ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ 'ನದಿ ಜೋಡಣೆ' ಶೀಘ್ರದಲ್ಲೇ ಆರಂಭ

Last Updated 1 ಸೆಪ್ಟೆಂಬರ್ 2017, 11:43 IST
ಅಕ್ಷರ ಗಾತ್ರ

ನವದೆಹಲಿ: ಬರ ಮತ್ತು ಪ್ರವಾಹಗಳನ್ನು ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ನದಿ ಜೋಡಣೆ ಶೀಘ್ರದಲ್ಲೇ ಆರಂಭವಾಗಲಿದೆ. 87 ಶತಕೋಟಿ ಡಾಲರ್ (ಅಂದಾಜು ₹5571ಶತಕೋಟಿ) ವೆಚ್ಚದ ಯೋಜನೆ ಇದಾಗಿದ್ದು ದೇಶದ ಪ್ರಮುಖ ನದಿಗಳನ್ನು ಜೋಡಿಸುವ ಕಾರ್ಯ ಈ ತಿಂಗಳಲ್ಲೇ ಶುರುವಾಗಲಿದೆ.

ಈ ಯೋಜನೆಯಡಿಯಲ್ಲಿ ಗಂಗಾ ನದಿ ಸೇರಿದಂತೆ ದೇಶದ 60 ನದಿಗಳನ್ನು ಜೋಡಿಸುವ ಕಾರ್ಯ ನಡೆಯಲಿದೆ. ಕಳೆದ ಎರಡು ವರ್ಷದಲ್ಲಿ ಕಡಿಮೆ ಪ್ರಮಾಣದಲ್ಲಿ  ಮಳೆಯಾಗಿದ್ದ ಭಾರತ, ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ಇತ್ತೀಚಿನ ವಾರಗಳಲ್ಲಿ ಭಾರಿ ಪ್ರವಾಹವಾಗಿತ್ತು.

ನದಿ ಜೋಡಣೆ ವಿಷಯದಲ್ಲಿ ಪರಿಸರವಾದಿ, ಹುಲಿ ಪ್ರಿಯರು ಮತ್ತು ಮಾಜಿ ರಾಜ ಕುಟುಂಬದವರ ವಿರೋಧ ವ್ಯಕ್ತವಾಗಿದ್ದರೂ ಮೋದಿಯವರು ಈ ಯೋಜನೆಯ ಮೊದಲ ಹಂತವನ್ನು ಆರಂಭಿಸಲು ಸನ್ನದ್ಧರಾಗಿದ್ದಾರೆ. ಯೋಜನೆಯ ಮೊದಲ ಹಂತದಲ್ಲಿ ಸಾವಿರಾರು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಬಲ್ಲಮೂಲಗಳು ಹೇಳಿವೆ.

ಉತ್ತರ ಪ್ರದೇಶದ ಕರ್ನಾವತಿ ನದಿ (ಕೆನ್ ನದಿ)ಯನ್ನು ಮಧ್ಯಪ್ರದೇಶದಲ್ಲಿರುವ ಬೆತ್ವಾ ನದಿಗಳನ್ನು  22 ಕಿಲೋಮೀಟರ್ ಕಾಲುವೆಯ ಮೂಲಕ ಜೋಡಿಸಿ ಕೆನ್ ನದಿಗೆ ಅಣೆಕಟ್ಟು ನಿರ್ಮಿಸುವ ಕಾರ್ಯವೂ ಈ ಯೋಜನೆಯ ಭಾಗವಾಗಲಿದೆ.

ಬಿಜೆಪಿ ಆಡಳಿತದಲ್ಲಿರುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಕೆನ್- ಬೆತ್ವಾ ನದಿ ಜೋಡಣೆ ಮೂಲಕ ನರೇಂದ್ರ ಮೋದಿ ಈ ಯೋಜನೆಗೆ ನಾಂದಿ ಹಾಡಲಿದ್ದಾರೆ.

ಗಂಗಾ, ಗೋದಾವರಿ ಮತ್ತು ಮಹಾನದಿ ಹರಿಯುವ ಭಾಗಗಗಳಲ್ಲಿ ಅಣೆಕಟ್ಟು ನಿರ್ಮಿಸಿ ಕಾಲುವೆಗಳ ಮೂಲಕ ಈ ನದಿಗಳನ್ನು ಜೋಡಣೆ ಮಾಡುವ ಮೂಲಕ ಬರ ಮತ್ತು ಪ್ರವಾಹಗಳನ್ನು ತಡೆಯಬಹುದು ಎಂದು ಸರ್ಕಾರಿ ಮೂಲಗಳು ಹೇಳಿವೆ.

ಕೆಲವೊಂದು ತಜ್ಞರ ಪ್ರಕಾರ ಈ ರೀತಿ ನದಿ ಜೋಡಣೆ ಮಾಡುವ ಮೂಲಕ ನೀರನ್ನು ಕೃಷಿ ಕಾರ್ಯಗಳಿಗಾಗಿ ಸದುಪಯೋಗ ಪಡಿಸಿಕೊಳ್ಳಬಹುದು. ಅದೇ ವೇಳೆ ಈ ರೀತಿ ನದಿ ಜೋಡಣೆ ಮಾಡಿದರೆ ನೈಸರ್ಗಿಕ ಏರು ಪೇರು ಉಂಟಾಗುತ್ತದೆ ಎಂದು ಪರಿಸರವಾದಿಗಳು ಮತ್ತು ವನ್ಯಜೀವಿ ಸಂರಕ್ಷಕರು ವಾದಿಸುತ್ತಾರೆ.

ಬಿಜೆಪಿ ಆಡಳಿತಾರೂಡ ರಾಜ್ಯದಲ್ಲೇ ಮೋದಿಯವರ ಈ ಯೋಜನೆ ಆರಂಭವಾಗುತ್ತಿರುವುದು ವಿಶೇಷ. ಕೆನ್ ನದಿ ಹುಲಿ ರಕ್ಷಿತಾರಣ್ಯದ ಮೂಲಕ 425 ಕಿಮೀ ಹರಿಯುತ್ತಿದೆ. ಹಾಗಾಗಿ  ಅಣೆಕಟ್ಟು ನಿರ್ಮಿಸಲು ಇಲ್ಲಿ ಶೇ.6.5 ರಷ್ಟು ಕಾಡನ್ನು ಕಡಿಯಬೇಕಾಗುತ್ತದೆ ಮಾತ್ರವಲ್ಲದೆ 10 ಗ್ರಾಮದ 2,000 ಕುಟುಂಬದವರನ್ನು ಅಲ್ಲಿಂದ ಸ್ಥಳಾಂತರಿಸಬೇಕಾಗುತ್ತದೆ.

ಈಗಾಗಲೇ ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರಿ ಮತ್ತು ಅರಣ್ಯ ಸಂರಕ್ಷಣೆ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎಂದು ಮೂಲಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿವೆ.

ಇನ್ನು ಕೆಲವೇ ವಾರಗಳಲ್ಲಿ ಮೋದಿ ಸಚಿವ ಸಂಪುಟವು ಇಲ್ಲಿ ಯೋಜನೆಯನ್ನು ಆರಂಭಿಸಲಿದೆ ಎಂದು ಬಲ್ಲಮೂಲಗಳು ಹೇಳಿವೆ.

ಇದರ ಜತೆಗೆ ಪಶ್ಚಿಮ ಭಾರತದಲ್ಲಿರುವ ತಪಿ ಮತ್ತು ನರ್ಮದಾ ನದಿ, ದಮನ್ ಗಂಗಾ ಮತ್ತು ಪಿಂಜಾಲ್ ನದಿ ಜೋಡಣೆಯ ಕಾರ್ಯವನ್ನೂ ಸರ್ಕಾರ ಕೈಗೆತ್ತಿಕೊಳ್ಳಲಿದೆ. ಈ ಯೋಜನೆ ಮೋದಿಯವರ ರಾಜ್ಯವಾದ ಗುಜರಾತ್, ನೆರೆ ರಾಜ್ಯವಾದ ಮಹಾರಾಷ್ಟ್ರದಲ್ಲಿ ಆರಂಭಗೊಳ್ಳಲಿದೆ.
ನದಿ ಜೋಡಣೆ ಯೋಜನೆಯು 2002ರಲ್ಲಿ ಬಿಜೆಪಿ ಸರ್ಕಾರದಿಂದಲೇ ಪ್ರಸ್ತಾಪವಾಗಿತ್ತು. ಆದರೆ ರಾಜ್ಯ ಸರ್ಕಾರಗಳು ನೀರು ಹಂಚಿಕೆ ಬಗ್ಗೆ ತಕರಾರು ಎಬ್ಬಿಸಿದ್ದರಿಂದ ಆ ಯೋಜನೆ ಕಾರ್ಯ ಪ್ರವೃತ್ತವಾಗಿರಲಿಲ್ಲ.

ಆದಾಗ್ಯೂ, ಬಿಜೆಪಿ ಆಡಳಿತಾರೂಡ ರಾಜ್ಯಗಳಲ್ಲಿ ನದಿ ಜೋಡಣೆ ಕಾರ್ಯಗಳಿಗೆ ಯಾವುದೇ ಅಡ್ಡಿಯುಂಟಾಗಲ್ಲ ಎಂಬ ಭರವಸೆಯಿಂದಲೇ ಮೋದಿ ಸರ್ಕಾರ ಈ ರಾಜ್ಯಗಳಲ್ಲಿ ಯೋಜನೆಯನ್ನು ಆರಂಭಿಸಲು ಮುಂದಾಗಿದೆ.

ವನ್ಯ ಜೀವಿಗಳ ವಾಸಸ್ಥಳಕ್ಕೆ ಕುತ್ತು
ಕೆನ್ ನದಿಗೆ ನಿರ್ಮಿಸಲಾಗುತ್ತಿರುವ ಅಣೆಕಟ್ಟು 77 ಮೀಟರ್ ಎತ್ತರ ಮತ್ತು 2 ಕಿಮೀ ಉದ್ದವಿರಲಿದೆ. ಹೀಗೆ ಅಣೆಕಟ್ಟು ನಿರ್ಮಿಸಿದರೆ 9,000 ಹೆಕ್ಟೇರ್ ಭೂಮಿ ನೀರಿನಲ್ಲಿ ಮುಳುಗಲಿದೆ. ಹೀಗೆ ಮುಳುಗಡೆಯಾಗುವ ಭೂಮಿ ಕಾಡು ಪ್ರದೇಶವಾಗಿದೆ. ಅಂದರೆ ಮಧ್ಯಪ್ರದೇಶದಲ್ಲಿರುವ ಪನ್ನಾ ಹುಲಿ ರಕ್ಷಿತಾರಣ್ಯದ ಬಹುತೇಕ ಭಾಗವು ನೀರಿನಲ್ಲಿ ಮುಳುಗಲಿದೆ. ಪ್ರವಾಸಿಗರ ಆಕರ್ಷಣೀಯ ಸ್ಥಳವಾದ ಈ ಕಾಡಿನಲ್ಲಿ 30-35 ಹುಲಿಗಳು ಮತ್ತು ಸುಮಾರು 500ರಷ್ಟು ರಣಹದ್ದುಗಳಿವೆ.

ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿದರೆ ಪಾಕೃತಿಕ ವಿಕೋಪಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಎಂದು ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಪನ್ನಾ ಪ್ರದೇಶದಲ್ಲಿ ರಾಜಾಡಳಿತ ನಡೆಸಿದ್ದ ರಾಜಮನೆತನದ ಶ್ಯಾಮೇಂದ್ರ ಸಿಂಗ್ ಹೇಳಿದ್ದಾರೆ. ಆದರೆ ವನ್ಯಜೀವಿಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಬಂಧಪಟ್ಟ ಇಲಾಖೆಯವರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಿದರೆ ನಮ್ಮ ಗ್ರಾಮಕ್ಕೆ  ವಿದ್ಯುತ್ ಸಂಪರ್ಕ ಸಿಗುತ್ತದೆ. ಎಲ್ಲರಿಗೂ ಇದರಿಂದ ಉಪಕಾರವಾಗುವುದಾದರೆ ನಾವು ಇದನ್ನು ವಿರೋಧಿಸಲ್ಲ ಅಂತಾರೆ ಗ್ರಾಮದ ಹಿರಿಯ ವ್ಯಕ್ತಿ  ಮುನ್ನಾ ಯಾದವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT