ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವರಾಜ್‌ ಸಿಂಗ್‌ಗೆ ಕೊಕ್‌, ದೋನಿಗೆ ಸ್ಥಾನ

Last Updated 14 ಆಗಸ್ಟ್ 2017, 6:25 IST
ಅಕ್ಷರ ಗಾತ್ರ

ನವದೆಹಲಿ: ಅನುಭವಿ ಎಡಗೈ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರಿಗೆ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ಭಾನುವಾರ ಪ್ರಕಟಗೊಂಡ ಭಾರತ ತಂಡದಲ್ಲಿ ಸ್ಥಾನ ನೀಡಿಲ್ಲ. ಮಾಜಿ ನಾಯಕ ಮಹೇಂದ್ರ ಸಿಂಗ್ ದೋನಿ ಅವರನ್ನು ಉಳಿಸಿಕೊಳ್ಳಲಾಗಿದೆ.

ಎರಡು ಬಾರಿ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ 25 ವರ್ಷದ ಯುವರಾಜ್ ಸಿಂಗ್‌ ಚಾಂಪಿಯನ್ಸ್ ಟ್ರೋಫಿಯಲ್ಲಿ ಗಮನಾರ್ಹವಾಗಿ ಆಡಲು ವಿಫಲರಾಗಿದ್ದರು. ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿಯೂ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರಿದಿತ್ತು. ಹಿಂದಿನ ಏಳು ಪಂದ್ಯಗಳಿಂದ ಯುವರಾಜ್ ಕೇವಲ 162 ರನ್ ದಾಖಲಿಸಿದ್ದಾರೆ.

‘2019ರ ವಿಶ್ವಕಪ್‌ಗೆ ಉತ್ತಮ ತಂಡ ಕಟ್ಟುವ ಅಗತ್ಯವಿದೆ. ಆದ್ದರಿಂದ ಯುವರಾಜ್‌ ಸಿಂಗ್‌ಗೆ ಸ್ಥಾನ ಸಿಕ್ಕಿಲ್ಲ’ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಯುವರಾಜ್ ಅವರ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್‌ನಲ್ಲಿ ಮೊದಲಿನ ಕಳೆ ಇಲ್ಲ. ಆದರೆ ದೋನಿ ಅವರ ಸ್ಥಾನದಲ್ಲಿ ನಮಗೆ ಬೇರೆ ಆಯ್ಕೆ ಇಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಹೇಳಿದ್ದಾರೆ.

ಯುವರಾಜ್ 304 ಏಕದಿನ ಪಂದ್ಯಗಳಲ್ಲಿ ಒಟ್ಟು 8,000 ರನ್ ದಾಖಲಿಸಿದ್ದಾರೆ. 40 ಟೆಸ್ಟ್‌ ಹಾಗೂ 58 ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದಾರೆ.

ದೋನಿ ಅವರ ಆಯ್ಕೆಯಿಂದ 2019ರ ವಿಶ್ವಕಪ್‌ನಲ್ಲಿ ಮಾಜಿ ನಾಯಕ ಆಡುವ ಸಾಧ್ಯತೆ ಇದೆ. ರಿಷಭ್‌ ಪಂತ್ ಕೂಡ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅವರ ಬದಲು ಕರ್ನಾಟಕದ ಕೆ.ಎಲ್‌. ರಾಹುಲ್‌ಗೆ ಸ್ಥಾನ ಸಿಕ್ಕಿದೆ. ಕೇದಾರ್‌ ಜಾಧವ್‌ ಕೂಡ ತಂಡದಲ್ಲಿ ಅವಕಾಶ ಗಿಟ್ಟಿಸಿದ್ದಾರೆ.

ದಿನೇಶ್ ಕಾರ್ತಿಕ್ ಅವರ ಬದಲಾಗಿ ಕರ್ನಾಟಕದ ಮನೀಷ್ ಪಾಂಡೆಗೆ ಅವಕಾಶ ಸಿಕ್ಕಿದೆ. ಹಿರಿಯ ಬೌಲರ್‌ಗಳಾದ ಮೊಹಮ್ಮದ್ ಶಮಿ, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜ ಅವರಿಗೆ ಆಯ್ಕೆ ಸಮಿತಿ ವಿಶ್ರಾಂತಿ ನೀಡಿದೆ.

ಜಸ್ಪ್ರೀತ್ ಬೂಮ್ರ ತಂಡಕ್ಕೆ ಮರಳಿದ್ದಾರೆ. ಮುಂಬೈ ವೇಗಿ ಶಾರ್ದೂಲ್ ಠಾಕೂರ್‌ ಕೂಡ ಅವಕಾಶ ಪಡೆದಿದ್ದಾರೆ. ಸ್ಪಿನ್ ವಿಭಾಗಕ್ಕೆ ಅಕ್ಷರ್ ಪಟೇಲ್ ಬಲ ತುಂಬಲಿದ್ದಾರೆ. ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಹಾಗೂ ಚೈನಾಮನ್ ಕುಲ್‌ದೀಪ್‌ ಯಾದವ್ ಕೂಡ ತಂಡದಲ್ಲಿ ಇದ್ದಾರೆ.

ಮನೀಷ್‌ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತ ‘ಎ’ ಪ್ರವಾಸ ಸರಣಿಯಲ್ಲಿ ಐದು ಪಂದ್ಯಗಳಿಂದ 307 ರನ್ ಕಲೆಹಾಕಿದ್ದರು. ಫಿಟ್‌ನೆಸ್ ಮರಳಿ ಪಡೆದ ಬಳಿಕ ರಾಹುಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೀಲಂಕಾ ಎದುರಿನ ಟೆಸ್ಟ್‌ ಪಂದ್ಯಗಳಲ್ಲಿ ಅವರು ಎರಡು ಅರ್ಧಶತಕ ದಾಖಲಿಸಿದ್ದಾರೆ.
ಸುರೇಶ್ ರೈನಾ ಅವರನ್ನು ಕಾಯ್ದಿರಿಸಿದ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.

ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಕೆ.ಎಲ್. ರಾಹುಲ್, ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ದೋನಿ (ವಿಕೆಟ್ ಕೀಪರ್‌), ಕೇದಾರ್ ಜಾಧವ್‌, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್‌, ಕುಲ್‌ದೀಫ್‌ ಯಾದವ್, ಯಜುವೇಂದ್ರ ಚಹಾಲ್, ಭುವನೇಶ್ವರ ಕುಮಾರ್, ಶಾರ್ದೂಲ್ ಠಾಕೂರ್, ಜಸ್ಪ್ರಿತ್ ಬೂಮ್ರಾ, ಅಜಿಂಕ್ಯ ರಹಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT