ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ನಾನೂರು ಭಾಷೆಗಳು ಅಳಿವಿನತ್ತ

Last Updated 5 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ : ‘ಭಾರತದ 400 ಭಾಷೆಗಳು ಮುಂದಿನ 50 ವರ್ಷಗಳಲ್ಲಿ ನಶಿಸಿ ಹೋಗುವ ಅಪಾಯ ಎದುರಿಸುತ್ತಿವೆ’ ಎಂದು ಭಾಷಾಶಾಸ್ತ್ರಜ್ಞ ಗಣೇಶ್ ಎನ್‌. ದೇವಿ ಅಭಿಪ್ರಾಯಪಟ್ಟಿದ್ದಾರೆ.


ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾದ (ಪಿಎಲ್‌ಎಸ್‌ಐ)’ 11 ಸಂಚಿಕೆಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದ್ದಾರೆ.

ಅಳಿವಿನತ್ತ ಕರಾವಳಿ ಭಾಷೆಗಳು

* ಭಾರತದ ಅಳಿವಿನಂಚಿನಲ್ಲಿರುವ  ಭಾಷೆಗಳಲ್ಲಿ ಕರಾವಳಿ ಭಾಷೆಗಳ ಪ್ರಮಾಣವೇ ಹೆಚ್ಚು
* ಕರಾವಳಿಯ ಜನರ ಮುಖ್ಯ ಕಸುಬಾದ ಆಳ ಸಮುದ್ರದ ಮೀನುಗಾರಿಕೆಗೆ ಕಾರ್ಪೊರೇಟ್ ಸಂಸ್ಥೆಗಳು
ಕಾಲಿರಿಸಿವೆ
* ಕಾರ್ಪೊರೇಟ್‌ ಕಂಪೆನಿಗಳ ಸ್ಪರ್ಧೆ   ಎದುರಿಸಲಾಗದೆ ಈ ಸಮುದಾಯಗಳು ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಒಳನಾಡಿನತ್ತ ಸರಿಯುತ್ತಿವೆ
* ಈ ಜನರು ಒಳನಾಡಿನ ಸ್ಥಳೀಯ ಭಾಷೆಗಳಲ್ಲೇ ವ್ಯವಹರಿಸುವ ಅನಿವಾರ್ಯತೆಯಿಂದಾಗಿ ಅವರ ಭಾಷೆಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ

ಅತ್ಯಂತ ದೊಡ್ಡ ಭಾಷಾ ಸಮೀಕ್ಷೆ

* ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾವನ್ನು ಜಗತ್ತಿನಲ್ಲಿ ಈವರೆಗೆ ನಡೆದಿರುವ ಭಾಷಾ ಸಮೀಕ್ಷೆಗಳಲ್ಲೇ ಅತ್ಯಂತ ದೊಡ್ಡದು ಎನ್ನಲಾಗಿದೆ

* 2003 ಸಮೀಕ್ಷೆಯ ನೀಲನಕ್ಷೆ ಆರಂಭ

* 2010 ದತ್ತಾಂಶ ಸಂಗ್ರಹ/ಕ್ಷೇತ್ರ ಕಾರ್ಯ ಆರಂಭ

* 77ಸಮೀಕ್ಷೆಯ ಫಲವಾಗಿ ಪ್ರಕಟಿಸಿರುವ ಪುಸ್ತಕಗಳ ಸಂಖ್ಯೆ

* 2013 ಕ್ಷೇತ್ರ ಕಾರ್ಯ ಪೂರ್ಣ

* 300 ಕ್ಷೇತ್ರಕಾರ್ಯದಲ್ಲಿ ಭಾಗವಹಿಸಿದ ಸಂಶೋಧಕರ ಸಂಖ್ಯೆ

* 2019ರ ಆರಂಭದಲ್ಲಿ ಈ ಸರಣಿಯ ಕೊನೆಯ ಪುಸ್ತಕ ಪ್ರಕಟವಾಗಲಿದೆ

ತಲೆ ಎತ್ತುತ್ತಿವೆ ಬುಡಕಟ್ಟು ನುಡಿಗಳು

* ಇದೇ ಸಂದರ್ಭದಲ್ಲಿ ಭಾರತದ ಒಳನಾಡಿನಲ್ಲಿರುವ ಕೆಲವು ಬುಡಕಟ್ಟು ಭಾಷೆಗಳು ಬೆಳವಣಿಗೆಯನ್ನು ದಾಖಲಿಸಿವೆ
* ಬುಡಕಟ್ಟು ಸಮುದಾಯಗಳ ಯುವಜನರು ಶಿಕ್ಷಣ ಪಡೆದು ತಮ್ಮದೇ ಭಾಷೆಯಲ್ಲಿ (ಬೇರೆ ಭಾಷೆಗಳ ಲಿಪಿಯಲ್ಲಿ)  ಸಾಹಿತ್ಯ ರಚನೆ ಮಾಡುತ್ತಿದ್ದಾರೆ
* ಮಹಾರಾಷ್ಟ್ರ, ಒಡಿಶಾ ಮತ್ತು ಛತ್ತೀಸಗಡಗಳ ಗಡಿ ಭಾಗದ ಬುಡಕಟ್ಟು ಜನರ ಭಾಷೆಗಳಾದ ಸಂತಾಲಿ ಮತ್ತು ಗೊಂಡಿಗಳಲ್ಲಿ ಕವನ, ನಾಟಕಗಳು ರಚನೆ ಆಗಿವೆ
* ಈ ಭಾಷೆಯಲ್ಲಿ ರಚನೆಯಾದ ನಾಟಕಗಳನ್ನು ಅದೇ ಸಮುದಾಯದ ಜನರು ರಂಗಕ್ಕೆ ಅಳವಡಿಸಿದ್ದಾರೆ. ಹೀಗಾಗಿ ಈ ಭಾಷೆಗಳು ಮುಖ್ಯವಾಹಿನಿಯಲ್ಲಿ ತಲೆ ಎತ್ತುತ್ತಿವೆ
* ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದ ಕೆಲವು ಬುಡಕಟ್ಟುಗಳ ಭಾಷೆಯಾದ ಭೇಲಿ ಇಂತಹದ್ದೇ ಪ್ರಗತಿ ದಾಖಲಿಸಿದೆ
* ಮಿಜೋರಾಂನ ಮಿಜೊ, ಮೇಘಾಲಯದ ಗಾರೊ ಮತ್ತು ಖಾಸಿ, ತ್ರಿಪುರಾದ ಕೋಟ್ಬರಕ್ ಸಹ ಮುಖ್ಯ ವಾಹಿನಿಯಲ್ಲಿ ತಲೆ ಎತ್ತುತ್ತಿವೆ

780 ಭಾರತದಲ್ಲಿ ಗುರುತಿಸಲಾಗಿರುವ ಭಾಷೆಗಳು

100 ಪ್ರತ್ಯೇಕ ಅಸ್ತಿತ್ವ ಪತ್ತೆಯಾಗದೇ ಉಳಿದಿರಬಹುದಾದ ಭಾರತದ ಭಾಷೆಗಳು

400 ಅಳಿವಿನಂಚಿ ನಲ್ಲಿರುವ ಭಾರತದ ಭಾಷೆಗಳು

6,000 ಜಗತ್ತಿನಲ್ಲಿ ಗುರುತಿಸಿರುವ ಭಾಷೆಗಳು

4,000 ಅಳಿವಿನ ಅಂಚಿನಲ್ಲಿರುವ ವಿಶ್ವದ ಭಾಷೆಗಳ ಸಂಖ್ಯೆ

10% ಅಳಿವಿನ ಅಂಚಿನಲ್ಲಿರುವ ವಿಶ್ವದ ಭಾಷೆಗಳಲ್ಲಿ ಭಾರತೀಯ ಭಾಷೆಗಳ ಪ್ರಮಾಣ

ಕನ್ನಡಕ್ಕೆ ಇಂಗ್ಲಿಷ್‌ನ ಭಯಬೇಡ

* ಕನ್ನಡ, ಹಿಂದಿ, ಮರಾಠಿ, ಬಂಗಾಳಿ, ತೆಲುಗು, ತಮಿಳು, ಪಂಜಾಬಿ ಮತ್ತು ಮಲಯಾಳದಂತಹ ಭಾಷೆಗಳಿಗೆ  ಇಂಗ್ಲಿಷ್‌ನಿಂದ ಅಪಾಯವಿದೆ ಎಂಬುದು ಭ್ರಮೆ ಮಾತ್ರ
*   ಇವುಗಳನ್ನು ಜಗತ್ತಿನ ಅತ್ಯಂತ ದೊಡ್ಡ, ಪ್ರಬಲ ಮತ್ತು ಪ್ರಮುಖ 30 ಭಾಷೆಗಳೆಂದು ಪರಿಗಣಿಸಲಾಗಿದೆ
*   ಇವುಗಳಿಗೆ 1,000 ವರ್ಷಗಳಿಗಿಂತಲೂ ದೀರ್ಘಾವಧಿಯ ಇತಿಹಾಸವಿದೆ
*   ಈ ಭಾಷೆಗಳನ್ನು ಮಾತನಾಡುವ ಜನರ ಸಂಖ್ಯೆ ತಲಾ ಎರಡು ಕೋಟಿಗಿಂತಲೂ ಹೆಚ್ಚು
*   ಈ ಭಾಷೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ರಚನೆಯಾಗಿದೆ
*   ಸಾವಿರಾರು ಕೋಟಿ ಬಂಡವಾಳದ ಸಿನಿಮಾ ಮತ್ತು ಕಿರುತೆರೆ ಉದ್ಯಮಗಳು, ಪತ್ರಿಕೆ ಮತ್ತು ಟಿ.ವಿ ಮಾಧ್ಯಮಗಳು ಇವೆ. ಭಾಷೆಯಿಂದ ಜೀವನೋಪಾಯಕ್ಕೆ ಕೊಡುಗೆ ಇರುವವರೆಗೂ ಆ ಭಾಷೆಗಳಿಗೆ ಅಪಾಯವಿರುವುದಿಲ್ಲ

ಸಂರಕ್ಷಣೆ

‘ದೊಡ್ಡ ಸಮುದಾಯವೊಂದರ ಭಾಷೆ ನಶಿಸುವುದು ಎಂದರೆ ಆ ಸಮುದಾಯವೇ ನಾಶವಾದಂತೆ. ಆ ಸಮುದಾಯದ ಸಂಸ್ಕೃತಿಯೂ ನಾಶವಾದಂತೆ. ಜನ ಸಮುದಾಯವೂ ಒಂದು ರೀತಿಯಲ್ಲಿ ಬಂಡವಾಳ, ಸಂಸ್ಕೃತಿಯೂ ಒಂದು ರೀತಿಯ ಬಂಡವಾಳ. ಅಂತೆಯೇ ಭಾಷೆಯನ್ನು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬಳಸಿಕೊಂಡು ಅದರ ಉತ್ಪಾದಕತೆಯನ್ನು ಹೆಚ್ಚಿಸಿದರೆ ಅದೂ ಸಹ ಒಂದರ್ಥದಲ್ಲಿ ಬಂಡವಾಳವೇ ಆಗುತ್ತದೆ. ಭಾಷಾ ಸಂರಕ್ಷಣೆಯನ್ನು ಇದೇ ರೀತಿ ವಿಶ್ಲೇಷಿಸಬೇಕು’ ಎನ್ನುತ್ತಾರೆ ಗಣೇಶ್ ಎನ್‌. ದೇವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT