ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಎನ್ನುವ ಲೋಕದರ್ಶನ

ಸಿನಿಮಾ ಮನರಂಜನೆಯಷ್ಟೇ ಅಲ್ಲ; ಮನೋವಿಕಾಸದ ಮಾಧ್ಯಮವೂ ಹೌದು
Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ. ಕೆಲವರಿಗೆ ಓದುವುದು, ಕೆಲವರಿಗೆ ಹಾಡುವುದು, ಮತ್ತೆ ಕೆಲವರಿಗೆ ಕುಣಿದು ದಣಿಯುವುದು. ಒಪ್ಪವಾಗಿ ಅಡುಗೆ ಮಾಡುವುದರಲ್ಲೂ ಕೆಲವರಿಗೆ ಖುಷಿಯಿದೆ. ಮನೆಯನ್ನು ಓರಣವಾಗಿ ಇರಿಸಿಕೊಳ್ಳುವುದರಲ್ಲೂ ಕೆಲವರಿಗೆ ಸಂಭ್ರಮವಿದೆ. ಬಂಧುಮಿತ್ರರನ್ನು ಮನೆಗೆ ಆಹ್ವಾನಿಸಿ ಸತ್ಕರಿಸುವುದರಲ್ಲಿ ಕೆಲವರಿಗೆ ನೆಮ್ಮದಿಯಿದೆ. ಕಸೂತಿಯಲ್ಲಿ, ಊರು ಸುತ್ತುವುದರಲ್ಲಿ, ಹರಟುವುದರಲ್ಲಿ, ತೋಟಗಾರಿಕೆಯಲ್ಲಿ – ಹೀಗೆ ಬೇರೆ ಬೇರೆ ಹವ್ಯಾಸಗಳನ್ನು ರೂಢಿಸಿಕೊಂಡು ನೆಮ್ಮದಿ ಕಂಡುಕೊಂಡವರಿದ್ದಾರೆ. ಜಗಳವಾಡುವ ಮೂಲಕವೂ ಮನಸ್ಸನ್ನು ಹಗುರ ಮಾಡಿಕೊಳ್ಳುವವರೂ ಖುಷಿ ಪಡುವವರೂ ಇದ್ದಾರೆ. ನನ್ನ ನೆಮ್ಮದಿ ಇರುವುದು ಸಿನಿಮಾ ನೋಡುವುದರಲ್ಲಿ!

ಸಿನಿಮಾ ನೋಡುವುದೂ ಒಂದು ಹವ್ಯಾಸವೇ ಎಂದು ಕೆಲವರಿಗೆ ಅನ್ನಿಸಬಹುದು. ಈ ತಕರಾರಿನಲ್ಲೂ ಅರ್ಥವಿದೆ. ಸಿನಿಮಾ ನೋಡುವುದನ್ನು ನಾವೆಲ್ಲರೂ ವೃಥಾ ಕಾಲಕ್ಷೇಪದ ಅಥವಾ ಮನರಂಜನೆಯ ರೂಪವಾಗಿ ಕಾಣುವುದೇ ಹೆಚ್ಚು. ಮಕ್ಕಳನ್ನಂತೂ ಸಿನಿಮಾಗಳಿಂದ ದೂರವಿಡುವುದರಲ್ಲಿ ಪೋಷಕರಿಗೆ ಖುಷಿ. ಸಿನಿಮಾ ಬಗ್ಗೆ ನಮ್ಮ ಕೌಟುಂಬಿಕ ಪರಿಸರದಲ್ಲಿ ಒಂದು ಬಗೆಯ ಅಸಡ್ಡೆಯೇ ಇದೆ.

ನನ್ನ ಶಾಲಾ-ಕಾಲೇಜು ದಿನಗಳಲ್ಲಿ ಸಿನಿಮಾ ನೋಡಿದ್ದು ಅಷ್ಟಕ್ಕಷ್ಟೇ. ಸಿನಿಮಾ ನೋಡುವುದರಿಂದ ಯಾರಿಗೆ ಏನು ಲಾಭ? ಅದನ್ನೇನು ಪರೀಕ್ಷೆಯಲ್ಲಿ ಬರೆಯಲು ಸಾಧ್ಯವೇ? ಎಂದೆಲ್ಲ ಅಪ್ಪ ಪ್ರಶ್ನಿಸುತ್ತಿದ್ದರು. ಸಿನಿಮಾ ನೋಡುವ ಮೂಲಕ ಕಾಲವನ್ನೂ ಕಾಸನ್ನೂ ಹಾಳು ಮಾಡಬೇಡ ಎಂದು ಅಮ್ಮ ಸೋಟೆ ತಿವಿಯುತ್ತಿದ್ದಳು. ಈಗ ಅದನ್ನೆಲ್ಲ ನೆನಪಿಸಿಕೊಂಡರೆ ತಮಾಷೆಯೆನ್ನಿಸುತ್ತದೆ. ಮತ್ತೊಂದು ಕೋನದಲ್ಲಿ ಯೋಚಿಸಿದರೆ, ಸಿನಿಮಾ ಕುರಿತ ಅಪ್ಪ-ಅಮ್ಮನ ತಕರಾರಿನಲ್ಲಿ ಮತ್ತೊಂದು ಆತಂಕವೂ ಇತ್ತೆನ್ನಿಸುತ್ತದೆ. ಸಿನಿಮಾ ಎಂದರೆ ಬಹುತೇಕ ಸಂದರ್ಭಗಳಲ್ಲಿ ಪ್ರೇಮಕಥನಗಳ ನಿರೂಪಣೆಯಷ್ಟೇ.

ಓದುವ ವಯಸ್ಸಿನ ಹುಡುಗರು ಪ್ರೇಮದ ಹುಚ್ಚು ಹಿಡಿಸಿಕೊಂಡು ಕ್ರಾಂತಿಕಾರರಂತೆ ಪೋಸು ಕೊಡುವುದು ಜನಪ್ರಿಯ ಸಿನಿಮಾಕಥನಗಳಲ್ಲೊಂದು. ‘ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು’ ಎನ್ನುವ ಸಿನಿಮಾ ಉಮೇದು ನಿಜಜೀವನದಲ್ಲೂ ಕಾಣಿಸಿಕೊಂಡರೆ? ಬೆಳ್ಳಿತೆರೆಯ ಪ್ರೇಮಕಥನಗಳನ್ನು ನೋಡಿ ಮಗಳು ಕೈತಪ್ಪಿಹೋದಾಳೆಂದು ಹೆತ್ತವರು ಅನುಮಾನಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ‘ಇಂಥ ಅನುಮಾನ ನಿನಗೂ ಇತ್ತಾ?’ ಎಂದು ಅಪ್ಪನನ್ನು ಕೇಳೋಣವೆಂದರೆ, ಅವರು ಈಗ ನೆನಪುಗಳ ರೀಲುಗಳಾಗಿಯಷ್ಟೇ ಉಳಿದಿದ್ದಾರೆ. ಇಂಥದ್ದನ್ನೆಲ್ಲ ಕೇಳಿದರೆ – ‘ನಿನಗೆ ಮಾಡಲಿಕ್ಕೆ ಕೆಲಸವಿಲ್ಲ’ ಎಂದು ಅಮ್ಮ ನಿರುತ್ಸಾಹಗೊಳಿಸುತ್ತಾಳೆ.

ಬದುಕನ್ನು ನೋಡುವ ಕ್ರಮವನ್ನು ಸಿನಿಮಾ ಕಲಿಸುತ್ತದೆ ಎಂದು ಮೊದಲ ಬಾರಿಗೆ ಅನ್ನಿಸಿದ್ದು ರಾಜಕುಮಾರ್‍ – ಸರೋಜಾದೇವಿ ನಟನೆಯ ‘ಭಾಗ್ಯವಂತರು’ ಸಿನಿಮಾವನ್ನು ನೋಡಿದಾಗ. ಶಿಸ್ತಿನ ಸಿಪಾಯಿಯಂಥ ಅಪ್ಪ, ಅವನ ಶಿಸ್ತಿನಲ್ಲಿ ಉಸಿರುಗಟ್ಟುವ ಮಕ್ಕಳು, ಇಡೀ ಮನೆಯನ್ನು ತನ್ನ ವಾತ್ಸಲ್ಯದಲ್ಲಿ ಪೊರೆಯುವ ಅಮ್ಮ! ‘ಭಾಗ್ಯವಂತರು ನಾವು ಭಾಗ್ಯವಂತರು’ ಎನ್ನುವ ಹಾಡು ನಮ್ಮ ಕುಟುಂಬಕ್ಕೂ ಅನ್ವಯಿಸಿಕೊಂಡು ನೋಡಿದರೆ ಕಣ್ಣಂಚಲ್ಲಿ ನೀರು ತುಳುಕುತ್ತದೆ.

‘ಜೀವನಚೈತ್ರ’ ಸಿನಿಮಾ ನೋಡಿದಾಗ ಕೂಡ ಹೀಗೆಯೇ ಅನ್ನಿಸಿತ್ತು. ಅಪ್ಪನ ಬಾಜೂಗೆ ಕೂತು ‘ಜೀವನಚೈತ್ರ’ ನೋಡಿದ ಕ್ಷಣಗಳು ಈಗಲೂ ನೆನಪಿವೆ. ಸಿನಿಮಾದಲ್ಲಿ ಅಪ್ಪನ ಆದರ್ಶಗಳಿಗೆ ವಿರುದ್ಧವಾಗಿ ಮಕ್ಕಳು ನಡೆದುಕೊಳ್ಳುವ ದೃಶ್ಯವೊಂದಿದೆ. ಅಪ್ಪನ ಜೊತೆಗೇ ಕೂತು ಆ ಸಿನಿಮಾ ನೋಡುವಾಗ, ಅಲ್ಲಿನ ಮಕ್ಕಳ ಜಾಗದಲ್ಲಿ ನನ್ನನ್ನು ಕಲ್ಪಿಸಿಕೊಂಡು ಒಂದು ಬಗೆಯ ಪಾಪಪ್ರಜ್ಞೆಯಲ್ಲಿ ನರಳಿದ್ದಿದೆ. ಹೀಗೆ ನಮ್ಮ ಬದುಕಿನ ಅವಲೋಕನಕ್ಕೆ, ವಿಮರ್ಶೆಗೆ ಒಂದು ಸಿನಿಮಾ ಒತ್ತಾಯಿಸುವುದಾದರೆ – ಅದಕ್ಕಿಂಥ ಮಿಗಿಲಾದ ಲಾಭ ಇನ್ನೇನಿದೆ?

ಸಿನಿಮಾ ನೋಡುವುದು ಒಂದು ಒಳ‍್ಳೆಯ ಹವ್ಯಾಸ ಎಂದು ನನಗನ್ನಿಸಿದೆ. ಈಗ ಕೌಟುಂಬಿಕ ಕಥನಗಳಿಂದ ವಿಶ್ವ ಸಿನಿಮಾವರೆಗೆ ನನ್ನ ‘ನೋಡುವ ಆಸಕ್ತಿ’ ಬೆಳೆದಿದೆ. ಸಿನಿಮಾ ನನ್ನ ತಿಳಿವಳಿಕೆಯ ದಿಗಂತವನ್ನು ವಿಸ್ತರಿಸುತ್ತಲೇ ಇದೆ. ಮನೆಯ ಪುಟ್ಟ ಪರದೆಯ ಎದುರು ಕೂತು, ಹಲವು ಸಂಸ್ಕೃತಿಗಳನ್ನು ಸಮುದಾಯಗಳಿಗೆ ಮುಖಾಮುಖಿಯಾಗುವುದು ಅದ್ಭುತ ಅನುಭವ. ‘ಬಾಲ ನಾಗಮ್ಮ’ ಸಿನಿಮಾದಲ್ಲಿ ಮಾಂತ್ರಿಕನೊಬ್ಬನ ಪಾತ್ರವಿದೆ. ಅವನು ತನ್ನ ಬಳಿಯ ಜಾದೂಕನ್ನಡಿಯಲ್ಲಿ ತಾನು ಬಯಸಿದ್ದೆಲ್ಲವನ್ನೂ ಕಾಣುತ್ತಾನೆ. ಅಂಥದೇ ಕನ್ನಡಿ, ಸಿನಿಮಾ ಮೂಲಕ ಈಗ ನಮ್ಮೆಲ್ಲರಿಗೆ ಒದಗಿದೆ ಎಂದು ನನಗನಿಸುತ್ತದೆ.

ಬಹುಪಾಲು ಹೆಣ್ಣುಮಕ್ಕಳು ಧಾರಾವಾಹಿಪ್ರಿಯರು. ಕಿರುತೆರೆಗಳ ಕಥನಗಳು ನಮ್ಮ ಗೃಹಿಣಿಯರಿಗೆ ಅವರ ದೈನಿಕದ ಯಾವುದೋ ಅಪೂರ್ಣ ತಂತೊಂದನ್ನು ತುಂಬಿಕೊಡುತ್ತಿವೆ ಎನ್ನಿಸುತ್ತದೆ. ಟೀವಿ ನೋಡುವುದೂ ಒಂದು ಹವ್ಯಾಸ ಎನ್ನಬಹುದು. ಆದರೆ, ಟೀವಿಯಲ್ಲಿ ಧಾರಾವಾಹಿಗಳ ಬದಲು ಸಿನಿಮಾಗಳನ್ನು ನೋಡುವಂತಾದರೆ ಈ ಹವ್ಯಾಸ ಅರ್ಥಪೂರ್ಣವಾಗಿ ಪರಿಣಮಿಸಬಹುದು.

ಸಂಗೀತ, ನೃತ್ಯ, ಬರವಣಿಗೆ – ಇವೆಲ್ಲ ಹವ್ಯಾಸಗಳನ್ನು ರೂಢಿಸಿಕೊಳ್ಳಲಿಕ್ಕೆ ಒಂದುಮಟ್ಟದ ಬೌದ್ಧಿಕ ಪರಿಶ್ರಮ ಹಾಗೂ ಸಿದ್ಧತೆ ಬೇಕು. ಆದರೆ, ಸಿನಿಮಾದ ಒಡನಾಟ ಷರತ್ತುರಹಿತವಾದುದು. ನಾವೊಮ್ಮೆ ಸಿನಿಮಾಜಗತ್ತಿಗೆ ನಮ್ಮನ್ನು ಒಡ್ಡಿಕೊಂಡರೆ ಸಾಕು, ನಂತರದಲ್ಲಿ ಚಲನಚಿತ್ರಗಳೇ ನಮ್ಮನ್ನು ನೋಡಿಸಿಕೊಳ್ಳುತ್ತವೆ.

ಸಿನಿಮಾ ಮಾಧ್ಯಮದ ಬಗ್ಗೆ ಲಘುವಾಗಿ ಮಾತನಾಡುವವರ ಬಗ್ಗೆ ನನಗೆ ವಿಷಾದವಿದೆ. ಎಲ್ಲ ವರ್ಗದ ಜನರನ್ನೂ ತಲುಪಬಲ್ಲ ಶಕ್ತಿಯಿರುವುದು ಸಿನಿಮಾಕ್ಕೆ ಮಾತ್ರ. ಅದನ್ನು ಹವ್ಯಾಸವಾಗಿ ರೂಢಿಸಿಕೊಂಡಿರುವ ಬಗ್ಗೆ ನನಗೆ ಹೆಮ್ಮೆಯಿದೆ. ಸಿನಿಮಾ ಎನ್ನುವುದು ನನ್ನ ಭಾವಜಗತ್ತನ್ನು ಚೆಲುವುಗೊಳಿಸಿದೆ; ಲೋಕವನ್ನು ನೋಡುವ ನನ್ನ ಕಣ್ಣಿಗೆ ವಿಶೇಷ ಹೊಳಪನ್ನು ನೀಡಿದೆ.

ಥ್ಯಾಂಕ್ಯೂ ಸಿನಿಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT