ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರುಗಳಿಗೂ ಕ್ಯಾಮೆರಾ ಕಣ್ಣು!

Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಹರಿಯಾಣದ ಐಎಎಸ್‌ ಅಧಿಕಾರಿ ವರೀಂದ್ರ ಸಿಂಗ್‌ ಕುಂದು ಪುತ್ರಿ ವರ್ಣಿಕಾ ಅವರನ್ನು ಹಿಂಬಾಲಿಸಿದ ಅಲ್ಲಿನ ಬಿಜೆಪಿ ಅಧ್ಯಕ್ಷರ ಪುತ್ರ ವಿಕಾಸ ಬರಾಲ ಸೇರಿದಂತೆ ಇಬ್ಬರು ಯುವಕರ ಕೃತ್ಯ ಸಾಬೀತುಪಡಿಸಲು ರಸ್ತೆಯಲ್ಲಿ ಹಾಕಲಾದ ಐದು ಕ್ಯಾಮೆರಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಆಕೆಯನ್ನು ಅಪಹರಿಸಲು ಪ್ರಯತ್ನಿಸಿದ ಮತ್ತೊಂದು ಆರೋಪವನ್ನು ಪೊಲೀಸರು ಹೊರಿಸಿದ್ದಾರೆ. ಒಂದೊಮ್ಮೆ ವರ್ಣಿಕಾ ಕಾರಿನಲ್ಲಿ ಡ್ಯಾಶ್‌ಬೋರ್ಡ್‌ ಕ್ಯಾಮೆರಾ ಇದ್ದಿದ್ದರೆ ಪೊಲೀಸರ ಕೆಲಸ ಮತ್ತಷ್ಟು ಸುಲಭವಾಗುತ್ತಿತ್ತು.

ಕ್ಯಾಮೆರಾ ಈಗ ವಿಹಾರದಲ್ಲಿ ಮಾತ್ರ ಬಳಸುವ ವಸ್ತುವಾಗಿ ಉಳಿದಿಲ್ಲ. ಅದು ಸುರಕ್ಷತೆಯ ಹಿತದೃಷ್ಟಿಯಿಂದ ಬಳಸಲೇಬೇಕಾದ ಸಾಧನವಾಗಿಯೂ ಮಹತ್ವ ಪಡೆದಿದೆ. ಸೈಕಲ್, ಬೈಕ್ ಹಾಗೂ ಕಾರು, ಟ್ರಕ್ ಹೀಗೆ ಎಲ್ಲ ವಾಹನಗಳಲ್ಲೂ ಕ್ಯಾಮೆರಾ ಬಳಕೆ ಈಗ ವ್ಯಾಪಕವಾಗಿದೆ. ಸುರಕ್ಷತೆ ದೃಷ್ಟಿಯಿಂದ ಹಾಗೂ ಇಡೀ ಪ್ರಯಾಣದ ರಸಾನುಭವವನ್ನು ಮತ್ತೆ ಮತ್ತೆ ಮೆಲುಕು ಹಾಕಿಕೊಳ್ಳಲು ಅವುಗಳು ಬಳಕೆಯಾಗುತ್ತಿವೆ. ಹೀಗೆ ವಾಹನಗಳಲ್ಲಿ ಬಳಸಬಹುದಾದ ಹಲವಾರು ಕ್ಯಾಮೆರಾಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಡ್ಯಾಶ್‌ ಕ್ಯಾಮ್‌
ರಸ್ತೆಯಲ್ಲಿ ಸಂಚರಿಸುವಾಗ ಅಡ್ಡಗಟ್ಟುವವರ ಪತ್ತೆಗೆ, ಅಪಘಾತ ಸಂಭವಿಸಿದಾಗಿನ ಘಟನೆ ಸೆರೆಗೆ, ಎಲ್ಲಿಯೋ ವಾಹನ ನಿಲ್ಲಿಸಿ ಶಾಪಿಂಗ್‌ ಮುಗಿಸಿ ಬರುವಷ್ಟರಲ್ಲಿ ಕಾರಿಗೆ ಯಾರಾದರೂ ಗುದ್ದಿದ್ದರೆ ಅಥವಾ ಒಳಗಿನ ವಸ್ತುಗಳನ್ನು ಅಪಹರಿಸಿದ್ದರೆ ಇಂಥ ಸಂದರ್ಭದಲ್ಲಿ ಡ್ಯಾಶ್‌ ಕ್ಯಾಮ್‌ ನೆರವಿಗೆ ಬರಲಿದೆ.

ಈ ಕ್ಯಾಮೆರಾ ಹಲವು ಅಂತರ್ಜಾಲ ಶಾಪಿಂಗ್‌ ತಾಣಗಳಲ್ಲಿ ಲಭ್ಯ. ಡ್ಯಾಶ್‌ಬೋರ್ಡ್‌ ಅಥವಾ ಕಾರಿನೊಳಗೆ ಇದನ್ನು ಸುಲಭವಾಗಿ ಕೂರಿಸಬಹುದು. ಸಕ್ಷನ್‌ ಕಪ್‌ಗೆ ಜೋಡಿಸಬಹುದು. ಮುಂದಿನ ಗಾಜು, ಹಿಂಬದಿ ಗಾಜು ಹೀಗೆ ನಮ್ಮ ಅನುಕೂಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಬಹುದು. ಬ್ಯಾಟರಿಯಿಂದ ಇದು ಕಾರ್ಯ ನಿರ್ವಹಿಸಲಿದೆ. 12 ವೋಲ್ಟ್ ಸಿಗರೇಟ್‌ ಲೈಟರ್‌ಗೆ ವಿದ್ಯುತ್‌ ಪೂರೈಸುವ ಸಾಕೆಟ್‌ನಿಂದ ಇದಕ್ಕೆ ವಿದ್ಯುತ್‌ ಪೂರೈಕೆಯಾಗಲಿದೆ. ಹೀಗಾಗಿ ಕೆಲವು ಗಂಟೆಗಳ ಕಾಲ ನಿರಂತರವಾಗಿ ರೆಕಾರ್ಡ್ ಮಾಡುತ್ತದೆ. ಇದರಲ್ಲಿ 1080 ಪಿಕ್ಸೆಲ್‌ ಸಾಮರ್ಥ್ಯದ ಹಾಗೂ ವಿಜೆಎ ಗುಣಮಟ್ಟದ ಕ್ಯಾಮೆರಾ ಲಭ್ಯ.

ಇದನ್ನು ಕಾರಿನಲ್ಲಿ ಮಾತ್ರವಲ್ಲ, ದ್ವಿಚಕ್ರ ವಾಹನ ಸವಾರರು ತಮ್ಮ ಹೆಲ್ಮೆಟ್‌ಗೆ ಧರಿಸಿ ಪ್ರಯಾಣಿಸುವುದೂ ಉಂಟು. ಬೈಕ್‌ನಲ್ಲಿ ಅಥವಾ ಸೈಕಲ್‌ನಲ್ಲಿ ಪ್ರಯಾಣ ಮಾಡುವವರು ಇದೇ ಮಾದರಿಯ ಕ್ಯಾಮೆರಾವನ್ನು ತಮ್ಮ ಹೆಲ್ಮೆಟ್‌ಗೆ ಧರಿಸುವುದು ಇಂದು ಸಾಮಾನ್ಯವಾಗಿದೆ.

ಡ್ಯಾಶ್ ಬೋರ್ಡ್‌ ಕ್ಯಾಮೆರಾದಲ್ಲಿ ದಾಖಲಾದ ಚಿತ್ರಗಳನ್ನು ಸುಲಭವಾಗಿ ಕಂಪ್ಯೂಟರ್‌ಗೆ ವರ್ಗಾಯಿಸಿ ಎಡಿಟ್‌ ಮಾಡುವುದು, ಅದನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಒಂದೊಮ್ಮೆ ಅಪಘಾತವೇ ಆಗಿದ್ದಲ್ಲಿ ಅದನ್ನು ವಿವರಿಸಲು ಪದಗಳನ್ನು ಜೋಡಿಸುವ ಬದಲು, ಈ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಾವಳಿಯನ್ನೇ ನೀಡಬಹುದು.

ಇಂಥ ಡ್ಯಾಶ್‌ ಬೋರ್ಡ್‌ ಕ್ಯಾಮೆರಾಗಳಲ್ಲಿ ಹಲವು ಬಗೆಯಿದೆ. ದುಬಾರಿ ಬೆಲೆಯ ಕ್ಯಾಮೆರಾಗಳಲ್ಲಿ ಸ್ಥಳದ ಮಾಹಿತಿ, ವಾಹನದ ವೇಗ, ಸಮಯ ಹಾಗೂ ದಿನಾಂಕ ದಾಖಲಾಗುತ್ತದೆ. ಶಾಕ್‌ ಸೆನ್ಸರ್‌ ಇರುವುದರಿಂದ ಕ್ಯಾಮೆರಾ ದಲ್ಲಿ ದಾಖಲಾದ ಮಾಹಿತಿ ನಷ್ಟವಾಗದಂತೆ ಇಡುವ ಸಾಮರ್ಥ್ಯದ ಕ್ಯಾಮೆರಾಗಳೂ ಇವೆ.

ಹಿಂಬದಿ ಚಲಿಸಲೂ ಈಗ ಕ್ಯಾಮೆರಾ ನೆರವಾಗುತ್ತದೆ. ಇಷ್ಟು ಮಾತ್ರವಲ್ಲ, ರಾತ್ರಿವೇಳೆ ಕತ್ತಲಲ್ಲಿನ ನೋಟಗಳು ಗೋಚರಿಸುವಂಥ ಕ್ಯಾಮೆರಾಗಳು ಅತ್ಯಾಧುನಿಕ ಕಾರುಗಳಲ್ಲಿ ಲಭ್ಯ. ಸುರಕ್ಷತೆ ದೃಷ್ಟಿಯಿಂದ ಬಗೆ ಬಗೆಯ ಲೆನ್ಸ್‌ಗಳು ಹಾಗೂ ಸೆನ್ಸರ್‌ಗಳನ್ನು ಹೊಂದಿಸಿ ಹಲವು ಬಗೆಯ ಕೆಲಸಗಳಿಗೆ ಬಳಸುವಂಥ ಕ್ಯಾಮೆರಾಗಳ ಬಳಕೆ ಹೆಚ್ಚಾಗುತ್ತಿದೆ. ಆ ನಿಟ್ಟಿನಲ್ಲಿ ಅತಿ ವೇಗವಾಗಿ ಸಂಶೋಧನೆಗಳೂ ನಡೆಯುತ್ತಿವೆ.

ಭಾರತದಲ್ಲಿ ಕಾರಿನಲ್ಲಿ ಕ್ಯಾಮೆರಾ ಆರಂಭವಾಗಿದ್ದು ಹಿಂಬದಿ ಚಾಲನೆಗೆ ಮೊದಲು. ಕಾರುಗಳ ಸಂಖ್ಯೆ ಹೆಚ್ಚಾದಂತೆ ಪಾರ್ಕಿಂಗ್ ಸಮಸ್ಯೆ ಎದುರಾಯಿತು. ಆಗ ನಗರ ಪ್ರದೇಶಗಳಲ್ಲಿ ಇರುವಷ್ಟು ಜಾಗದಲ್ಲಿ ವಾಹನ ನಿಲ್ಲಿಸಲು ಒಬ್ಬರಿಗೇ ಕಷ್ಟವಾಗುವುದರಿಂದ ಹಿಂಬದಿ ಕ್ಯಾಮೆರಾ ಅಳವಡಿಸುವು ದನ್ನು ಪರಿಚಯಿಸಲಾಯಿತು. ಇದು ಈಗ ಅನಿವಾರ್ಯ ಎಂಬಂತಾಗಿದೆ. ಅಮೆರಿಕದಲ್ಲಿ ಹಿಂಬದಿ ಕ್ಯಾಮೆರಾವನ್ನು ಕಡ್ಡಾಯಗೊಳಿಸಲಾಗಿದ್ದು, 2018ರ ನಂತರದ ಕಾರುಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಇದನ್ನು ಅನಿವಾರ್ಯಗೊಳಿಸಲಾಗಿದೆ.

ರಿವರ್ಸ್‌ ಪಾರ್ಕಿಂಗ್ ಕ್ಯಾಮೆರಾದಲ್ಲಿ ವೈಡ್‌ ಆ್ಯಂಗಲ್ ಲೆನ್ಸ್ ಬಳಸಲಾಗಿರುತ್ತದೆ. ಇದರಿಂದ ಕಾರಿನ ಹಿಂಬದಿಯ ವಿಶಾಲ ದೃಶ್ಯ ಕಾರಿನೊಳಗಿನ ಪರದೆಯಲ್ಲಿ ಕಾಣಿಸುತ್ತದೆ. ಇನ್ನೂ ಕೆಲವು ಕ್ಯಾಮೆರಾಗಳಲ್ಲಿ ಸೆನ್ಸರ್‌ ಅಳವಡಿಸಲಾಗಿರುತ್ತದೆ. ಆ ಮೂಲಕ ಕಾರಿನ ಹಿಂದೆ ಕನಿಷ್ಠ ಲಭ್ಯವಿರುವ ಸ್ಥಳಾವಕಾಶದ ಮಾಹಿತಿಯನ್ನೂ ನೀಡುವ ಸಾಮರ್ಥ್ಯ ಇದಕ್ಕೆ ಇರುತ್ತದೆ.

360ಡಿಗ್ರಿ ಕ್ಯಾಮೆರಾ
ಕಾರಿನ ಸುತ್ತಲೂ ನೋಡಬಹುದಾದ ಕ್ಯಾಮೆರಾ ಈವರೆಗೂ ಭಾರತದಲ್ಲಿ ಲಭ್ಯವಿಲ್ಲ. ಆದರೆ ನಿಸ್ಸಾನ್‌ ತನ್ನ ಕ್ವಾಶ್‌ಕ್ವಿ ಕಾರಿನಲ್ಲಿ 360 ಡಿಗ್ರಿಯಲ್ಲಿ ವೀಕ್ಷಿಸಬಹುದಾದ ಕ್ಯಾಮೆರಾ ಅಳವಡಿಸಿದೆ. ಮುಂದೆ ಹಾಗೂ ಹಿಂದೆ, ಎರಡೂ ಬದಿಯ ಬಾಗಿಲಿನಲ್ಲಿ ಸಣ್ಣ ಕ್ಯಾಮೆರಾಗಳನ್ನು ಅಳವಡಿಸಿದೆ. ಈ ಎಲ್ಲಾ ಕ್ಯಾಮೆರಾಗಳ ದೃಶ್ಯಗಳನ್ನು ಸೆರೆಹಿಡಿದು ಕಟ್ಟಡದ ಮೇಲೆನಿಂತು ಕಾರನ್ನು ಮೇಲಿನಿಂದ ನೋಡುತ್ತಿರುವಂತೆ ಭಾಸವಾಗುವಂತೆ ಚಿತ್ರವನ್ನು ನೀಡಲಿದೆ. ಇದು ಕಾರುಗಳನ್ನು ನಿಲ್ಲಿಸಲು ಇನ್ನಷ್ಟು ಸುಲಭವಾದ ವಿಧಾನವಾಗಿದ

ಸರಿಯಾದ ಚಾಲನೆ ತಿಳಿಸುವ ವೋಲ್ವೊ ಎಸ್‌80 ಕಾರಿನಲ್ಲಿ ಬ್ಲೈಂಡ್‌ಸ್ಪಾಟ್‌ ಗುರುತಿಸಲು ಸೆನ್ಸರ್ ಹೊಂದಿರುವ ಕ್ಯಾಮೆರಾ ಬಳಸಲಾಗಿದೆ. ಕಾರಿನ ಎರಡೂ ಬದಿಯ ಮಿರರ್‌ಗಳಿಗೆ ಈ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಅದು ಕಾರಿನ ಚಲನೆ ಹಾಗೂ ರಸ್ತೆಯಲ್ಲಿ ಹಾಕಲಾಗಿರುವ ಬಿಳಿ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಲಿದೆ. ಕಾರು ಲೇನ್‌ ತಪ್ಪಿದರೆ ವಿಂಡ್‌ಸ್ಕ್ರೀನ್‌ ಮೇಲೆ ಕೆಂಪು ದೀಪ ಹೊತ್ತಿಕೊಂಡು ಎಚ್ಚರಿಸುತ್ತದೆ. ಇಂಥದ್ದೇ ಮಾದರಿ ಇನ್ಫಿನಿಟಿ ಕ್ಯೂ70ಯಲ್ಲೂ ಇದೆ. ಹಿಂಬದಿಯಿಂದ ವೇಗವಾಗಿ ಬರುವ ವಾಹನ ಹಾಗೂ ನಮ್ಮನ್ನು ಹಿಂದಿಕ್ಕುವ ವಾಹನದ ಕುರಿತು ಮಾಹಿತಿ ನೀಡಲಿದೆ.

ರಾತ್ರಿ ವೇಳೆ ವಸ್ತುಗಳ ಗೋಚರ: ರಾತ್ರಿ ಹೊತ್ತಿನಲ್ಲಿ ಕಾರಿನ ಲಭ್ಯವಿರುವ ದೀಪದ ಬೆಳಕಿನಲ್ಲಿ ಸಾಗುವಾಗ ರಸ್ತೆ ಬದಿಯಲ್ಲಿ ಸಾಗುವ ವ್ಯಕ್ತಿಗಳು, ಸೈಕಲ್‌, ಪ್ರಾಣಿಗಳು ಗೋಚರಿಸುವುದೇ ಇಲ್ಲ. ಇಂಥ ಸಂದರ್ಭದಲ್ಲಿ ನೈಟ್‌ ವಿಷನ್‌ ಕ್ಯಾಮೆರಾಗಳು ಬಳಕೆಯಾಗುತ್ತವೆ. ಮರ್ಸಿಡಿಸ್‌ ಬೆಂಜ್‌, ಆಸ್ಟನ್‌ ಮಾರ್ಟಿನ್‌ ಮುಂತಾದ ಐಷಾರಾಮಿ ಕಾರುಗಳಲ್ಲಿ ಇದು ಲಭ್ಯವಿದೆ. ಇನ್‌ಫ್ರಾರೆಡ್‌ ಕ್ಯಾಮೆರಾ ಇದಕ್ಕೆ ಬಳಸಲಾಗುತ್ತದೆ. ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಿನ ಉಷ್ಣತೆ ಹೊಂದಿರುವ ವಸ್ತುಗಳನ್ನು ಇದು ಸೆರೆಹಿಡಿದು ವಾಹನದ ದೃಶ್ಯ ಫಲಕದಲ್ಲಿ ತೋರಿಸುತ್ತದೆ.

ಹೀಗೆ ಆಧುನಿಕತೆ ಹೆಚ್ಚಾದಂತೆಲ್ಲಾ ಸುರಕ್ಷತೆಯ ದೃಷ್ಟಿಯಿಂದ ಕ್ಯಾಮೆರಾಗಳ ಬಳಕೆಯೂ ಹೆಚ್ಚಾಗುತ್ತಿದೆ. ಮತ್ತೊಬ್ಬರ ಖಾಸಗಿತನಕ್ಕೆ ಧಕ್ಕೆಯಾಗದಿದ್ದರೆ ಕ್ಯಾಮೆರಾಗಳ ಬಳಕೆ ತಪ್ಪಲ್ಲ ಎಂದು ಕಾನೂನು ಹೇಳುತ್ತದೆ. ಇದರ ಪರಿಮಿತಿಯಲ್ಲೇ ಕಂಪೆನಿಗಳು ಹೊಸಹೊಸ ಸಂಶೋಧನೆಗಳನ್ನು ನಡೆಸುತ್ತಲೇ ಇವೆ. ದುಬಾರಿ ದೃಷ್ಟಿಯಿಂದ ಬಹಳಷ್ಟು ಸೌಲಭ್ಯಗಳು ಸಣ್ಣ ಕಾರುಗಳಿಂದ ದೂರವೇ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT