ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವಿನ ಅಂಚಿಗೆ ಸಾಗುತ್ತಿರುವ ಭಾಷೆಗಳನ್ನು ಉಳಿಸಿ

Last Updated 10 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಭಾರತದ 400 ಭಾಷೆಗಳು ಮುಂದಿನ 50 ವರ್ಷಗಳಲ್ಲಿ ನಶಿಸಿಹೋಗುವ ಅಪಾಯ ಎದುರಿಸುತ್ತಿವೆ ಎಂಬುದು ವಿಷಾದದ ಸಂಗತಿ. ಬಹು ಭಾಷೆ, ಸಂಸ್ಕೃತಿಯ ಜನರಿರುವ ರಾಷ್ಟ್ರ ಭಾರತ. ಈ ಬಹುತ್ವವೇ ಭಾರತದ ಬಲ. ‘ವಿವಿಧತೆಯಲ್ಲಿ ಏಕತೆ’ ಎಂಬಂಥ ಭಾರತದ ವೈಶಿಷ್ಟ್ಯದ ಪಾಠವನ್ನು ಶಾಲೆಗಳಲ್ಲಿ ನಾವು ಕಲಿತಿದ್ದೇವೆ. ಆದರೆ ಭಾಷೆಗೆ ಸಂಬಂಧಿಸಿದಂತೆ ಈ ಬಹುತ್ವ ದಿನಗಳೆದಂತೆ ಅಳಿವಿನ ಅಂಚಿನತ್ತ ಸಾಗುತ್ತಿರುವುದು ಕಹಿ ವಾಸ್ತವ. 1961ರ ಗಣತಿಯ ಪ್ರಕಾರ, ಭಾರತದಲ್ಲಿ 1652 ತಾಯಿನುಡಿಗಳಿದ್ದವು. ಆದರೆ ನಂತರದ ದಿನಗಳಲ್ಲಿ ಈ ಭಾಷೆಗಳ ಸಂಖ್ಯೆ ಕುಸಿಯುತ್ತಾ ಸಾಗಿದೆ. ಭಾಷೆಗಳು ಅಳಿದು ಹೋಗುತ್ತಿರುವ ಈ ವಿದ್ಯಮಾನಕ್ಕೆ ಸಂಬಂಧಿಸಿದಂತೆ ಉತ್ತರ ಹುಡುಕುವುದಕ್ಕಾಗಿ ಭಾರತದಲ್ಲಿರುವ ಎಲ್ಲಾ ಜೀವಂತ ಭಾಷೆಗಳ ಸಮಗ್ರ ಸಮೀಕ್ಷಾ ಕಾರ್ಯವನ್ನು ಕಳೆದ ದಶಕದಲ್ಲಿ ಕೈಗೊಳ್ಳಲಾಯಿತು. 3000 ಜನರ ತಂಡದೊಂದಿಗೆ ವಿವಿಧ ರಾಜ್ಯಗಳಲ್ಲಿ 2010ರಿಂದ ಕ್ಷೇತ್ರಕಾರ್ಯ ನಡೆಸಲಾಗಿದೆ. ಭಾಷಾಶಾಸ್ತ್ರಜ್ಞ ಗಣೇಶ್ ಎನ್‌. ದೇವಿ ನೇತೃತ್ವದಲ್ಲಿ ನಡೆದ ಈ ಸಮೀಕ್ಷಾ ಕಾರ್ಯದ ವರದಿ, ‘ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ’ (ಪಿಎಲ್‌ಎಸ್‌ಐ) ಕಳೆದ ವಾರ ದೆಹಲಿಯಲ್ಲಿ ಬಿಡುಗಡೆಯಾಗಿದೆ. 11 ಸಂಪುಟಗಳ ಈ ವರದಿ ವಿಶ್ವದಲ್ಲೇ ಅತಿ ದೊಡ್ಡ ಭಾಷಾ ಸಮೀಕ್ಷೆ ಎಂದು ಹೇಳಲಾಗಿದೆ. ಭಾರತದಲ್ಲಿ ಈಗ 780 ಭಾಷೆಗಳನ್ನು ಗುರುತಿಸಲಾಗಿದೆ. ಅಳಿವಿನಂಚಿನಲ್ಲಿರುವ ಭಾಷೆಗಳಲ್ಲಿ ಕರಾವಳಿ ಪ್ರದೇಶಗಳ ಭಾಷೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ ಎಂಬುದನ್ನು ಎತ್ತಿ ಹೇಳಲಾಗಿದೆ. ಆದರೆ ಎರಡು ಕೋಟಿಗೂ ಹೆಚ್ಚು ಜನರು ಮಾತನಾಡುವಂತಹ ಕನ್ನಡ, ಹಿಂದಿ, ಮರಾಠಿ, ಬಂಗಾಳಿ, ತೆಲುಗು, ಪಂಜಾಬಿ, ತಮಿಳು ಹಾಗೂ ಮಲಯಾಳದಂತಹ ಭಾಷೆಗಳಿಗೆ ಇಂಗ್ಲಿಷ್‌ನಿಂದ ಅಪಾಯವಿದೆ ಎಂಬುದು ಭ್ರಮೆ ಎಂದೂ ಈ ವರದಿ ಹೇಳಿರುವುದು ಮುಖ್ಯವಾದದ್ದು. ಸಾವಿರ ವರ್ಷಗಳಿಗೂ ಅಧಿಕ ಇತಿಹಾಸವಿರುವ ಜಗತ್ತಿನ ಅತ್ಯಂತ ಪ್ರಭಾವಿ 30 ಭಾಷೆಗಳಲ್ಲಿ ಇವೂ ಸೇರಿವೆ ಎಂದು ಗುರುತಿಸಲಾಗಿರುವುದೂ ಮಹತ್ವದ್ದು. ಹಾಗೆಯೇ ಕೆಲವು ಬುಡಕಟ್ಟು ಭಾಷೆಗಳು ಬೆಳವಣಿಗೆ ಸಾಧಿಸುತ್ತಿರುವುದನ್ನೂ ಈ ವರದಿ ಗುರುತಿಸಿರುವುದು ಮತ್ತೊಂದು ಆಸಕ್ತಿದಾಯಕ ಸಂಗತಿ. ಅನೇಕ ಬುಡಕಟ್ಟು ಸಮುದಾಯಗಳ ಜನರು ಶಿಕ್ಷಣ ಪಡೆದ ನಂತರ ತಮ್ಮದೇ ಭಾಷೆಗಳಲ್ಲಿ ಸಾಹಿತ್ಯ, ನಾಟಕ ರಚನೆ ಮಾಡುತ್ತಿರುವುದು ಆ ಭಾಷೆಗಳ ಬೆಳವಣಿಗೆಗೆ ಕಾರಣವಾಗುತ್ತಿದೆ. ಗೋಂಡಿ ಭಾಷೆಯಲ್ಲಿ ಸಿನಿಮಾಗಳನ್ನೂ ನಿರ್ಮಿಸಲಾಗುತ್ತಿದೆ. ಭೋಜ್‌ಪುರಿ ಭಾಷೆಯ ಸಿನಿಮೋದ್ಯಮವಂತೂ ದೊಡ್ಡದಾಗಿ ಬೆಳೆಯುತ್ತಿದೆ. ಅದರೊಂದಿಗೆ ಈ ಭಾಷೆಯೂ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಎಂಬುದು ವಿಶೇಷ.

ಜಾಗತಿಕ ಭಾಷೆಗಳ ಸ್ಥಾನಮಾನ ವರದಿಯ ಬಗ್ಗೆಯೂ ಗಣೇಶ್ ಎನ್. ದೇವಿ ಅವರು ಕೆಲಸ ಮಾಡುತ್ತಿದ್ದಾರೆ. ವಿಶ್ವದ ಎಲ್ಲಾ ಭಾಗಗಳಲ್ಲಿಯೂ ಮಾತನಾಡುವ 6000 ಜೀವಂತ ಭಾಷೆಗಳನ್ನು ಈ ಅಧ್ಯಯನ ಒಳಗೊಳ್ಳಲಿದೆ. ಮೊದಲ ಹಂತದಲ್ಲಿ ಆಫ್ರಿಕಾ, ಆಸ್ಟ್ರೇಲಿಯಾ ಭಾಷೆಗಳಿಂದ ಆರಂಭಿಸಿ ಪ್ರತೀ ಭಾಷೆಯ ಭವಿಷ್ಯ, ಅದರ ಉಳಿವಿನ ಸಾಧ್ಯತೆಗಳನ್ನು ಅಳೆಯಲು ಯತ್ನಿಸಲಾಗುತ್ತದೆ. ಜಗತ್ತಿನಲ್ಲಿರುವ ಈ 6000 ಭಾಷೆಗಳ ಪೈಕಿ 4000 ಭಾಷೆಗಳು ಅಳಿವಿನಂಚಿನಲ್ಲಿವೆ. ಇದನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಏಕೆಂದರೆ ವಿವಿಧ ಭಾಷೆಗಳು ವಿವಿಧ ಲಕ್ಷಣಗಳನ್ನು ಹೊಂದಿದ್ದು ಮನುಷ್ಯ ನಾಗರಿಕತೆ ಬೆಳೆದ ಬಗೆಯನ್ನು ಕಟ್ಟಿಕೊಡುತ್ತವೆ. ವಿಜ್ಞಾನ, ಕಲೆ, ಪರಿಸರದ ಅರಿವು, ಪುರಾಣಗಳ ಸೃಷ್ಟಿ ಕುರಿತಾದ ಜ್ಞಾನದ ಆಗರಗಳಾಗಿರುತ್ತವೆ ಈ ಭಾಷೆಗಳು. ಇಂತಹ ಭಾಷೆಗಳ ನಷ್ಟ ಸಮುದಾಯಗಳಿಗಷ್ಟೇ ಅಲ್ಲ ಜಗತ್ತಿನ ಮಾನವ ಜ್ಞಾನದ ನೆಲೆಗಳಿಗೂ ಪೆಟ್ಟು ನೀಡುವಂತಹದ್ದು. ವಸಾಹತುಶಾಹಿ ಆಡಳಿತಗಳು ಹಾಗೂ ಜಾಗತೀಕರಣದ ನಂತರ ಪ್ರಾಂತೀಯ ಭಾಷೆಗಳು ನೆಲೆ ಕಳೆದುಕೊಳ್ಳುವ ಆತಂಕಗಳು ಸೃಷ್ಟಿಯಾಗಿರುವುದು ಸಹಜ. ಆದರೆ ದೊಡ್ಡ ಸಮುದಾಯವೊಂದರ ಭಾಷೆ ನಶಿಸುವುದು ಎಂದರೆ ಆ ಸಮುದಾಯವೇ ನಾಶವಾದಂತೆ. ಆವರಿಸಿಕೊಳ್ಳುವ ವಿಸ್ಮೃತಿಯಲ್ಲಿ ಆ ಸಮುದಾಯದ ಸಂಸ್ಕೃತಿಯೂ ನಾಶವಾಗುತ್ತದೆ. ಆದರೆ ಭಾಷೆಯನ್ನು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಬಳಸಿಕೊಂಡು ಅದರ ಉತ್ಪಾದಕತೆಯನ್ನು ಹೆಚ್ಚಿಸಿದರೆ ಅದು ಮುಂದೆ ದೊಡ್ಡ ಬಂಡವಾಳವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಪಾರಂಪರಿಕ ಜ್ಞಾನಸಂಪತ್ತಿನ ಗಣಿಗಳಾದ ಭಾಷೆಗಳು ಮಾನವನ ಭಾಷಾ ಸಾಮರ್ಥ್ಯಗಳಿಗೂ ಪ್ರತೀಕ ಎಂಬುದನ್ನು ಮರೆಯಲಾಗದು. ಭಾಷೆಗಳು ಅಳಿಯದಂತೆ ಉಳಿಸಿ ಬೆಳೆಸುವ ಕಾರ್ಯವನ್ನು ಬಹು ನೆಲೆಗಳಲ್ಲಿ ಕೈಗೊಳ್ಳುವುದು ಅವಶ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT