ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಡಿ ಗೆದ್ದ ಐವರು ಮಹಿಳೆಯರ ಕತೆ

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ತ್ರಿವಳಿ ತಲಾಖ್‌ ಪದ್ಧತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೊದಲು ದೂರು ಕೊಟ್ಟವರು ಉತ್ತರಾಖಂಡದ ಶಾಯಿರಾ ಬಾನು. ‘ತಲಾಖ್‌’ ಎಂದು ಮೂರು ಬಾರಿ ಬರೆದ ಪತ್ರವನ್ನು ಕಳುಹಿಸುವ ಮೂಲಕ ಗಂಡ ಅವರನ್ನು ಬಿಟ್ಟು ಹೋಗಿದ್ದ. ಶಾಯಿರಾ ದೂರು ಕೊಟ್ಟು ಎರಡು ವರ್ಷ ಬಳಿಕ ಈ ಐತಿಹಾಸಿಕ ತೀರ್ಪು ಬಂದಿದೆ. ಅವರ ನಂತರ ನಾಲ್ವರು ದೂರು ಕೊಟ್ಟಿದ್ದಾರೆ. ಆರನೇ ಅರ್ಜಿಯನ್ನು ಭಾರತೀಯ ಮುಸ್ಲಿಂ ಮಹಿಳಾ ಅಂದೋಲನ ಸಲ್ಲಿಸಿತ್ತು. ಚಾರಿತ್ರಿಕವಾದ ತೀರ್ಪಿಗೆ ಕಾರಣರಾದ ಐವರು ಮಹಿಳೆಯರ ಬಗೆಗಿನ ಕಿರು ಚಿತ್ರಣ ಇಲ್ಲಿದೆ.

ಶಾಯಿರಾ ಬಾನು: ಅಲಹಾಬಾದ್‌ನಲ್ಲಿ ರಿಯಲ್‌ ಎಸ್ಟೇಟ್‌ ದಲ್ಲಾಳಿಯಾಗಿದ್ದ ರಿಜ್ವಾನ್‌ ಅಹ್ಮದ್‌, ಶಾಯಿರಾ ಬಾನು ಅವರಿಗೆ 2015ರ ಅಕ್ಟೋಬರ್‌ನಲ್ಲಿ ತ್ರಿವಳಿ ತಲಾಖ್‌ ನೀಡಿದ್ದರು. ಇಬ್ಬರು ಮಕ್ಕಳನ್ನು ಜತೆಗೆ ಕರೆದೊಯ್ದಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಶಾಯಿರಾ, ತ್ರಿವಳಿ ತಲಾಖ್‌, ಬಹುಪತ್ನಿತ್ವ ಮತ್ತು ನಿಖಾ ಹಲಾಲ ಅನ್ನು (ವಿಚ್ಛೇದನ ಕೊಟ್ಟ ಗಂಡನನ್ನು ಮತ್ತೆ ಮದುವೆ ಆಗುವುದಕ್ಕೆ ಮೊದಲು ಬೇರೊಬ್ಬನನ್ನು ಮದುವೆ ಆಗಲೇಬೇಕಿರುವ ನಿಯಮ) ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ತೀರ್ಪು ನೀಡುವಂತೆ ಕೋರಿದ್ದರು.

ಈ ವಾದವನ್ನು ಶಾಯಿರಾ ಅವರ ಗಂಡ ತಿರಸ್ಕರಿಸಿದ್ದರು. ಮುಸ್ಲಿಂ ಸಮುದಾಯವು ವೈಯಕ್ತಿಕ ಕಾನೂನಿನ ಅಡಿಯಲ್ಲಿ ಬರುತ್ತದೆ. ಶಾಯಿರಾ ಅವರು ಪ್ರಶ್ನಿಸಿರುವ ಮೂರೂ ಪದ್ಧತಿಗಳಿಗೆ ಮುಸ್ಲಿಂ ವೈಯಕ್ತಿಕ ಕಾನೂನಿನ ಮಾನ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದರು.

ಶಾಯಿರಾ ಸಲ್ಲಿಸಿದ ದೂರಿಗೆ ಸಂಬಂಧಿಸಿ ಕೇಂದ್ರದ ಎನ್‌ಡಿಎ ಸರ್ಕಾರ ಪ್ರಮಾಣಪತ್ರ ಸಲ್ಲಿಸಿ, ತಲಾಖ್‌ ಪದ್ಧತಿಯನ್ನು ವಿರೋಧಿಸಿತ್ತು.

ಇಶ್ರತ್ ಜಹಾಂ: ಪಶ್ಚಿಮ ಬಂಗಾಳದ ಹೌರಾದ ಇಶ್ರತ್ ಜಹಾಂ ಅವರಿಗೆ ದುಬೈಯಲ್ಲಿದ್ದ ಗಂಡ ಮುರ್ತಜಾ 2015ರ ಏಪ್ರಿಲ್‌ನಲ್ಲಿ ದೂರವಾಣಿ ಮೂಲಕ ತಲಾಖ್‌ ನೀಡಿದ್ದರು. ಮುರ್ತಜಾ ಅವರು ಬೇರೆ ಮದುವೆ ಆಗಿದ್ದಲ್ಲದೆ ಮೊದಲ ಮದುವೆಯಲ್ಲಿ ಇದ್ದ ನಾಲ್ಕು ಮಕ್ಕಳನ್ನು ಜತೆ ಕರೆದುಕೊಂಡು ಹೋಗಿದ್ದರು.

‘ದೂರವಾಣಿಯ ತಲಾಖ್‌ ಅನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನನಗೆ ನ್ಯಾಯ ಬೇಕು. ಗಂಡ ಕಸಿದುಕೊಂಡು ಹೋಗಿರುವ ನಾಲ್ಕು ಮಕ್ಕಳನ್ನು ವಾಪಸ್‌ ಕೊಡಬೇಕು ಮತ್ತು ಮಕ್ಕಳನ್ನು ಬೆಳೆಸಲು ಜೀವನಾಂಶ ಕೊಡಬೇಕು. ಆ ಕಾರಣಕ್ಕಾಗಿಯೇ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ. ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ’ ಎಂದು ಇಶ್ರತ್‌ ಹೇಳುತ್ತಾರೆ.

ಗುಲ್ಶನ್‌ ಪರ್ವೀನ್‌: 2015ರಲ್ಲಿ ಪರ್ವೀನ್‌ ಅವರು ತವರು ಮನೆಗೆ ಬಂದಿದ್ದಾಗ ಉತ್ತರ ಪ್ರದೇಶದ ರಾಂಪುರದ ಪರ್ವೀನ್‌ಗೆ ₹10ರ ಛಾಪಾ ಕಾಗದದಲ್ಲಿ ತಲಾಖ್‌ ಎಂದು ಮೂರು ಬಾರಿ ಬರೆದು ಕಳುಹಿಸಲಾಗಿತ್ತು. ‘ಒಂದು ದಿನ ನನ್ನ ಗಂಡನಿಗೆ ವಿಚ್ಛೇದನ ಕೊಡೋಣ ಅನಿಸಿಬಿಟ್ಟಿತ್ತು. ಆತನ ಈ ನಿರ್ಧಾರ ನಾನು ಮತ್ತು ನನ್ನ ಎರಡು ವರ್ಷದ ಮಗನನ್ನು ನಿರ್ಗತಿಕರನ್ನಾಗಿ ಮಾಡಿತು’ ಎಂದು ಗುಲ್ಶನ್‌ ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ.

ತಲಾಖ್‌ ಕೊಡುವ ಈ ನಿರ್ಧಾರವನ್ನು ಪರ್ವೀನ್‌ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಗಂಡನೇ ಕೋರ್ಟ್‌ಗೆ ಹೋಗುತ್ತಾರೆ. ಗಂಡನ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಆರೋಪವನ್ನೂ ಪರ್ವೀನ್‌ ಹೊರಿಸಿದ್ದಾರೆ.

ಅಫ್ರೀನ್‌ ರೆಹಮಾನ್‌: ವೈವಾಹಿಕ ಪೋರ್ಟಲ್‌ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಇವರು 2014ರಲ್ಲಿ ಮದುವೆಯಾದರು. ‘ಎರಡು ಮೂರು ತಿಂಗಳಲ್ಲಿ ವರದಕ್ಷಿಣೆಗೆ ಒತ್ತಾಯಿಸಿ ಗಂಡನ ಮನೆಯಲ್ಲಿ ಕಿರುಕುಳ ಆರಂಭವಾಯಿತು. ನಂತರ ಹೊಡೆಯುವುದಕ್ಕೂ ಆರಂಭಿಸಿದರು. 2015ರ ಸೆಪ್ಟೆಂಬರ್‌ನಲ್ಲಿ ಮನೆ ಬಿಟ್ಟು ಹೋಗುವಂತೆ ಹೇಳಿದರು’ ಎಂದು ಅಫ್ರೀನ್‌ ಸುದ್ದಿ ವಾಹಿನಿಯೊಂದಕ್ಕೆ ಹೇಳಿದ್ದರು.

ತವರಿಗೆ ಮರಳಿದ ಅಫ್ರೀನ್‌ಗೆ ಕೆಲ ದಿನಗಳ ಬಳಿಕ ಸ್ಪೀಡ್‌ ಪೋಸ್ಟ್‌ನಲ್ಲಿ ತಲಾಖ್‌ನ ಪತ್ರ ಬಂತು. ‘ಇದು ಸಂಪೂರ್ಣವಾಗಿ ತಪ್ಪು, ಅನ್ಯಾಯ. ಸ್ವೀಕಾರಾರ್ಹ ಅಲ್ಲವೇ ಅಲ್ಲ’ ಎಂದು ಅವರು ಹೇಳಿದ್ದರು. ಮಧ್ಯಪ್ರವೇಶಕ್ಕೆ ಕೋರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅತಿಯಾ ಸಬ್ರಿ: 2012ರಲ್ಲಿ ಮದುವೆಯಾದ ಅತಿಯಾ ಅವರಿಗೆ ಕಾಗದದ ತುಣುಕಿನಲ್ಲಿ ತಲಾಖ್‌ ಎಂದು ಮೂರು ಬಾರಿ ಬರೆದು ಕೊಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸು‍ಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅವರಿಗೆ ನಾಲ್ಕು ಮತ್ತು ಮೂರು ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ‘ನನಗೆ ಕೊಟ್ಟ ತಲಾಖ್‌ ಅನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ನನಗೆ ನ್ಯಾಯ ಬೇಕು. ನಾನು ನನ್ನ ಮಕ್ಕಳನ್ನು ಬೆಳೆಸಬೇಕಿದೆ’ ಎಂದು ಸಬ್ರಿ ಹೇಳುತ್ತಾರೆ.

ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ: ಈ ಸಂಘಟನೆಯು ‘ಸಮಾನತೆಗಾಗಿ ಮುಸ್ಲಿಂ ಮಹಿಳೆಯರ ತುಡಿತ’ ಎಂಬ ಹೆಸರಿನ್ಲಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಿದೆ. ಗಂಡು ಮತ್ತು ಹೆಣ್ಣು ಸಮಾನ ಎಂದು ಅಲ್ಲಾಹ್‌ ಹೇಳುತ್ತಾನೆ ಎಂದು ಈ ಅರ್ಜಿಯಲ್ಲಿ ವಾದಿಸಲಾಗಿದೆ.

‘ತಲಾಖ್‌ ಬಗ್ಗೆ ಕುರ್‌ಆನ್‌ನಲ್ಲಿ ಇರುವ ವಚನಗಳನ್ನು ನಾವು ಅರ್ಜಿಯಲ್ಲಿ ಉಲ್ಲೇಖಿಸಿದ್ದೇವೆ. ತಲಾಖ್‌ ಜಾರಿಯಾಗಲು ಕನಿಷ್ಠ 90 ದಿನ ಬೇಕು ಎಂಬ ವಿಚಾರವನ್ನು ತಿಳಿಸಿದ್ದೇವೆ. ನಮ್ಮ ಎರಡನೇ ವಾದ ಲಿಂಗ ಸಮಾನತೆಗೆ ಸಂಬಂಧಿಸಿದ್ದಾಗಿತ್ತು. ಎಲ್ಲ ಪ್ರಜೆಗಳಿಗೆ ಸಮಾನ ಹಕ್ಕುಗಳಿವೆ ಎಂಬ ವಿಚಾರದಲ್ಲಿ ಭಾರತದ ಸಂವಿಧಾನದಲ್ಲಿ ಯಾವ ದ್ವಂದ್ವವೂ ಇಲ್ಲ’ ಎಂದು ಆಂದೋಲನದ ಝಕಿಯ ಸೊಮಾನ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT