ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲ್ಕುಲೇಟರ್ ಕಥೆ–2

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಈಜಿಪ್ಟ್‌, ಸುಮೇರಿಯನ್‌ ನಾಗರಿಕತೆಗಳ ಜನ ಲೆಕ್ಕಾಚಾರ ಮಾಡಲು ಅಬಾಕಸ್‌ ಬಳಸಲು ಆರಂಭಿಸಿದ ನಂತರ 3,700 ವರ್ಷಗಳ ಕಾಲ, ಅಂದರೆ ಕ್ರಿ.ಶ 17ನೇ ಶತಮಾನದವರೆಗೂ ಪರಿಣಾಮಕಾರಿ ಎನ್ನಬಹುದಾದ, ಲೆಕ್ಕ ಹಾಕುವ ಕಷ್ಟವನ್ನು ಸುಲಭ ಮಾಡುವಂತಹ ಕ್ಯಾಲ್ಕುಲೇಟರ್ ಅಭಿವೃದ್ಧಿಯಾಗಲಿಲ್ಲ.

ಇದಕ್ಕೂ ಮೊದಲು, 16ನೇ ಶತಮಾನದಲ್ಲಿ ಅಳತೆ ಕೋಲು (ಅಡಿ ಕೋಲು ಅಥವಾ ಸ್ಕೇಲ್‌) ಬಳಸಿ ಲೆಕ್ಕ ಹಾಕುವ ಸಾಧನಗಳು ಆವಿಷ್ಕಾರಗೊಂಡಿದ್ದವು. ಇದರಲ್ಲಿ ಪ್ರಮುಖವಾದುದು ‘ಜಿಯೊಮೆಟ್ರಿಕ್‌ ಮಿಲಿಟರಿ ಕಂಪಾಸ್‌’ ಮತ್ತು ‘ಸ್ಲೈಡ್‌ ರೂಲ್‌’.

ಜಿಯೊಮೆಟ್ರಿಕ್‌ ಮಿಲಿಟರಿ ಕಂಪಾಸ್‌ ಅನ್ನು ಅಭಿವೃದ್ಧಿ ಪಡಿಸಿದವರು ಯಾರು ಎಂಬ ಬಗ್ಗೆ ಗೊಂದಲಗಳಿವೆ. ಕೆಲವರು ಬ್ರಿಟನ್‌ ಗಣಿತ ತಜ್ಞ ಥಾಮಸ್‌ ಹುಡ್‌ ಎಂದು ಹೇಳಿದರೆ, ಇನ್ನು ಕೆಲವರು ಇಟಲಿಯ ಖ್ಯಾತ ಖಗೋಳ ವಿಜ್ಞಾನಿ ಗೆಲಿಲಿಯೊ ಗೆಲಿಲಿ ಎಂದು ಹೇಳುತ್ತಾರೆ. ಆದರೆ ಈ ಸಾಧನವನ್ನು ಹೆಚ್ಚು ಬಳಸಿದವರು ಗೆಲಿಲಿ. ಹಾಗಾಗಿ, ಬಹುತೇಕರು ಇದು ಜಗತ್ತಿಗೆ ಗೆಲಿಲಿಯವರು ನೀಡಿದ ಕೊಡುಗೆ ಎಂದೇ ಬಣ್ಣಿಸುತ್ತಾರೆ.

ಗಣಿತದ ಪ್ರೊಪೋಷನ್‌, ಟ್ರಿಗ್ನಾಮೆಟ್ರಿ, ಘನಮೂಲ (cube root), ಗುಣಿಸುವುದು ಮತ್ತು ಭಾಗಕಾರದ ಲೆಕ್ಕಗಳನ್ನು ಇದರಲ್ಲಿ ಮಾಡಬಹುದಿತ್ತು. 16ನೇ ಶತಮಾನದ ಅಂತ್ಯದಲ್ಲಿ ಆರಂಭವಾಗಿದ್ದ ಇದರ ಬಳಕೆ 19ನೇ ಶತಮಾನದವರೆಗೂ ಮುಂದುವರೆದಿತ್ತು.

ಇನ್ನೊಂದು ಸಾಧನ ಸ್ಲೈಡ್‌ ರೂಲ್‌. ಇದು, ಲಾಗರಿದಮ್‌ನ ಅಳತೆ ಕೋಲನ್ನು ಬಳಸಿ ತಯಾರಿಸುತ್ತಿದ್ದ ಸಾಧನ. ಈ ಉಪಕರಣದ ಮೂಲಕ ಅತ್ಯಂತ ಕ್ಷಿಪ್ರವಾಗಿ ಗುಣಾಕಾರ, ಭಾಗಕಾರ, ಪ್ರೊಪೋಷನ್, ಲಾಗರಿದಮ್‌ ಲೆಕ್ಕಗಳನ್ನು ಮಾಡಬಹುದಿತ್ತು. ಕೂಡಿಸುವುದು, ಕಳೆಯುವುದು ಸಾಧ್ಯವಿರಲಿಲ್ಲ. 1980ರ ದಶಕದವರೆಗೂ ಇದರ ಬಳಕೆ ಇತ್ತು. ವಿಶೇಷವಾಗಿ ಗಣಿತ ವಿಷಯದ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ತಿಳಿ ಹೇಳಲಾಗುತ್ತಿತ್ತು.

ಕ್ಯಾಲ್ಕುಲೇಟರ್‌ನಲ್ಲಿ ಕ್ರಾಂತಿಕಾರಕ ಬದಲಾವಣೆ ಆಗಿದ್ದು 1642ರಲ್ಲಿ. ಪುನರುಜ್ಜೀವನದ ಅವಧಿಯು ಹಲವಾರು ಸಂಶೋಧನೆಗಳಿಗೆ ನೀರುಣಿಸಿತ್ತು. ಅವುಗಳಲ್ಲೊಂದು ಆಧುನಿಕ ಲೆಕ್ಕಿಗ/ಗಣಕಯಂತ್ರದ ಅಭಿವೃದ್ಧಿ. ಜಗತ್ತಿನ ಮೊತ್ತ ಮೊದಲ ಯಾಂತ್ರಿಕ ಕ್ಯಾಲ್ಕುಲೇಟರ್ ತಯಾರಾಗಿದ್ದು ಈ ವರ್ಷ.

ಫ್ರಾನ್ಸ್‌ನ ಚಿಂತಕ ಮತ್ತು ಗಣಿತ ಪರಿಣತ ಬ್ಲೈಸ್‌ಪಾಸ್ಕೆಲ್‌ ಎಂಬುವವರು, ಮಾನವನ ಹೆಚ್ಚು ಮಧ್ಯಪ್ರವೇಶ ಇಲ್ಲದೆಯೇ ಲೆಕ್ಕ ಹಾಕುವ ಯಂತ್ರವನ್ನು ಅಭಿವೃದ್ಧಿಪಡಿಸಿದರು ಎಂದು ಹೇಳಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಇದರ ನಿರ್ಮಾತೃ ವಿಲ್‌ಹೆಮ್‌ಶಿಕಾರ್ಡ್‌ ಎಂಬುವವರು ಎಂಬ ವಾದ ಇದೆ.

ಶಿಕಾರ್ಡ್ ಅವರು ರೂಪಿಸಿದ್ದ ಯಂತ್ರವನ್ನು ಪಾಸ್ಕೆಲ್‌ ಜನಪ್ರಿಯಗೊಳಿಸಿದರು ಎಂದು ಹೇಳಲಾಗುತ್ತಿದೆ. ಆದರೆ, ಈ ಸಾಧನ ಹೆಚ್ಚಾಗಿ ಪಾಸ್ಕಲ್‌ ಹೆಸರಿನ ಜೊತೆಗೆ ತಳಕುಹಾಕಿಕೊಂಡಿದೆ. ಈ ಸಾಧನದಲ್ಲಿ ಅಂಕಗಣಿತದ ಮೂಲ ನಾಲ್ಕು ಅಂಶಗಳಾದ ಕೂಡಿಸುವುದು, ಕಳೆಯುವುದು, ಗುಣಿಸು ಮತ್ತು ಭಾಗಾಕಾರವನ್ನು ಮಾಡಬಹುದಿತ್ತು.

ಶಿಕಾರ್ಡ್‌, ಪಾಸ್ಕಲ್ ಅವರ ನಂತರ ಗಾಟ್ಪ್ರೈಡ್ ಲೀಬ್‌ನಿಜ್‌ ಎಂಬುವವರು ನಾಲ್ಕು ರೀತಿಯ ಲೆಕ್ಕಗಳನ್ನು ಮಾಡಬಹುದಾದ ಯಂತ್ರವನ್ನು ಅಭಿವೃದ್ಧಿಪಡಿಸಲು 40 ವರ್ಷಗಳ ಕಾಲ ಪ್ರಯತ್ನಪಟ್ಟರು. ಈ ಯತ್ನದಲ್ಲಿ ‘ಲೀಬ್‌ನಿಜ್‌ ವೀಲ್‌’ ಎಂಬ ಪ್ರಕ್ರಿಯೆಯೊಂದನ್ನು ಆವಿಷ್ಕರಿಸಿದರು. ಆದರೆ, ಪೂರ್ಣ ಪ್ರಮಾಣದ ಯಂತ್ರ ಅಭಿವೃದ್ಧಿಪಡಿಸುವಲ್ಲಿ ಅವರು ಸೋತರು.

17ನೇ ಶತಮಾನದುದ್ದಕ್ಕೂ ಲೆಕ್ಕಹಾಕುವ ಗಡಿಯಾರವನ್ನು (ಗಡಿಯಾರದಲ್ಲಿರುವ ತಂತ್ರಜ್ಞಾನ ಬಳಸುವ ಯಂತ್ರ) ಅಭಿವೃದ್ಧಿಸುವ ಐದು ಪ್ರಯತ್ನಗಳು ವಿಫಲವಾಗಿದ್ದವಂತೆ. ಆದರೆ, ಯಾವುದೂ ಯಶ ಕಂಡಿರಲಿಲ್ಲ.

18ನೇ ಶತಮಾನದಲ್ಲಿ ಇನ್ನಷ್ಟು ಸುಧಾರಿತ ಕ್ಯಾಲ್ಕುಲೇಟರ್‌ಗಳನ್ನು ಅಭಿವೃದ್ಧಿಪಡಿಸುವ ಯತ್ನಗಳು ಮುಂದುವರಿದವು. ಆದರೆ, ಹೇಳುವಷ್ಟು ಯಶಸ್ಸು ಗಿಟ್ಟಲಿಲ್ಲ. ಇಟಲಿಯ ವೆನಿಸ್‌ನವರಾದ ಜಿಯೊವನ್ನಿ ಪೊಲೆನಿ ಎಂಬುವವರು ಲೆಕ್ಕ ಮಾಡುವ ಗಡಿಯಾರ ಮತ್ತು ನಾಲ್ಕು ಲೆಕ್ಕಗಳನ್ನು (ಕೂಡಿಸು, ಕಳೆ, ಗುಣಿಸು, ಭಾಗಿಸು) ಮಾಡುವ ಪರಿಪೂರ್ಣ ಯಂತ್ರವನ್ನು ಅಭಿವೃದ್ಧಿಪಡಿಸಿದ್ದು ಆ ಶತಮಾನದ ಮಹತ್ವದ ಸಂಶೋಧನೆ.

ಈ ಗಡಿಯಾರವನ್ನು ‘ಪಿನ್‌ವೀಲ್‌ ಕ್ಯಾಲ್ಕುಲೇಟರ್’ ಎಂದು ಕರೆಯಲಾಗಿದೆ. ಇದರಲ್ಲಿ ಗಡಿಯಾರದ ಮುಳ್ಳುಗಳನ್ನು ತಿರುಗಿಸಲು ಬಳಸುವ ಹಲ್ಲಿರುವ ಗಾಲಿಗಳನ್ನೇ ಹೋಲುವ ಪುಟ್ಟ ಪುಟ್ಟ ಚಕ್ರಗಳನ್ನು ಬಳಸಲಾಗಿತ್ತು (ಇವುಗಳೇ ಪಿನ್‌ವೀಲ್‌ಗಳು).

ನಂತರ ಜಗತ್ತಿನ ವಿವಿಧ ಕಡೆಗಳಲ್ಲಿ ಕಂಡು ಬಂದ ಕೈಗಾರಿಕಾ ಕ್ರಾಂತಿ ಕ್ಯಾಲ್ಕುಲೇಟರ್‌ಗಳ ಕ್ಷೇತ್ರದಲ್ಲೂ ಕ್ರಾಂತಿ ಉಂಟು ಮಾಡಿತು.
(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT