ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ ರಾಜಕೀಯ ನಾಯಕರ ಕೆಸರೆರಚಾಟ

Last Updated 20 ಆಗಸ್ಟ್ 2017, 7:01 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಪ್ರತಿಯೊಂದು ವಿಷಯಕ್ಕೂ ಕಚ್ಚಾಡುವ ಜೆಡಿಎಸ್-ಕಾಂಗ್ರೆಸ್ ನಾಯಕರು, ಇದೀಗ ಮಹಾಮಸ್ತಕಾಭಿಷೇಕ ವಿಷಯದಲ್ಲೂ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದಾರೆ. ಮಸ್ತಕಾಭಿಷೇಕ ಮಹೋತ್ಸವ ರಾಜ್ಯ ಮತ್ತು ದೇಶದ ದೊಡ್ಡ ಉತ್ಸವಗಳಲ್ಲಿ ಒಂದು. ಇಂಥ ಉತ್ಸವ ಯಶಸ್ವಿ ಗೊಳಿಸಲು ಪಕ್ಷಬೇಧ ಮರೆತು ಪ್ರತಿಯೊಬ್ಬರೂ ಕೈ ಜೋಡಿಸುವುದು ಅತ್ಯವಶ್ಯಕ. ಆದರೆ ಜಿಲ್ಲೆಯಲ್ಲಿ ಪ್ರತಿಯೊಂದಕ್ಕೂ ಬೆರೆತು ಹೋಗುವ ರಾಜಕೀಯ, ಮೊದಲ ಬಾರಿಗೆ ಮಸ್ತಕಾಭಿಷೇಕದ ಮೇಲೂ ಪ್ರಭಾವ ಬೀರಿದೆ.

‘ಮಹೋತ್ಸವಕ್ಕೆ ಕೇವಲ 6 ತಿಂಗಳು ಬಾಕಿ ಇದೆ. ಇನ್ನೂ ನಿರೀಕ್ಷಿತ ವೇಗದಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸದೇ ಹಣ ಲೂಟಿ ಮಾಡಲಾಗುತ್ತಿದೆ’ ಎಂದು ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ.

ಆದರೆ, ಈ ಆರೋಪ ಅಲ್ಲಗಳೆದಿರುವ ಸಚಿವ ಎ.ಮಂಜು, ‘ದೊಡ್ಡ ಉತ್ಸವ ಆಚರಣೆಗೆ ಸಹಕಾರ ಕೊಡಬೇಕೇ ಹೊರತು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು’ ಎಂದು ದಳಪತಿಗಳಿಗೆ ತಿರುಗೇಟು ನೀಡಿದ್ದಾರೆ.

ಅಂದಾಜು ₹ 112 ಕೋಟಿ ವೆಚ್ಚದ ಮಸ್ತಕಾಭಿಷೇಕದ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲು ಸಚಿವ ಸಂಪುಟ ನಿರ್ಣಯ ಮಾಡಿತ್ತು. ಆದರೆ ಉಸ್ತುವಾರಿ ಸಚಿವ ಎ.ಮಂಜು ಅವರು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌)ಕ್ಕೆ ವಹಿಸಿದ್ದಾರೆ. ಇದಕ್ಕೆ ಸಂಸದ ಎಚ್.ಡಿ.ದೇವೇಗೌಡ, ಶಾಸಕ ಎಚ್.ಡಿ.ರೇವಣ್ಣ ಅಪಸ್ವರ ಎತ್ತಿದ್ದಾರೆ.

ಒಂದೆಡೆ ದೇವೇಗೌಡರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರೆ, ಮತ್ತೊಂದೆಡೆ ರೇವಣ್ಣ, ‘ಕಾಮಗಾರಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು, ತನಿಖೆ ನಡೆಸಬೇಕು. ಕೆಆರ್‌ಡಿಸಿಎಲ್‌ ಈವರೆಗೂ ಲೈನ್ ಎಸ್ಟಿಮೇಟ್ ಕೊಟ್ಟಿಲ್ಲ. ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಬೇಕು. ಇಲ್ಲವಾದರೆ ಈ ವಿಷಯವನ್ನು ವಿಧಾನಸಭೆ ಸಾರ್ವಜನಿಕ ಲೆಕ್ಕಪರಿಶೋಧನಾ ಸಮಿತಿ ಮುಂದೆ ಇಡುವುದಾಗಿ’ ಎಚ್ಚರಿಸಿದ್ದಾರೆ.

ಈ ಇಬ್ಬರ ಆರೋಪವನ್ನು ಅಲ್ಲಗಳೆದಿರುವ ಎ.ಮಂಜು, ‘2006ರಲ್ಲಿ ದೇವೇಗೌಡರು ಮತ್ತು ರೇವಣ್ಣ, ಯಾರ ಇಲಾಖೆ ಮೂಲಕ ಕಾಮಗಾರಿ ಮಾಡಿಸಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಗುಣಮಟ್ಟದ ಕೆಲಸ ಆಗಬೇಕು ಎನ್ನುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಗೌಡರು ಸಿ.ಎಂ.ಗೆ ಪತ್ರ ಬರೆಯುವ ಬದಲು ನನಗೆ ನೇರವಾಗಿ ಹೇಳಬಹುದಿತ್ತು’ ಎಂದು ಕುಟುಕಿದ್ದಾರೆ.

‘ಇನ್ನಾದರೂ ಮೊಸರಲ್ಲಿ ಕಲ್ಲು ಹುಡುವುದನ್ನು ಬಿಟ್ಟು, ಎಲ್ಲ ಕೆಲಸ-ಕಾರ್ಯಗಳಿಗೆ ಸಹಕಾರ ನೀಡಲಿ. ಮಹೋತ್ಸವ ಯಶಸ್ವಿಯಾಗಿ ಮಾಡುವುದು ಗೊತ್ತಿದೆ’ ಎಂದು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಎರಡೂ ಪಕ್ಷಗಳ ನಾಯಕರ ಪ್ರತಿಷ್ಠೆ ಮತ್ತು ಆರೋಪ-ಪ್ರತ್ಯಾರೋಪ ಮಸ್ತಕಾಭಿಷೇಕದ ಮೇಲೆ ಕರಿ ನೆರಳು ಬೀರಿದೆ. ಈ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳಲಾಗದೆ, ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT