ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯಕ್ಕೆ ಗುರಿಯಾಗುತ್ತಿರುವ ಬಾರ್ಕೂರು!

Last Updated 4 ಸೆಪ್ಟೆಂಬರ್ 2017, 9:16 IST
ಅಕ್ಷರ ಗಾತ್ರ

ಪ್ರತಿವರ್ಷ ಕರ್ನಾಟಕ ಇತಿಹಾಸ ಅಕಾಡೆಮಿಯು ಆಗಸ್ಟ್ ತಿಂಗಳ ಮೂರನೇ ವಾರವನ್ನು ಐತಿಹಾಸಿಕ ಸ್ಮಾರಕ ಉಳಿಸಿ ಸಪ್ತಾಹವನ್ನು ಆಚರಿಸುತ್ತಿದೆಯಾದರೂ, ಜನರ ಮತ್ತು ಸರ್ಕಾರದ ನಿರ್ಲಕ್ಷಕ್ಕೆ ಗುರಿಯಾಗಿ ಉಡುಪಿ ಜಿಲ್ಲೆಯ ಬಾರ್ಕೂರಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವುಳ್ಳ ಹಲವಾರು ಸ್ಮಾರಕಗಳು, ಕೋಟೆ ಕೊತ್ತಲಗಳು, ಗುಡಿ ಗೋಪುರಗಳು ನಿರ್ಲಕ್ಷ್ಯಕ್ಕೆ ಗುರಿಯಾಗಿವೆ.

ನಮ್ಮ ಭವ್ಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ಕೊಡಬೇಕೆಂಬ ಪ್ರಜ್ಞೆಯನ್ನು ಕೇವಲ ಒಂದು ವಾರದ ಮಟ್ಟಿಗೆ ಸಪ್ತಾಹವನ್ನು ಆಚರಿಸಿ ಮರೆಯುವ ಇಂತಹ ಮಾನದಂಡಕ್ಕೆ ಬಾರ್ಕೂರು ಸಾಕ್ಷಿಯಾಗಿದೆ.

ಬಾರ್ಕೂರು ಮಧ್ಯಕಾಲದಲ್ಲಿ ತುಳುನಾಡಿನ ರಾಜಧಾನಿಯಾಗಿ, ವಿಜಯನಗರದ ಅರಸರ ಪ್ರಾಂತೀಯ ರಾಜಧಾನಿಯಾಗಿ, ತುಳುನಾಡಿನ ಭವ್ಯ ಸಂಸ್ಕೃತಿಯ ಪ್ರತೀಕವಾಗಿ ಮೆರೆದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಗಿತ್ತು. ಇದಲ್ಲದೇ ಇತಿಹಾಸದ ಪುಟಗಳನ್ನು ತಿರುವಿದಾಗ ತುಳುನಾಡಿನ ಇತಿಹಾಸದಲ್ಲಿ ಕುಂದಾಪುರ ಮತ್ತು ಬಾರ್ಕೂರು ಪ್ರಮುಖವಾಗಿ ಉಲೇಖಿಸಲ್ಪಡುತ್ತವೆ. ತುಳುನಾಡನ್ನು ಆಳಿದ ಅಳುಪ ರಾಜರ ರಾಜಧಾನಿ ಸಹ ಬಾರ್ಕೂರು ಆಗಿತ್ತು.

ನಂತರ ವಿಜಯನಗರ ಹಾಗೂ ಕೆಳದಿ ರಾಜರ ಆಳ್ವಿಕೆಯಲ್ಲಿ ಬಾರ್ಕೂರು ಪ್ರಾದೇಶಿಕ ರಾಜಧಾನಿಯಾಗಿತ್ತು. ವಸಾಹತುಶಾಯಿಗಳ ಕಾಲದಲ್ಲಿ ಬಾರ್ಕೂರು ಪ್ರಮುಖ ಬಂದರು ಪಟ್ಟಣವಾಗಿತ್ತು. ಇದಲ್ಲದೆ ಬ್ರಿಟಿಷರು ಇಲ್ಲಿ ನ್ಯಾಯಾಲಯವನ್ನೂ ಸಹ ಸ್ಥಾಪಿಸಿದ್ದರು ಎಂದು ಹೇಳಲಾಗುತ್ತಿದೆ. ತುಳುನಾಡಿನ ಆರ್ಥಿಕ ಇತಿಹಾಸದಲ್ಲಿ ಬಂದರು ಪ್ರದೇಶವಾಗಿತ್ತು.

ಬಾರ್ಕೂರಿನಲ್ಲಿ 365 ದೇವಾಲಯಗಳಿದ್ದವು ಎನ್ನುವುದಕ್ಕೆ ಕುರುಹುಗಳು ಇಲ್ಲಿ ಕಾಣ ಸಿಗುತ್ತದೆ. ಬಸದಿಗಳು, ಸ್ತಂಭಗಳು, ಶಿಲಾಶಾಸನಗಳನ್ನೂ ನಾವು ಎಲ್ಲೆಂದರಲ್ಲಿ ಕಾಣಬಹುದು. ಆದರೆ, ಇಂದು ಭೂತಕಾಲದ ವೈಭವಕ್ಕೆ ನಿಂತಿರುವ ಈ ದೇವಾಲಯಗಳು, ಶಾಸನಗಳು ಯಾವ ರಕ್ಷಣೆಯೂ ಇಲ್ಲದೇ ಸ್ಥಳೀಯ ಜನರ ಹೊಡೆತಕ್ಕೆ ಮತ್ತು ಪ್ರಾಕೃತಿಕವಾಗಿ ನಾಶವಾಗುತ್ತಿದೆ.

ಬಾರ್ಕೂರಿನ ಚೌಳಿಕೆರೆಯ ಗಣಪತಿ ದೇವಾಲಯ, ಮಣಿಗಾರ ಕೇರಿಯ ಸೋಮನಾಥೇಶ್ವರ ದೇವಾಲಯ, ಮೂಡುಕೇರಿಯ ಸೋಮೇಶ್ವರ ದೇವಾಲಯ, ಕೋಟೆಕೇರಿಯ ಪಂಚಲಿಂಗೇಶ್ವರ ದೇವಾಲಯ ಮತ್ತು ಕಲ್ಲು ಚಪ್ಪರ ಈ ಐದು ಪ್ರಾಚೀನ ದೇವಾಲಯಗಳು ಇಂದು ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ಸ್ ಆಂಡ್ ಕಲ್ಚರಲ್ ಹೆರಿಟೇಜ್ ಯೋಜನೆಯಡಿ ಅಭಿವೃದ್ಧಿ ಹೊಂದುತ್ತಿವೆಯಾದರೂ (ಕೆಲವು ಈಗಾಗಲೇ ಆಗಿದೆ, ಇನ್ನು ಕೆಲಸ ಇನ್ನೂ ಆಗುತ್ತಿದೆ) ಇಲ್ಲಿನ ಕತ್ತಲೆ ಬಸದಿ, ಕೆರೆಗಳು, ಕೋಟೆ ಪ್ರದೇಶಗಳಲ್ಲಿರುವ ಅನೇಕ ಶಾಸನಗಳು, ಬಸದಿಗಳು ಮಣ್ಣು ಪಾಲಾಗುತ್ತಿವೆ.

ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೆಲ ವರ್ಷಗಳ ಹಿಂದೆ ಉತ್ಕನನ ಕೆಲಸ ಮಾಡಿ, ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಿತ್ತು. ಯಾರಾದರೂ ಇದನ್ನು ನಾಶಮಾಡಿದರೆ, ಸ್ಥಳಾಂತರಿಸಿದರೆ, ಹಾನಿಯುಂಟು ಮಾಡಿದರೆ ಬದಲಿಸಿದರೆ, ವಿಕೃತಗೊಳಿಸಿದರೆ, ದುರುಪಯೋಗ ಪಡಿಸಿದರೆ ₹ 5 ಸಾವಿರ ದಂಡ ಅಥವಾ ಮೂರು ತಿಂಗಳ ಕಾಲ ಕಾರಾಗೃಹವಾಸ ಶಿಕ್ಷೆಗೆ ಗುರಿಪಡಿಸಲಾಗುವುದು ಎನ್ನುವ ಫಲಕವನ್ನು ಹಾಕಿತ್ತು. ಆದರೆ, ಅಂದಿನಿಂದ ಇಂದಿನವರೆಗೆ ಇದರ ರಕ್ಷಣೆಗಾಗಲೀ ಅಥವಾ ಇಲ್ಲಿಗೆ ಕಾವಲುಗಾರರನ್ನಾಗಲೀ ನೇಮಿಸದೇ ಕೇವಲ ಫಲಕವನ್ನು ಹಾಕಿ ತನ್ನ ಕರ್ತವ್ಯವನ್ನು ಪೂರೈಸಿದೆ.

ಇಲ್ಲಿನ ಶಾಸನಗಳು ಹೆಚ್ಚಿನ ಜನರ ಮನೆಯಲ್ಲಿ ಬಟ್ಟೆ ಒಗೆಯುವ ಕಲ್ಲಾಗಿ, ಅಂಗಳದ ಕಲ್ಲು ಚಪ್ಪಡಿಯಾಗಿ, ಹೀಗೆ ನಾನಾ ವಿಧದಲ್ಲಿ ಬಳಕೆಯಾಗುತ್ತಿದೆ. ಕೆಲವೊಂದು ವಿಜಯನಗರದ ಶಾಸನಗಳು ಚರಂಡಿಯ ಬದಿಯಲ್ಲಿಯೇ ಬಿದ್ದುಕೊಂಡಿದೆ. ಕತ್ತಲೆ ಬಸದಿಯು ಪಡ್ಡೆ ಹುಡುಗರ ತಾಣವಾಗಿ, ದನಕರುಗಳ ಹುಲ್ಲುಗಾವಲಾಗಿ ಮಾರ್ಪಾಡಾಗಿದೆ.
ಕೋಟೆಯನ್ನಂತೂ ಯಾರೂ ಕೇಳುವ ವರೇ ಇಲ್ಲ. ಅಲ್ಲಿನ ಪುರಾತನ ಬಾವಿ, ಶಾಸನಗಳು ಮಣ್ಣುಪಾಲಾಗಿವೆ. ದೇವಸ್ಥಾನದ ಗೋಡೆಯ ಅಂಚಿನಲ್ಲಿರುವ ಶಿಲ್ಪ ಕಲೆಗಳು, ಕೆತ್ತನೆ ಕೆಲಸಗಳು ಇಂದು ಯಾರಿಗೂ ಬೇಡವಾಗಿದೆ ಎಂಬ ದೂರು ಕೇಳಿಬಂದಿದೆ.

ಸರ್ಕಾರ, ಪುರಾತತ್ವ ಇಲಾಖೆ, ಕರ್ನಾಟಕ ಇತಿಹಾಸ ಅಕಾಡೆಮಿಯಾಗಲೀ ಇಲ್ಲಿನ ಅವ್ಯವಸ್ಥೆಯ ಬಗ್ಗೆ ಗಮನ ಹರಿಸುವ ಗೋಜಿಗೇ ಹೋಗದೇ ಇದ್ದಲ್ಲಿ ಮುಂದಿನ ವರ್ಷಗಳಲ್ಲಿ ಇಲ್ಲಿರುವ ಫಲಕಗಳೂ ಸೇರಿದಂತೆ ಪ್ರತಿಯೊಂದೂ ಸ್ಮಾರಕಗಳು ಮಾಯವಾಗಿ ಮುಂದಿನ ಜನಾಂಗಕ್ಕೆ ಬಾರ್ಕೂರು ಕೇವಲ ಇತಿಹಾಸ ಪ್ರದೇಶವಾಗಿತ್ತು ಎನ್ನುವ ಬಗ್ಗೆ ಪಠ್ಯ ಪುಸ್ತಕಗಳಲ್ಲಷ್ಟೇ ನೋಡಬೇಕಾದ ಪರಿಸ್ಥಿತಿ ಬರಬಹುದು ಎಂಬುದು ಸ್ಥಳೀಯರ ಆತಂಕ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT