ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕಾವ್ಯ ಹಬ್ಬದಲ್ಲಿ ಕಿಂದರಿ ಜೋಗಿಯಾದ ಗುಲ್ಜಾರ್‌

Last Updated 5 ಆಗಸ್ಟ್ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: ಆ ಸಭಾಂಗಣ ಸಾಹಿತ್ಯಾಸಕ್ತರಿಂದ ಕಿಕ್ಕಿರಿದು ತುಂಬಿತ್ತು. ಆಸನ ಸಿಗದೆ ನಿಂತು, ಕುಳಿತಿದ್ದ ಸಭಿಕರಿಗೆ ಕವಿ ಗುಲ್ಜಾರ್‌ ಅವರನ್ನು ನೋಡುವ, ಕವಿತೆಗಳ ವಾಚನವನ್ನು ಕೇಳುವ ತವಕ. ಅವರು ಕಾರ್ಯಕ್ರಮ ಮುಗಿಸಿ ಹೊರ ನಡೆದಾಗ, ಕಿಂದರಿಜೋಗಿಯ ಹಿಂದೆ ಇಲಿಗಳು ಹೋದಂತೆ ಸಭಿಕರು ಅವರ ಹಿಂದೆ ಹೋದರು!

‘ಆಟಗಲಾಟ’ ಸಂಸ್ಥೆಯು ನಗರದ ಲೀಲಾ ಪ್ಯಾಲೇಸ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ಕಾವ್ಯ ಹಬ್ಬ’ದಲ್ಲಿ ಕಂಡುಬಂದ ದೃಶ್ಯಗಳಿವು.

ಕಾವ್ಯ ಹಬ್ಬವು ಬೆಳಿಗ್ಗೆ 10ಕ್ಕೆ ಆರಂಭವಾದರೂ, ಹಬ್ಬಕ್ಕೆ ನಿಜವಾದ ಕಳೆ ಬಂದಿದ್ದು ಮಧ್ಯಾಹ್ನದ ನಂತರ. ಗುಲ್ಜಾರ್‌ ಅವರು 2.50ಕ್ಕೆ ಬರುತ್ತಾರೆ ಎಂದು ಅರಿತಿದ್ದ ಅವರ ಅಭಿಮಾನಿಗಳು ಸಭಾಂಗಣದಲ್ಲಿ ನೆರೆದಿದ್ದರು. ಖಾಲಿ ಇದ್ದ ಕುರ್ಚಿಗಳೆಲ್ಲವೂ ಕ್ಷಣ ಮಾತ್ರದಲ್ಲಿ ಭರ್ತಿಯಾಗಿತ್ತು.

ಶ್ವೇತವರ್ಣದ ಜುಬ್ಬಾ, ಪೈಜಾಮ ಧರಿಸಿದ್ದ ಗುಲ್ಜಾರ್‌ ಮಂದಸ್ಮಿತ ಬೀರುತ್ತಾ ಸಭಾಂಗಣದೊಳಗೆ ಬರುತ್ತಿದ್ದಂತೆ ಸಭಿಕರು ಎದ್ದು ನಿಂತು ಗೌರವ ಸೂಚಿಸಿದರು.

ಗುಲ್ಜಾರ್‌ ಅವರ ಕವಿತೆಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿರುವ ಕವಿ, ರಾಜ್ಯಸಭಾ ಸದಸ್ಯ ಪವನ್‌ ಶರ್ಮಾ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಿತು. ಗುಲ್ಜಾರ್‌ ಅವರು ಕವಿತೆಗಳನ್ನು ವಾಚಿಸಿದರು. ಕೋಮುಗಲಭೆ, ಸ್ವಾತಂತ್ರ್ಯ ಹೋರಾಟ, ರಾಜಕೀಯ ಹಾಗೂ ಸಾಮಾಜಿಕ ವ್ಯವಸ್ಥೆಯ ಕುರಿತು ಬರೆದ ಕವಿತೆಗಳನ್ನು ಅವರು ವಾಚನ ಮಾಡಿದರು. ಅವರು ಹೇಳುತ್ತಿದ್ದ ಪ್ರತಿ ಕವಿತೆಗೂ ಸಭಿಕರು ಜೋರು ಚಪ್ಪಾಳೆ ತಟ್ಟುತ್ತಿದ್ದರು.

ಬಳಿಕ ಮಾತನಾಡಿದ ಅವರು, ‘ಸಾದತ್‌ ಹಸನ್‌ ಮಂಟೊ ಅವರ ಕವಿತೆಗಳು ನನ್ನ ಮೇಲೆ ಗಾಢ ಪರಿಣಾಮ ಬೀರಿವೆ. ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುವವರಿಗೆ ಅವರ ಕವಿತೆಗಳು ಮಾರ್ಗದರ್ಶಕವಾಗಿವೆ’ ಎಂದರು.

‘ಬೆಂಗಳೂರು ನನ್ನ ನೆಚ್ಚಿನ ನಗರ. ಇಲ್ಲಿನ ಹಳೇ ತಾಜ್‌ ವೆಸ್ಟ್‌ಎಂಡ್‌ ಹೋಟೆಲ್‌ನ 50ನೇ ಕೊಠಡಿಯಲ್ಲೇ ಅನೇಕ ಚಲನಚಿತ್ರಗಳಿಗೆ ಸ್ಕ್ರಿಪ್‌ಗಳನ್ನು ಬರೆದಿದ್ದೇನೆ’ ಎಂದು ನೆನಪು ಮಾಡಿಕೊಂಡರು.

ಪವನ್‌ ಶರ್ಮಾ ಮಾತನಾಡಿ, ‘ಸಮಾಜದಲ್ಲಿ ತಾಂಡವಾಡುತ್ತಿರುವ ಸಮಸ್ಯೆಗಳು ಗುಲ್ಜಾರ್‌ ಅವರ ಕಾವ್ಯದ ವಸ್ತುಗಳಾಗಿವೆ. ಕಡಿಮೆ ಪದಗಳಲ್ಲೂ ಗಂಭೀರವಾದ ವಸ್ತು, ವಿಷಯವನ್ನು ಮನಮುಟ್ಟುವಂತೆ ಹೇಳುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗುಲ್ಜಾರ್‌ ಅವರು ಗೋಷ್ಠಿಯನ್ನು ಮುಗಿಸಿ ಸಭಾಂಗಣದಿಂದ ಹೊರಗೆ ಹೋಗುತ್ತಿದ್ದಂತೆ ಅವರನ್ನು ಸಭಿಕರು ಹಿಂಬಾಲಿಸಿದರು. ಅವರ ಕವನ ಸಂಕಲನವನ್ನು ಖರೀದಿಸಿದ್ದ ಸಭಿಕರು, ಅವರ ಸಹಿ ಪಡೆಯಲು ಮುಗಿಬಿದ್ದರು. ಇದರಿಂದ ಮಾರುದ್ದದ ಸಾಲು ನಿರ್ಮಾಣವಾಗಿತ್ತು. ಕಿಂದರಿಜೋಗಿಯ ಹಿಂದೆ ಇಲಿಗಳು ಹೊರಟಂತೆ ಆ ಸಾಲು ಕಾಣುತ್ತಿತ್ತು.

‘ಶಿವಾಸ್‌ ಡ್ರಮ್‌’ ಕಾದಂಬರಿ ಬಿಡುಗಡೆ: ಸಾಹಿತಿ ಚಂದ್ರಶೇಖರ ಕಂಬಾರ ಅವರ ‘ಶಿವನ ಡಂಗುರ’ ಕಾದಂಬರಿಯನ್ನು ಕೃಷ್ಣಾ ಮನವಳ್ಳಿ ಇಂಗ್ಲಿಷ್‌ಗೆ ಅನುವಾದಿಸಿದ ‘ಶಿವಾಸ್‌ ಡ್ರಮ್‌’ ಕೃತಿಯನ್ನು ಅಶೋಕ್‌ ವಾಜಪೇಯಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಕಂಬಾರ ಅವರು, ‘ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಶೇ 90ರಷ್ಟು ರೈತರಿದ್ದರು. ಆದರೆ, ಈಗ ರೈತರು ತಮ್ಮ ವೃತ್ತಿಯಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಸಂಸ್ಕೃತಿಯು ಕಣ್ಮುಂದೆಯೇ ನಾಶವಾಗುತ್ತಿದೆ. ಪ್ರಗತಿಯ ಹೆಸರಿನಲ್ಲಿ ಸಂಸ್ಕೃತಿಯ ಮೇಲೆ ದಾಳಿ ನಡೆಯುತ್ತಿದೆ. ಇದಕ್ಕೆ ಕೊನೆಯ ಎಚ್ಚರಿಕೆ ನೀಡುವ ಉದ್ದೇಶದಿಂದ ಶಿವನ ಡಂಗುರ ಕಾದಂಬರಿ ಬರೆದೆ’ ಎಂದರು.

‘ನಮ್ಮ ಊರಿನ ಪಕ್ಕದಲ್ಲೇ ಗೋಕಾಕ್ ಜಲಪಾತ ಇದೆ. ಅದನ್ನು ಬ್ರಿಟೀಷರು ವಶಪಡಿಸಿಕೊಂಡಿದ್ದರು. ಅವರು ನಡೆಸುತ್ತಿದ್ದ ದೌರ್ಜನ್ಯವನ್ನು ಬಾಲ್ಯದಲ್ಲೇ ಗಮನಿಸಿದ್ದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೇಳತೀನಿ ಕೇಳ ಪದ್ಯವನ್ನು ಬರೆದೆ’ ಎಂದು ತಿಳಿಸಿದರು.

‘ನಾಗರತಿ ಎದರಾಗ ನಿನಗಾಯೊ ಕೊರವಿ’, ‘ಬಿಸಿಲಗುದುರೆಯನೇರಿ ಹೋದ’ ಎಂಬ ಲಾವಣಿಯನ್ನು ಬರೆದ ಸಂದರ್ಭವನ್ನೂ ವಿವರಿಸಿದರು.

ತಮಿಳು ಕವಯತ್ರಿ ಸಲ್ಮಾ, ‘ನಾನು ತಮಿಳು ಭಾಷೆಯಲ್ಲಿ ಬರೆದ ಎರಡು ಕವಿತೆಗಳು ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ. ಆದರೆ, ಅವು ತಮಿಳಿನಲ್ಲಿ ಪ್ರಕಟಗೊಂಡಿಲ್ಲ. ಮಹಿಳೆಯು ಮದ್ಯ, ಗಾಂಜಾ ಸೇವನೆ, ಲೈಂಗಿಕ ಆಸಕ್ತಿ ಹೊಂದಿರುವುದು, ದಕ್ಷಿಣ ಭಾರತ ಹಾಗೂ ಶ್ರೀಲಂಕಾದಲ್ಲಿ ಬಾಲಕಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕುರಿತು ಆ ಕವಿತೆಗಳಲ್ಲಿ ಚಿತ್ರಿಸಿದ್ದೇನೆ. ಹೀಗಾಗಿ ಅವುಗಳನ್ನು ತಮಿಳು ಭಾಷೆಯಲ್ಲಿ ಪ್ರಕಟಿಸಲು ಸಾಧ್ಯವಾಗಿಲ್ಲ’ ಎಂದು ಹೇಳಿದರು.

ನಾನು ಪಿಯುಸಿಯಲ್ಲಿದ್ದಾಗ ಕವಿತೆಗಳನ್ನು ಬರೆದಿದ್ದೆ. ಆದರೆ, ಪದವಿಗೆ ಸೇರಿದ ಬಳಿಕ ಕವನ ಬರೆಯುವುದಕ್ಕೆ ಆಗಿರಲಿಲ್ಲ. ಕಾವ್ಯ ಹಬ್ಬವು ನನ್ನೊಳಗಿನ ಕವಿಯನ್ನು ಜಾಗೃತಗೊಳಿಸಿದೆ.
–ಉಷಾ, ಆಯುರ್ವೇದ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿನಿ, ಐಐಎಎಂಆರ್‌

ನಾನು ಕೇರಳ ರಾಜ್ಯದವನು. ಇಲ್ಲಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಗುಲ್ಜಾರ್‌ ನನ್ನ ನೆಚ್ಚಿನ ಕವಿ. ಅವರನ್ನು ನೋಡುವ ಉದ್ದೇಶದಿಂದ ಬಂದಿದ್ದೇನೆ. ವಿವಿಧ ಗೋಷ್ಠಿಗಳು ಉಪಯುಕ್ತವಾಗಿದ್ದವು.
– ಪ್ರಸಾದ್‌, ಉದ್ಯೋಗಿ

ಪತ್ನಿಯ ಹುಟ್ಟುಹಬ್ಬಕ್ಕೆ ಹೊಸ ರಾಗ ಉಡುಗೊರೆ
‘ಭೀಮಸೇನ ಜೋಷಿ, ರವಿಶಂಕರ್‌, ಎಂ.ಎಸ್‌.ಸುಬ್ಬುಲಕ್ಷ್ಮಿ, ಬಿಸ್ಮಿಲ್ಲಾ ಖಾನ್‌ ಸೇರಿದಂತೆ ದೇಶದ 12 ಸಂಗೀತಗಾರರ ಕುರಿತು ಬರೆದ ಕೃತಿಯೇ ಮಾಸ್ಟರ್‌ ಆನ್‌ ಮಾಸ್ಟರ್‍ಸ್‌. ಇದು ನನ್ನ ಮೊದಲ ಕೃತಿ’ ಎಂದು ಸರೋದ್‌ ವಾದಕ ಉಸ್ತಾದ್‌ ಅಮ್ಜದ್‌ ಅಲಿ ಖಾನ್‌ ತಿಳಿಸಿದರು.

‘ಸಂಗೀತವನ್ನು ಕಲಿಯಬೇಕಾದರೆ ಶಬ್ದ ಅಥವಾ ಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಂಗೀತವನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ. ಕಡಿಮೆ ಗೀತೆಗಳನ್ನು ಹಾಡಿದರೂ ಅವು ಜನರ ಮನಸ್ಸಿನಲ್ಲಿ ಉಳಿಯಬೇಕು’ ಎಂದು ಹೇಳಿದರು.

‘ನನ್ನ ಹೆಂಡತಿಯ ಹುಟ್ಟುಹಬ್ಬಕ್ಕೆ ವಜ್ರದ ನೆಕ್ಲೆಸ್‌ ನೀಡುವಷ್ಟು ನಾನು ಶ್ರೀಮಂತನಲ್ಲ. ಹೀಗಾಗಿ ಹೊಸ ರಾಗವನ್ನು ಕಂಡುಹಿಡಿದು ನನ್ನ ಹೆಂಡತಿಗೆ ಉಡುಗೊರೆ ನೀಡಿದ್ದೆ. ಬಳಿಕ ಆ ರಾಗಕ್ಕೆ ಎಂ.ಎಸ್‌.ಸುಬ್ಬುಲಕ್ಷ್ಮಿ ಅವರ ಹೆಸರನ್ನು ಇಡಲಾಯಿತು. ನಾನು ಚೆನ್ನೈಗೆ ಹೋದಾಗಲೆಲ್ಲಾ ಸುಬ್ಬುಲಕ್ಷ್ಮಿ ಅವರ ಮನೆಗೆ ಹೋಗುತ್ತಿದ್ದೆ. ಅವರು ಫಿಲ್ಟರ್‌ ಕಾಫಿ ನೀಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.

ಕುಚ್‌ ಪ್ಯಾರ್‌, ಕುಚ್‌ ತಡಪ್‌’ ಕೃತಿ ಬಿಡುಗಡೆ
ನಟಿ ಪದ್ಮಾವತಿ ರಾವ್‌ ಅವರ ‘ಕುಚ್‌ ಪ್ಯಾರ್‌, ಕುಚ್‌ ತಡಪ್‌’ ಕೃತಿಯನ್ನು ಸಾಹಿತಿ ಗಿರೀಶ್‌ ಕಾರ್ನಾಡ್‌ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ಪದ್ಮಾವತಿ ಅವರನ್ನು 40 ವರ್ಷಗಳಿಂದ ಬಲ್ಲೆ. ಅವರು ನನ್ನ ನಿರ್ದೇಶನದ ಒಂದಾನೊಂದು ಕಾಲದಲ್ಲಿ ಚಿತ್ರದಲ್ಲೂ ನಟಿಸಿದ್ದರು. ನಾನು ಕವಿತೆಗಳನ್ನು ಬರೆದಿಲ್ಲ. ಆದರೆ, ಪದ್ಮಾವತಿ ನಟಿ, ಲೇಖಕಿ, ಕವಿಯಾಗಿದ್ದಾರೆ. ಅವರ ಮೇಲಿನ ಹೊಟ್ಟೆಕಿಚ್ಚಿನಿಂದಾಗಿ ಇಲ್ಲಿಗೆ ಬಂದಿದ್ದೇನೆ’ ಎಂದು ನಗುತ್ತಾ ಹೇಳಿದರು.

ಪದ್ಮಾವತಿ ಅವರು, ‘ಹಿಂದಿಯಲ್ಲಿ ಬರೆದ ಕವಿತೆಗಳನ್ನು ಇಂಗ್ಲಿಷ್‌ ಹಾಗೂ ರೋಮನ್‌ ಇಂಗ್ಲಿಷ್‌ಗೆ ಅನುವಾದ ಮಾಡಿದ್ದೇನೆ. ವಿಶ್ವವ್ಯಾಪಿ ಓದುಗರನ್ನು ತಲುಪಬೇಕು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಮಾಡಿದ್ದೇನೆ. ಶಾಲೆಯಲ್ಲಿ ಹಿಂದಿಯನ್ನು ಒಂದು ಭಾಷೆಯಾಗಿ ಅಭ್ಯಾಸ ಮಾಡಿದ್ದೆ. ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ ಹಿಂದಿಯನ್ನು ಚೆನ್ನಾಗಿ ಕಲಿತುಕೊಂಡೆ’ ಎಂದು ತಿಳಿಸಿದರು.

‘ನನ್ನ ಅಭಿಯನದ ಮೊದಲ ಚಿತ್ರ ಒಂದಾನೊಂದು ಕಾಲದಲ್ಲಿ. ಪದ್ಮಾವತಿ ಎಂಬುದು ಹಳೆಯ ಹೆಸರಾಗಿದೆ. ಅಕ್ಷತಾ ಅಥವಾ ಪ್ರಮೋದಾ ಹೆಸರು ಇಟ್ಟುಕೊಳ್ಳುವಂತೆ ಗಿರೀಶ್‌ ಕಾರ್ನಾಡ್‌ ಸಲಹೆ ನೀಡಿದ್ದರು. ಅಕ್ಷತಾ ಇರಲಿ ಎಂದೆ. ಅದೇ ಹೆಸರಿನಿಂದ ನಾನು ಪ್ರಸಿದ್ಧಿ ಪಡೆದೆ’ ಎಂದು ನೆನಪು ಮಾಡಿಕೊಂಡರು.

ಎರಡು ದಿನಗಳ ಹಬ್ಬ
ಬೆಂಗಳೂರು ಕಾವ್ಯ ಹಬ್ಬವು ಎರಡನೇ ಬಾರಿ ನಡೆಯುತ್ತಿದೆ. ಎರಡು ದಿನಗಳ ಹಬ್ಬಕ್ಕೆ ಉಸ್ತಾದ್‌ ಅಮ್ಜದ್‌ ಅಲಿಖಾನ್‌, ಅಶೋಕ್‌ ವಾಜಪೇಯಿ ಹಾಗೂ ಚಂದ್ರಶೇಖರ ಕಂಬಾರ ಅವರು ಚಾಲನೆ ನೀಡಿದರು. ಭಾನುವಾರವೂ ವಿವಿಧ ಗೋಷ್ಠಿಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT