ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮತಿ ಇಲ್ಲದೆ ಇಂದಿರಾ ಕ್ಯಾಂಟೀನ್‌ ಆರಂಭ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ತಡವಾಗಿ ಅರ್ಜಿ ಸಲ್ಲಿಕೆ
Last Updated 22 ಆಗಸ್ಟ್ 2017, 19:44 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾಂಟೀನ್‌, ಹೋಟೆಲ್‌ ಅಥವಾ ರೆಸ್ಟೋರೆಂಟ್‌ ನಡೆಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅನುಮತಿ ಕಡ್ಡಾಯ. ಆದರೆ, ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ಗಳು ಮಾತ್ರ ಯಾವುದೇ ಪ್ರಾಧಿಕಾರದ ಅನುಮತಿ ಇಲ್ಲದೆ ನಡೆಯುತ್ತಿವೆ!

ನಗರದಲ್ಲಿ ಹೋಟೆಲ್‌ ಆರಂಭಿಸಲು ಮೊದಲು ಕಾರ್ಮಿಕ ಇಲಾಖೆಯ ಅನುಮತಿ, ಬಿಬಿಎಂಪಿಯಿಂದ ವಾಣಿಜ್ಯ ಪರವಾನಗಿ, ಎಫ್‌ಎಸ್‌ಎಸ್‌ಎಐ ಅನುಮತಿ ಪಡೆಯುವುದು ಕಡ್ಡಾಯ. ಇಂದಿರಾ ಕ್ಯಾಂಟೀನ್‌ಗಳನ್ನು ನಡೆಸುತ್ತಿರುವ ಗುತ್ತಿಗೆದಾರರಾಗಲಿ ಅಥವಾ ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಬಿಬಿಎಂಪಿಯಾಗಲಿ ಪ್ರಾಧಿಕಾರದ ಅನುಮತಿ ಪಡೆಯದೆ, ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ.

‘ಒಂದೊಂದೇ ಲೋಪಗಳು ಹೊರ ಬಂದ ನಂತರ ಎಚ್ಚೆತ್ತುಕೊಳ್ಳುತ್ತಿರುವ ಪಾಲಿಕೆ ಅಧಿಕಾರಿಗಳು, ಮಂಗಳವಾರ ಆರೋಗ್ಯ ಇಲಾಖೆ, ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ, ಆಹಾರ ಗುಣಮಟ್ಟ ಪರೀಕ್ಷಕರನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದಾರೆ. ಪ್ರಾಧಿಕಾರದ ಅನುಮತಿಗೂ ಅರ್ಜಿ ಸಲ್ಲಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಇಂದಿರಾ ಕ್ಯಾಂಟೀನ್‌ಗಳು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ನಿಯಮ ಪ್ರಕಾರವೇ ನೋಂದಣಿಯಾಗಬೇಕು’ ಎಂದು ಆಹಾರ ಸುರಕ್ಷತೆ ಆಯುಕ್ತ ಮನೋಜ್‌ ಕುಮಾರ್‌ ಮೀನಾ ಪ್ರತಿಕ್ರಿಯಿಸಿದ್ದಾರೆ.

‘ಕ್ಯಾಂಟೀನ್‌ ಆರಂಭಿಸುವ ಮೊದಲೇ ಅನುಮತಿ ಪಡೆದುಕೊಳ್ಳಬೇಕಿತ್ತು. ಕ್ಯಾಂಟೀನ್‌ಗಳು ಒಮ್ಮೆ ನೋಂದಣಿಯಾಗಿ ಇಲಾಖೆ ವ್ಯಾಪ್ತಿಗೆ ಬಂದರೆ, ಆಹಾರ ಸುರಕ್ಷತಾ ವಿಭಾಗದವರು ಆಹಾರದ ಮಾದರಿ ಸಂಗ್ರಹಿಸಿ, ಆಹಾರದ ಸುರಕ್ಷತೆ ಮತ್ತು ಗುಣಮಟ್ಟ ಪರಿಶೀಲಿಸಲಿದ್ದಾರೆ’ ಎನ್ನುತ್ತಾರೆ ಅವರು.

110 ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆ ಗುತ್ತಿಗೆ ಪಡೆದಿರುವ ಚೆಫ್‌ ಟಾಕ್‌ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಪೂಜಾರಿ, ‘ವೈಟ್‌ಫೀಲ್ಡ್‌ನಲ್ಲಿರುವ ತಾತ್ಕಾಲಿಕ ಅಡುಗೆ ಮನೆಯಲ್ಲಿ ಆಹಾರ ತಯಾರಿಸಿ, ಕ್ಯಾಂಟೀನ್‌ಗಳಿಗೆ ಪೂರೈಸಲು ಪ್ರಾಧಿಕಾರದ ಅನುಮತಿ ಪಡೆದಿದ್ದೇವೆ. ಕ್ಯಾಂಟೀನ್‌ಗಳು ಮತ್ತು ಅಡುಗೆ ಮನೆಗಳಿಗೆ ಪ್ರತ್ಯೇಕ ವಾಣಿಜ್ಯ ಪರವಾನಗಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅನುಮತಿ ಕೊಡಿಸಲು ಬಿಬಿಎಂಪಿಗೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

ಅನುಮತಿ ಬೇಡ: ಅಧಿಕಾರಿಗಳ ವಾದ
‘ಖಾಸಗಿ ಹೋಟೆಲ್‌ಗಳಾದರೆ ಮಾತ್ರ ನೋಂದಣಿ ಮತ್ತು ಅನುಮತಿ ಪಡೆದುಕೊಳ್ಳವುದು ಕಡ್ಡಾಯ. ಸರ್ಕಾರವೇ ಆರಂಭಿಸಿರುವ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಪ್ರಾಧಿಕಾರದ ಅನುಮತಿ ಅಗತ್ಯವಿಲ್ಲ’ ಎಂದು ಪಾಲಿಕೆಯ ಕೆಲವು ಅಧಿಕಾರಿಗಳು ವಾದಿಸುತ್ತಾರೆ.
‘ಯೋಜನೆ ಸರ್ಕಾರದ್ದೇ ಆಗಿದ್ದರೂ ಆಹಾರ ಪೂರೈಕೆ ಗುತ್ತಿಗೆಯನ್ನು ಖಾಸಗಿ ವ್ಯಕ್ತಿಗಳಿಗೆ ನೀಡಿರುವುದರಿಂದ ಮತ್ತು ಆಹಾರವನ್ನು ಮಾರುತ್ತಿರುವುದರಿಂದ ನಿಯಮಾನುಸಾರ ನೋಂದಣಿ ಮಾಡಿಸಬೇಕು. ಅಲ್ಲದೆ, ಸರ್ಕಾರವೂ ಸೇರಿದಂತೆ ಯಾರೇ ಆಗಲಿ ಆಹಾರ ಮಾರಾಟ ವ್ಯವಹಾರ ಆರಂಭಿಸಿದರೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಸೆಕ್ಷನ್‌ 31 (1)ರಡಿ ಅನುಮತಿ ಪಡೆದುಕೊಳ್ಳಲೇಬೇಕು’ ಎನ್ನುತ್ತಾರೆ ಪ್ರಾಧಿಕಾರದ ಅಧಿಕಾರಿಯೊಬ್ಬರು.

ನಿಯಮ ಉಲ್ಲಂಘನೆ ಶಿಕ್ಷಾರ್ಹ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಸೆಕ್ಷನ್‌ 31 (7)ರ ಪ್ರಕಾರ ಆಹಾರ ತಯಾರಿಸಿ, ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಿ ಮಾರಾಟ ಮಾಡಲು ಅಥವಾ ಪ್ರದರ್ಶನ ಮಾಡಲು ಪ್ರತ್ಯೇಕ ಪರವಾನಗಿ ಪಡೆದುಕೊಳ್ಳಬೇಕು.
ತಾತ್ಕಾಲಿಕ ಮಳಿಗೆಯಲ್ಲಿ ಅಥವಾ ತಳ್ಳುಗಾಡಿ ಕ್ಯಾಂಟೀನ್‌ಗಳಲ್ಲಿ ಆಹಾರ ಪೂರೈಸುವವರನ್ನು ಹೊರತುಪಡಿಸಿ, ಯಾವುದೇ ವ್ಯಕ್ತಿ ಅಥವಾ ಆಹಾರ ಮಾರಾಟ ವ್ಯವಹಾರ ನಡೆಸುವವರು ಪರವಾನಗಿ ಇಲ್ಲದೆ, ಆಹಾರ ಮಾರಾಟ ವ್ಯವಹಾರ ನಡೆಸುವುದು ಕಂಡುಬಂದಲ್ಲಿ 6 ತಿಂಗಳವರೆಗೆ ಶಿಕ್ಷೆ ಮತ್ತು ₹5 ಲಕ್ಷ ದಂಡದ ವಿಧಿಸಲು ಅವಕಾಶವಿದೆ ಎನ್ನುತ್ತದೆ ಕಾಯ್ದೆಯ ಸೆಕ್ಷನ್‌ 63.

ಆಹಾರ ದರ್ಶಿನಿಗಳಿಗೆ ಎದುರಾಗಿದೆ ಸವಾಲು
ನಗರದಲ್ಲಿ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗುತ್ತಿದ್ದಂತೆ, ಫುಟ್‌ಪಾತ್‌ ಕ್ಯಾಂಟೀನ್‌ ಮತ್ತು ಆಹಾರ ದರ್ಶಿನಿಗಳಿಗೆ ನಡುಕ ಉಂಟಾಗಿದೆ.
ಅಗ್ಗದ ದರದಲ್ಲಿ ಬಡವರು, ಕೂಲಿಕಾರ್ಮಿಕರಿಗೆ ಆಹಾರ ಒದಗಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳ ಜತೆಗೆ ಅಸ್ತಿತ್ವಕ್ಕಾಗಿ ಪೈಪೋಟಿ ನಡೆಸಬೇಕಾಗಿದೆ.

ಕಾಯಂ ಗ್ರಾಹಕರು ಇಂದಿರಾ ಕ್ಯಾಂಟೀನ್‌ಗಳತ್ತ ಆಕರ್ಷಿತರಾಗುವುದನ್ನು ತಡೆಯಲು, ಆಹಾರ ದರ್ಶಿನಿ ಮತ್ತು ಫುಟ್‌ಪಾತ್‌ ಕ್ಯಾಂಟೀನ್‌ಗಳು ಇಡ್ಲಿಗಳ ಗಾತ್ರ ಹೆಚ್ಚಳ ಮತ್ತು ಆಹಾರದ ಪ್ರಮಾಣ ಹೆಚ್ಚಿಸುವ ತಂತ್ರದ ಮೊರೆ ಹೋಗಿದ್ದಾರೆ.

‘ಇಂದಿರಾ ಕ್ಯಾಂಟೀನ್‌ಗಳಲ್ಲಿ ತಿಂಡಿ ₹5ಕ್ಕೆ ಮತ್ತು ಊಟ ₹10ಕ್ಕೆ ಕೊಡುತ್ತಿರುವಾಗ, ದರ ಇಳಿಸಿ ಬೆಲೆ ಸಮರ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ. ಆಹಾರದ ಗುಣಮಟ್ಟ ಮತ್ತು ಪ್ರಮಾಣ ಹೆಚ್ಚಿಸಲು ಆದ್ಯತೆ ನೀಡುತ್ತಿದ್ದೇವೆ’ ಎನ್ನುತ್ತಾರೆ ಮಹಾಲಕ್ಷ್ಮಿ ಲೇಔಟ್‌ನ ಮಹಾಲಕ್ಷ್ಮಿ ರಿಫ್ರೆಶ್‌ಮೆಂಟ್‌ನ ನಾಗರಾಜ ಐತಾಳ್‌.

‘ಸಮೀಪದಲ್ಲಿ ಇಂದಿರಾ ಕ್ಯಾಂಟೀನ್‌ ಇರುವುದರಿಂದ ಶೇ 10ರಷ್ಟು ವ್ಯಾಪಾರ ಕಡಿಮೆಯಾಗಿದೆ. ಗ್ರಾಹಕರನ್ನು ಕಾಯ್ದುಕೊಳ್ಳಲು ಹೊಸ ಪ್ರಯೋಗ ಮಾಡಬೇಕಾಗಿದೆ. ಸದ್ಯ ಇಡ್ಲಿ ಮಾತ್ರ ನೀಡುತ್ತಿದ್ದೆವು. ಈಗ ನೂಡಲ್ಸ್‌, ಫ್ರೈಡ್‌ ರೈಸ್‌ ಹಾಗೂ ಚೀನಿ ಆಹಾರ ತಿನಿಸು ನೀಡಲು ಯೋಚಿಸುತ್ತಿದ್ದೇವೆ’ ಎನ್ನುತ್ತಾರೆ ರಾಜಾಜಿನಗರದಲ್ಲಿ ದಕ್ಷಿಣ ಭಾರತ ಶೈಲಿ ಇಡ್ಲಿ ಹೋಟೆಲ್‌ ನಡೆಸುತ್ತಿರುವ ನಮ್ರತಾ ವರ್ಮಾ.

* ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅನುಮತಿಗೆ ಅರ್ಜಿ ಸಲ್ಲಿಸಿದ್ದೇವೆ. ಒಂದು ವಾರದಲ್ಲಿ ಅನುಮತಿ ಸಿಗಲಿದೆ.
–ಎನ್‌.ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ನೋಟು ರದ್ದತಿ, ಜಿಎಸ್‌ಟಿ ವ್ಯವಸ್ಥೆ ಹೋಟೆಲ್‌ಗಳಿಗೆ ಪೆಟ್ಟು ನೀಡಿದರೆ, ಇಂದಿರಾ ಕ್ಯಾಂಟೀನ್‌ಗಳು ಫುಟ್‌ಪಾತ್‌ ಕ್ಯಾಂಟೀನ್‌, ಆಹಾರ ದರ್ಶಿನಿಗಳಿಗೆ ದೊಡ್ಡ ಹೊಡೆತ ನೀಡಿವೆ.
–ಚಂದ್ರಶೇಖರ್‌ ಹೆಬ್ಬಾರ್‌, ನಗರದ ಹೋಟೆಲ್‌ಗಳ ಸಂಘದ ಅಧ್ಯಕ್ಷ

* ಕ್ಯಾಂಟೀನ್‌ ನಿರ್ಮಾಣ ಪೂರ್ಣಗೊಳಿಸುವ ಅವಸರ ಮತ್ತು ಉದ್ಘಾಟನೆ ಸಮಾರಂಭದ ತಯಾರಿಯಲ್ಲಿ ಅನುಮತಿ ಪಡೆದುಕೊಳ್ಳಲು ಆಗಿರಲಿಲ್ಲ.
– ನಂದೀಶ್‌, ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT