ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ: ಡೆಂಗಿ, ಮಲೇರಿಯಾಕ್ಕೆ ಜನ ತತ್ತರ

Last Updated 1 ಸೆಪ್ಟೆಂಬರ್ 2017, 6:19 IST
ಅಕ್ಷರ ಗಾತ್ರ

ಹೊಸಪೇಟೆ: ತಾಲ್ಲೂಕಿನಲ್ಲಿ ಡೆಂಗಿ ಜ್ವರ, ಮಲೇರಿಯಾ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ಆ. 22ರಂದು ತಾಲ್ಲೂಕಿನ ಮರಿಯಮ್ಮನಹಳ್ಳಿಯ 17ನೇ ವಾರ್ಡ್‌ ನಿವಾಸಿ ಪ್ರವೀಣ ನಾಯ್ಕ (3), ಡಣಾಪುರದ ಎಚ್‌. ಚೇತನ್‌ (3) ಡೆಂಗಿ ಜ್ವರದಿಂದ ಮೃತಪಟ್ಟಿದ್ದರು. ಇಡೀ ಊರಿಗೆ ಊರೇ ಜ್ವರ ವ್ಯಾಪಿಸಿಕೊಂಡಿತ್ತು. ನಂತರ ವೈದ್ಯಾಧಿಕಾರಿಗಳ ತಂಡ ಸ್ಥಳದಲ್ಲಿ ಬೀಡು ಬಿಟ್ಟಿ ಚಿಕಿತ್ಸೆ ನೀಡಿದ ನಂತರ ಅಲ್ಲಿನ ಜನ ಈಗ ಚೇತರಿಸಿಕೊಳ್ಳುತ್ತಿದ್ದಾರೆ.

ಮರಿಯಮ್ಮನಹಳ್ಳಿ, ಡಣಾಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ ಎಂಬುವಷ್ಟರಲ್ಲಿ ಹಂಪಿ, ಕಡ್ಡಿರಾಂಪುರದಲ್ಲಿ ಡೆಂಗಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಎರಡೂ ಗ್ರಾಮಗಳಲ್ಲಿ ಡೆಂಗಿ ಜ್ವರದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಹಂಪಿಯ ಬಹುತೇಕ ಮನೆಗಳಿಗೆ ಡೆಂಗಿ, ಮಲೇರಿಯಾ ವ್ಯಾಪಿಸಿಕೊಂಡಿದೆ. ಪ್ರತಿ ಮನೆಯಲ್ಲಿ ಇಬ್ಬರು, ಮೂವರು ಜ್ವರದಿಂದ ಬಳಲುತ್ತಿದ್ದಾರೆ. ಕೆಲವರು ನಗರದ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಮತ್ತೆ ಕೆಲವೊಂದಿಷ್ಟು ಜನ ಬಳ್ಳಾರಿಯಲ್ಲಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್‌), ಹುಬ್ಬಳ್ಳಿಯ ಎಸ್‌.ಡಿ.ಎಂ., ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಕಳೆದ ವಾರ ಸತತವಾಗಿ ಮಳೆ ಸುರಿದ ನಂತರದಿಂದ ಡೆಂಗಿ, ಮಲೇರಿಯಾ ಪ್ರಕರಣಗಳಲ್ಲಿ ಏಕಾಏಕಿ ಹೆಚ್ಚಳ ಕಂಡು ಬಂದಿದೆ. ಜನ ಆಸ್ಪತ್ರೆಗೆ ಅಲೆದಾಡುವುದೇ ನಿತ್ಯದ ಕೆಲಸವಾಗಿದೆ. ಪ್ರವಾಸಿ ತಾಣವಾಗಿರುವ ಹಂಪಿಯಲ್ಲಿ ಜನ ಡೆಂಗಿ, ಮಲೇರಿಯಾದಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ತಿಳಿದು ಪ್ರವಾಸಿಗರು ಬರಲು ಹಿಂದೇಟು ಹಾಕುತ್ತಿದ್ದಾರೆ.

ಹಂಪಿಯಲ್ಲೇ ಬೀಡು ಬಿಟ್ಟಿದ್ದ ಕೆಲ ವಿದೇಶಿ ಪ್ರವಾಸಿಗರು ಗಾಬರಿಗೊಂಡು ಅಲ್ಲಿಂದ ತೆರಳಿದ್ದಾರೆ. ಇದರಿಂದ ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ. ‘ನಮ್ಮ ಮನೆಯ ಇಬ್ಬರು ಸದಸ್ಯರಿಗೆ ಡೆಂಗಿ ಜ್ವರ ಬಂದಿತ್ತು. ಕೂಡಲೇ ಅವರನ್ನು ಬಳ್ಳಾರಿಯ ವಿಮ್ಸ್‌ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದೇವೆ. ಬುಧವಾರವಷ್ಟೇ ಆಸ್ಪತ್ರೆಯಿಂದ ಮನೆಗೆ ಬಂದಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಹಂಪಿ ನಿವಾಸಿ ಹಾಗೂ ಮಾನವ ಹಕ್ಕುಗಳ ಸಂಘದ ಅಧ್ಯಕ್ಷ ಎಚ್‌. ಹುಲುಗಪ್ಪ ತಿಳಿಸಿದರು.

‘ಈ ಕುರಿತು ಗ್ರಾಮ ಪಂಚಾಯ್ತಿಯವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ರಾಮಪ್ರಸಾದ್‌ ಮನೋಹರ್‌ ಅವರಿಗೆ ಮನವಿ ಪತ್ರ ಕೊಟ್ಟಿದ್ದೇವೆ’ ಎಂದು ಹೇಳಿದರು. ‘ಹಂಪಿಯಲ್ಲಿ ಡೆಂಗಿ, ಮಲೇರಿಯಾ ವ್ಯಾಪಕವಾಗಿ ಹರಡಿರುವ ಸುದ್ದಿ ತಿಳಿದು ವಿದೇಶಿ ಪ್ರವಾಸಿಗರು ಬರುತ್ತಿಲ್ಲ. ಬಂದ
ವರು ಕೂಡ ವಾಪಸಾಗುತ್ತಿದ್ದಾರೆ.

ಹೀಗೆ ಮುಂದುವರೆದರೆ ಬದುಕು ನಡೆಸುವುದು ಕಷ್ಟವಾಗುತ್ತದೆ’ ಎನ್ನುತ್ತಾರೆ ಹಂಪಿ ಮಾರ್ಗದರ್ಶಿ ಗೋಪಾಲ್‌. ‘ಮರಿಯಮ್ಮನಹಳ್ಳಿ, ಡಣಾಪುರದಲ್ಲಿ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂದಿದೆ. ಹಂಪಿಯಲ್ಲಿ ಜನರಿಗೆಜ್ವರ ಬಂದಿರುವುದು ಗೊತ್ತಿಲ್ಲ. ಪರಿಶೀಲನೆ ನಡೆಸಿ, ಆರೋಗ್ಯ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸಿ ಕೊಡಲಾಗುವುದು’ ಎಂದು ಪ್ರಭಾರ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ರಾಜಶೇಖರ್‌ ಅವರು ತಿಳಿಸಿದರು.

* * 

ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಾತಾವರಣ ಬದಲಾಗಿದ್ದು, ರೋಗಾಣುವಿನಿಂದ ಒಬ್ಬರಿಂದ ಒಬ್ಬರಿಗೆ ಜ್ವರವು 
ಹರಡುತ್ತಿದೆ.
ಡಾ. ರಾಜಶೇಖರ್‌
ಪ್ರಭಾರ ತಾಲ್ಲೂಕು ಆರೋಗ್ಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT