದರೂ ಆವರಿಸಿದ್ದರೆ ಅವು ಅತ್ತ ಚಲಿಸಿ ಸೂರ್ಯ ಬೆಳಗುವುದನ್ನು ಕಣ್ಣುಗಳಲ್ಲಿ ತುಂಬಿಕೊಳ್ಳುತ್ತ ಅಲ್ಲೇ ದಂಡೆಯಲ್ಲಿ ಪೇರಿಸಿದ ಕಟ್ಟಿಗೆಯ ರಾಶಿ, ಒಣಗಿದೆಲೆ ಪುರುಳೆಗಳ ಸಂಗ್ರಹಕ್ಕೆ ಬೆಂಕಿ ಕೊಟ್ಟು ಜ್ವಾಲೆ ನಭೋ ಮುಖವಾಗಿ ಹೊಮ್ಮುತ್ತಿರುವಂತೆ ಸಾಂಪ್ರದಾಯಿಕ ನಮೂನೆಯ ಹಾಡುಗಳನ್ನು ಹಾಡಿದರು. ಅಲ್ಲೇ ಸುತ್ತುತ್ತ ಚಪ್ಪಾಳೆ ತಟ್ಟಿ ಬೆಂಕಿಯ ಕಾಂತಿಯಲ್ಲಿ ಹೊಳೆದ ಅವರ ಮುಖಗಳಲ್ಲಿ -  ಅಂದು ಬೆಳಗಿನಿಂದ ಗಾಳಿ ಬೀಸುತ್ತ ತುಂಬಿಕೊಂಡಿದ್ದ ಒಂದಷ್ಟು ಚಳಿ ಅತ್ತ ಸರಿದು - ಬೇಸಿಗೆಯ ಸುಖದಾಯಕ ಬಿಸಿಲಿನ ಖುಷಿ ತುಂಬಿತು.

ಯಾಕೆ ಇವರು ಈ ನಿಸರ್ಗದ ಹಬ್ಬವನ್ನಾಚರಿಸುತ್ತಾರೆ? ಇದಕ್ಕೇನು  ಹಿನ್ನೆಲೆ? ಅನ್ನುವ ನನ್ನ ಪ್ರಶ್ನೆಯನ್ನವರ ಎದುರಿಟ್ಟೆ. ಉತ್ತರಗಳು ಸ್ವಾರಸ್ಯಕರ. ಫಿನ್ಲೆಂಡಿನ ಎರಡು ಮೂರಾಂಶ ಭಾಗ ಅರಣ್ಯವಿದೆ. ಅದುವೇ ಅವರ ಮುಖ್ಯ ಸಂಪನ್ಮೂಲ. ಅರಣ್ಯವನ್ನವರು ತಮ್ಮ ಜೀವಕ್ಕಿಂತಲೂ ಹೆಚ್ಚು ಪ್ರೀತಿಸುತ್ತ, ಅದು ಹಾಳಾಗದೆ ಉಳಿದು ಬೆಳೆದು ನಿಲ್ಲುವ ವ್ಯವಸ್ಥೆಯಲ್ಲಿ ಸದಾ ನಿರತರು. ನಮ್ಮಲ್ಲಿನ ಹಾಗೆ ಇಲ್ಲಿ ಎಲ್ಲೆಂದರಲ್ಲಿ, ಯಾರೇ ಆಗಲಿ ಮನಸೋಇಚ್ಛೆ ಕಾಡು ಕಡಿದುಹಾಕುವಂತಿಲ್ಲ. ಇಲ್ಲಿನ ಇನ್ನೊಂದು ವಿಶೇಷ ಅಂದರೆ ನಮ್ಮಲ್ಲಿನಂತೆ ಹೊಲ, ಗದ್ದೆ ಆಸ್ತಿಯಾಗದೆ ಇಂತಿಷ್ಟು ಎಕರೆ ಅರಣ್ಯವೇ ಇವರ ಮನೆತನದ ಆಸ್ತಿ ಆಗಿರುತ್ತದೆ. ನಿಮ್ಮದೇ ಅರಣ್ಯವನ್ನು ಕಡಿದು ನಾಟಾ ಮಾಡಿ ಮಾರಲು ಸರ್ಕಾರದ ಹಲವಾರು ನಿಯಮಗಳನ್ನು ಪಾಲಿಸಬೇಕು. ಕೃಷಿ ಭೂಮಿ ಹಾಗೆ ಕಡಿಮೆಯೇ.

pete land ಎನ್ನಿಸಿಕೊಳ್ಳುವ ಅತಿ ಫಲವತ್ತಾದ ನೆಲ ಇದು, ಏನೇ ಬೆಳೆದರೂ ಸಮೃದ್ಧವಾಗಿ ಬೆಳೆಯುತ್ತೆ. (ಆದರೆ ಇಲ್ಲಿ ಕೆಲವೇ ಬಗೆಯ ಬೆಳೆ ತೆಗೆಯುವುದು ಮಾತ್ರ ಸಾಧ್ಯ. ಕಾರಣ ವರ್ಷದ ಆರೇಳು ತಿಂಗಳು ಈ ನಾಡು ಹಿಮದಲ್ಲಿ ಅಡಗಿಬಿಟ್ಟಿರುತ್ತದೆ). ಕೆಲವು ಬಗೆಯ ತರಕಾರಿಗಳು, ಮುಸುಕಿನ ಜೋಳ, ಗೋಧಿ, ಬಾರ್ಲಿ, ಓಟ್ಸ್ ಮತ್ತು ರಾಯ್, ರೇಪ್ ಸೀಡ್ ಹೀಗೆ ಕೆಲವನ್ನು ಬೆಳೆಯುತ್ತಾರೆ. ಬೇಸಿಗೆಯ ಕೆಲವು ತಿಂಗಳೇ ಒಂದಿಷ್ಟು ಕೃಷಿ. ಹಿಂದಿನ ಕಾಲದ ರೈತಾಪಿ ಜನ ಹೊಲದ ಕಸ, ಕಳೆ, ಹೊತ್ತು, ಮರದ ಕಡಿದುರುಳಿದ ಕಟ್ಟಿಗೆಯ ಶೇಷಗಳನ್ನು ನಡುಬೇಸಿಗೆಯ ಒಂದು ದಿನ ರಾತ್ರಿ ಒಂದೆಡೆ ಒಟ್ಟಿ ಬೆಂಕಿ ಹಚ್ಚಿ ಅದೇ ಹೊತ್ತಿಗೆ ಸೂರ್ಯನೂ ಈ ಬೇಸಿಗೆಯಿಡೀ ಚೆನ್ನಾಗಿ ಬಿಸಿಲು ಕೊಡಲಿ, ನಮ್ಮ ಬೆಳೆ ಹೆಚ್ಚಲಿ ಎನ್ನುವ ಭಾವದ ಹಾಡುಗಳನ್ನು ಹಾಡುತ್ತ ನಡೆಸಿಕೊಂಡು ಬಂದಿರುವುದೇ ಯೋಹಾನುಸ್. ಹಿರಿಯರ ಹಬ್ಬಗಳೂ ಚಂದ, ಅವುಗಳ ಹಿಂದಿನ ಉದ್ದೇಶವೂ ಹಿರಿದು.

ಸರೋವರದ ದಂಡೆಯಲ್ಲಿ ಉರಿಸಿದ ಬಾನ್ ಫೈರ್ ಬೆಂಕಿ ಆಕಾಶ ಮುಟ್ಟುತ್ತಿದ್ದಂತೆ ಮಧ್ಯರಾತ್ರಿಯೂ ಆಗಿಯೇಬಿಟ್ಟು ನೀರಿನಂಚಿನಲ್ಲಿ ಝಗ ಮಗ ಹೊಳೆದ ಸೂರ್ಯನ ವರ್ಣ ವೈಚಿತ್ರ್ಯ ವೈಭವವನ್ನು ಮನದುಂಬಿಕೊಂಡು ಅಲ್ಲಿಂದ ಹೊರಟು ಬಂದು ನಾವು ಮನೆ ಸೇರಿದಾಗ ರಾತ್ರಿಯ ಒಂದು ಗಂಟೆ!

ಬೆಳ್ಳಗೆ ಬೆಳಗಿಕೊಂಡೇ ಇದ್ದ ಬಾನಿನಲ್ಲಿ ಸೂರ್ಯ ನಗುತ್ತಿದ್ದ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT