ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂಬಾಕು ತಿಂದು ಅಂಧರಾಗದಿರಿ!

Last Updated 1 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಗುಡ್ಡದಲ್ಲಿ ಕಲ್ಲು ಒಡೆಯುವ ಕೆಲಸ ಮಾಡುವ ಕಲ್ಲಪ್ಪ ಬೇಸರ ಬಂದಾಗಲೆಲ್ಲ ಎಲೆ–ಅಡಿಕೆ-ತಂಬಾಕು ಹಾಕಿಕೊಳ್ಳುತ್ತಾನೆ. ಕಲ್ಲಪ್ಪನಿಗೆ ಕೂಡಿಮಿಸೆ ಮೂಡಿದಾಗ ಈ ಚಟಕ್ಕೆ ಬಲಿಯಾದ. ಇಂದು ಅವನು ಎರಡಿಪ್ಪತ್ತರ ಗಡಿ ದಾಟಿದ್ದಾನೆ. ಅವನಿಗೆ ಇತ್ತಿತ್ತಲಾಗಿ ಕಣ್ಣು ಮಂಜಾಗಹತ್ತಿದವು. ಬಿಸಿಲಿನಲ್ಲಿ ಕೆಲಸ ಮಾಡುವಾಗ ತ್ರಾಸ ಆಗುತ್ತಿತ್ತು. ಸಂಜೆಯ ಮಬ್ಬು ಬೆಳಕಿನಲ್ಲಿ ಕೆಲಸ ಮಾಡಲು ಇಷ್ಟಪಡುತ್ತಿದ್ದ. ಇದು ಅವನಿಗೇ ಆಶ್ಚರ್ಯವಾಗಿತ್ತು. ಕಂಡಕಂಡ ದೇವರಿಗೆ ಹರಕೆ ಹೊತ್ತ. ಪ್ರಯೋಜನವಾಗಲಿಲ್ಲ.

ಕಡೆಗೊಮ್ಮೆ ಕಣ್ಣಿನ ವೈದ್ಯರ ಹತ್ತಿರ ಹೋದ. ಪರೀಕ್ಷಿಸಿದ ವೈದ್ಯರು ಚಾಳೀಸು ಹಾಕಲು ಹೇಳಿದರು. ಕಣ್ಣಿನ ತೊಂದರೆ ಕಡಿಮೆಯಾಗಲಿಲ್ಲ. ಕಾದು ನೋಡಿದ; ಗುಣ ಆಗಲಿಲ್ಲ. ಮತ್ತೆ ಹೋದ. ವೈದ್ಯರಲ್ಲಿ ತನ್ನ ಗೋಳು ತೋಡಿಕೊಂಡ. ಮೇಲ್ನೋಟಕ್ಕೆ ಯಾವ ಕಾಯಿಲೆಗಳ ಲಕ್ಷಣಗಳೂ ವೈದ್ಯರ ಗಮನ ಸೆಳೆಯಲಿಲ್ಲ. ವಿವಿಧ ಪರೀಕ್ಷೆ ಮಾಡಿ ಅಕ್ಷಿಪಟಲವನ್ನು ಸಂಪೂರ್ಣ ಪರೀಕ್ಷಿಸಿದರೂ ಯಾವ ಬದಲಾವಣೆಗಳೂ ಕಂಡು ಬರಲಿಲ್ಲ.

ಕನ್ನಡಕ ಬದಲಾಯಿಸಲು ವಿಚಾರಿಸತೊಡಗಿದರು. ಕಲ್ಲಪ್ಪ ಮಾತನಾಡುವಾಗಲೆಲ್ಲ ಹೊರಹೊಮ್ಮುತ್ತಿದ್ದ ತಂಬಾಕಿನ ಘಾಟು ವಾಸನೆ ವೈದ್ಯರ ಚಿತ್ತಕ್ಕೆ ಚೇತನ ನೀಡಿತು. ಅವನ ದೃಷ್ಟಿಪತನಕ್ಕೆ ಇರಬಹುದಾದ ಕಾರಣಗಳನ್ನು ಕೆದಕಹತ್ತಿತು. ದೃಷ್ಟಿಯ ಕ್ಷೇತ್ರವಿಸ್ತಾರದ ಪರೀಕ್ಷೆ ಮಾಡಿದರು. ಅನುಮಾನ ದೃಢವಾಯಿತು. ಕಲ್ಲಪ್ಪ ‘ತಂಬಾಕಿನ ದೃಷ್ಟಿಮಾಂದ್ಯ’ ಎಂಬ ಕಾಯಿಲೆಯ ಬಂಧಿತನಾಗಿದ್ದ.

ಇದು ಒಬ್ಬ ಕಲ್ಲಪ್ಪನ ಕಥೆಯಲ್ಲ; ತಂಬಾಕು ತಿನ್ನುವ ಸಾವಿರಾರು ಜನರ ವ್ಯಥೆ. ತಂಬಾಕಿನ ದೃಷ್ಟಿಮಾಂದ್ಯ ಹೆಚ್ಚು ತಂಬಾಕು ತಿನ್ನುವವರಲ್ಲಿ, ಇಲ್ಲವೇ ಬೀಡಿ, ಸಿಗರೇಟು ಸೇದುವವರಲ್ಲಿ ಕಾಣಿಸಿಕೊಳ್ಳುತ್ತದೆ. ಹೊಗೆಸೊಪ್ಪಿನ ಕಾರ್ಖಾನೆಯಲ್ಲಿ ಕೆಲಸ ಮಾಡುವವರಲ್ಲಿಯೂ ಅಪರೂಪವಾಗಿ ಗೋಚರಿಸಬಹುದು. ಈ ರೋಗಕ್ಕೆ ತುತ್ತಾಗುವವರು ತಂಬಾಕು ಸೇವನೆಯ ಜೊತೆಗೆ ಮದ್ಯಪಾನಿಗಳೂ ಆಗಿರುವರು. ಹೆಂಗಸರಿಗಿಂತ ಗಂಡಸರಲ್ಲಿ ಈ ರೋಗದ ಹಾವಳಿ ಹೆಚ್ಚು. ಇದಕ್ಕೆ ಬಡವ ಬಲ್ಲಿದರೆಂಬ ಬೇಧವಿಲ್ಲ. ತಂಬಾಕನ್ನು ತಿನ್ನುವವರು ಸೇದುವವರು ಯಾರೇ ಆಗಿದ್ದರೂ ಅವರನ್ನು ಆದರದಿಂದ ಅಪ್ಪಿಕೊಳ್ಳುವುದು. 35ರಿಂದ 55 ವರ್ಷದ ವ್ಯಕ್ತಿಗಳಿಗೆ ಸಾಮಾನ್ಯವಾಗಿ ಮುತ್ತಿಗೆ ಹಾಕಿ ಮೆತ್ತಗೆ ಮಾಡುವುದು.

ದೃಷ್ಟಿ ಮಂಜಾದಂತೆ ಕಾಣುವುದರೊಂದಿಗೆ ತಂಬಾಕಿನ ದೃಷ್ಟಿಮಾಂದ್ಯಕ್ಕೆ ನಾಂದಿ ಹಾಡುವುದು. ಮಧ್ಯಭಾಗದ ದೃಷ್ಟಿ ತೊಂದರೆಯಿಂದ ಓದಲು ಬರೆಯಲು, ಇಲ್ಲವೇ ಹತ್ತಿರದ ಕೆಲಸ ಮಾಡಲು ಬಹಳ ತೊಂದರೆಯಾಗುತ್ತದೆ; ಕಣ್ಣು ಒತ್ತಿದಂತಾಗಿ ಆಯಾಸವಾಗುತ್ತದೆ. ಆಲಸ್ಯ ಆವರಿಸುತ್ತದೆ. ಬಿಸಿಲಲ್ಲಿ ಕಣ್ಣು ಸರಿಯಾಗಿ ಕಾಣುವುದಿಲ್ಲ. ಸಾಯಂಕಾಲ, ಇಲ್ಲವೇ ಕಡಿಮೆ ಬೆಳಕು ಇರುವಾಗ ಚೆನ್ನಾಗಿ ಕಾಣುವುದೆಂದು ರೋಗಿ ಹೇಳುವುದು ಈ ರೋಗದ ವೈಶಿಷ್ಟ್ಯ. ಎರಡೂ ಕಣ್ಣುಗಳಿಗೆ ಮುತ್ತಿಗೆ ಹಾಕುವ ಈ ಕಾಯಿಲೆಯು ಮೊದಲು ಒಂದು ಕಣ್ಣನ್ನು ಹೆಚ್ಚು ತೊಂದರೆಗೀಡುಮಾಡುತ್ತದೆ. ಹೃದಯ, ಶ್ವಾಸಕೋಶಗಳನ್ನು ನಾಶಮಾಡುವುದರಿಂದ ತೃಪ್ತಿಪಡದ ತಂಬಾಕು, ಕಣ್ಣುಗಳನ್ನೂ ಕಬಳಿಸಿ ಕುರುಡರನ್ನಾಗಿ ಕಾರ್ಗತ್ತಲಲ್ಲಿ ಕೇಕೆ ಹಾಕುವುದು!

ಉಸಿರಿನಲ್ಲಿರುವ ತಂಬಾಕಿನ ದುರ್ಗಂಧ, ನಡುಗುವ ಕೈ ಬೆರೆಳು, ಕಣ್ಣಿನ ಪರೀಕ್ಷೆಯಿಂದ ದೃಷ್ಟಿ ಕಡಿಮೆ ಇರುವ ಅಂಶ ಗೊತ್ತಾಗುವುದನ್ನು ಬಿಟ್ಟರೆ, ಉಳಿದೆಲ್ಲ ಅಂಶಗಳು ಎಲ್ಲರಂತೆ ಸರಿ ಇರುತ್ತವೆ. ಇಂತಹ ಸಂದರ್ಭದಲ್ಲಿ ಈ ರೋಗ ಪತ್ತೆ ಹಚ್ಚಲು ಅತ್ಯಂತ ಸಹಾಯಕವಾಗುವ ಒಂದೇ ಒಂದು ಪರೀಕ್ಷೆ ಎಂದರೆ ರೋಗಿಯ ದೃಷ್ಟಿಯ ಕ್ಷೇತ್ರವಿಸ್ತಾರದ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳಲು ನಡೆಸುವ ಪರೀಕ್ಷೆ. ಪೆರಿಮೀಟರ್ ಎಂಬ ಉಪಕರಣದಿಂದ ಇದು ಸಾಧ್ಯ. ಇದು ಅತ್ಯಂತ ಸರಳ, ಸುರಕ್ಷಿತ, ಕಡಿಮೆ ಖರ್ಚಿನ ಪರೀಕ್ಷೆ. ಅಕ್ಷಿಪಟಲದ ಎಲ್ಲ ಭಾಗಗಳು ಒಂದೇ ಪ್ರಮಾಣದಲ್ಲಿ ಬೆಳಕನ್ನು ಗ್ರಹಿಸುತ್ತಿದೆಯೋ ಎಂಬುದನ್ನು ಅರಿಯಲು ಮತ್ತು ಕಾಣದಿರುವ ಜಾಗವನ್ನು ಪತ್ತೆಹಚ್ಚಲು ಈ ಪರೀಕ್ಷೆಯಿಂದ ಸಾಧ್ಯ.

ಕೇವಲ ಒಂದು ಸಿಗರೇಟಿನಲ್ಲಿರುವ ನಿಕೋಟಿನ್ ಪ್ರಮಾಣವನ್ನು ಒಬ್ಬ ಯುವಕನ ಶಿರದಲ್ಲಿ ನೇರವಾಗಿ ಚುಚ್ಚಿದರೆ ಅವನು ಸತ್ತೇ ಹೋಗುತ್ತಾನೆ. ಈ ವಿಷವು ಅಕ್ಷಿಪಟಲ ಆವರಣದಲ್ಲಿರುವ ಗ್ಯಾಂಗ್ಲಿಯಾನ್ ಜೀವಕೋಶಗಳ ಜೀವ ಹಿಂಡುತ್ತದೆ. ಹೀಗಾಗಿ ದೃಷ್ಟಿಕ್ಷೇತ್ರದ ಮಧ್ಯಭಾಗವು ತಂಬಾಕಿನ ದೃಷ್ಟಿಮಾಂದ್ಯದ ರೋಗಿಗೆ ಕಾಣುವುದಿಲ್ಲ. ಈ ಮಧ್ಯಭಾಗದ ಕುರುಡುತನ ಬಿಳಿಯ ಬಣ್ಣದ ವಸ್ತುಗಳಿಗೆ ಮಾತ್ರ ಸೀಮಿತವಾಗಿರದೇ ವಿಶೇಷವಾಗಿ ಕೆಂಪುಬಣ್ಣದ ವಸ್ತುಗಳಿಗೂ ವಿಸ್ತೃತವಾಗಿರುತ್ತದೆ.

ಪ್ರಾರಂಭದಲ್ಲಿ ಅರಿವಿಲ್ಲದಂತೆ ಅಪ್ಪ್ಪಿಕೊಂಡು ಕಡಿಮೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ದೃಷ್ಟಿದೋಷ ಬೇಗ ಗಮನವನ್ನು ಸೆಳೆಯುವುದಿಲ್ಲ. ಅಲಕ್ಷಿಸಿದಲ್ಲಿ ದೃಷ್ಟಿದೋಷದ ಪ್ರಮಾಣ ಹೆಚ್ಚುತ್ತಹೋಗುವುದು. ಮಧ್ಯಭಾಗದ ಇಡೀ ದೃಷ್ಟಿಯೇ ಧ್ವಂಸವಾಗಿ ಕುರುಡುತ ಉಂಟಾಗಬಹುದು. ಸಾಮಾನ್ಯವಾಗಿ ವೈದ್ಯರನ್ನೂ ಸಹ ಹಾದಿತಪ್ಪಿಸಿ ದೃಷ್ಟಿದೋಷಗಳ ನಿವಾರಣೆಗೆ ಕನ್ನಡಕ ಕೊಡುವ ಸುತ್ತ ಗಸ್ತು ಹೊಡೆಸುತ್ತದೆ. ಅಪರೂಪವಾಗಿದ್ದ ಕಾಯಿಲೆ ಇಂದು ಸಾಕಷ್ಟು ಹಾವಳಿ ಎಬ್ಬಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಗಮನ ಸೆಳೆದಿದೆ. ನೇತ್ರತಜ್ಞರು ದೃಷ್ಟಿದೋಷದ ರೋಗಿಗಳು ಬಂದಾಗ, ತಂಬಾಕು ಸೇವನೆಯ ಅಭ್ಯಾಸ ಅವರಿಗಿದ್ದಲ್ಲಿ ತಂಬಾಕಿನ ದೃಷ್ಟಿಮಾಂದ್ಯ ಇಲ್ಲ ಎಂಬುದನ್ನು ಖಚಿತಪಡಿಸುವುದು ಅತ್ಯಂತ ಅವಶ್ಯ. ಪ್ರಾರಂಭದ ಹಂತದಲ್ಲಿಯೇ ರೋಗಪತ್ತೆ ಹಚ್ಚಿ ಚುರುಕಿನ ಚಿಕಿತ್ಸೆ ನೀಡಿದಲ್ಲಿ ನಷ್ಟವಾಗುವ ಎಷ್ಟೋ ದೃಷ್ಟಿಯನ್ನು ಉಳಿಸಬಹುದು.

ನೇತ್ರನರದ ಉರಿತ ಸಾಮಾನ್ಯವಾಗಿ ನರಗಳ ಮೇಲೆ ಹೊದಿಕೆಯಂತಿರುವ ಮೈಲಿನ್ ಕವಚ ಕಳಚುವುದರಿಂದ, ಮಲ್ಟಿಪಲ್ ಸ್ಕ್ಲೀರೊಸಿಸ್ ಎಂಬ ರೋಗ ಮುತ್ತಿಗೆ ಹಾಕುತ್ತದೆ. ಸಿಫಿಲಿಸ್, ಮಿಥೈಲ್ ಆಲ್ಕೋಹಾಲ್ ದುಷ್ಪರಿಣಾಮದ ಫಲವಾಗಿ ಇಂತಹ ಪರಿಸ್ಥಿತಿ ತಲೆದೋರಬಹುದು. ಬಿ12 ಜೀವಸತ್ವದ ಕೊರತೆಯಿಂದೊಡಗೂಡಿದ ನೇತ್ರನರದ ಉರಿಯೂತ ತಂಬಾಕು ಸೇವಿಸುವವರಲ್ಲಿ ಸರ್ವಸಾಮಾನ್ಯ. ತಂಬಾಕಿನ ಹೊಗೆಯಲ್ಲಿ ಸೈನಾಯ್ಡ್ ಇದ್ದು ನರಗಳ ಮೇಲಿನ ಮೈಲಿನ್ ಕವಚ ಕಳಚಲು ಕಾರಣೀಭೂತವಾಗಿರುವುದು. ಬಿ12 ಜೀವಸತ್ವದಿಂದ ದೊರೆಯುವ ಹೈಡ್ರೋಕ್ಸಿಕೊಬಾಲಾಮಿನ್ ಸೈನಾಯ್ಡ ಈ ಕಾರ್ಯಕ್ಕೆ ಅಡ್ಡಿಯೊಡ್ಡುವುದು.

ಅಂಧರಲ್ಲಿ ಕಾಣಿಸಿಕೊಳ್ಳುವ ಈಥೈಲ್ ಅಲ್ಕೋಹಾಲ್ ದೃಷ್ಟಿಮಾಂದ್ಯವು ಇದೇ ರೀತಿಯ ಲಕ್ಷಣಗಳನ್ನು ಹೊಂದಿದ್ದರೂ, ಅದರಲ್ಲಿ ರೋಗಿಯ ಕೈಕಾಲುಗಳಿಗೆ ಸಂಬಂಧಪಟ್ಟ ನರಗಳೂ ತೊಂದರೆಗೀಡಾಗುತ್ತವೆ. ನರಗಳ ದೌರ್ಬಲ್ಯದ ನರ್ತನದಿಂದ ಕೈಕಾಲುಗಳಲ್ಲಿ ಜೋಮು ತುಂಬಿರುತ್ತದೆ. ಗಡಗಡ ನಡುಗುತ್ತಿರುತ್ತವೆ. ಸತ್ವಯುತ, ಶಕ್ತಿಯುತ, ಸಮತೋಲನ ಆಹಾರದ ಅಭಾವ, ಜೀವಸತ್ವಗಳ ಕೊರತೆಯಿಂದ ಇವು ಉಂಟಾಗುತ್ತವೆ. ನಮ್ಮಲ್ಲಿ ಹೆಚ್ಚಾಗಿ ಮದ್ಯಪಾನಿಗಳು ಧೂಮಪಾನಿಗಳೂ ಆಗಿರುವುದರಿಂದ ಅವುಗಳ ದುಷ್ಪರಿಣಾಮಗಳು ಒಂದಕ್ಕೊಂದು ಪೂರಕ, ಪೋಷಕವಾಗಿ ಕಾರ್ಯನಿರ್ವಹಿಸುವುದರಿಂದ ಅಂಥವರು ದೃಷ್ಟಿಮಾಂದ್ಯಕ್ಕೆ ತುತ್ತಾಗುತ್ತಾರೆ.

ಚಿಕಿತ್ಸೆ
ರೋಗ ಪತ್ತೆಹಚ್ಚಿದ ಕ್ಷಣದಿಂದ ರೋಗಿ ಬೀಡಿ, ಸಿಗರೇಟು ಮತ್ತು ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಲೆಬೇಕು. ಮದ್ಯಪಾನವನ್ನೂ ಮಾಡಬಾರದು. ಜೀವಸತ್ವಗಳು, ಲವಣಾಂಶಗಳು ಹೇರಳವಾಗಿರುವ ಶಕ್ತಿಯುತ ಸತ್ವಯುತವಾದ ಸಮತೋಲನ ಆಹಾರಸೇವನೆಯು ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದು. ಗುಣಮುಖರಾದ ರೋಗಿಗಳು ಸಾಕಷ್ಟು ಸಂದರ್ಭಗಳಲ್ಲಿ ಹಗಲು ಕಂಡ ಬಾವಿಗೆ ರಾತ್ರಿ ಬೀಳುವುದೇ ಹೆಚ್ಚು. ಬಿಟ್ಟ ಚಟವನ್ನು ಬರಮಾಡಿಕೊಳ್ಳುವವರು ತಂಬಾಕಿನ ದೃಷ್ಟಿಮಾಂದ್ಯದ ತಿರುಗಣಿ ಮಡುವಿನಲ್ಲಿ ಗಿರಕಿ ಹೊಡೆಯುವರು. ಇದು ದುರದೃಷ್ಟಕರ. ತಂಬಾಕು ತಿನ್ನುವವರೇ ಈಗಲಾದರೂ ಎಚ್ಚರವಾಗಿರಿ! ಅಮೂಲ್ಯ ದೃಷ್ಟಿಯನ್ನು ಕಳೆದುಕೊಂಡು ಕುರುಡರಾಗಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT