ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಹಿತಿಗಳ ನಡುವೆ ಪ್ರತ್ಯೇಕತೆ ಸೃಷ್ಟಿಸಲಾಗುತ್ತಿದೆ’

Last Updated 2 ಸೆಪ್ಟೆಂಬರ್ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಬರಹಗಾರರು ಜಾತಿ, ಧರ್ಮ, ಮತ, ಪಂಥಕ್ಕೆ ಸೀಮಿತವಾಗಿರದೇ ವಿಶಾಲ ದೃಷ್ಟಿಕೋನದಿಂದ ಸಾಹಿತ್ಯ ಕೃಷಿ ಮಾಡಬೇಕು’ ಎಂದು ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕುವೆಂಪು ಕಲಾಕೇಂದ್ರ ಟ್ರಸ್ಟ್ ಶನಿವಾರ ಹಮ್ಮಿಕೊಂಡಿದ್ದ ತನ್ನ ಪ್ರಥಮ ವಾರ್ಷಿಕೋತ್ಸವ ಹಾಗೂ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಕುವೆಂಪು ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕುವೆಂಪು, ಬೇಂದ್ರ, ಪು.ತಿ.ನ ಹೀಗೆ ಸಾಹಿತಿಗಳ ನಡುವೆ ಪ್ರತ್ಯೇಕತೆಯನ್ನು ಸೃಷ್ಟಿಸುವ ಕೆಲಸವಾಗುತ್ತಿದೆ. ಬರಹಗಾರರಲ್ಲಿ ಮಾತ್ರವಲ್ಲ, ಓದುಗರಲ್ಲೂ ವಿಶಾಲ ಮನೋಭಾವ ಇರಬೇಕು. ಒಬ್ಬರು ಮೇಲು, ಮತ್ತೊಬ್ಬರು ಕೀಳು ಎನ್ನುವ ಪ್ರವೃತ್ತಿ ಬದಲಾಗಬೇಕು. ಲೇಖಕರು ಕನ್ನಡವನ್ನು ಬಳಸಿದರೆ, ಓದುಗರು ಕನ್ನಡವನ್ನು ಬೆಳೆಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ಯಾವ ರೀತಿಯ ಪ್ರವೃತ್ತಿ ಇದೆ ಎಂದರೆ, ಸಾಹಿತಿಗಳ ಮಕ್ಕಳೇ ಪುಸ್ತಕಗಳನ್ನು ಓದುವುದಿಲ್ಲ. ಇಂತಹ ವಾತಾವರಣದಲ್ಲಿ ಸಾಹಿತ್ಯದ ಬೇರುಗಳನ್ನು ಜಾಗೃತ ಮಾಡುವ ಜತೆಗೆ ಕನ್ನಡ ಪ್ರೇಮಿಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ’ ಎಂದು ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ, ‘ವಿಮರ್ಶಕರಿಗೆ ವಿವೇಕ ಹಾಗೂ ವಿನಯ ಇರಬೇಕು. ಆಗಲೇ ಉತ್ತಮ ವಿಮರ್ಶೆ ಮಾಡಲು ಸಾಧ್ಯವಾಗುತ್ತದೆ. ಇಂದಿನ ಪೀಳಿಗೆಯವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿರುತ್ತಾರೆ. ತಮ್ಮ ಸಮಕಾಲೀನರನ್ನೂ ಓದುವ ಆಸಕ್ತಿ ಇಂದಿನ ಯುವ ಸಾಹಿತಿಗಳಿಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಶಸ್ತಿ ಪುರಸ್ಕೃತರಾದ ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಈ ಸಮಾಜ ಪ್ರೀತಿಸುವ ಶಕ್ತಿಯನ್ನು ಕಳೆದುಕೊಂಡಿದೆ. ದ್ವೇಷ, ತಾತ್ಸಾರ, ಅಸೂಯೆ ಹೆಚ್ಚುತ್ತಿದೆ. ಕನ್ನಡವನ್ನು ಕಟ್ಟಲು ಅನೇಕ ದಾರಿಗಳಿವೆ. ಕನ್ನಡದಲ್ಲಿ ಸಾಹಿತ್ಯ ರಚಿಸುವ ಜತೆಗೆ ಸಂಕಷ್ಟದಲ್ಲಿರುವ ಸಾಹಿತಿಗಳನ್ನು ರಕ್ಷಿಸುವುದು ಕೂಡ ಕನ್ನಡದ ಕೆಲಸ. ಪ್ರಶಸ್ತಿಗಳಿಂದ ಬಂದ ಹಣವನ್ನು ನರಹಳ್ಳಿ ಟ್ರಸ್ಟ್‌ಗೆ ನೀಡಿ, ಸಾಹಿತ್ಯ ಕೆಲಸಕ್ಕೆ ವಿನಿಯೋಗಿಸುತ್ತೇನೆ’ ಎಂದು ಹೇಳಿದರು. ಪ್ರಶಸ್ತಿಯು ₹5,000 ನಗದು, ಫಲಕವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT