ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ನಿಮ್ಮ ಊರಲ್ಲೇ ಇರಬೇಕೆ?

Last Updated 3 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

* ನನ್ನ ಹೆಸರು ನವೀನ್‌, ನಾನು ಬ್ಯಾಟರಾಯಪುರದಲ್ಲಿ ನೆಲೆಸಿದ್ದೇನೆ. ನನ್ನದು ಬಿ.ಕಾಂ. ಮುಗಿದಿದೆ. ಕೋರ್ಸ್‌ನ ಬಗ್ಗೆ ನನಗೊಂದು ಅನುಮಾನವಿದೆ. ನನ್ನ ಸ್ನೇಹಿತ ನನಗೆ ಗ್ರಾಫಿಕ್ ಡಿಸೈನ್ ಅಥವಾ ವೆಬ್ ಡಿಸೈನ್ ಕೋರ್ಸ್‌ಗೆ ಹೋಗುವಂತೆ ಸಲಹೆ ನೀಡಿದ್ದಾನೆ. ನಾನು ಈ ಕೋರ್ಸ್‌ ಮಾಡಿದರೆ ನನಗೆ ಸಹಾಯವಾಗುತ್ತದೆಯೆ? ಆ ಕೋರ್ಸ್‌ಗೆ ಸ್ಕೋಪ್ ಇದೆಯೆ? ನಾನು ಆ ಕೋರ್ಸ್‌ ಮಾಡಿದರೆ ನನಗೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಪಡೆದುಕೊಳ್ಳಲು ಸಾಧ್ಯವೆ? ನಾನು ಇದಕ್ಕಾ‌ಗಿ ಯಾವ ಇನ್ಸ್‌ಟಿಟ್ಯೂಟ್ ಅನ್ನು ಆಯ್ಕೆ ಮಾಡಿಕೊಳ್ಳಲಿ?
ಬಿ.ಕಾಂ. ನಂತರ ಏನು ಅನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿದೆ. ನಿಮ್ಮ ಸ್ನೇಹಿತರ ಸಲಹೆಗಿಂತ ತಜ್ಞರ ಸಲಹೆ ಪಡೆಯಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಆಸಕ್ತಿ, ಅರ್ಹತೆ, ಬುದ್ಧಿವಂತಿಕೆ ಇರುತ್ತದೆ. ಡಿಸೈನ್ ಕೋರ್ಸ್‌ಗಳನ್ನು ಮಾಡಲು ಸ್ಪಾಷಿಯಲ್ ಎಬಿಲಿಟಿ ಎನ್ನುವ ಆಪ್ಟಿಟ್ಯೂಡ್ ಇರಬೇಕು. ನಿಮ್ಮಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಇದನ್ನು ಆಪ್ಟಿಟ್ಯೂಡ್‌ ಟೆಸ್ಟ್ ಮೂಲಕ ತಿಳಿಯಬಹುದು. ಡಿಸೈನ್‌ನಲ್ಲಿ ಅಭಿರುಚಿ ಇರುವವರು ಈ ಕೋರ್ಸ್ ಮಾಡಿದರೆ ಅವರಿಗೆ ಒಳ್ಳೆಯ ಕೆಲಸ ಸಿಗುವ ಸಾಧ್ಯತೆ ಇದೆ. ಬಿ.ಎ, ಬಿ.ಎಸ್ಸಿ, ಬಿ.ಕಾಂ ಪದವಿಧರರು ಎಂಬಿಎ ಕೋರ್ಸ್‌ಗಳನ್ನು ಮಾಡಬಹುದು. ನಾಗರಿಕ ಸೇವಾ ಪರೀಕ್ಷೆಯ ಕಡೆ ಶ್ರಮ ವಹಿಸಿದರೆ ಐಪಿಎಸ್‌, ಐಎಎಸ್‌, ಐಎಫ್ಎಸ್ ಕೂಡ ಮಾಡಬಹುದು. ಬ್ರಾಂಡ್ ಮ್ಯಾನೇಜ್‌ಮೆಂಟ್‌, ರೀಟೈಲ್ ಮ್ಯಾನೇಜ್‌ಮೆಂಟ್‌, ಪಬ್ಲಿಕ್ ರಿಲೇಷನ್‌. ಅಡ್ವಟೈಸಿಂಗ್. ಇವೆಂಟ್ ಮ್ಯಾನೇಜ್‌ಮೆಂಟ್‌, ಬ್ಯಾಂಕಿಂಗ್ ಕಾರ್ಪೋರೇಟ್ ಕಮ್ಯುನಿಕೇಷನ್ ಕ್ಷೇತ್ರಗಳಲ್ಲಿ ಅದಕ್ಕೆ ಸಂಬಂಧಿಸಿದ ಪರೀಕ್ಷೆಯನ್ನು ತೆಗೆದುಕೊಳ್ಳಿ.

* ನನ್ನ ಹೆಸರು ಆಶಿಕ್ ಆರಾಧ್ಯ. ನಾನು ಮಹೇಶ್‌ ಪಿಯು ಕಾಲೇಜಿನಲ್ಲಿ ಪಿಸಿಎಂಸಿ ಓದಿದ್ದೇನೆ. ನಾನು ಕಂಪ್ಯೂಟರ್ ಅಪ್ಲಿಕೇಶನ್‌ ವಿಷಯದಲ್ಲಿ ಶೇ.80 ಅಂಕ ಗಳಿಸಿದ್ದೇನೆ. ಆದರೆ ಉಳಿದ ಸ‌ಬ್ಜೆಕ್ಟ್‌ನಲ್ಲಿ ಫೇಲ್ ಆಗಿದ್ದೇನೆ. ನನಗೆ ಕಂಪ್ಯೂಟರ್ ಕೋರ್ಸ್‌ನಲ್ಲಿ ಆಸಕ್ತಿ ಇದೆ. ಈ ಕೋರ್ಸ್‌ನ ಬಗ್ಗೆ ನನಗೆ ಕೆಲವು ಪ್ರಶ್ನೆಗಳಿವೆ. ಡಿಪ್ಲೋಮಾ ಉತ್ತಮವೇ ಅಥವಾ ಆ್ಯಂಟ್, ಎನ್‌ಐಟಿಟಿ ಹಾಗೂ ಜೆಟ್‌ಕಿಂಗ್‌ನಲ್ಲಿ ನನಗೆ ಕೋರ್ಸ್ ಮಾಡಲು ಸೂಕ್ತವಾದ ಅವಕಾಶವಿದೆಯೇ?
ನಿಮ್ಮ ಪ್ರಶ್ನೆಯಿಂದ ನಿಮಗೆ ವಿಜ್ಞಾನದ ಕಡೆ ಆಪ್ಟಿಟ್ಯೂಡ್ ಇಲ್ಲ ಅನ್ನಿಸುತ್ತಿದೆ. ನೀವು ಏನು ಓದಬೇಕು ಎನ್ನುವುದನ್ನು ನಿರ್ಧರಿಸಬೇಕು. ಹೇಗಾದರೂ ಕಷ್ಟಪಟ್ಟು ಪಿಯುಸಿ ಪಾಸ್ ಮಾಡಿ. ಪದವಿಗೆ ಸೇರಿ ಪದವಿಧರರಾಗಬೇಕು. ವಿಜ್ಞಾನದಲ್ಲಿ ಸಾಮರ್ಥ್ಯ ಇಲ್ಲದಿರುವ ಕಾರಣ ಆರ್ಟ್ಸ್ ಮತ್ತು ಕಾರ್ಮಸ್ಸ್ ತೆಗೆದುಕೊಳ್ಳಿ. ಕಂಪ್ಯೂಟರ್ ಕೋರ್ಸ್ ಅನ್ನು ಮಾನ್ಯತೆ ಪಡೆದ ಇನ್ಸ್‌ಟಿಟ್ಯೂಟ್‌ನಿಂದ ಮಾಡಬೇಕು. ನಿಮಗೆ ಹತ್ತಿರವಿರುವ ಇನ್ಸ್‌ಟಿಟ್ಯೂಟ್‌ಗೆ ಭೇಟಿ ನೀಡಿದರೆ ಅವರು ನಿಮಗೆ ಕೋರ್ಸ್‌ನ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಾರೆ. ಕಂಪ್ಯೂಟರ್ ಕೋರ್ಸ್‌ಗಳು ಡಿಸೈನಿಂಗ್, ಯುಐ, ಯುಎಸ್ಸ್ ಡಿಸೈನಿಂಗ್‌, ಸಾಫ್ಟ್‌ವೇರ್ ಡಿಸೈನಿಂಗ್‌, ಸಿ, ಸಿ++, ಇನ್ನೂ ಅನೇಕ ಕ್ಷೇತ್ರದಲ್ಲಿ ಮಾಡಬಹುದು. ನಿರಾಶರಾಗಲು ಕಾರಣವಿಲ್ಲ. ಅಭಿರುಚಿ, ಆಸಕ್ತಿಗೆ ತಕ್ಕ ಕೋರ್ಸ್ ಅನ್ನು ಆಯ್ಕೆ ಮಾಡಿ, ನಿಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ.

* ನನ್ನ ಹೆಸರು ರಾಕೇಶ್, ದಾವಣಗೆರೆ, ನಾನು ಪಿಯುಸಿ ಕಾರ್ಮಸ್‌ ಓದಿದ್ದು ಮುಂದೆ ಇವೆಂಟ್ ಮ್ಯಾನೇಜ್‌ಮೆಂಟ್ ಬಗ್ಗೆ ಅಧ್ಯಯನ ಮಾಡಬೇಕು ಎಂದುಕೊಂಡಿದ್ದೇನೆ. ಇವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್ ದಾವಣಗೆರೆಯಲ್ಲಿ ಲಭ್ಯವಿದೆಯೇ?
ನಾವು ಇರುವ ಊರಿನಲ್ಲಿ ನಮಗೆ ಬೇಕಾದ ಕೋರ್ಸ್ ಇರಬೇಕು ಎಂದು ಬಯಸುವುದು ಸರಿಯಲ್ಲ. ನಿಮಗೆ ಇವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್ ಬಗ್ಗೆ ತೀವ್ರವಾದ ಒಲವು ಇದ್ದಲ್ಲಿ, ಅದು ಎಲ್ಲಿ ಇರುತ್ತದೋ ಅಲ್ಲಿ ಮಾಡಬೇಕು. ನಿಮ್ಮಲ್ಲಿ ಪ್ರತಿಯೊಂದು ಸಣ್ಣ ವಿಷಯ ( ಐ ಫಾರ್ ಡಿಟೈಲ್ಸ್‌) ಚುರುಕು, ಜನರಲ್ಲಿ ಸಮಾಧಾನದಿಂದ ವರ್ತಿಸುವ ಸ್ವಭಾವ, ಯಾವುದೇ ಇವೆಂಟ್ ಬಗ್ಗೆ ವಿವರಗಳು ಇದ್ದಲ್ಲಿ, ನೀವು ಈ ಕೋರ್ಸ್ ಅನ್ನು ಚುನಾಯಿಸಬಹುದು. ಈ ಕೆಳಕಂಡ ಜಾಗದಲ್ಲಿ ಇವೆಂಟ್ ಮ್ಯಾನೇನಜ್‌ಮೆಂಟ್ ಕೋರ್ಸ್‌ಗಳು ನಡೆಯುತ್ತವೆ.

1, ನ್ಯಾಷನಲ್ ಇನ್ಸ್‌ಟಿಟ್ಯೂಟ್ ಫಾರ್ ಇವೆಂಟ್ ಮ್ಯಾನೇಜ್‌ಮೆಂಟ್, ಮುಂಬೈ.
2. ಇನ್ಸ್‌ಟಿಟ್ಯೂಟ್ ಆಫ್ ಇವೆಂಟ್ ಮ್ಯಾನೇಜ್‌ಮೆಂಟ್ (ಮಿನಿಸ್ಟರಿ ಆಫ್ ಎಚ್‌ಆರ್‌ಡಿ, ಭಾರತ ಸರ್ಕಾರ), ಲಕ್ನೊ.
3. ನ್ಯಾಷನಲ್ ಅಕಾಡೆಮಿ ಆಫ್ ಇವೆಂಟ್ ಮ್ಯಾನೇಜ್‌ಮೆಂಟ್ ಅಂಡ್ ಡೆವಲಪ್‌ಮೆಂಟ್ ಅಹಮದಾಬಾದ್‌. ದೆಹಲಿ, ಜೈಪುರ ಹಾಗೂ ಮುಂಬೈ.
4. ದೆಹಲಿ ಸ್ಕೂಲ್ ಆಫ್ ಕಮ್ಯುನಿಕೇಷನ್‌, ನವದೆಹಲಿ; ಇನ್ನೂ ಅನೇಕ.

* ನನ್ನ ಹೆಸರು ಅರುಣ್ ಕುಮಾರ್. ನಾನು ಸದ್ಯ ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ 3 ವರ್ಷದ ಕೋರ್ಸ್ ಮುಗಿಸಿದ್ದೇನೆ. ಈಗ ನನಗೆ ಮುಂದೆ ಇಂಜಿನಿಯರಿಂಗ್‌ಗೆ ಹೋಗಲು ಇಷ್ಟ ಇಲ್ಲ. ನಾನು ಈಗ ಬೇರೆ ಯಾವ ಕೋರ್ಸ್ ಮಾಡಬಹುದು? ಅದು ಎಷ್ಟುಗಳ ವರ್ಷಗಳ ಕೋರ್ಸ್‌? ಅವುಗಳಲ್ಲಿ ಯಾವುದು ಉತ್ತಮ?
ನಿಮಗೆ ಎಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ ಸ್ಟ್ರೀಮ್ ಮೂಲಕ ಮಾಡಲು ಇಷ್ಟವಿಲ್ಲ ಎಂದು ತಿಳಿಸಿದ್ದೀರಿ. ನಿಮಗೆ ಒಳ್ಳೆಯ ಕೆಲಸ, ಸ್ನಾತಕೋತ್ತರ ಪದವಿಗಳಿಗೆ ಅರ್ಹತೆ ಪಡೆಯಬೇಕಾದರೆ ಪದವಿ ಪಡೆಯಲೇಬೇಕು, ಡಿಪ್ಲೊಮಾ ನಂತರ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದರೆ ಅದು ಬೇರೆ ಮಾತು. ನಿಮಗೆ ಇನ್ನೊಂದು ಮಾರ್ಗ ಇದೆ. ಎಎಂಐಇ (ಆಸೋಸಿಯೇಷನ್ ಮೆಂಬರ್ ಆಫ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರ್ಸ್‌)ಗೆ ರಿಜಿಸ್ಟರ್ ಮಾಡಿಕೊಂಡರೆ ನೀವು ಎಂಜಿನಿಯರಿಂಗ್ ಪದವಿ ಪಡೆಯಬಹುದು. ಈ ಪದವಿಯನ್ನು ಎಲ್ಲ ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ, ಎಐಸಿಟಿಇ, ಯುಪಿಎಸ್ಸ್‌ಸಿ ಇತರೆ ಬಿ,ಇ, ಬಿ.ಟೆಕ್. ಪದವಿಗೆ ಸಮ ಎಂದು ಪರಿಗಣಿಸಿದೆ. ಎಐಎಂಇ ಪಾಸ್ ಮಾಡಿದವರಿಗೆ ಬಿ,ಇ, ಬಿ.ಟೆಕ್‌.ನವರಿಗೆ ದೊರಕುವಂಥ ಉತ್ತಮ ಕೆಲಸಗಳು ದೊರೆಯುತ್ತದೆ. ಎಐಎಂಇ ಡಿಗ್ರಿಯನ್ನು ದೂರ ಶಿಕ್ಷಣದ ಮೂಲಕವೂ ಮಾಡಬಹುದು. ಆದ್ದರಿಂದ ನೀವು ಡಿಪ್ಲೊಮಾ ನಂತರ, ಕೆಲಸಕ್ಕೆ ಸೇರಿದ ನಂತರವೂ ಮಾಡಬಹುದು. ನಿಮಗೆ ಈ ಕೋರ್ಸ್‌ ಅನ್ನು ಮಾಡುವ ಅರ್ಹತೆ ಇದೆ. ಹೆಚ್ಚಿನ ವಿವರವನ್ನು ನೀವು www.amieindia.inನಿಂದ ಪಡೆಯಿರಿ.

* ನನ್ನ ಹೆಸರು ಮಹಾಂತೇಶ್ ಕುಮಾರ್, ಚಿತ್ರದುರ್ಗದವನು. ನಾನು ಪದವಿ ಮುಗಿಸಿದ್ದು, ಮುಂದೆ ಸ್ನಾತಕೋತ್ತರ ಪದವಿ ಮಾಡಬೇಕೆಂದಿದ್ದೇನೆ. ಆದರೆ ನನಗೆ ಒಂದು ಅನುಮಾನ. ಎಂಎಸ್‌ಡಬ್ಲ್ಯೂ ಮಾಡಬೇಕೆಂದಿದ್ದೇನೆ. ಆದರೆ ಯಾವ ವಿಶ್ವವಿದ್ಯಾಲಯದಲ್ಲಿ ಮಾಡಬೇಕು ಎಂಬುದು ತಿಳಿಯುತ್ತಿಲ್ಲ. ದಯವಿಟ್ಟ ತಿಳಿಸಿ.
ಎಂಎಸ್‌ಡ್ಬ್ಲ್ಯೂ ಜನರಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸುಳ್ಳವರು ನೀವು. ಇಂದಿನ ಸಮಾಜದಲ್ಲಿ ಮಿತಿಮೀರಿದ ನಿರೀಕ್ಷೆಗಳನ್ನು ಹೊಂದಿದ ಯುವಕ–ಯುವತಿಯರು, ಮಕ್ಕಳಿಂದ ನಿರಾಶರಾದ ತಂದೆ ತಾಯಿಗಳು, ವಂಚಿತರಾದ ಹಲವು ಹೆಂಗಸರು ಮತ್ತು ಗಂಡಸರು ವಿಧವಿಧವಾದ ಸಮಸ್ಯೆಗಳಿಂದ ನರಳುತ್ತಿದ್ದಾರೆ. ನಮ್ಮ ಸಮಾಜಕ್ಕೆ ಎಂಎಸ್‌ಡ್ಬ್ಲ್ಯೂ ಪದವಿಧರರು, ಸರಿಯಾದ ತರಬೇತಿಯನ್ನು ಹೊಂದಿ ಅಂಥವರಿಗೆ ಭರವಸೆಯನ್ನು ನೀಡಬೇಕು.

ಸಾಮಾಜಿಕ ಕಾರ್ಯಕರ್ತರು ಸಂಸಾರ, ಮಕ್ಕಳು ಮತ್ತು ಶಾಲೆಗಳಿಂದ ಉಂಟಾಗುವ ಸಮಸ್ಯೆಗಳಲ್ಲಿ ಪರಿಣತಿ ಹೊಂದಿರುತ್ತಾರೆ. ಮೆಡಿಕಲ್ ಮತ್ತು ಪಬ್ಲಿಕ್ ಹೆಲ್ತ್ ವಿಭಾಗದವರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಲು ಪರಿಣತಿಯನ್ನು ಪಡೆದಿರುತ್ತಾರೆ. ಮೆಂಟಲ್‌ ಹೆಲ್ತ್ ಹಾಗೂ ಸಬ್‌ಸ್ಟೆನ್ಸ್ ಅಬ್ಯುಸ್ ಸೋಷಿಯಲ್ ವರ್ಕಸ್ಸ್ ಮಾನಸಿಕ ಅಸ್ವಸ್ಥತೆಗಳು, ಕುಡಿತದಿಂದ ಬರುವ ಸಮಸ್ಯೆಗಳು.

ಡ್ರಗ್ ಅಬ್ಯುಸ್, ಸೋಷಿಯಲ್ ವರ್ಕ್ ಪ್ಲಾನರ್ಸ್‌ ಮತ್ತು ಪಾಲಿಸಿ ಮೇಕರ್ಸ್ – ಇವರು ಸಮಸ್ಯೆಗಳನ್ನು ಯಾವ ರೀತಿ ಯಾವ ಪರಿಹರಿಸಬಹುದು ಎನ್ನುವ ಮುಂದಾಲೋಚನೆ ಮಾಡಿ ಅದಕ್ಕೆ ತಕ್ಕ ಪ್ಲಾನ್ ಅನ್ನು ಸಿದ್ಧಗೊಳಿಸಿ ರೂಢಿಸುತ್ತಾರೆ. ಹೀಗೆ ಅನೇಕ ಕ್ಷೇತ್ರಗಳಲ್ಲಿ ತರಬೇತಿ ಇರುತ್ತದೆ. ನಿಮಗೆ ಇದರಲ್ಲಿ ಯಾವುದು ಆಸಕ್ತಿ ಇದೆಯೋ ಅದರಂತೆ ನೀವು ಒಬ್ಬ ಒಳ್ಳೆಯ ಸೋಷಿಯಲ್ ವರ್ಕರ್ ಆಗಬಹುದು.

ಎಲಿಜಿಬಿಲಿಟಿ ಟು ಎಂಎಸ್‌ಡ್ಬ್ಲ್ಯಕೋರ್ಸ್‌ ಪದವಿ (ಬಿಎಸ್‌ಡ್ಬ್ಲ್ಯೂ). ಮನಃಶಾಸ್ತ್ರ. ಸಮಾಜಶಾಸ್ತ್ರ, ಮತ್ತು ಸಂಬಂಧಪಟ್ಟ ಸಬ್‌ಫೀಟ್ಸ್‌.
ಈ ಕೆಳಕಂಡ ಕೆಲವು ಕೋರ್ಸಗಳು ವಿಶ್ವವಿದ್ಯಾಲಯಗಳಲ್ಲಿ ಎಂಎಸ್‌ಡ್ಬ್ಲ್ಯೂನಲ್ಲಿ ಎರಡು ವರ್ಷದ ಕೋರ್ಸ್‌ಗಳಿವೆ.
1. ಬರ್ಕಾತುಲ್ಲಾ ವಿಶ್ವವಿದ್ಯಾಲಯ, ಭೋಪಾಲ್.
2. ಯೂನಿವರ್ಸಿಟಿ ಆಫ್ ದೆಹಲಿ, ನವದೆಹಲಿ.
3. ರಾಜಸ್ಥಾನ ವಿದ್ಯಾಪೀಠ, ಉದಯ್‌ಪುರ.
4. ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.
5. ಮೈಸೂರು ವಿಶ್ವವಿದ್ಯಾಲಯ, ಮೈಸೂರು; ಇನ್ನೂ ಅನೇಕ ಕಡೆ.

ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಪ್ರಶ್ನೆಗಳಿವೆಯೇ? ನಮಗೆ ಕಳುಹಿಸಿ...
ವಿದ್ಯಾರ್ಥಿಗಳೇ, ವಿದ್ಯಾಭ್ಯಾಸದ ಬಗ್ಗೆ ನಿಮ್ಮಲ್ಲಿ ಸಾಕಷ್ಟು ಸಂದೇಹಗಳು–ಪ್ರಶ್ನೆಗಳು ಇರಬಹುದು. ಕೋರ್ಸ್‌ಗಳ ವಿವರಗಳು, ಬೇಕಾದ ಅರ್ಹತೆ, ಆಯ್ಕೆಗೆ ಬೇಕಾಗಿರುವ ಸಿದ್ಧತೆ, ವೃತ್ತಿಶಿಕ್ಷಣದ ವಿವರಗಳು, ಲಭ್ಯವಿರುವ ವಿದ್ಯಾರ್ಥಿವೇತನಗಳು – ಹೀಗೆ ನಿಮ್ಮ ಶಿಕ್ಷಣವನ್ನು ಕುರಿತಾದ ಎಲ್ಲ ಪ್ರಶ್ನೆಗಳಿಗೂ ನೀವು ‘ಶಿಕ್ಷಣ’ ಪುರವಣಿಯಲ್ಲಿ ಉತ್ತರವನ್ನು ಪಡೆಯಬಹುದು.

ನೀವು ಮಾಡಬೇಕಾಗಿರುವುದಷ್ಟೆ: ನಿಮ್ಮ ಪ್ರಶ್ನೆಯನ್ನು ಸ್ಪಷ್ಟವಾಗಿ ನಮಗೆ ಕಳುಹಿಸಿ. ನಿಮ್ಮ ಕಾಲೇಜು, ತರಗತಿ, ವಿಳಾಸವನ್ನು ಬರೆಯುವುದನ್ನು ಮರೆಯಬೇಡಿ. ವೃತ್ತಿಶಿಕ್ಷಣ ಸಲಹೆಗಾರರಾದ ಅನ್ನಪೂರ್ಣ ಮೂರ್ತಿ ನಿಮ್ಮ ಸಂಶಯಗಳನ್ನು ನಿವಾರಿಸುತ್ತಾರೆ. ಪ್ರಶ್ನೆಗಳನ್ನು ಯೂನಿಕೋಡ್‌, ನುಡಿಯಲ್ಲಿ ಇ–ಮೇಲ್ ಮೂಲಕವೂ ಕಳುಹಿಸಬಹುದು.

ನಮ್ಮ ವಿಳಾಸ: ಸಂಪಾದಕರು, ‘ಶಿಕ್ಷಣ ಪುರವಣಿ’, ಪ್ರಜಾವಾಣಿ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು– 560001
ಇಮೇಲ್‌: shikshana@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT