ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಕಾರಣ ಏನಿರಬಹುದು?

Last Updated 1 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅಸಹಜ ಬಿಳಿಸ್ರಾವ, ಅದರ ಹಿಂದಿರುವ ಕಾರಣಗಳು, ಚಿಕಿತ್ಸೆಯ ಕುರಿತು ಕಳೆದ ಬಾರಿ ವಿವರಿಸಲಾಗಿತ್ತು. ಈಗ, ಈ ಸ್ರಾವ ಏನನ್ನು ಸೂಚಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ. ಬಿಳಿಸ್ರಾವವು ಮುಖ್ಯವಾಗಿ ಆರು ಸಂಗತಿಗಳನ್ನು ಸೂಚಿಸುತ್ತದೆ. ಅವು ಏನೆಂದು ಇಲ್ಲಿ ನೋಡೋಣ...

1. ಅಂಡೋತ್ಪತ್ತಿ ಸಮಯ
ಬಿಳಿಸ್ರಾವವು ಮೊಟ್ಟೆಯ ಬಿಳಿ ಲೋಳೆಯಂತಿದ್ದರೆ ಇದು ಅಂಡೋತ್ಪತ್ತಿ ಸಮಯ ಎಂದರ್ಥ. (ಅಂಡಾಶಯವು ಪಕ್ವ ಅಂಡಾಣುವನ್ನು ಡಿಂಬನಾಳದ ಮೂಲಕ ಬಿಡುಗಡೆಗೊಳಿಸಿ ಫಲವತ್ತತೆಗೆ ಸಜ್ಜಾಗಿಸುತ್ತಿರುತ್ತದೆ).

ಅಂಡೋತ್ಪತ್ತಿಯ ಎರಡು ಮೂರು ದಿನಗಳಿಗೆ ಮುನ್ನ ಈ ಬಿಳಿಸ್ರಾವದ ಅನುಭವವಾಗುತ್ತದೆ. ಈ ದ್ರವ, ವೀರ್ಯವು ಅಂಡಾಶಯಕ್ಕೆ ಸುಲಭವಾಗಿ ತಲುಪಲು ಎಡೆ ಮಾಡಿಕೊಡುತ್ತದೆ. ಗರ್ಭ ಧರಿಸಲು ಬಯಸುವ ಮಹಿಳೆಯರಿಗೆ ಇದು ಸುಸಂದರ್ಭವೂ ಆಗಿರುತ್ತದೆ. ಮಗುವನ್ನು ಪಡೆಯಲು ಬಯಸುತ್ತಿರುವವರಾದರೆ ಈ ಸಂಗತಿಯ ಮೇಲೆ ಗಮನ ಹರಿಸುವುದು ಒಳ್ಳೆಯದು.

2. ಸಮೀಪಿಸುತ್ತಿದೆ ಋತುಚಕ್ರದ ಅವಧಿ
ಅಂಡೋತ್ಪತ್ತಿಯ ನಂತರದ ಕೆಲವು ದಿನಗಳಲ್ಲಿ ಯಾವುದೇ ಸ್ರಾವದ ಅನುಭವವಾಗುವುದಿಲ್ಲ. ಆದರೆ ನಂತರ ಬಿಳಿ ಸ್ರಾವವು ಕಾಣಿಸಿಕೊಳ್ಳಬಹುದು. ಅಂಡೋತ್ಪತ್ತಿಯಾಗಿ ಅಂಡಾಣುವಿನ ಬಿಡುಗಡೆ ಮಾಡಿದ ನಂತರ, ರಕ್ತದಲ್ಲಿ ಪ್ರೊಜೆಸ್ಟೆರೋನ್‌ ಹಾರ್ಮೋನಿನ ಬಿಡುಗಡೆಯಾಗುತ್ತದೆ. ಇದೇ ಬಿಳಿ ಸ್ರಾವಕ್ಕೆ ಕಾರಣವಾಗಿರುತ್ತದೆ.

ಅದು ಎಲ್ಲಿವರೆಗೂ ವಾಸನೆಯಿಂದ ಕೂಡಿರದೆ, ತುರಿಕೆ, ಉರಿ ಅನುಭವವಾಗುವುದಿಲ್ಲವೋ, ಅಸಹಜ ಎನ್ನಿಸಿಕೊಳ್ಳುವುದಿಲ್ಲ. ಅದು ನಿಮ್ಮ ಋತುಚಕ್ರದ ಕೆಲವು ದೈಹಿಕ ಬದಲಾವಣೆಗಳ ಸೂಚಕವಷ್ಟೇ ಆಗಿರುತ್ತದೆ.

3. ಗರ್ಭಧಾರಣೆ ಸಾಧ್ಯತೆಯೂ ಇರಬಹುದು
ಬಿಳಿಸ್ರಾವವು, ಗರ್ಭ ಧರಿಸಿದ್ದೀರೋ ಇಲ್ಲವೋ ಎಂಬುದನ್ನೂ ತಿಳಿಸಬಲ್ಲದು. ಗರ್ಭ ಧರಿಸಿದ ಮೊದಲ ದಿನಗಳಲ್ಲಿ ಜಿಗುಟು ಜಿಗುಟಾದ, ಅತಿ ಗಟ್ಟಿಯಾದ ಸ್ರಾವವು ಕಾಣಿಸಿಕೊಳ್ಳುತ್ತದೆ. ಗರ್ಭಕಂಠ ಹಾಗೂ ಯೋನಿಯ ಪದರ ತೆಳುವಾಗಿ, ಸ್ರಾವವು ಹೆಚ್ಚುತ್ತದೆ. ಸೋಂಕನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಗರ್ಭಧಾರಣೆಯ ಕೊನೆಯ ಹಂತದಲ್ಲೂ ಈ ರೀತಿ ಸ್ರಾವವು ಅನುಭವಕ್ಕೆ ಬರುತ್ತದೆ.

ಗರ್ಭಧಾರಣೆ ಸಮಯದಲ್ಲಿ ಹಾಗೂ ಕೊನೆಯ ಹಂತಗಳಲ್ಲಿ ಸಾಕಷ್ಟು ಮಹಿಳೆಯರಲ್ಲಿ ಬಿಳಿ ಸ್ರಾವದ ಪ್ರಮಾಣವು ಹೆಚ್ಚುತ್ತದೆ. ಎಲ್ಲಿಯವರೆಗೂ ವಾಸನೆ, ತುರಿಕೆ, ರಕ್ತದ ಬಣ್ಣ ಕಾಣಿಸಿಕೊಳ್ಳದೇ ಇರುತ್ತದೋ ಅಲ್ಲಿಯವರೆಗೂ ತೊಂದರೆಯಿಲ್ಲ. ಆದರೆ ಇದು ಗರ್ಭದ ನೀರಿನ ಸೋರಿಕೆಯಾಗಿರಬಹುದೇ ಎಂಬುದನ್ನು ವೈದ್ಯರಿಂದ ತಪಾಸಣೆಗೊಳಪಡಿಸುವುದು ಬಹುಮುಖ್ಯ ಸಂಗತಿಯಾಗಿರುತ್ತದೆ.

4. ಒತ್ತಡವೂ ಒಂದು ಕಾರಣ
ಇತ್ತೀಚಿನ ಮಹಿಳೆಯರಲ್ಲಿ ಒತ್ತಡದ ಪ್ರಮಾಣ ಹೆಚ್ಚಾಗಿದೆ. ನೌಕರಿ, ಕುಟುಂಬ, ಜೀವನಶೈಲಿಯಿಂದ ಒತ್ತಡ ಜೀವನದ ಒಂದು ಭಾಗವೂ ಆಗಿಹೋಗಿದೆ. ಒತ್ತಡ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಹಾರ್ಮೋನಿನ ಅಸಮತೋಲನದಲ್ಲಿ ಒತ್ತಡದ ಪಾಲು ಹೆಚ್ಚು. ಕೆಲವು ತಜ್ಞರ ಪ್ರಕಾರ ಈ ಹಾರ್ಮೋನಿನ ಅಸಮತೋಲನ ಬಿಳಿಸ್ರಾವಕ್ಕೆ ಕಾರಣವಾಗಿರುತ್ತದೆ.

5. ಸೋಂಕಿನ ಸೂಚಕವೂ ಆಗಿರಬಹುದು
ಬಿಳಿಸ್ರಾವವು ಆರೋಗ್ಯದಲ್ಲಿನ ಏರುಪೇರನ್ನೂ ಸೂಚಿಸುತ್ತಿರಬಹುದು. ಅತಿ ಗಟ್ಟಿಯಾದ ಹಾಗೂ ಗಡ್ಡೆಯಂಥ ಸ್ರಾವವು ಕಾಣಿಸಿಕೊಂಡರೆ, ಅದು ಯೀಸ್ಟ್ ಸೋಂಕು ಆಗಿರುವುದನ್ನು ಸೂಚಿಸುತ್ತಿರುತ್ತದೆ. ತುರಿಕೆ, ಉರಿಯೂತವೂ ಅನುಭವಕ್ಕೆ ಬರಬಹುದು.

ಯೀಸ್ಟ್ ಸೋಂಕು ಗಂಭೀರವಾಗಿದ್ದರೆ, ನಿಯಂತ್ರಣಕ್ಕೆ ಸಿಗುತ್ತಿಲ್ಲ ಎಂದರೆ ಈ ರೀತಿ ಲಕ್ಷಣಗಳ ಮೂಲಕ ತೋರುತ್ತದೆ. ಇದಕ್ಕೆ ಬಹುಮುಖ್ಯ ಕಾರಣ ಎಂದರೆ ಆ್ಯಂಟಿ ಬಯಾಟಿಕ್‌ಗಳ ಸೇವನೆ. ಟಾನ್ಸಿಲಿಟಿಸ್‌ನಂಥ ಸಮಸ್ಯೆಗೆ ಸೇವಿಸುವ ಆ್ಯಂಟಿಬಯಾಟಿಕ್‌ಗಳು ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

ಇವೆ ಲಕ್ಷಣಗಳು ಬ್ಯಾಕ್ಟೀರಿಯಲ್‌ ವ್ಯಾಗಿನೋಸಿಸ್‌ ಸಮಸ್ಯೆಗೂ ಅನ್ವಯಿಸುತ್ತದೆ. ಇದು ಕೂಡ ಅತಿ ಲೋಳೆಯಂಥ ದ್ರವದ ಸ್ರಾವವಾಗಿದ್ದು, ವಾಸನೆ ಹಾಗೂ ಉರಿಯಿಂದ ಕೂಡಿರುತ್ತದೆ. ಯೋನಿಯಲ್ಲಿನ ಬ್ಯಾಕ್ಟೀರಿಯಾಗಳ ಅಸಮತೋಲನದಿಂದ ಉಂಟಾಗುವ ಪರಿಣಾಮ ಇದಾಗಿರುತ್ತದೆ. ವಯಸ್ಸಾದ ಮಹಿಳೆಯರಲ್ಲಿ ಈಸ್ಟ್ರೋಜೆನ್ ಕಡಿಮೆಯಾಗುತ್ತಿದ್ದಂತೆ ತೇವಾಂಶವೂ ಕ್ಷೀಣಿಸಿ ಈ ರೀತಿ ಆಗುವ ಪ್ರಮಾಣ ಹೆಚ್ಚು.

ಈ ರೀತಿ ಸ್ರಾವವು ಲೈಂಗಿಕ ಸಂಬಂಧಿ ಸೋಂಕನ್ನೂ ಸೂಚಿಸುತ್ತಿರಬಹುದು. ಆದರೆ ಲೈಂಗಿಕ ಸಂಬಂಧಿ ಸೋಂಕು ಯಾವುದೇ ಲಕ್ಷಣಗಳಿಲ್ಲದೇ ಕಾಣಿಸಿಕೊಳ್ಳುತ್ತದೆ ಎಂಬುದೂ ಗಮನದಲ್ಲಿರಲಿ.

ಇವಿಷ್ಟೇ ಅಲ್ಲದೇ ಸಾಮಾನ್ಯ ಸೋಂಕುಗಳಾದ ಕ್ಲಾಮಿಡಿಯಾ ಹಾಗೂ ಗೆನೋರಿಯಾ ಕೂಡ ಸ್ರಾವವನ್ನು ಉಂಟುಮಾಡಬಹುದು. ಇವು ಒಳಗೊಳಗೇ ನಾಳಗಳಲ್ಲಿ ಗಂಭೀರ ಸಮಸ್ಯೆಗಳನ್ನೂ ಉಂಟು ಮಾಡಿರಬಹುದು. ಹಾಗಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತಿಮುಖ್ಯವಾಗುತ್ತದೆ.

6. ಸ್ತ್ರೀರೋಗತಜ್ಞರ ಭೇಟಿ ಅವಶ್ಯಕ ಸಮಯ: ಋತುಸ್ರಾವಕ್ಕೂ ಮುನ್ನ ಅಥವಾ ನಂತರ ಕೆಂಪು ಮಿಶ್ರತ ಸ್ರಾವ ಕಾಣಿಸಿಕೊಂಡರೆ ಅದು ಸಾಮಾನ್ಯವೇ ಆಗಿರುತ್ತದೆ. ನೀವು ಗುಳಿಗೆ ತೆಗೆದುಕೊಳ್ಳುತ್ತಿದ್ದರೆ, ಅದು ಸಹಜವೂ ಹೌದು. ಆದರೆ ಇದು ನಿರಂತರವಾಗುತ್ತಾ ಸಾಗಿದರೆ ಗರ್ಭಕಂಠದ ಅಥವಾ ಗರ್ಭಕೋಶದಲ್ಲಿನ ಕೆಲವು ಸಮಸ್ಯೆಗಳನ್ನು ಈ ಮೂಲಕ ತಿಳಿಸುತ್ತಿರುತ್ತದೆ. ಆದ್ದರಿಂದ ಸ್ತ್ರೀರೋಗತಜ್ಞರ ಭೇಟಿ ಮಾಡುವ ಅವಶ್ಯಕತೆಯಿರುತ್ತದೆ.

ಬಿಳಿಸ್ರಾವ ಹಾಗೂ ಫಲವಂತಿಕೆ
ಲೈಂಗಿಕ ಅಥವಾ ಆರೋಗ್ಯಪೂರ್ಣ ಸಂತಾನೋತ್ಪತ್ತಿಗೆ ಬಿಳಿ ಸ್ರಾವವು ಅತಿ ಮುಖ್ಯ ಅಂಶ. ಗುಪ್ತಾಂಗದ ಶುದ್ಧತೆಗೆ ಹಾಗೂ ರಕ್ಷಣೆಗೆ ಮಾತ್ರವಲ್ಲದೇ ಸಮರ್ಥ ಸಂತಾನೋತ್ಪತ್ತಿಯ ಸೂಚಕವೂ ಆಗಿದೆ. ಆದ್ದರಿಂದ ದಿನನಿತ್ಯದ ಸ್ರಾವವನ್ನು ಗಮನಿಸಿದರೆ ಗರ್ಭಧಾರಣೆಯ ಸಾಧ್ಯತೆಗಳನ್ನೂ ಕಂಡುಕೊಳ್ಳಬಹುದು.

ಬಿಳಿಸ್ರಾವ: ಸಂತಾನೋತ್ಪತ್ತಿಗೆ ಅತಿ ಅವಶ್ಯಕ
ಯೋನಿಯನ್ನು ಶುಚಿಯಾಗಿಡುವ ಬಿಳಿಸ್ರಾವದಲ್ಲಿ ಸರ್ವಿಕಲ್ ಮ್ಯೂಕಸ್ (ಲೋಳೆಯಂಥ ಸ್ರಾವ) ಕೂಡ ಇರುತ್ತದೆ. ಇದು ಗರ್ಭಕಂಠದಲ್ಲಿ ಉತ್ಪತ್ತಿಯಾಗುತ್ತದೆ. ಋತುಚಕ್ರದ ಇಡೀ ಅವಧಿಯಲ್ಲಿ ಈ ಲೋಳೆಯು ತನ್ನ ಪ್ರಮಾಣ ಹಾಗೂ ಪದರವನ್ನು ಬದಲಾಯಿಸುತ್ತಾ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ಹಾರ್ಮೋನುಗಳು. ಈ ಬದಲಾವಣೆ ಸಂತಾನೋತ್ಪತ್ತಿಯ ವ್ಯವಸ್ಥೆಯನ್ನು ನಿಯಂತ್ರಿಸಿ ಕಾಪಾಡುತ್ತದೆ.

ವೀರ್ಯವು ಗರ್ಭಕಂಠದ ಮೂಲಕ ಹಾದುಹೋಗಿ ಗರ್ಭಕೋಶವನ್ನು ಸೇರಿದರೆ ಮಾತ್ರ ಅದು ಫಲಿಸಲು ಸಾಧ್ಯವಾಗುತ್ತದೆ. ಅಫಲಿತ ದಿನಗಳಲ್ಲಿ, ವೀರ್ಯವನ್ನು ಗರ್ಭಕೋಶಕ್ಕೆ ಸೇರದಂತೆ ತಡೆಯುವ ಕೆಲಸ ಈ ಸ್ರಾವದ್ದು. ಆಗ ಲೋಳೆಯ ಪದರವು ಬಿಳಿ ರಕ್ತಕಣಗಳಿಂದ ಗಟ್ಟಿಯಾಗುತ್ತದೆ. ಆ ಮೂಲಕ ಯಾವುದೇ ದ್ರವ ಹಾದು ಹೋಗುವುದನ್ನು ತಡೆಯುತ್ತದೆ.

ಆದರೆ ಅಂಡೋತ್ಪತ್ತಿ ಸಮಯದಲ್ಲಿ ಈ ಪದರ ಬದಲಾಗುತ್ತದೆ ಹಾಗೂ ವೀರ್ಯವನ್ನು ಗರ್ಭಕ್ಕೆ ಹೋಗಲು ಅನುವು ಮಾಡಿಕೊಟ್ಟು ಆರು ದಿನಗಳವರೆಗೂ ದೇಹದಲ್ಲಿ ಇರಲು ಸಹಾಯ ಮಾಡುತ್ತದೆ.= ಆದ್ದರಿಂದ ಈ ದ್ರವದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ, ಗರ್ಭ ಧರಿಸಲು ಇರುವ ಸೂಕ್ತ ಸಾಧ್ಯತೆಗಳನ್ನು ಅಂದಾಜಿಸಬಹುದು.

ಸ್ರಾವದ ನಿರಂತರತೆ ಹಾಗೂ ಬಣ್ಣವನ್ನು ಗಮನಿಸುತ್ತಿರಲು ಹಲವು ವಿಧಾನಗಳಿವೆ. ಟಾಯ್ಲೆಟ್‌ ಪೇಪರ್‌ನಿಂದ ಇಲ್ಲವೇ ಕೈಗಳಿಂದಲೇ ಪರೀಕ್ಷೆ ಸಾಧ್ಯ. ಸಂಭೋಗದ ನಂತರ ಈ ಪರೀಕ್ಷೆ ಸಲ್ಲದು.

ಫಲವತ್ತು ಹಾಗೂ ಫಲವತ್ತಲ್ಲದ ಸ್ರಾವದ ಪರೀಕ್ಷೆ ಹೇಗೆ?
ಮಹಿಳೆಯ ದೈಹಿಕ ಚಕ್ರದ ವಿವಿಧ ಹಂತಗಳನ್ನು ಕಂಡುಕೊಳ್ಳಲು ನಾಲ್ಕು ವಿಧದ ಸ್ರಾವದ ಪರೀಕ್ಷೆಯಿದೆ.

* ಫಲವತ್ತಲ್ಲದ ಸ್ರಾವ/ಅಂಡೋತ್ಪತ್ತಿಗೂ ಮುನ್ನದ ಹಂತ: ಸಾಮಾನ್ಯವಾಗಿ ಋತುಸ್ರಾವದ ನಂತರ ಯಾವುದೇ ಸ್ರಾವ ಕಂಡುಬರುವುದಿಲ್ಲ. ಇದನ್ನು ‘ಒಣ ದಿನಗಳು’ ಅಥವಾ ‘ಫಲವತ್ತಲ್ಲದ ದಿನಗಳು’ ಎಂದು ಕರೆಯಬಹುದು. ಸ್ರಾವವಾದರೂ ಅದು ಬಿಳಿ ಅಥವಾ ಹಳದಿ ಬಣ್ಣದ್ದಾಗಿದ್ದು, ಗಡುಸಾಗಿರುತ್ತದೆ.

* ಫಲವತ್ತಿನ ಸ್ರಾವ/ ಅಂಡೋತ್ಪತ್ತಿಗೆ ಸಮೀಪ ಹಂತ: ಅಂಡೋತ್ಪತ್ತಿಯಾಗುವಾಗ, ಸ್ರಾವದ ಪ್ರಮಾಣದಲ್ಲಿ ಹೆಚ್ಚಾಗುತ್ತದೆ ಹಾಗೂ ನೀರಿನಂತಿರುತ್ತದೆ. ಪೂರ್ತಿ ಬಿಳಿಯ ಬಣ್ಣದ್ದಾಗಿರುತ್ತದೆ.

* ಹೆಚ್ಚು ಫಲವತ್ತಿನ ಸ್ರಾವ/ಅಂಡೋತ್ಪತ್ತಿ ಹಂತ: ಅಂಡೋತ್ತತ್ತಿಯಾಗುವಾಗ, ಬಿಳಿ ಸ್ರಾವವು ಹೆಚ್ಚು ಪಾರದರ್ಶಕವಾಗುತ್ತದೆ ಹಾಗೂ ಮಂದವಾಗಿರುತ್ತದೆ.

* ಫಲವತ್ತಲ್ಲದ ಸ್ರಾವ/ ಅಂಡೋತ್ತತ್ತಿ ನಂತರ: ಅಂಡೋತ್ಪತ್ತಿ ನಂತರ, ಋತುಚಕ್ರ ಆದ ಮೇಲೆ ಸ್ರಾವವು ಮತ್ತೆ ಹಿಂದಿನ ಸ್ಥಿತಿಗೆ ಮರಳುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT