ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋತು ಗೆದ್ದ ಅಹ್ಮದ್ ಪಟೇಲ್

Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮದ್ದಾನೆಗಳ ಈ ಗುದ್ದಾಟವನ್ನು ದೇಶವೇ ಹೈರಾಣಾಗಿ ನೋಡಿತು. ಸೋಲಿನ ದವಡೆಯಿಂದ ಗೆಲುವನ್ನು ಕಿತ್ತುಕೊಂಡರು ಅಹ್ಮದ್ ಪಟೇಲ್. ಗುಜರಾತ್‌ನಿಂದ ರಾಜ್ಯಸಭೆಗೆ ಜರುಗಿದ ಈ ಚುನಾವಣೆ ವ್ಯಕ್ತಿಗತ ಹಗೆಗಳ ಹಣಾಹಣಿಯಾಯಿತು. ವಿಷಮ ಸುಳಿಯ ಈ ತಿರುಗಣಿಗೆ ದೂರದ ಕರ್ನಾಟಕದ ಮಂತ್ರಿ ಡಿ.ಕೆ.ಶಿವಕುಮಾರ್ ಕೂಡ ಸಿಕ್ಕಿಕೊಂಡು ನಜ್ಜುಗುಜ್ಜಾದರು.

ಪಟೇಲ್ ಏಳು ಬೀಳನ್ನು ಬಸವಳಿದು ನೆಲಕಚ್ಚಿರುವ ಕಾಂಗ್ರೆಸ್ಸಿನ ಪ್ರತಿಷ್ಠೆಗೆ ಗಂಟು ಹಾಕಿದವು ಸಮೂಹ ಮಾಧ್ಯಮಗಳು. ಜನತಂತ್ರವನ್ನು ಮಣ್ಣು ಮುಕ್ಕಿಸುವ ಲಜ್ಜೆಗೇಡಿನ ಹುನ್ನಾರಗಳು, ದುಷ್ಟ ಒಳಸುಳಿಗಳು ಬಟಾಬಯಲಾದ ಮತ್ತೊಂದು ಚುನಾವಣೆಯಿದು. ಪಕ್ಷರಾಜಕಾರಣ ನೈತಿಕ ಮೌಲ್ಯಗಳು ಪಾತಾಳಕ್ಕೆ ಕುಸಿದ ಈ ಉದಾಹರಣೆ ಮೊದಲನೆಯದೇನೂ ಅಲ್ಲ, ಕಡೆಯದೂ ಆಗಿರುವುದಿಲ್ಲ.

ಚುನಾವಣಾ ರಾಜಕಾರಣದ ತಂತ್ರಗಳು, ಗುಟ್ಟುಗಳು ಒಳಪಟ್ಟುಗಳಲ್ಲಿ ನಲವತ್ತು ವರ್ಷಗಳ ಕಾಲ ಪಳಗಿದ ಪಟು ಅಹ್ಮದ್ ಪಟೇಲ್. ಅಂತಹ ಅವರೇ ಅಮಿತ್ ಷಾ ನೀಡಿದ ಒಳಹೊಡೆತಗಳಿಗೆ ಸುಸ್ತಾಗಿ ಸೋಲಿನ ಕರಿ ನೆರಳಿಗೆ ಸರಿವ ಸ್ಥಿತಿ ಒದಗಿತ್ತು.

ಕಾಂಗ್ರೆಸ್ ಅಧಿಕಾರದ ದಿನಗಳಲ್ಲಿ ಪ್ರತಿಪಕ್ಷಗಳ ಬೆನ್ನುಮೂಳೆ ಮುರಿಯುವಂತಹ ಇಂತಹುದೇ ಅದೆಷ್ಟೋ ರಕ್ತರಹಿತ ರಾಜಕೀಯ ಬುಡಮೇಲು ಕಾರ್ಯಾಚರಣೆಗಳು ನಡೆದಿದ್ದವು. ಪಕ್ಷವನ್ನು ಬಲಪಡಿಸುವ ಹೆಸರಿನಲ್ಲಿ ಕಾಂಗ್ರೆಸ್ ಹಸ್ತ ಮಸೆದು ಹೊಸೆದ ಈ ಪ್ರಹಸನಗಳ ಹಿಂದೆ ಮತ್ತೊಂದು ಹಸ್ತಕ್ಷೇಪವಿತ್ತು. ಕಾಂಗ್ರೆಸ್ಸಿಗರು ಕೂಡ ಅಹ್ಮದ್ ಪಟೇಲ್ ಎಂಬ ಈ ಹಸ್ತಕ್ಷೇಪದ ಹೆಸರನ್ನು ಗಟ್ಟಿಯಾಗಿ ಹೇಳಲು ಅಂಜುತ್ತಿದ್ದರು.

ಗುಜರಾತಿನ ಪೊಲೀಸರು ಸೊಹ್ರಾಬುದ್ದೀನ್ ಎಂಬ ರೌಡಿಯನ್ನು ಹುಸಿ ಚಕಮಕಿಯಲ್ಲಿ ಕೊಂದ ಪ್ರಕರಣ. ಆ ರಾಜ್ಯದ ಗೃಹಮಂತ್ರಿಯಾಗಿದ್ದ ಅಮಿತ್ ಷಾ ಆ ನಂತರ 2010ರಲ್ಲಿ ಜೈಲು ಕಂಬಿ ಎಣಿಸ ಬೇಕಾಯಿತು. 2012ರ ತನಕ ಗುಜರಾತಿಗೆ ಕಾಲಿಡದಂತೆ ಸುಪ್ರೀಂಕೋರ್ಟ್‌ನಿಂದ ಗಡೀಪಾರಿನ ಶಿಕ್ಷೆಗೂ ಗುರಿಯಾಗ ಬೇಕಾಯಿತು.

ಸಚಿವ ಪದವಿಗಳನ್ನು ತೊರೆಯಬೇಕಾಗಿ ಬಂದಿತ್ತು. ಯುಪಿಎ ಸರ್ಕಾರದ ಅಧೀನದ ಸಿಬಿಐನ ಈ ಕ್ರಮಗಳ ಹಿಂದೆ ಷಾ ಮತ್ತು ಮೋದಿ ಜೋಡಿ ಕಂಡ ಕೈವಾಡ ಅಹ್ಮದ್ ಪಟೇಲರದು. ಷಾ ಮನಸಿನಲ್ಲಿ ಬದ್ಧ ದ್ವೇಷದ ಬೀಜಾಂಕುರವಾಗಿತ್ತು. ಕೇಂದ್ರ ಸರ್ಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಂತರದ ಅತ್ಯಂತ ಪ್ರಭಾವಿ ವ್ಯಕ್ತಿ ಯಾರಾದರೂ ಇದ್ದರೆ ಅದು ಖುದ್ದು ಅಮಿತ್ ಷಾ ಅವರೇ.

ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ ಅವರ ವಿಶ್ವಾಸವನ್ನು ಗಳಿಸಿದ್ದರೂ, ಸಚಿವ ಪದವಿ ಹುದ್ದೆಗಳನ್ನು ತಿರಸ್ಕರಿಸಿ ತೆರೆಮರೆಯ ಪಾತ್ರವನ್ನೇ ಬಯಸಿದವರು ಪಟೇಲ್. ಪ್ರಜ್ಞಾಪೂರ್ವಕವಾಗಿ ಪ್ರಚಾರದಿಂದ ದೂರ ಉಳಿದವರು. ರಾಜೀವ್ ಗಾಂಧಿ ಮರಣದ ನಂತರ ಕಾಂಗ್ರೆಸ್ ಪಕ್ಷ ಮತ್ತು ಸೋನಿಯಾ ಗಾಂಧಿ ನಡುವಣ ಸೇತುವೆಯಾಗಿ ಕೆಲಸ ಮಾಡಿದವರು. ಸೋನಿಯಾ ಬಗೆಗೆ ಯಾವ ಕಾಲಕ್ಕೂ ಕುಂದದ ಕಡು ನಿಷ್ಠೆ ಉಳಿಸಿಕೊಂಡು ವಿಶ್ವಾಸ ಗಳಿಸಿಕೊಂಡವರು.

ಸೋನಿಯಾ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟ ನಂತರ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕಣ್ಣು ಕಿವಿಯಾದವರು. ಅವರ ಎಲ್ಲ ರಾಜಕೀಯ ನಡೆ ನುಡಿಗಳು ಸೋನಿಯಾ ಸಮ್ಮತಿಯಿಂದಲೇ ನಡೆಯುತ್ತವೆ ಎಂದು ಕಾಂಗ್ರೆಸ್ಸಿಗರು ನಂಬಿದ್ದ ಕಾಲವೊಂದಿತ್ತು. ತಮ್ಮನ್ನು ಸೆರೆಮನೆ ಮತ್ತು ಗಡೀಪಾರಿನ ಅಪಮಾನಕ್ಕೆ ನೂಕಿದ್ದ ಕಾಂಗ್ರೆಸ್ ಪಕ್ಷ, ಆ ಪಕ್ಷದ ಪ್ರಥಮ ಕುಟುಂಬಕ್ಕೆ ಬಲು ಹತ್ತಿರವಿದ್ದ ಪಟೇಲ್ ಅವರನ್ನು ಹಣಿಯುವ ಸೇಡಿನ ಬೆಂಕಿಯನ್ನು ಆರದಂತೆ ಕಾಪಾಡಿಕೊಂಡು ಬಂದಿದ್ದರು ಅಮಿತ್ ಷಾ. ಹೊಟ್ಟೆಯ ಬೆಂಕಿ ಕಾರಲು ರಾಜ್ಯಸಭಾ ಚುನಾವಣೆ ಸದವಕಾಶ ಒದಗಿಸಿತ್ತು.

ಈ ಹಿಂದೆ ಅಹ್ಮದ್ ಪಟೇಲ್ ಇದೇ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಆಗಿದ್ದರು. ಆಗ ನರೇಂದ್ರ ಮೋದಿಯವರೇ ಅಲ್ಲಿನ ಮುಖ್ಯಮಂತ್ರಿಯಾಗಿದ್ದರು. ಪಟೇಲ್ ವಿರುದ್ಧ ಬಿಜೆಪಿ ಹುರಿಯಾಳನ್ನೇ ಕಣಕ್ಕೆ ಇಳಿಸಿರಲಿಲ್ಲ ಮೋದಿ. ಹತ್ತಿ ರಫ್ತಿನ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ರದ್ದು ಪಡಿಸುವಂತೆ ಮೋದಿಯವರ ನೆರವಿಗೆ ಧಾವಿಸಿದ್ದರು ಅಹ್ಮದ್ ಪಟೇಲ್. ಅಹ್ಮದ್ ಪಟೇಲರು ಕಾಂಗ್ರೆಸ್ ಪಕ್ಷದಲ್ಲಿರುವ ತಮ್ಮ ಸನ್ಮಿತ್ರ ಎಂದು ಮೋದಿಯವರು ಕರೆಯುತ್ತಿದ್ದರು.

‘ದೇಶವನ್ನು ಒಡೆಯಲು ಮುಂದಾಗಿರುವ ವ್ಯಕ್ತಿಯ ಜೊತೆ ಯಾವ ಸ್ನೇಹ ಸಾಮೀಪ್ಯವೂ ನನಗಿಲ್ಲ. ಮೋದಿ ಮುಖ್ಯಮಂತ್ರಿಯಾದ ನಂತರ ಒಮ್ಮೆಯಾದರೂ ಅವರ ಮನೆ ಅಥವಾ ಕಚೇರಿಗೆ ಹೋಗಿದ್ದೆನೆಂದು ಯಾರಾದರೂ ರುಜುವಾತು ಮಾಡಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ. 1980ರಲ್ಲಿ ಒಮ್ಮೆ ಮೋದಿಯವರ ಜೊತೆ ಊಟ ಮಾಡಿದ್ದುಂಟು. ಆದರೆ ಆ ಸಂಗತಿ ರಾಜೀವಗಾಂಧಿ ಅವರಿಗೆ ಗೊತ್ತಿತ್ತು’ ಎಂದು ಪಟೇಲ್ ಸವಾಲು ಹಾಕಿದ್ದುಂಟು.

ಗುಜರಾತಿನ ಹಿಂದೂ-ಮುಸ್ಲಿಂ ಧ್ರುವೀಕರಣ ರಾಜಕಾರಣದಲ್ಲಿ ಮೋದಿ-ಪಟೇಲ್ ಒಬ್ಬರಿಗೊಬ್ಬರು ನೆರವಾಗಿರುವುದು ಉಂಟು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ವಿಧಾನಸಭಾ ಚುನಾವಣೆಗಳು ಬಂದಾಗಲೆಲ್ಲ ಮೋದಿಯವರು ಕಾಂಗ್ರೆಸ್ಸಿನ ಮೇಲೆ ದಾಳಿ ನಡೆಸಿ ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಅಹ್ಮದ್ ಪಟೇಲ್ ಅಲ್ಲವೇನು ಎಂದು ಮೂದಲಿಸುತ್ತಿದ್ದರು.

ಕಾಂಗ್ರೆಸ್ ಪಕ್ಷ ಪಟೇಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕಾಣಬಯಸುತ್ತಿತ್ತೋ ಇಲ್ಲವೋ ತಿಳಿಯದು. ಆದರೆ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ರಾಜಕೀಯ ಮಹತ್ವವನ್ನು ಮೋದಿ, ಪಟೇಲ್ ಅವರಿಗೆ ನೀಡುತ್ತಿದ್ದರು. ‘ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಲ್ಲ ನಾನು. ಅಧಿಕಾರ ರಾಜಕಾರಣದಿಂದ ನಾನು ದೂರ’ ಎಂದು ಸ್ಪಷ್ಟೀಕರಣ ಕೊಡುತ್ತಿದ್ದರು ಪಟೇಲ್. ಆದರೆ ಇಬ್ಬರ ನಡುವೆ ಕಣ್ಣಿಗೆ ಕಾಣದ ತಾಳಮೇಳವೊಂದು ಇದ್ದದ್ದು ನಿಜ ಎನ್ನಲಾಗಿದೆ.

ಪಟೇಲ್‌, 24ರ ಕಿರಿ ವಯಸ್ಸಿನಲ್ಲೇ ಭರೂಚ್ ಕ್ಷೇತ್ರದಿಂದ 60 ಸಾವಿರ ಮತಗಳ ಅಂತರದಿಂದ ಲೋಕಸಭೆಗೆ ಗೆದ್ದು ಬಂದು ಇಂದಿರಾಗಾಂಧಿ ಅವರ ಗಮನ ಸೆಳೆದಿದ್ದವರು. ನಾಲ್ಕನೆಯ ಸಲ ರಾಜ್ಯಸಭೆಯನ್ನು ಪ್ರವೇಶಿಸುತ್ತಿರುವ ಅವರು ಮೂರು ಬಾರಿ ಲೋಕಸಭೆಗೆ ಆಯ್ಕೆಯಾದ ಸಂಗತಿ ಹೆಚ್ಚು ಮಂದಿಗೆ ಗೊತ್ತಿಲ್ಲ.

ವಿವಾದಗಳಿಂದ ಸದಾ ದೂರ ಉಳಿಯುತ್ತ ಬಂದಿರುವ ಪಟೇಲ್ ಅವರಿಗೆ ಇತ್ತೀಚೆಗೆ ಮೆತ್ತಿಕೊಂಡ ಕಳಂಕ ಯುಪಿಎ ಸರ್ಕಾರದ ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಅವ್ಯವಹಾರ ಆರೋಪ. ರಾಜಕಾರಣವೇ ವೃತ್ತಿ ಮತ್ತು ಪ್ರವೃತ್ತಿಯಾಗಿರುವ ಪಟೇಲ್, ಆಗಾಗ ಸಂಗೀತ ಕೇಳುವುದುಂಟು.

ಪತ್ನಿ ಮೆಮೂನಾ ಅಹ್ಮದ್ ಭರೂಚ್‌ನ ಪೀರಾಮನ್ ಗ್ರಾಮದ ಜಮೀನ್ದಾರರ ಕುಟುಂಬದಿಂದ ಬಂದವರು. ಸಮೃದ್ಧಿಯನ್ನೂ ಅಹ್ಮದ್ ಕುಟುಂಬಕ್ಕೆ ತಂದವರು. ಮಗ ಫೈಸಲ್ ಪಟೇಲ್, ಮಗಳು ಮುಮ್ತಾಜ್ ಪಟೇಲ್. ರಾಜಕಾರಣದಲ್ಲಿ ಆಸಕ್ತಿಯುಳ್ಳ ಫೈಸಲ್ ಪಟೇಲ್ ಅವರನ್ನು ತಂದೆಯೇ ಈವರೆಗೆ ತಡೆದಿರಿಸಿದ್ದಾರೆ.

ಅರವತ್ತೇಳು ವರ್ಷದ ಅಹ್ಮದ್ ಪಟೇಲ್ ಮಿತಭಾಷಿ. ಸದಾ ಬಿಳಿಯ ಕುರ್ತಾ ಮತ್ತು ಪೈಜಾಮದ ಸರಳ ದಿರಿಸು. ಗುಂಪಿನಲ್ಲಿ ಕರಗಿ ಹೋಗುವಂತೆ ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡು ಬಂದಿರುವ ವ್ಯಕ್ತಿತ್ವ. ಪಕ್ಷದ ಮುಂದಿನ ಪೀಳಿಗೆಯ ನಾಯಕರಲ್ಲಿ ಒಬ್ಬರೆಂದು ಖುದ್ದು ರಾಜೀವ್ ಗಾಂಧಿಯವರೇ ಆರಿಸಿ ಬೆಳೆಸಿದ ವ್ಯಕ್ತಿ. ಸಚಿವ ಪದವಿ ಒಲ್ಲೆ ಎನ್ನುವ ಪಟೇಲ್ ಅವರನ್ನು ತಮ್ಮ ಸಂಸದೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡರು ರಾಜೀವ್. ಆ ನಂತರ, ಸುಮಾರು ಎರಡು ದಶಕಗಳಿಂದ ಸೋನಿಯಾಗಾಂಧಿ ಅವರಿಗೆ ರಾಜಕೀಯ ಕಾರ್ಯದರ್ಶಿ.

ಸೋನಿಯಾ- ರಾಹುಲ್- ಪ್ರಿಯಾಂಕ ನಂತರ ಕಾಂಗ್ರೆಸ್ ಪಕ್ಷದೊಳಗಿನ ಅತ್ಯಂತ ಪ್ರಭಾವಿ ನಾಯಕನೆಂದು ಎಣಿಸಲಾದವರು. ಎಲ್ಲ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸ್ನೇಹ ಸಂಪರ್ಕ ಹೊಂದಿದವರು.

ಯುಪಿಎ ಸರ್ಕಾರ ಅಧಿಕಾರ ನಡೆಸಿದ್ದ ಹತ್ತು ವರ್ಷಗಳ ಕಾಲ ತೆರೆಮರೆಯ ಅಧಿಕಾರ ಚಲಾಯಿಸಿದ್ದು ಸುಳ್ಳಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿ ಮುಂಬೆಳಕಿಗೆ ಬರುತ್ತಿದ್ದಂತೆ ಪಟೇಲ್ ವರ್ಚಸ್ಸಿಗೆ ಗ್ರಹಣ ಹಿಡಿಯಲಾರಂಭಿಸಿದ್ದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪಟೇಲ್ ಅವರನ್ನು ಕೇಳಿ ಎನ್ನುತ್ತಿದ್ದ ಕಾಂಗ್ರೆಸ್ ಅಧ್ಯಕ್ಷೆಯ ರಾಗ ಬದಲಾಗಿ, ‘ರಾಹುಲ್ ಅವರೊಡನೆ ಸಮಾಲೋಚಿಸಿ’ ಎನ್ನಲಾರಂಭಿಸಿದ್ದರು. ನಿಧಾನಕ್ಕೆ, ಆದರೆ ನಿಶ್ಚಿತವಾಗಿ ಪಟೇಲ್ ಮೂಲೆಗುಂಪಾಗತೊಡಗಿದ್ದು ನಿಜ.

ಆದರೆ ಗುಜರಾತ್ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ದಕ್ಕಿಸಿಕೊಂಡ ಹೊಸ ಗೆಲುವಿನಿಂದ ಕಾಂಗ್ರೆಸ್ ಪಕ್ಷದಲ್ಲಿ ಪಟೇಲ್ ಸ್ಥಾನ ಇನ್ನಷ್ಟು ಕಾಲ ಗಟ್ಟಿ ಎನ್ನಲು ರಾಜಕೀಯ ಪಾಂಡಿತ್ಯದ ಅಗತ್ಯವಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT