ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘೋಷಣೆಯಾಗಿ ಉಳಿಯದಿರಲಿ ಪ್ರಾಮಾಣಿಕ ಪ್ರಯತ್ನ ಬೇಕು

Last Updated 29 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಪ್ರಾಥಮಿಕ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿರುವುದು ಒಳ್ಳೆಯ ಬೆಳವಣಿಗೆ. ರಾಜ್ಯ ಹಾಗೂ ಕೇಂದ್ರದ ಏಳು ಆರೋಗ್ಯ ಯೋಜನೆಗಳನ್ನು ‘ಸಾರ್ವತ್ರಿಕ ಆರೋಗ್ಯ ಕಾರ್ಡ್‌’ ವ್ಯಾಪ್ತಿಗೆ ತರುವುದಾಗಿ ಬಜೆಟ್‌ನಲ್ಲೇ ಘೋಷಿಸಲಾಗಿತ್ತು. ಈಗ ಅದನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ವಿವಿಧ ಆರೋಗ್ಯ ಸೇವೆ ಯೋಜನೆಗಳಡಿ ಖರ್ಚಾಗುತ್ತಿರುವ ಸುಮಾರು
₹ 900 ಕೋಟಿ ಒಂದೇ ಕಡೆ ಕ್ರೋಡೀಕರಣ ಆಗಲಿದೆ. ಸರ್ಕಾರದ ಉದ್ದೇಶವೇನೋ ಚೆನ್ನಾಗಿದೆ. ಏಕೆಂದರೆ, ಬಡವರು ಹಾಗೂ ಶ್ರೀಮಂತರೆನ್ನದೆ ಸಾರ್ವತ್ರಿಕ ಆರೋಗ್ಯ ಕಾರ್ಡ್‌ ಪಡೆಯುವ ಪ್ರತಿಯೊಬ್ಬರಿಗೂ ಏಕರೂಪದ ಚಿಕಿತ್ಸೆ ದೊರೆಯಲಿದೆ. ಅಸಂಘಟಿತ ವಲಯದ ಕಾರ್ಮಿಕರು, ರೈತರು, ಸೌಲಭ್ಯ ವಂಚಿತ ಕುಟುಂಬಗಳು, ಪತ್ರಕರ್ತರು, ಸಹಕಾರಿ ಸಂಘಗಳ ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತ. ಆದರೆ, ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳು ಚಿಕಿತ್ಸಾ ವೆಚ್ಚದಲ್ಲಿ ಒಂದು ಭಾಗವನ್ನು (ಶೇ 70ರಷ್ಟು) ಪಾವತಿಸಬೇಕಾಗುತ್ತದೆ. ಉಳಿದಿದ್ದು ಸರ್ಕಾರ ಭರಿಸಲಿದೆ. ಆದರೆ, ದುಬಾರಿ ವೆಚ್ಚದ ಚಿಕಿತ್ಸೆಗಳಿಗೆ ಸರ್ಕಾರದ ನೆರವಿನ ಮಿತಿ ಇನ್ನೂ ನಿಗದಿಯಾಗಿಲ್ಲ. ಈಗ ಸರ್ಕಾರಿ ಆಸ್ಪತ್ರೆಗಳಿರುವುದು ಬಡವರಿಗಾಗಿ, ಅತ್ಯಾಧುನಿಕವಾದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ಇರುವುದು ಶ್ರೀಮಂತರಿಗಾಗಿ ಎಂಬ ಭಾವನೆಯಿದೆ. ಮಂತ್ರಿಗಳು, ಶಾಸಕರು, ಮಾಜಿ ಶಾಸಕರು ಹಾಗೂ ಸರ್ಕಾರಿ ನೌಕರರಂತೂ ಸರ್ಕಾರಿ ಆಸ್ಪತ್ರೆಗಳೆಂದರೆ ಮುಖ ಕಿವುಚುತ್ತಾರೆ. ಅದಕ್ಕೆ ಈ ಆಸ್ಪತ್ರೆಗಳ ಸ್ಥಿತಿಗತಿಯೇ ಕಾರಣ. ಸರ್ಕಾರಿ ಆಸ್ಪತ್ರೆಗಳಲ್ಲಿ ಒಳ್ಳೆಯ ಚಿಕಿತ್ಸೆ ಸಿಗುವುದಿಲ್ಲ ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ತಜ್ಞ ವೈದ್ಯರು ಇರುವುದಿಲ್ಲ. ಖಾಲಿ ಇರುವ ಹುದ್ದೆಗಳನ್ನು ಬಿಡ್‌ ಮೂಲಕ ತುಂಬಲು ಸರ್ಕಾರ ಸಿದ್ಧವಿದ್ದರೂ ವೈದ್ಯರೇ ಸಿಗುತ್ತಿಲ್ಲ. ಅನೇಕ ಆಸ್ಪತ್ರೆಗಳಲ್ಲಿ ಮೂಲ ಸೌಲಭ್ಯಗಳೇ ಇಲ್ಲ. ಕೆಲವೊಂದು ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಉಪಕರಣಗಳಿದ್ದರೂ ಅವನ್ನು ನಿರ್ವಹಿಸಲು ತಂತ್ರಜ್ಞರಿಲ್ಲ. ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಣೆ ಮಾಡದ ಹೊರತು ಜನರಲ್ಲಿ ವಿಶ್ವಾಸ ಮೂಡುವುದಿಲ್ಲ ಎಂಬುದನ್ನು ಸರ್ಕಾರ ಮೊದಲು ಅರಿತುಕೊಳ್ಳಲಿ.

ಆರೋಗ್ಯ ಕ್ಷೇತ್ರಕ್ಕೆ ಪ್ರತಿವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ಖರ್ಚು ಮಾಡುತ್ತಿವೆ. ಆದರೂ ವ್ಯವಸ್ಥೆ ಸುಧಾರಣೆ ಆಗುತ್ತಿಲ್ಲ ಏಕೆ ಎಂಬುದು ಯಕ್ಷಪ್ರಶ್ನೆ. ರಾಜ್ಯ ಸರ್ಕಾರಿ ನೌಕರರ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ವರ್ಷಕ್ಕೆ₹ 150 ಕೋಟಿಯನ್ನು ಸರ್ಕಾರ ಪಾವತಿಸುತ್ತಿದೆ. ಹಾಗೆಯೇ ಸಚಿವರು, ಶಾಸಕರು, ಮಾಜಿ ಶಾಸಕರ ವೈದ್ಯಕೀಯ ವೆಚ್ಚಕ್ಕೆ ₹ 50 ಕೋಟಿ ವ್ಯಯಿಸುತ್ತಿದೆ. ಇದಲ್ಲದೆ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹ 200 ಕೋಟಿ ವ್ಯಯಿಸಲಾಗುತ್ತಿದೆ. ಇವೆಲ್ಲವನ್ನೂ ಇದೇ ಯೋಜನೆ ವ್ಯಾಪ್ತಿಗೆ ತರುವ ಬಗ್ಗೆ ಆಲೋಚಿಸಬೇಕಾಗಿದೆ. ಇದರಿಂದ ಹಣ ಉಳಿಯಲಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆಗಳಿಗೆ ಕಾಯಕಲ್ಪವೂ ಆಗಬೇಕು.

ಮೈಸೂರು, ಬೆಳಗಾವಿ ಹಾಗೂ ಕಲಬುರ್ಗಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಹಣ ಬಿಡುಗಡೆ ಮಾಡುವುದಾಗಿಯೂ ಹೇಳಿದೆ. ಜನರಿಗೆ ಉತ್ತಮ ಆರೋಗ್ಯ ಸೌಲಭ್ಯಗಳು ಸಿಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಉದ್ದೇಶದಿಂದ ಆರಂಭಿಸುತ್ತಿರುವ ಆಸ್ಪತ್ರೆಗಳು ಸಮರ್ಪಕವಾಗಿ ಬಳಕೆ ಆಗಬೇಕು. ರಾಯಚೂರಿನಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸರ್ಕಾರ ನಡೆಸಲಾಗದೆ ಪರದಾಡುತ್ತಿದೆ. ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಆಸ್ಪತ್ರೆಯನ್ನು ಬೇರ್ಪಡಿಸಲಾಗಿದೆ. ಇದರ ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ವಹಿಸುವ ಚಿಂತನೆ ಇದೆ. ಸರ್ಕಾರಿ ಆಸ್ಪತ್ರೆ ಸ್ಥಾಪಿಸಿ ಮತ್ತೆ ಖಾಸಗಿಯವರಿಗೇ ಕೊಟ್ಟರೆ ಅದರಿಂದ ಆಗುವ ಪ್ರಯೋಜನವಾದರೂ ಏನು? ರಾಜ್ಯ ಸರ್ಕಾರದ ಘೋಷಣೆಗಳು ಬರೀ ಶಬ್ದಾಡಂಬರ ಆಗಬಾರದು. ಚುನಾವಣೆ ಸಮಯದಲ್ಲಿ ಕೊಡುವ ಪೊಳ್ಳು ಭರವಸೆ ಆಗಿ ಉಳಿಯಬಾರದು. ಇದನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT