ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಆಡಳಿತ ? ಎಲ್ಲಿದೆ ಆಡಳಿತ?

Last Updated 16 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಆಕಾಶದಿಂದ ಮೂರು ಹನಿ ಬೀಳುವಲ್ಲಿ ನೂರು ಹನಿ ಬಿದ್ದ ಕೂಡಲೇ ಬೆಂಗಳೂರು ಭಯದ ಚಳಿಯಿಂದ ಗಡಗಡ ನಡುಗುತ್ತದೆ. ನೋಡನೋಡುತ್ತಿರುವಂತೆಯೇ ಆಕಾಶದ ಉದರದಲ್ಲಿ ಮೋಡ ಬಚ್ಚಿಟ್ಟಿರುವ ನೀರಿನ ಟ್ಯಾಂಕ್ ಒಡೆಯಿತೆಂಬಂತೆ ಮಳೆ ಸುರಿದ ಸ್ವಲ್ಪದರಲ್ಲಿಯೇ ಸಾಗರದಂತಾದ ಬೆಂಗಳೂರು ಎಡೆಬಿಡದೆ ನುಗ್ಗುತ್ತಲೇ ಇರುವ ನೀರಿನಲ್ಲಿ ಮುಳುಗೇಳುತ್ತಾ ವಿಲವಿಲನೆ ಒದ್ದಾಡತೊಡಗುತ್ತದೆ. ಇದು ಪ್ರತಿ ವರ್ಷ ಸಂಭವಿಸುವುದಿಲ್ಲವಾದರೂ, ಬಹುತೇಕ ಪ್ರತಿ ವರ್ಷ ಎಂಬಂತೆ ಸಂಭವಿಸುತ್ತದೆ. ನೀರು ಕಡಲಿನಲೆಯಂತೆ ಎಲ್ಲಾ ಕಡೆಯಿಂದ ನುಗ್ಗತೊಡಗಿದಾಗ ಎಲ್ಲಕ್ಕಿಂತ ಮೊದಲು ಎಚ್ಚರಗೊಳ್ಳುವ ಟೀವಿ ಎಂಬ ದೃಶ್ಯವಾಣಿ ಸರ್ಕಾರ ಎಲ್ಲಿದೆ, ಸರ್ಕಾರಿ ಅಧಿಕಾರಿಗಳು ಎಲ್ಲಿದ್ದಾರೆ ಎಂದು ಒಂದೇ ಸವನೆ ಕೇಳತೊಡಗುತ್ತದೆ. ಇಡೀ ನಗರ ಎಚ್ಚರಗೊಂಡು ಜಲರಾಶಿಯ ಜೊತೆ ನರಳುತ್ತಾ ಹೋರಾಡುತ್ತಿದ್ದರೂ ಆಡಳಿತ ನಿದ್ರೆಯಲ್ಲೇ ಇರುತ್ತದೆ. ಇಂಥ ಅಧಿಕಾರಿಗಳನ್ನು ಸರ್ಕಾರ ಯಾರಿಗಾಗಿ ಸಾಕುತ್ತಿದೆ? ಯಾಕೆ ಒಬ್ಬ ಪ್ರಜಾಪ್ರತಿನಿಧಿಯಾದರೂ ನಿದ್ದೆಯಿಂದೆದ್ದು ಜನರ ಪಾಡನ್ನು ನೋಡಲು ಬರುವುದಿಲ್ಲ? ಇದೆಂಥ ಪ್ರಜಾಪ್ರಭುತ್ವ ಎಂಬ ಕೂಗು ಪ್ರತಿಯೊಬ್ಬ ಸಂತ್ರಸ್ತನ ಮನದಾಳದಲ್ಲಿಯೂ ಇರುತ್ತದೆ.

ಸುರಿಯುತ್ತಲೇ ಇರುವ ಮಳೆಯ ಅಡಿಗೆ ಬಿದ್ದಿರುವ ಬೆಂಗಳೂರ ಮಂದಿ ಏಳುತ್ತಾ ಬೀಳುತ್ತಾ ಸಾಗರವೇ ಆಗಿರುವ ನೆಲದ ಮೇಲಿಂದ ನೀರನ್ನು ಹೊರ ತಳ್ಳಲು ಹೆಣಗಾಡುತ್ತಾರೆ. ಇರಲಿ, ಇದು ಹೊಸ ದೃಶ್ಯವೇನೂ ಅಲ್ಲ. ವರ್ಷ ವರ್ಷ ನಾವು ನೋಡುತ್ತಾ ಇದ್ದೇವೆ. ಬೆಂಗಳೂರಿಗರಿಗೆ ಇದು ಅಭ್ಯಾಸವಾಗಿದೆ. ಸಾಗರದಿಂದ ಬಹಳ ಮೇಲಿನ ಮಹಡಿಮನೆಗಳಲ್ಲಿ ಇರುವವರ ವಿಚಾರ ಬೇಡ. ಅವರು ಅವರವರ ಆನಂದದ ಗೂಡಿನಲ್ಲಿ ಇರಬಹುದು. ಆದರೆ ಅವರಿಗೆ ಕೂಡ ಹೃನ್ಮನ ಇರಬಹುದಲ್ಲವೆ? ನಗರವಾಸಿಗಳು ನೀರಿನ ಈ ದೈತ್ಯಶಕ್ತಿಯನ್ನು ಎಷ್ಟು ಕಾಲ ಸಹಿಸಿಕೊಳ್ಳುತ್ತಾ ಇರಬಹುದು? ಮುಂಬಯಿಯಲ್ಲಿ ಎತ್ತರೆತ್ತರದ ಹಳೆಯ ಕಟ್ಟಡಗಳು ಮಳೆಗಾಲದಲ್ಲಿ ಕೆಳಗುರುಳುವುದು ಪ್ರತಿವರ್ಷ ನಡೆಯುತ್ತದೆ. ಗಾರ್ಡನ್ ಸಿಟಿ ಬೆಂಗಳೂರು ಶಾಶ್ವತವಾಗಿ ತರುಣವಾಗಿ ಉಳಿಯುತ್ತದೆ ಎಂದು ನಂಬಬಹುದೆ? ಮುಂಬಯಿಯಂತೆ ಬೆಂಗಳೂರಿಗೂ ವಯಸ್ಸಾಗುತ್ತಿದೆ. ಮುಸಲಧಾರೆಯ ನೀರಿನ ಶಕ್ತಿಯ ಅರಿವು ಜನರಿಗೆ ಇರಬೇಕಾದ್ದು ಅಗತ್ಯ. ಹಲವು ಆಶ್ವಶಕ್ತಿ ನೀರಿನ ಕೆಲವು ಗಂಟೆಗಳ ತಾಡನ ಬಹುಮಹಡಿ ಕಟ್ಟಡದ ಬೇರುಗಳನ್ನು ಕೀಳಬಹುದು.

ಬೆಂಗಳೂರು ಯಾವಾಗ ಜಲಾಂತರ್ಗಾಮಿಯಾಗುತ್ತದೆ ಎಂದು ಅನುಭವದಿಂದ ಗೊತ್ತಿರುವ ಜನರಿಗೆ ಮತ್ತು  ಸರ್ಕಾರಿ ಅಧಿಕಾರಿಗಳ ಮೂಲಕ ನಡೆಯುವ ಆಡಳಿತಕ್ಕೆ ‘ಪ್ರತಿ ವರ್ಷ ಹೀಗೆ ಮಳೆ ಸುರಿಯಲಿಕ್ಕಿಲ್ಲ; ಈ ವರ್ಷ ಇಲ್ಲ ಎಂದು ಹೇಳಲು ಸಾಧ್ಯವೆ?’ ಸಾಧ್ಯವಿಲ್ಲ. ಆದ್ದರಿಂದ ಬೆಂಗಳೂರು ಹೀಗೆ ನರಳುವುದನ್ನು ತಪ್ಪಿಸಲು ಶಾಶ್ವತವಾದ ಪರಿಹಾರಕ್ಕೆ ಈಗಲೇ ಸನ್ನದ್ಧರಾಗಬೇಕು ಎಂದು ಸರ್ಕಾರ ಯಾಕೆ ಆ ಕೆಲಸಕ್ಕೆ ಹೊರಡುವುದಿಲ್ಲ? ಮರಳಿ ಮರಳಿ ಸಂಭವಿಸುವ ಈ ಕಷ್ಟವನ್ನು ಪರಿಹರಿಸುವುದು ಹೇಗೆ ಎಂದು ನಮ್ಮ ವಿಜ್ಞಾನಿಗಳು, ಎಂಜಿನಿಯರುಗಳು ಈ ಬಗ್ಗೆ ಚಿಂತನೆ ನಡೆಸಿರುವರೆ? ನಮ್ಮ ರಾಜ್ಯದ ಆಡಳಿತ ನಿಜವಾಗಿ ಯಾರ ಕೈಯಲ್ಲಿದೆ, ನಾಡಿಗೆ ಮತ್ತು ಪ್ರಜೆಗಳಿಗೆ ಮಾಡಬೇಕಾದ ಒಳ್ಳೆಯದನ್ನು ಮಾಡುವವರು ಯಾರು, ಅವರು ಎಲ್ಲಿರುತ್ತಾರೆ, ಕಾಯಿಲೆ ಬರುವ ಮೊದಲೇ ಕಾಯಿಲೆ ಬರದಂತೆ ಔಷಧ ತೆಗೆದುಕೊಳ್ಳಬೇಕು ಎಂಬ ಜ್ಞಾನ ಸರ್ಕಾರಕ್ಕೆ ಇಲ್ಲವೆ?

ಆಡಳಿತದಲ್ಲಿ ನಿಜವಾಗಿಯೂ ಪ್ರಜೆಗಳ ಕ್ಷೇಮದ ಬಗ್ಗೆ ಯೋಚಿಸುವ ಪ್ರಾಜ್ಞರು ಇಲ್ಲವೆ? ಆಡಳಿತ ಯಾಕೆ ಯಾವಾಗಲೂ ಕೊಮಾದಲ್ಲಿರುವಂತೆ ಇದೆ? ಇದು ಪ್ರಜಾಪ್ರಭುತ್ವ, ಜನರು ಒಟ್ಟಾಗಿ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದು ಜನರಾದರೂ ಎದ್ದೇಳಬಾರದೆ? ಎಲ್ಲದಕ್ಕೂ ಸರ್ಕಾರವನ್ನು ಕೂಗಿ ಕರೆದು ಪ್ರಯೋಜನವಿಲ್ಲ. ಸರ್ಕಾರ ಸ್ವಂತ ಕೆಲಸದಲ್ಲಿ ನಾಡನ್ನು ಮರೆತಿರುತ್ತದೆ ಎಂಬುದು ಇಷ್ಟು ವರ್ಷಗಳಲ್ಲಿ ಜನರ ಅರಿವಿಗೆ ಬಂದಿಲ್ಲವೆ? ಬೆಂಗಳೂರಿನಲ್ಲಿ ಕೋಟ್ಯಧಿಪತಿಗಳಾಗಿರುವ ವರ್ತಕರು, ಜನ ಪ್ರತಿನಿಧಿಗಳು, ಸಿನಿಮಾದವರು, ಮಂತ್ರಿಗಳು ಇದ್ದಾರೆ. ಪ್ರತಿಯೊಬ್ಬರಿಂದ ಐದು ಲಕ್ಷ ಸಂಗ್ರಹಿಸಿದರೆ ಒಂದು ದೊಡ್ಡ ನಿಧಿಯಾಗುತ್ತದೆ. ಆ ಕೆಲಸ ಸಾಧ್ಯವಾದರೆ, ಆ ನಿಧಿಯಿಂದ ತೆಗೆದು ನುಂಗುವುದು ಘೋರ ಅಪರಾಧ ಎಂದು ಪರಿಗಣಿಸಿ ನುಂಗಿದವರನ್ನು ನೇರವಾಗಿ ಜೈಲಿಗೆ ತಳ್ಳುವ ಕೆಲಸವನ್ನಾದರೂ ಸರ್ಕಾರ ಮಾಡಲಿ. ಜನರ ಹಣವನ್ನು ನುಂಗಿದವರಿಗೆ ಜೈಲಿನಲ್ಲಿ ರಾಗಿಮುದ್ದೆಯ ಹೊರತು ಬೇರೇನನ್ನೂ ನೀಡಬಾರದು.

ಜನರಿಂದ ಸಂಗ್ರಹಿಸಿದ ಮೊತ್ತದಿಂದ ಬೆಂಗಳೂರಿನ ಸರಹದ್ದಿನಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಕೆರೆಗಳನ್ನು ತೋಡಿ, ಅದೇ ಹೊತ್ತಿನಲ್ಲಿ ಬೆಂಗಳೂರು ನಗರದ ರಸ್ತೆಗಳಡಿಯಲ್ಲಿ ಮತ್ತು ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನೆಲದಡಿಯಲ್ಲಿ ಕೊಳವೆಗಳನ್ನು ಜೋಡಿಸಿ, ಮಳೆ ಬಿದ್ದಾಗ ಬೀಳುವ ಸಾವಿರಾರು ಕೊಳಗ ನೀರನ್ನು ಆ ಕೊಳವೆಗಳ ಮೂಲಕ ಕೆರೆಗಳಿಗೆ ಹರಿಸಿದರೆ, ನಗರ ಸಾಗರವಾಗುವ ಸಮಸ್ಯೆ ಮಾತ್ರವಲ್ಲ, ಜನ ಜಾನುವಾರುಗಳಿಗಾಗುವ ಕುಡಿಯುವ ನೀರಿನ ಕೊರತೆಯ ಸಮಸ್ಯೆ, ರೈತರನ್ನು ಕಾಡುವ ನೀರಿನ ಕೊರತೆಯ ಸಮಸ್ಯೆ ತಮಿಳುನಾಡಿನ ದಾಹಕ್ಕೆ ನೀರು ನೀಡಬೇಕಾದ ಸಮಸ್ಯೆ, ಜನರು ಹಣ ತೆತ್ತು ಕಾರ್ಖಾನೆಗಳ ಉಚ್ಚಿಷ್ಟಜಲವನ್ನು ಕುಡಿಯಬೇಕಾದ ಸಮಸ್ಯೆ ಇತ್ಯಾದಿ ಸಮಸ್ಯೆಗಳು ಪರಿಹಾರವಾದಾವು. ನದಿಗಳ ಕತ್ತು ತಿರುಚುವ ರಾಜಕೀಯ ಹುನ್ನಾರ ಕೂಡ ಕೊನೆಗೊಳ್ಳಬಹುದು.

ರಸ್ತೆ ಕತ್ತರಿಸದೆ, ರಸ್ತೆಗೆ ಊನವಾಗದಂತೆ ರಸ್ತೆಯಡಿಯಿಂದ ಕೊಳವೆ ತೂರುವ ತಂತ್ರ ಈಗ ಬಳಕೆಯಲ್ಲಿದೆ. ಈ ಬರಹವನ್ನು ಓದಿ ‘ಇವನ್ಯಾರು ಡಾನ್ ಕ್ವಿಕ್ಸೋಟನ ಅಪರಾವತಾರವೆ’ ಎಂದು ಉದ್ಗರಿಸಿದರೆ ಆ ಉದ್ಗಾರ ಕೇಳಿ ಬೇಸರವಾಗುವುದಿಲ್ಲ; ಸಂತೋಷವೇ ಆಗುತ್ತದೆ. ಕನಿಷ್ಠ ಮುಂದಿನ ವರ್ಷ ಈ ಕಷ್ಟಕ್ಕೆ ಗುರಿಯಾಗದಂತೆ ಈಗಲೇ ಕಾರ್ಯಪ್ರವೃತ್ತರಾಗಬೇಕು ಎಂಬ ಯೋಚನೆ ಈ ವರ್ಷದ ಮಳೆಯಿಂದಾದ ಜಲಾನುಭವದ ನಂತರ ಎಲ್ಲಿಯಾದರೂ, ಯಾರಲ್ಲಾದರೂ ಜಾಗೃತವಾಗಿದೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT