ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪರ್ವತ ಪೃಥ್ವಿಯ ಮಹದದ್ಭುತ!

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

1. ಅಗ್ನಿಪರ್ವತ - ಅದೆಂಥ ಸೃಷ್ಟಿ?
ಅಗ್ನಿಪರ್ವತ - ಈ ಹೆಸರೇ ರುದ್ರ ಸ್ವರೂಪದ, ಬೆಂಕಿಯ ಸಾಂಗತ್ಯದ, ಪ್ರಳಯಕಾರಿ ಸ್ಫೋಟ ಸಾಮರ್ಥ್ಯದ ನಿಸರ್ಗ ಸೃಷ್ಟಿಯೊಂದನ್ನು ಕಣ್ಮುಂದೆ ಕಲ್ಪಿಸುತ್ತದೆ, ಅಲ್ಲವೇ? ಅಷ್ಟೇ ಅಲ್ಲ. ಅಗ್ನಿಪರ್ವತ ಎಂದೊಡನೆ ಮನದಲ್ಲಿ ಮೂಡುವ ಚಿತ್ರ ಕೂಡ ಒಂದೇ: ‘ಶಂಕುವಿನ ಆಕಾರದ, ಮುಗಿಲಿನೆತ್ತರದ, ಏಕ ಶಿಖರದ ಪರ್ವತಾಕಾರ’ - ಹೌದಲ್ಲ? ಆದರೆ, ವಾಸ್ತವವಾಗಿ ಭೂ ನೆಲವನ್ನು ರೂಪಿಸಿರುವ ಪದರವಾದ ‘ತೊಗಟೆ’ಯಿಂದ ಅದರ ಕೆಳಗಿನ ಶಿಲಾಪಾಕ ತುಂಬಿರುವ ಪದರವಾದ ‘ಕವಚ’ದವರೆಗೆ ಸಾಗಿದ ಒಂದು ಅಥವಾ ಬಹುಕೊಳವೆಗಳ ಒಂದು ತೆರಪನ್ನು ಪಡೆದಿರುವ, ಶಂಕುವಿನಾಕಾರದ ಬೃಹತ್ ಪರ್ವತ ಸದೃಶ ದಿಬ್ಬವೇ ಅಗ್ನಿಪರ್ವತ.

ವಿಶೇಷ ಏನೆಂದರೆ, ಅಗ್ನಿಪರ್ವತಗಳದ್ದು ಹೀಗೆ ಒಂದೇ ರೂಪ ಏನಲ್ಲ. ಅಷ್ಟೇ ಅಲ್ಲ, ಎಲ್ಲ ಅಗ್ನಿಪರ್ವತಗಳೂ ನೆಲದ ಮೇಲೆಯೇ, ನಮಗೆ ನೇರ ಕಾಣುವಂತೆಯೇ ಇರುವುದೂ ಇಲ್ಲ. ಅಗ್ನಿಪರ್ವತಗಳು ಬೃಹತ್ ಪರ್ವತ ರೂಪದಲ್ಲಿರಬಹುದು; ಇಳಿಜಾರು ಮೇಲ್ಮೈನ ಬೆಟ್ಟ-ಗುಡ್ಡಗಳಂತಿರಬಹುದು; ನೆಲದ ಮೇಲೆ ಹಬ್ಬಿದ ಸೀಳು-ಬಿರುಕುಗಳಂತೆಯೂ ಇರಬಹುದು (ಚಿತ್ರ-6).

ಹೇಗೇ ಇದ್ದರೂ, ಬೆಂಕಿಯಷ್ಟು ಬಿಸಿಯ, ವಿವಿಧ ದ್ರವ್ಯಗಳನ್ನು ಹೊರಹಾಕುವ, ಪರ್ವತಾಕಾರದ ಸೃಷ್ಟಿಯಾದ್ದರಿಂದ ಇಂಥ ನಿಸರ್ಗ ನಿರ್ಮಿತಿಗಳಿಗೆ ಅಗ್ನಿಪರ್ವತ ಎಂಬ ಹೆಸರು; ಜ್ವಾಲಾಮುಖಿ ಎಂಬ ಅಭಿದಾನ ಕೂಡ. ವಾಸ್ತವ ಏನೆಂದರೆ, ಭೂ ನೆಲದ ತೆರಪುಗಳಿಂದ ಆಗಾಗ, ಶಿಲಾಪಾಕ ಉಕ್ಕಿ ಉಕ್ಕಿ ತಣಿದು ತಣಿದು, ಮೇಲೆ ಮೇಲೆ ಬೆಳೆದು ಬೆಳೆದು, ಹಲವಾರು ಶತಮಾನಗಳಲ್ಲಿ ನೆಲದ ಮೇಲೆ ‘ಅಗ್ನಿ ಪರ್ವತ’ ರೂಪುಗೊಳ್ಳುತ್ತದೆ; ಶಂಕುವಿನಾಕಾರ ತಳೆಯುತ್ತದೆ, ಅಷ್ಟೆ.

2. ಧರೆಯಲ್ಲಿ ಎಷ್ಟು ಅಗ್ನಿ ಪರ್ವತಗಳಿವೆ?
ಧರೆಯ ಎಲ್ಲ ಭೂ ಖಂಡಗಳಲ್ಲೂ, ಸಾಗರ ತಳದ ನೆಲದಲ್ಲೂ ಅಗ್ನಿಪರ್ವತಗಳಿವೆ. ಸ್ಫಷ್ಟವಾಗಿ ತಿಳಿಸಬೇಕೆಂದರೆ, ಯೂರೋಪ್ ಖಂಡದಲ್ಲಿ 41, ಆಫ್ರಿಕದಲ್ಲಿ 135, ಮಧ್ಯ ಪ್ರಾಚ್ಯದಲ್ಲಿ 32, ಏಷ್ಯಾದಲ್ಲಿ 528, ಆಸ್ಟ್ರೇಲಿಯಾದಲ್ಲಿ 142, ಅಂಟಾರ್ಕ್ಟಿಕಾದಲ್ಲಿ 23, ಉತ್ತರ ಅಮೆರಿಕದಲ್ಲಿ 185, ದಕ್ಷಿಣ ಅಮೆರಿಕದಲ್ಲಿ 201, ಕ್ಯಾರಿಬಿಯನ್ ಪ್ರದೇಶದಲ್ಲಿ17, ಇತರೆ ದ್ವೀಪಗಳಲ್ಲಿ 106 - ಹೀಗೆ ಪ್ರಸ್ತುತ ಒಟ್ಟು 1410 ಜೀವಂತ ಜ್ವಾಲಾಮುಖಿಗಳನ್ನು ಗುರುತಿಸಿ ಹೆಸರಿಸಲಾಗಿದೆ.

ಇದಲ್ಲದೆ, ಸಾಗರಗಳ ತಳದಲ್ಲಿ ಇದಕ್ಕೂ ಹೆಚ್ಚು ಸಂಖ್ಯೆಯ ಜ್ವಾಲಾಮುಖಿಗಳು ನೆಲೆಗೊಂಡಿವೆ. ಇನ್ನು ‘ಮೃತ’ವಾಗಿರುವ ಜ್ವಾಲಾಮುಖಿಗಳ ಸಂಖ್ಯೆಯಂತೂ (ಎಂದರೆ ಈಗ್ಗೆ 10,000 ವರ್ಷ ಹಿಂದಿನಿಂದಲೂ ನಿಷ್ಕ್ರಿಯವಾಗಿರುವ ಅಗ್ನಿಪರ್ವತಗಳು) ಲಕ್ಷಾಂತರದಿಂದ ಮಿಲಿಯಾಂತರದವರೆಗೂ ಇರಬಹುದು!

ಇಲ್ಲೊಂದು ಮುಖ್ಯ ವಿಷಯ: ಪ್ರಸ್ತುತದ ಎಲ್ಲ ಜೀವಂತ ಜ್ವಾಲಾಮುಖಿಗಳ ಬಹುಭಾಗ ಶಾಂತಸಾಗರವನ್ನು ಪರಿವರಿಸಿದ ಭೂ ಭಾಗದಲ್ಲೂ, ಕಡಲಂಚಿನಲ್ಲೂ ಹರಡಿ ನಿಂತಿವೆ ( ಚಿತ್ರ-13ರಲ್ಲಿ ಕೆಂಪು ಚುಕ್ಕಿಗಳಿರುವ ಪ್ರದೇಶ). ಸುಮಾರು 40,000 ಕಿಲೋ ಮೀಟರ್ ಉದ್ದದ ಈ ವರ್ತುಲಾಕಾರದ ಪಟ್ಟಿ ‘ಬೆಂಕಿಯ ಉಂಗುರ’ ಎಂದೇ ಪ್ರಸಿದ್ಧ.


3. ಅಗ್ನಿಪರ್ವತಗಳು ಸ್ಫೋಟಿಸುವುದು ಏಕೆ? ಹೇಗೆ?
ಅಗ್ನಿಪರ್ವತ ಸ್ಫೋಟ - ಅದು ನಿಸರ್ಗದ ಅತ್ಯಂತ ರುದ್ರ-ರಮ್ಯ, ವೈವಿಧ್ಯದ ದೃಶ್ಯಗಳನ್ನು ಸೃಜಿಸುವ ವಿದ್ಯಮಾನ; ಭೀಕರ, ವಿನಾಶಕರ ಪರಿಣಾಮಗಳನ್ನು ಮೂಡಿಸುವ ವಿದ್ಯಮಾನ ಕೂಡ. ನೆಲದಲ್ಲೂ, ಕಡಲಲ್ಲೂ (ಚಿತ್ರ-9) ಅಗ್ನಿಪರ್ವತ ಸ್ಫೋಟದ ವಿವಿಧ ದೃಶ್ಯಗಳನ್ನು ಚಿತ್ರಗಳಲ್ಲಿ ಗಮನಿಸಿ.

ವಾಸ್ತವವಾಗಿ, ಅಗ್ನಿಪರ್ವತಗಳು ಮೈದಳೆವುದು, ಸ್ಫೋಟಿಸುವುದು ಧರೆಯ ನೆಲದ ನಿರ್ದಿಷ್ಟ ನೆಲೆಗಳಲ್ಲಿ ಮಾತ್ರ. ನಿಮಗೇ ತಿಳಿದಂತೆ ಭೂಮಿಯ ಮೇಲ್ಮೈ ಆಗಿರುವ ಪದರವಾದ ‘ತೊಗಟೆ’ ಸುಮಾರು ಹದಿನೈದು ವಿಸ್ತಾರ ಶಿಲಾ ಫಲಕಗಳಿಂದ ರೂಪುಗೊಂಡಿದೆ. ಒಂದರೊಡನೊಂದು ಒತ್ತಾಗಿ ಹೊಂದಿನಿಂತಿರುವ ಈ ಶಿಲಾ ಫಲಕಗಳು ‘ಕವಚ’ದ ಶಿಲಾ ಪಾಕದ ಮೇಲೆ ತೇಲುತ್ತಿವೆ; ಮಂದ ವೇಗದೊಡನೆ ಚಲನಶೀಲವಾಗಿವೆ ಕೂಡ. ಕೆಲ ಫಲಕಗಳು ಒಂದರಿಂದ ಮತ್ತೊಂದು ದೂರ ಸರಿಯುತ್ತಿದ್ದರೆ, ಮತ್ತೆ ಕೆಲವು ಒಂದನ್ನು ಮತ್ತೊಂದು ಎದುರು-ಬದುರು ಒತ್ತುತ್ತಿವೆ. ಇನ್ನು ಕೆಲವು ಫಲಕಗಳು ಒಂದರ ಕೆಳಗೆ ಮತ್ತೊಂದು ನುಗ್ಗಿ ಮುಳುಗುತ್ತಿವೆ.

ತೊಗಟೆಯ ಶಿಲಾ ಫಲಕಗಳ ಈ ಮೂರೂ ವಿಧ ಚಲನೆಗಳಲ್ಲಿ ಮೊದಲೆರಡು ವಿದ್ಯಮಾನಗಳಿಗೆ ಒಳಗಾಗಿರುವ ಫಲಕಗಳ ಸಂಧಿ ಸ್ಥಳಗಳೇ ಅಗ್ನಿಪರ್ವತಗಳ ಪ್ರಧಾನ ನೆಲೆ. ಫಲಕಗಳು ಪರಸ್ಪರ ದೂರ ಸರಿದಂತೆಲ್ಲ ಅವುಗಳ ನಡುವಣ ಬಿರುಕುಗಳ ಮೂಲಕ ಕವಚದ ಕುದಿ ಕುದಿವ ಶಿಲಾ ಪಾಕ ಉಕ್ಕಿ ಹೊರಬರುತ್ತದೆ.

ಒಂದು ಫಲಕವನ್ನು ಮತ್ತೊಂದು ಬಲವಾಗಿ ಒತ್ತುವಲ್ಲಿ ಫಲಕಗಳ ಅಂಚುಗಳು ಕರಗಿ, ಕವಚದ ಶಿಲಾ ಪಾಕದ ಸಮೇತ ಹೊರಕ್ಕೆ ಚಿಮ್ಮುತ್ತದೆ. ಇವೆರಡೇ ಅಲ್ಲದೆ ಭೂ ತೊಗಟೆ ಅತ್ಯಂತ ತೆಳ್ಳಗಿರುವ ಸ್ಥಳಗಳಲ್ಲೂ ಕೂಡ ಕವಚದ ತಾಪಕ್ಕೆ ಕರಗುವ ತೊಗಟೆಯ ತಳಭಾಗದ ಶಿಲಾ ದ್ರವ್ಯ ಚಿಲುಮೆಯಾಗಿ ಉಕ್ಕುತ್ತದೆ (ಚಿತ್ರ -8), ಚಿಮ್ಮುತ್ತದೆ.

ಈ ಯಾವುದೇ ಕಾರಣದಿಂದ ಭೂ ತೊಗಟೆಯ ಅಂತರಾಳದಲ್ಲಿ, ಭಾರೀ ‘ಕೊಠಡಿ’ಗಳಲ್ಲಿ, ಮಿಲಿಯಾಂತರ ಟನ್‌ಗಳ ಪ್ರಮಾಣದಲ್ಲಿ, ತೀವ್ರ ಒತ್ತಡದಲ್ಲಿ ಸಂಗ್ರಹಗೊಳ್ಳುವ ಶಿಲಾಪಾಕ ಮತ್ತು ನಾನಾ ಅನಿಲಗಳು ಒತ್ತಡದ ಒಂದು ಮಿತಿ ಮೀರಿದೊಡನೆ ಹೊರಕ್ಕೆ ಉಕ್ಕುತ್ತವೆ (ಚಿತ್ರ- 4, 6, 10) ಅಥವಾ ಭಯಂಕರ ಸಪ್ಪಳದೊಡನೆ ನೆಲವನ್ನೇ ನಡುಗಿಸುತ್ತ ಮುಗಿಲೆತ್ತರಕ್ಕೆ ಚಿಮ್ಮುತ್ತವೆ (ಚಿತ್ರ - 1, 2, 3, 8, 9, 12). ಜ್ವಾಲಾಮುಖಿಗಳು ಸ್ಫೋಟಿಸುವುದು ಹೀಗೇ.

ಒಂದೆರಡು ಉದಾಹರಣೆಗಳು: ಇಸವಿ 1883ರ ಏಪ್ರಿಲ್ 26-27ರಂದು ಸಂಭವಿಸಿದ ‘ಕ್ರಕಟೋವಾ’ ಅಗ್ನಿ ಪರ್ವತದ ಸ್ಫೋಟದಿಂದ ಕಡಲಲ್ಲಿ ಮೈದಳೆದ ಪ್ರಳಯಕಾರಿ ಸುನಾಮಿಯ ಅಲೆಗಳ ಎತ್ತರ 140 ಅಡಿ ಮುಟ್ಟಿತ್ತು; ಇಸವಿ 1815ರಲ್ಲಿ ‘ತಂಬೋರಾ’ ಅಗ್ನಿಪರ್ವತ ಸ್ಫೋಟಗೊಂಡ ಸಪ್ಪಳ 2000 ಕಿಲೋ ಮೀಟರ್ ದೂರದವರೆಗೂ ಕೇಳಿಸಿತ್ತು; 1991ರಲ್ಲಿ ಸಿಡಿದ ‘ಪಿನಾಟುಬೋ’ ಅಗ್ನಿಪರ್ವತದಿಂದ ಚಿಮ್ಮಿದ ಬೂದಿ ರಾಶಿಯ ಪ್ರಮಾಣ ಐದು ಘನ ಕಿಲೋ ಮೀಟರ್ ಆಗುವಷ್ಟಿತ್ತು, ಭೀಕರ ರಭಸದ ಆ ಬೂದಿ ಚಿಲುಮೆ ವಾಯುಮಂಡಲದಲ್ಲಿ 35 ಕಿಲೋ ಮೀಟರ್ ಎತ್ತರಕ್ಕೆ ತಲುಪಿತ್ತು!

4. ಜ್ವಾಲಾಮುಖಿಗಳಿಂದ ಚಿಮ್ಮುವ ದ್ರವ್ಯಗಳು ಏನೇನು?
ಅಗ್ನಿಪರ್ವತಗಳಿಂದ ಉಕ್ಕಿಯೋ, ಚಿಮ್ಮಿಯೋ ಹೊರಬರುವ ದ್ರವ್ಯಗಳು ಹಲವಾರು: ‘ಶಿಲಾ ಪಾಕ, ಬಂಡೆ ಚೂರುಗಳು, ಕಲ್ಲುಪುಡಿ, ದೂಳು, ಬೂದಿ... ಜೊತೆಗೆ ನೀರಾವಿ, ಇಂಗಾಲದ ಡೈ ಆಕ್ಸೈಡ್, ಸಲ್ಫರ್ ಡೈ ಆಕ್ಸೈಡ್, ವಿಷಾನಿಲಗಳಾದ ಹೈಡ್ರೋಜನ್ ಸಲ್ಫೈಡ್, ಹೈಡ್ರೋಜನ್ ಕ್ಲೋರೈಡ್, ಇಂಗಾಲದ ಮಾನಾಕ್ಸೈಡ್ ಇತ್ಯಾದಿ’.

ಇಂಥ ದ್ರವ್ಯಗಳ ವಿವಿಧ ಸಂಯೋಜನೆಗಳಿಗೆ ಅನುಗುಣವಾಗಿ ಜ್ವಾಲಾಮುಖಿ ದ್ರವ್ಯ ರಭಸವಾಗಿ ಮುಗಿಲೆತ್ತರಕ್ಕೆ ಚಿಮ್ಮುತ್ತದೆ ಅಥವಾ ದೀರ್ಘಕಾಲ ನಿರಂತರ ಉಕ್ಕಿ ಉಕ್ಕಿ ನದಿಯಂತೆ ಪ್ರವಹಿಸುತ್ತದೆ. (ಕವಚದಲ್ಲಿರುವ ಶಿಲಾ ಪಾಕ ‘ಮ್ಯಾಗ್ಮಾ’ ವಿವಿಧ ಅನಿಲಗಳೊಡನೆ ಬೆರೆತು ಅಗ್ನಿಪರ್ವತದಿಂದ ಹೊರಬಂದಾಗ ‘ಲಾವಾ’ ಎಂಬ ಹೆಸರನ್ನು ಪಡೆಯುತ್ತದೆ).

5. ಜ್ವಾಲಾಮುಖಿ ಸ್ಫೋಟದ ಪರಿಣಾಮಗಳು ಏನೇನು?
ಬೂದಿ, ದೂಳು, ವಿಷಾನಿಲಗಳು, ಶಿಲಾಪಾಕ ಇತ್ಯಾದಿ ದ್ರವ್ಯಗಳನ್ನು ಅಪಾರ ಪ್ರಮಾಣದಲ್ಲಿ ಹೊರಹಾಕುವ ಅಗ್ನಿ ಪರ್ವತ ಸ್ಫೋಟಗಳು ಸ್ಪಷ್ಟವಾಗಿಯೇ ಹಲವಾರು ದುಷ್ಪರಿಣಾಮಗಳನ್ನು ತಂದೊಡ್ಡುತ್ತವೆ; ನೂರಾರು ಚದರ ಕಿಲೋ ಮೀಟರ್ ನೆಲ ಪ್ರದೇಶವನ್ನು ಮುಚ್ಚಿಹಾಕಿ ಅಡವಿ, ಊರು-ನಗರಗಳನ್ನು ‘ನೆಲಸಮ’ ಮಾಡುತ್ತವೆ; ಭೂ ಕಂಪನಗಳನ್ನು ಸೃಜಿಸಿ ವಿನಾಶ ತರುತ್ತವೆ; ಸುನಾಮಿಗಳನ್ನು ಬಡಿದೆಬ್ಬಿಸುತ್ತವೆ.

ಜ್ವಾಲಾಮುಖಿಗಳು ಉಗಿವ ಅಪಾರ ಪ್ರಮಾಣದ ಇಂಗಾಲದ ಡೈ ಆಕ್ಸೈಡ್‌ನಿಂದ ತಾತ್ಕಾಲಿಕವಾಗಿ ಭೂ ತಾಪ ಹೆಚ್ಚುತ್ತದೆ; ಗಂಧಕದ ಡೈ ಆಕ್ಸೈಡ್‌ನಿಂದಾಗಿ ‘ಆಮ್ಲ ಮಳೆ’ ಸುರಿಯುತ್ತದೆ; ವಿಷಾನಿಲಗಳು ಸನಿಹ ಪ್ರದೇಶಗಳ ಪ್ರಾಣಿಗಳ ಮತ್ತು ಮನುಷ್ಯರ ಉಸಿರುಕಟ್ಟಿಸುತ್ತವೆ.

ಹಾಗೆಲ್ಲ ಭಾರಿ ಪ್ರಮಾಣದ ಸಾವು ನೋವು ನಷ್ಟ ವಿನಾಶಗಳನ್ನು ತರಬಲ್ಲವಾದರೂ, ಜ್ವಾಲಾಮುಖಿಗಳ ಸ್ಫೋಟದಿಂದ ನಿಸರ್ಗದಲ್ಲಿ ನಾನಾ ಪ್ರಯೋಜನಗಳಿವೆ ಕೂಡ.

ಪ್ರಮುಖವಾಗಿ
* ಜ್ವಾಲಾಮುಖಿಗಳಿಂದ ಹೊರಹರಿವ ಶಿಲಾಪಾಕ ತಣಿದಾಗ ರೂಪುಗೊಳ್ಳುವ ‘ಅಗ್ನಿ ಶಿಲೆ‘ಗಳೇ ಭೂ ಮೇಲ್ಮೈನ ಸರ್ವವಿಧ ಶಿಲೆಗಳ ಮೂಲ ಆಕರ. ಭೂ ಕವಚದಲ್ಲಿ ಮತ್ತು ತೊಗಟೆಯ ಆಂತರ್ಯದಲ್ಲಿ ಮೈದಳೆವ ಎಲ್ಲ ಖನಿಜಗಳು, ಲೋಹ-ಅಲೋಹಗಳು, ಅಮೂಲ್ಯ ನಿಧಿ-ನಿಕ್ಷೇಪಗಳು ಭೂ ಮೇಲ್ಮೈಗೆ ಅಥವಾ ಗಣಿ ತೋಡಿ ಪಡೆಯಬಹುದಾದಷ್ಟು ಸನಿಹಕ್ಕೆ ತಲುಪುವುದೂ ಕೂಡ ಜ್ವಾಲಾಮುಖಿಗಳ ಮೂಲಕ.

* ಅಗ್ನಿಪರ್ವತಗಳಿಂದ ಹೊರ ಬೀಳುವ ಅಪಾರ ಪ್ರಮಾಣದ ಬೂದಿ ಮತ್ತು ದೂಳಿನಲ್ಲಿ ಹೇರಳ ಸಸ್ಯ ಪೋಷಕ ಖನಿಜ ಮತ್ತು ಲವಣಾಂಶಗಳು ಬೆರೆತಿರುತ್ತವೆ. ಹಾಗಾಗಿ ಜ್ವಾಲಾಮುಖಿಗಳ ಸುತ್ತಲಿನ ನೂರಾರು ಕಿಲೋ ಮೀಟರ್ ದೂರದವರೆಗಿನ ನೆಲದ ಮಣ್ಣು ತುಂಬ ಫಲವತ್ತಾಗಿ ಕೃಷಿಗಂತೂ ಅತ್ಯಂತ ಪ್ರಶಸ್ತವಾಗಿ ಉಳಿಯುತ್ತದೆ. ಹಾಗೆಲ್ಲ ಆಗಿರುವುದರಿಂದಲೇ ಅಗ್ನಿಪರ್ವತ ನಿಜವಾಗಿ ಧರೆಯ ಒಂದು ಮಹದದ್ಭುತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT