ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಹಣ- ಅಂದು - ಇಂದು

Last Updated 23 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಗ್ರೇಟ್ ಅಮೆರಿಕನ್ ಎಕ್ಲಿಪ್ಸ್ ಎಂದು ಹಣೆ ಪಟ್ಟಿ ಅಂಟಿಸಿಕೊಂಡು ಭರ್ಜರಿ ಪ್ರಚಾರ ಪಡೆದ ಗ್ರಹಣವನ್ನು ಮಧ್ಯರಾತ್ರಿಯ (ತೆರೆಯ ಹಿಂದಿನ) ಪ್ರೇಕ್ಷಕರಾಗಿ ನಾವೂ ಕಂಡೆವು. ಚಂದ್ರನ ನೆರಳು ಹಾದು ಹೋದ ಪ್ರತಿಯೊಂದು ಊರಿನಿಂದಲೂ ಒಂದಲ್ಲ ಒಂದು ಬಗೆಯ ಪ್ರಸಾರ ನಡೆದಿತ್ತು. ತಂತಮ್ಮ ಫೇಸ್ ಬುಕ್ಕು, ಟ್ವಿಟರ್ ಬ್ಲಾಗುಗಳಲ್ಲದೆ ನೇರ ಪ್ರಸಾರವೂ ನಡೆದಿತ್ತು. ಬಲೂನುಗಳನ್ನು ಹಾರಿಸಿ ವೀಕ್ಷಿಸಿದ ದೃಶ್ಯಗಳು, ಸೋಹೋ ಮುಂತಾದ ಉಪಗ್ರಹಗಳ ನೋಟ ಎಲ್ಲವೂ ನಮಗೆ ಕುಳಿತಲ್ಲೇ ರವಾನೆಯಾಯಿತು. ಹವ್ಯಾಸಿಗಳ ದೂರದರ್ಶಕಗಳು, ಸ್ಥಳೀಯ ಮ್ಯೂಸಿಯಂ ಮತ್ತು ವಿಜ್ಞಾನ ಕೇಂದ್ರಗಳು ಸತತವಾಗಿ ಚಿತ್ರಗಳನ್ನು ಒದಗಿಸುತ್ತಲೇ ಇದ್ದವು.

ಪೂರ್ಣ ಸೂರ್ಯಗ್ರಹಣದ ಆಕರ್ಷಣೆ ಅಂತಹುದು. ರಾಜಕೀಯ, ಕ್ರೀಡೆ ಮುಂತಾದ ಬೇರೆಲ್ಲಾ ಬಿಸಿ ಬಿಸಿ ಸುದ್ದಿಗಳನ್ನು ಹಿಂದಕ್ಕೆ ತಳ್ಳಿ ಚಾನೆಲ್‌ಗಳ ಪ್ರಮುಖ ಸುದ್ದಿಯಾಗುವ ಏಕಮಾತ್ರ ನೈಸರ್ಗಿಕ ಘಟನೆ ಇದು.

ಈ ಕಾರ್ಯಕ್ರಮಗಳ ಸಿದ್ಧತೆ ಸುಮಾರು ಎರಡು ವರ್ಷಗಳಿಂದ ನಡೆದಿತ್ತು. ಇದನ್ನು ನೋಡಲು ಭಾರತದಿಂದ ಹೋದವರು ಕೂಡ ಒಂದು ವರ್ಷದ ಹಿಂದೆಯೇ ಸಿದ್ಧತೆ ನಡೆಸಿದ್ದರು.

ಪ್ರಕೃತಿ ನಮಗೆ ನೀಡುವ ಅತ್ಯದ್ಭುತ ನೋಟಗಳಲ್ಲಿ ಇದೂ ಒಂದು. ಎಷ್ಟು ಅದ್ಭುತವೋ ಅಷ್ಟೇ ನಿರಪಾಯಕಾರಿಯೂ ಹೌದು. ಅದನ್ನು ನೋಡಿ ಆನಂದಿಸುವ ಪ್ರವೃತ್ತಿ ಮೈಗೂಡಿಸಿಕೊಂಡರೆ ಸಾಕು. 1980ರ ಫೆಬ್ರುವರಿ 16ರಂದು ನಡೆದ ಗ್ರಹಣದ ನೆರಳು ಕರ್ನಾಟಕದ ಮಧ್ಯವೇ ಹಾದು ಹೋಗಿತ್ತು. ಮಟಮಟ ಮಧ್ಯಾಹ್ನದಲ್ಲಿ ಕತ್ತಲು ಕವಿದದ್ದು ಈಗಲೂ ನೆನಪಿದೆ. ಆಗ 8–10  ವಯಸ್ಸಿನಲ್ಲಿದ್ದವರೂ ಇದನ್ನು ಮರೆತಿಲ್ಲ. ಆದರೆ ಆಗ ಹುಟ್ಟಿದ್ದ ಭಯ ಎಂತಹುದು? ಬೆಂಗಳೂರಿನಲ್ಲಿ ಸ್ವಯಂ ಘೋಷಿತ ಕರ್ಫ್ಯೂ. ಬಸ್ಸುಗಳು ರದ್ದಾದವು. ರೈಲುಗಳು, ವಿಮಾನಗಳು ಖಾಲಿ ಸಂಚರಿಸಿದವು. ಬೆಂಗಳೂರಿನಿಂದ ಬಸ್‌ನಲ್ಲಿ ಹೊರಟ ವಿಜ್ಞಾನಿಗಳ ತಂಡಕ್ಕೆ ದಾರಿಯಲ್ಲಿ ತಿನಿಸು ಇರಲಿ, ನೀರೂ ಸಿಗದಂತಾಗಿತ್ತು. 1995ರ ದೀಪಾವಳಿ ಅಮಾವಾಸ್ಯೆಯ ಪೂರ್ಣಗ್ರಹಣದ ನೆರಳು ಉತ್ತರ ಭಾರತದ ಮೂಲಕ ಹಾದುಹೋಗಿತ್ತು. ವಿಜ್ಞಾನಿಗಳ ಶಿಬಿರಕ್ಕೆ ಬಂದು ಭೇಟಿ ನೀಡಬೇಕಿದ್ದ ಅಲ್ಲಿನ ಮುಖ್ಯಮಂತ್ರಿಗಳು ಮನೆಯಿಂದ ಹೊರಗೇ ಬರಲಿಲ್ಲವಂತೆ.

ಅಂದಿನಿಂದ ಇಂದಿನವರೆಗೆ ಸಾಕಷ್ಟು ಬದಲಾವಣೆಗಳಾಗಿವೆ. 2009ರ ಪೂರ್ಣ ಗ್ರಹಣಕ್ಕೆ ಪ್ರಚಾರ ಸಿಕ್ಕಿತು. ಶಾಲೆಗಳಲ್ಲಿ ವೀಕ್ಷಿಸುವ ಪ್ರಯತ್ನಗಳು ನಡೆದವು. ಆದರೆ ಆಗ ಮಾನ್ಸೂನ್ ಜೋರಿನಲ್ಲಿತ್ತು. ವಾರಾಣಸಿಯಿಂದ ನೋಡಬೇಕು ಎಂದು ಹೊರಟ ನಾವು ದಾರಿಯ ಮಧ್ಯೆ ಭೋಪಾಲ್‌ನಲ್ಲಿ ಎರಡು ದಿನ ತಂಗಿದೆವು. ಭಜನೆ ಮಾಡುತ್ತಾ ಜನ ನರ್ಮದಾ ತೀರಕ್ಕೆ ಕಾಲ್ನಡಿಗೆಯಲ್ಲೇ ಹೊರಟಿದ್ದನ್ನು ನೋಡಿದೆವು. ಗ್ರಹಣ ಸ್ನಾನಕ್ಕಂತೆ. ನಾವು ವಾರಾಣಸಿಗೆ ಹೋಗಲಾಗದೆ ಸಾಂಚಿಯಿಂದಲೇ ನೋಡಿದೆವು. ಕಾರಣ? ವಾರಾಣಸಿಯ ರೈಲು ಹತ್ತಲು ನಮಗೆ ಸಾಧ್ಯವಾಗಲೇ ಇಲ್ಲ. ನೂರಾರು ಜನರು ಸೊಂಟಕ್ಕೊಂದು ಗಂಟು ಕಟ್ಟಿಕೊಂಡು ದಬದಬನೆ ಬಂದು ಪ್ಲಾಟ್ ಫಾರಂ ತುಂಬ ತುಂಬಿಕೊಂಡರು. ರೈಲು ಬಂದಿತು;
ಅದರಲ್ಲಾಗಲೇ ಜನ ತುಂಬಿ ತುಳುಕಾಡುತ್ತಿದ್ದರು. ಏಕೆಗೊತ್ತೇ? ಎಲ್ಲರೂ ಗ್ರಹಣದ ಸ್ನಾನಕ್ಕಾಗಿ ಕಾಶಿಗೇ ಹೊರಟಿದ್ದರು. ಕಾಶಿಗೆ ಹೋಗಿದ್ದ ಒಂದಿಬ್ಬರು ಸ್ನೇಹಿತರು ಗ್ರಹಣ ನೋಡಲಿಲ್ಲ. ಏಕೆಂದರೆ ಅವರಿದ್ದ ಧರ್ಮಛತ್ರದಿಂದ ಆಚೆಗೇ ಬರಲಾಗದಂತೆ ರಸ್ತೆಯಲ್ಲಿ ಜನಪ್ರವಾಹ!

2010ರ ಜನವರಿಯ ಕಂಕಣ ಗ್ರಹಣಕ್ಕೆ ದಕ್ಷಿಣ ಭಾರತದಲ್ಲಿ ಒಳ್ಳೆಯ ಸ್ವಾಗತ ದೊರಕಿತು. ಶಾಲೆಗಳಲ್ಲಿ ಮಕ್ಕಳು ಸುರಕ್ಷಿತವಾಗಿ ವೀಕ್ಷಿಸಿದರು. ಆದರೂ ಸ್ನಾನಕ್ಕಾಗಿ ನದಿಗೆ, ಸಮುದ್ರಕ್ಕೆ ಧಾವಿಸಿದವರ ಸಂಖ್ಯೆಯೇ ಹೆಚ್ಚು.

‘ಗ್ರೇಟ್ ಎಕ್ಲಿಪ್ಸ್’ ನೋಡುವಾಗ ಮುಖ್ಯವಾಗಿ ಗಮನಿಸಬೇಕಾದದ್ದು ಜನರ ಸಹಭಾಗಿತ್ವ. ಆಸಕ್ತಿಯಿದ್ದವರು ತಂತಮ್ಮ ಕೆಲಸಗಳಿಗೆ ರಜೆಹಾಕಿ ಕಾರು ತೆಗೆದುಕೊಂಡು ಹೊರಟರು. ಕೊನೆಯ ಗಳಿಗೆಯಲ್ಲಿ ರಿಹರ್ಸಲ್ ಮಾಡದೇ ಹಿಂದಿನ ವಾರಗಳಲ್ಲೇ ಎಲ್ಲ ತಯಾರಿ ಮುಗಿಸಿಕೊಂಡಿದ್ದರು. ಕೆಲವರಂತೂ ಖಾದ್ಯ ವಸ್ತುಗಳನ್ನೂ ಒಯ್ದು ಅಲ್ಲಿಯೇ ಊಟವನ್ನೂ ಮುಗಿಸಿಕೊಂಡರು. ಉಳಿದವರು ತಂತಮ್ಮ ತಾರಸಿಯಿಂದಲೇ ನೋಡಿ ಸಂತೋಷಪಟ್ಟರು.

17 ವರ್ಷದ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕ್ರೂಗರ್ ನ್ಯಾಷನಲ್ ಪಾರ್ಕ್ ಮೂಲಕ ನೆರಳು ಹಾದು ಹೋದಾಗ ಅದಕ್ಕಾಗಿ ಅಬ್ಬರದ ಪ್ರಚಾರ ನಡೆದಿತ್ತು. ವಿಮಾನ ನಿಲ್ದಾಣಗಳಲ್ಲಿ ದೊಡ್ಡ ದೊಡ್ಡ ನಕ್ಷೆಗಳು, ಮಾರ್ಗಸೂಚಿಗಳು, ಭಿತ್ತಿ ಚಿತ್ರಗಳು ರಾರಾಜಿಸಿದವು. ಜೊತೆಗೆ ಟಿ ಷರ್ಟ್‌ಗಳು, ಕೈಚೀಲಗಳು, ನೀರಿನ ಶೀಷೆಗಳ ಮೇಲೂ ಗ್ರಹಣದ ಚಿತ್ರ. ಶಾಲಾ ಮಕ್ಕಳಿಗೆ ವಿಶೇಷ ಕಮ್ಮಟಗಳನ್ನು ನಡೆಸಿ ಬಸ್‌ನಲ್ಲಿ ಪೂರ್ಣತೆಯ ಪಥಕ್ಕೆ ಕರೆದೊಯ್ಯಲಾಗಿತ್ತು. ಬೆಳಕು ಮತ್ತು ತಾಪ ಕಡಿಮೆಯಾಗುವುದನ್ನು ಅಳತೆ ಮಾಡಲು ಪುಟ್ಟ ಪುಟ್ಟ ಉಪಕರಣಗಳನ್ನು ಮಕ್ಕಳಿಗೆ ಕೊಡಲಾಗಿತ್ತು. ಆ ನಂತರ ಎಲ್ಲ ಪೂರ್ಣ ಗ್ರಹಣಗಳಲ್ಲೂ ಇಂತಹ ಚಟುವಟಿಕೆಗಳು ನಿರಂತರವಾಗಿ ನಡೆದವು. ಕಳೆದ ವರ್ಷ ಇಂಡೊನೇಷ್ಯಾದಲ್ಲಿ ಮಾತ್ರ ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟಿದ್ದರು. ಗ್ರಹಣ ನೋಡಲು ಬಂದವರಿಗೆ ವೀಸಾ ಶುಲ್ಕ ಮನ್ನಾ! ಅಲ್ಲಿಯ ಸ್ಟೇಡಿಯಂಗಳು, ಆಟದ ಮೈದಾನಗಳೆಲ್ಲಾ ಮಂಚಿಕೆಗಳಿಂದ ತುಂಬಿದವು. ನೌಕಾದಳದ ಸಿಬ್ಬಂದಿ ದೂರದರ್ಶಕಗಳನ್ನು ಸಜ್ಜುಗೊಳಿಸಿದರು. ಗ್ರಹಣದ ಉತ್ಸವವೇ ಏರ್ಪಾಟಾಗಿತ್ತು. ಮಕ್ಕಳು ಶಾಲೆಗಳಿಂದ ತಂಡತಂಡವಾಗಿ ಬಂದಿಳಿದರು. ಪೂರ್ಣ ಕತ್ತಲಾದಾಗ ತಮಟೆಗಳ ಸದ್ದು ಅಡಗಿ ನಿಶ್ಶಬ್ದ, ಪುನಃ ಬೆಳಕಾದ ಕೂಡಲೇ ಹರ್ಷದಿಂದ ಎಲ್ಲರೂ ಕೂಗಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾದವು. ತಿನ್ನಲು ಧಾರಾಳ ಅವಕಾಶವಿತ್ತು ಎಂದು ಬೇರೆಯಾಗಿ ಹೇಳಬೇಕಾಗಿಲ್ಲ.

ಹೀಗೊಂದು ಅವಕಾಶ ಭಾರತಕ್ಕೂ ಸಿಗಲಿದೆ. 2019ರ ಡಿ. 26ರಂದು ಕಂಕಣ ಗ್ರಹಣ ಕಾಣಲಿರುವುದು ದಕ್ಷಿಣ ಭಾರತಕ್ಕೆ. ಮಂಗಳೂರು, ಮಡಿಕೇರಿ, ಉದಕ ಮಂಡಲ - ಹೀಗೆ ಹಾದು ಹೋಗುವ ನೆರಳು ಬಂಡೀಪುರ ಮತ್ತು ನಾಗರಹೊಳೆಗಳ ಪ್ರಾಣಿಗಳನ್ನು ಮಂಕುಗೊಳಿಸಲಿದೆ. ಕ್ರೂಗರ್ ಪಾರ್ಕ್‌ನಲ್ಲಿ ಕಂಡಂತಹ ವಿಚಿತ್ರ ದೃಶ್ಯಗಳನ್ನು– ಕೋತಿಗಳು ನಿದ್ದೆ ಹೋದದು, ಉಡಗಳು ಹೊರಬಂದದ್ದು- ನೋಡಬಹುದು. ಗೂಡಿಗೆ
ಮರಳಿ ಮತ್ತೆ ಹಾರಿದ ಅಪರೂಪದ ಹಕ್ಕಿಗಳನ್ನೂ ನೋಡಬಹುದು. ಜಾಗತಿಕ ಮಟ್ಟದಲ್ಲಿ ಹೊರ ದೇಶಗಳ ಪ್ರವಾಸಿಗಳಿಗೆ ಇಂತಹವು ಬಹು ಮುಖ್ಯ ಆಕರ್ಷಣೆ. ಇಲ್ಲದಿದ್ದಲ್ಲಿ ಪುನಃ ಇಂಡೊನೇಷ್ಯಾ ಈ ಅವಕಾಶವನ್ನು ಕಸಿದುಕೊಳ್ಳಬಹುದು. ಪೂರ್ಣಗ್ರಹಣ ನೋಡಲು  2020ರ ಜೂನ್  21ಕ್ಕೆ ಅವಕಾಶವಿದೆ. ಕುರುಕ್ಷೇತ್ರ ಮತ್ತು ನಂದಾದೇವಿ ನ್ಯಾಷನಲ್ ಪಾರ್ಕ್ ಮೂಲಕ ನೆರಳು ಹಾದು ಹೋಗಲಿದೆ. ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಬೇಕಲ್ಲವೇ? ಇವುಗಳನ್ನು ‘ಗ್ರೇಟ್ ಎಕ್ಲಿಪ್ಸ್ ಆಫ್ ಇಂಡಿಯಾ’ ಎಂದೆನಿಸಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT