ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಧವನ್‌–ರಾಹುಲ್‌ ಬಲ

ಮೊದಲ ವಿಕೆಟ್‌ಗೆ 188 ರನ್ ಸೇರಿಸಿದ ಆರಂಭಿಕ ಜೋಡಿ; ಪೂಜಾರ ಬ್ಯಾಟಿಂಗ್ ವೈಫಲ್ಯ
Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕ್ಯಾಂಡಿ: ಶ್ರೀಲಂಕಾ ನೆಲದಲ್ಲಿ ಐತಿಹಾಸಿಕ ಗೆಲುವಿನ ಕನಸಿನೊಂದಿಗೆ ಇಲ್ಲಿನ ಪಲ್ಲೆಕೆಲೆ ಕ್ರೀಡಾಂಗಣಕ್ಕೆ ಬಂದಿರುವ ಭಾರತ ತಂಡದವರರು  ಶನಿವಾರ ಆರಂಭವಾದ ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಆರಂಭ ಕಂಡಿದೆ.

ಮೊದಲ ದಿನ ವಿರಾಟ್ ಕೊಹ್ಲಿ ಬಳಗದವರು ಉತ್ತಮ ಬ್ಯಾಟಿಂಗ್ ಸಾಮರ್ಥ್ಯ ತೋರಿದ್ದು ಭಾರಿ ಮೊತ್ತ ಗಳಿಸುವತ್ತ ಹೆಜ್ಜೆ ಹಾಕಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ ಭಾರತ ವಿದೇಶಿ ನೆಲದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಬಾರಿ ‘ಕ್ಲೀನ್‌ ಸ್ವೀಪ್‌’ ಮಾಡಿದ ಸಾಧನೆಗೆ ಪಾತ್ರವಾಗಲಿದೆ.

ಆರಂಭಿಕ ಜೋಡಿ ಎಡಗೈ ಬ್ಯಾಟ್ಸ್‌ಮನ್‌ ಶಿಖರ್ ಧವನ್‌ (119; 123 ಎ, 17 ಬೌಂಡರಿ) ಮತ್ತು ಕನ್ನಡಿಗ ಕೆ.ಎಲ್‌. ರಾಹುಲ್ (85; 135 ಎ, 8 ಬೌಂ) ಅವರ ಅಮೋಘ ಆಟದ ಬಲದಿಂದ ತಂಡ ದಿನದಾಟ ಮುಕ್ತಾಯಗೊಂಡಾಗ ಆರು ವಿಕೆಟ್ ಕಳೆದುಕೊಂಡು 329 ರನ್‌ ಗಳಿಸಿದೆ.

ಶಿಖರ್ ಧವನ್‌ ಮತ್ತು ರಾಹುಲ್ ಮೊದಲ ವಿಕೆಟ್‌ಗೆ 39.3 ಓವರ್‌ಗಳಲ್ಲಿ 188 ರನ್ ಜೋಡಿಸಿದರು. ಈ ಮೂಲಕ ಶ್ರೀಲಂಕಾ ವಿರುದ್ಧ ವಿದೇಶಿ ನೆಲದಲ್ಲಿ ಮೊದಲ ವಿಕೆಟ್‌ಗೆ ಅತ್ಯಧಿಕ ರನ್ ಗಳಿಸಿದ ಸಾಧನೆ ಮಾಡಿದರು. 1993ರಲ್ಲಿ ಮನೋಜ್ ಪ್ರಭಾಕರ್ ಮತ್ತು ನವಜೋತ್‌ ಸಿಂಗ್ ಸಿದ್ಧು ಗಳಿಸಿದ 173 ರನ್‌ಗಳು ಈ ವರೆಗಿನ ದಾಖಲೆಯಾಗಿತ್ತು.

ರಾಹುಲ್‌ ಮೋಹಕ ಬ್ಯಾಟಿಂಗ್ ಮೂಲಕ ಮಿಂಚಿದರೆ ಧವನ್‌ ಸ್ಫೋಟಕ ಬ್ಯಾಟಿಂಗ್ ಮೂಲಕ ಸರಣಿಯಲ್ಲಿ ಎರಡನೇ ಶತಕ ಸಿಡಿಸಿದರು. ಇವರಿಬ್ಬರು ಔಟಾದ ನಂತರ ತಂಡ ಸ್ವಲ್ಪ ಹಿನ್ನಡೆ ಅನುಭವಿಸಿತಾದರೂ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಇನಿಂಗ್ಸ್‌ಗೆ ಮರುಜೀವ ತುಂಬಿದರು.

18ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಬೌಂಡರಿಯೊಂದಿಗೆ ಧವನ್‌ ಅರ್ಧಶತಕ ಪೂರೈಸಿದರು. 11.3ನೇ ಓವರ್‌ನಲ್ಲಿ ವೈಯಕ್ತಿಕ 28 ರನ್‌ ಗಳಿಸಿದ್ದಾಗ ಕರುಣರತ್ನೆ ಕೈಯಲ್ಲಿ ಜೀವದಾನ ಪಡೆದ ರಾಹುಲ್ 20ನೇ ಓವರ್‌ನಲ್ಲಿ ಅರ್ಧಶತಕದ ಸಂಭ್ರಮ ಅನುಭವಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ನಿರಂತರ ಏಳು ಅರ್ಧಶತಕ ಗಳಿಸಿದ ಸಾಧನೆ ಮಾಡಿದರು. ಒಟ್ಟಾರೆ ಇದು ಅವರ ಒಂಬತ್ತನೇ ಅರ್ಧಶತಕ.

ಭೋಜನ ವಿರಾಮದ ವೇಳೆ ಧವನ್‌–ರಾಹುಲ್‌ ಜೋಡಿ 27 ಓವರ್‌ಗಳಲ್ಲಿ 134 ರನ್ ಸೇರಿಸಿದ್ದರು. ಈ ಸಂದರ್ಭದಲ್ಲಿ ರಾಹುಲ್‌ 67 ರನ್‌ ಗಳಿಸಿದರೆ ಧವನ್‌ 64 ರನ್‌ ಬಾರಿಸಿದರು. ಆದರೆ ರಾಹುಲ್‌ 97 ಎಸೆತ ಎದುರಿಸಿದ್ದರು. ಧವನ್‌ ತೆಗೆದುಕೊಂಡದ್ದು ಕೇವಲ 66 ಎಸೆತ ಮಾತ್ರ.

ವಿರಾಮದ ನಂತರದ ಮೊದಲ ಓವರಿನಿಂದಲೇ ಭಾರತದ ಬ್ಯಾಟ್ಸ್‌ಮನ್‌ಗಳು ವೇಗವಾಗಿ ರನ್‌ ಗಳಿಸಲು ಮುಂದಾದರು. ಮೊದಲ ಎರಡು ಓವರ್‌ಗಳಲ್ಲಿ ರಾಹುಲ್ ತಲಾ ಒಂದೊಂದು ಬೌಂಡರಿ ಗಳಿಸಿದರು. ಆರನೇ ಓವರ್‌ನಲ್ಲಿ ಧವನ್‌ ಎರಡು ಬೌಂಡರಿ ಸಿಡಿಸಿದರು.

ನಂತರದ ಎರಡು ಓವರ್‌ಗಳಲ್ಲೂ ತಲಾ ಒಂದೊಂದು ಬೌಂಡರಿ ಗಳಿಸಿದರು. ಇದರಿಂದ ಕಂಗೆಟ್ಟ ಶ್ರೀಲಂಕಾ ಬಳಗಕ್ಕೆ 40ನೇ ಓವರ್‌ನಲ್ಲಿ ಪುಷ್ಪಕುಮಾರ ಸಮಾಧಾನ ತಂದುಕೊಟ್ಟರು. ಈ ಓವರ್‌ನ ಮೂರನೇ ಎಸೆತವನ್ನು ನೇರವಾಗಿ ಎತ್ತಿದ ರಾಹುಲ್‌ ಅವರು ಮಿಡ್ ಆನ್‌ನಲ್ಲಿದ್ದ ಕರುಣರತ್ನೆ ಅವರ ಮುಷ್ಟಿಯಲ್ಲಿ ಬಂಧಿಯಾದರು.

ಈ ಯಶಸ್ಸಿನ ನಂತರ ಕೊಹ್ಲಿ ಪಾಳಯದ ಮೇಲೆ ಒತ್ತಡ ಹೇರಲು ಶ್ರೀಲಂಕಾ ಬೌಲರ್‌ಗಳಿಗೆ ಸಾಧ್ಯವಾಯಿತು. 41 ರನ್‌ ಗಳಿಸುವಷ್ಟರಲ್ಲಿ ಭಾರತ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ನಡುವೆ 42ನೇ ಓವರ್‌ನಲ್ಲಿ ಬೌಂಡರಿ ಸಿಡಿಸುವ ಮೂಲಕ ಧವನ್‌ ಆರನೇ ಶತಕ ಪೂರೈಸಿದರು. ಆದರೆ 119 ರನ್ ಗಳಿಸಿದ್ದಾಗ ಪುಷ್ಪಕುಮಾರ್ ಎಸೆತದಲ್ಲಿ ಚಾಂದಿಮಲ್ ಪಡೆದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಚೇತೇಶ್ವರ ಪೂಜಾರ ಅವರಿಗೆ ಮಿಂಚಲು ಸಾಧ್ಯವಾಗಲಿಲ್ಲ.

ನಾಯಕ ಕೊಹ್ಲಿ ಜೊತೆ ನಾಲ್ಕನೇ ವಿಕೆಟ್‌ಗೆ 36 ರನ್‌ ಸೇರಿಸಿದ ಅಜಿಂಕ್ಯ ರಹಾನೆ 17 ರನ್‌ ಗಳಿಸಿ ವಾಪಸಾದರು. ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್‌ 32 ರನ್ ಜೋಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT