ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ಆವೆಮಣ್ಣಿನ ಕಲಾಕೃತಿ

Last Updated 4 ಸೆಪ್ಟೆಂಬರ್ 2017, 9:22 IST
ಅಕ್ಷರ ಗಾತ್ರ

ಮೂಡುಬಿದ್ರಿ ಸಮೀಪದ ಪಲಿಮಾರಿನಲ್ಲಿರುವ ಚಿತ್ರಾಲಯ ಆರ್ಟ್‌ ಗ್ಯಾಲರಿಗೆ ಇಂಗ್ಲೆಂಡ್‌ನ ಲ್ಯಾಂಕೆಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ಭೇಟಿ ನೀಡಿ, ಆವೆಮಣ್ಣಿನಲ್ಲಿ ಕಲಾಕೃತಿಯನ್ನು ರಚಿಸುವ ಬಗ್ಗೆ ತರಬೇತಿ ಪಡೆದುಕೊಂಡರು.

ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಇಂಗ್ಲೆಂಡ್‌ನ ಲ್ಯಾಂಕೆಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಶನಿವಾರ ಪಲಿಮಾರುವಿನಲ್ಲಿರುವ ಚಿತ್ರಾಲಯ ಆರ್ಟ್‌ ಗ್ಯಾಲರಿಗೆ ಭೇಟಿ ನೀಡಿ, ಆವೆಮಣ್ಣಿನಲಲ್ಲಿ ಕಲಾಕೃತಿಯನ್ನು ರಚಿಸುವ ಮೂಲಕ ಗಮನಸೆಳೆದರು.

ಕಲಾವಿದ ವೆಂಕಿ ಪಲಿಮಾರು ರಚಿಸಿದ ಆವೆ ಮಣ್ಣಿನ ವಿವಿಧ ಕಲಾಕೃತಿಗಳನ್ನು ವೀಕ್ಷಿಸಿ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮಣ್ಣಿನ ಕಲಾಕೃತಿ ರಚನೆ ಬಗ್ಗೆ ಅವರಿಗೆ ಪ್ರಾತ್ಯಕ್ಷಿಕೆ ಸಹಿತ ವೆಂಕಿ ಮಾಹಿತಿ ನೀಡಿದರು. ನಂತರ ಅವರಿಗೂ ಮಣ್ಣಿನ ಕಲಾಕೃತಿ ರಚನೆಗೆ ಅವಕಾಶ ಕಲ್ಪಿಸಿದರು. ಜಾರ್ಜಿಯಾ ಮತ್ತು ಡೇನಿಯಲ್ ನೇತೃತ್ವದ 24 ವಿದ್ಯಾರ್ಥಿಗಳು ತಮ್ಮ ಕೈಚಳಕದಿಂದ ಆವೆಮಣ್ಣಿನಲ್ಲಿ ತಾವು ಕಂಡ ವಸ್ತುಗಳನ್ನು ಸುಂದರವಾಗಿ ರಚಿಸಿ ಅಧ್ಯಯನದಲ್ಲಿ ಪ್ರೌಢಿಮೆಯನ್ನು ಮೆರೆದರು.

ಈ ವಿದೇಶಿ ವಿದ್ಯಾರ್ಥಿಗಳು ಮಣಿಪಾಲದ ಹಸ್ತ ಶಿಲ್ಪ ಕಲಾಗ್ರಾಮ, ಉಡುಪಿ ಶ್ರೀಕೃಷ್ಣ ಮಠ, ಹಿರಿಯಡ್ಕದ ಪುತ್ತಿಗೆ ಮಠ, ಪಾಜಕ ಕ್ಷೇತ್ರ, ಮೂಡುಬಿದಿರೆ ಮತ್ತು ಕಾರ್ಕಳದ ಜೈನ ಬಸದಿಗಳಿಗೆ ತೆರಳಿ ಅಧ್ಯಯನ ನಡೆಸಿದ್ದಾರೆ. ಧ್ಯಾನ, ಭರತನಾಟ್ಯ, ಕರಾವಳಿ ಖಾದ್ಯಗಳ ಬಗ್ಗೆ ತಿಳಿದುಕೊಂಡ ಅವರು, ಕಳಸದಲ್ಲಿ ಟೆಂಟ್ ಹೌಸ್‌ನಲ್ಲಿ ಒಂದು ರಾತ್ರಿ ಕಳೆದು ಹೊರನಾಡು ಕ್ಷೇತ್ರವನ್ನೂ ಸಂದರ್ಶಿಸಲಿದ್ದಾರೆ. ಬಳಿಕ ಗೋವಾಗೆ ತೆರಳುವ ಅವರು, ಅಲ್ಲಿನ ಕಲೆ ಸಂಸ್ಕೃತಿ ಬಗ್ಗೆ ಮಾಹಿತಿ ಪಡೆಯುವರು. ಬಳಿಕ ರಾಜಸ್ತಾನ ಜೈಪುರದಲ್ಲಿರುವ ಮಣಿಪಾಲ ವಿವಿ ಕ್ಯಾಂಪಸ್‌ಗೆ ಭೇಟಿ ನೀಡಿ ಆ ರಾಜ್ಯದ ಕಲೆಗಳ ಬಗ್ಗೆ ತಿಳಿದುಕೊಳ್ಳುವರು.

‘ವಿದೇಶಗಳಿಗೆ ಹೋಗಿ ಮಣ್ಣಿನ ಕಲಾಕೃತಿಗಳ ಮಾಹಿತಿ ನೀಡಿದ ಅನುಭವ ಇದೆ. ಇದೀಗ ವಿದೇಶಿ ವಿದ್ಯಾರ್ಥಿಗಳು ಗ್ರಾಮಾಂತರ ಪ್ರದೇಶದಲ್ಲಿರುವ ನಮ್ಮ ಗ್ಯಾಲರಿಗೆ ಬಂದು ಕಲೆಗಳ ಬಗ್ಗೆ ತಿಳಿದುಕೊಳ್ಳುತ್ತಿರುವುದು ಅತೀವ ಸಂತಸ ನೀಡಿದೆ’ ಎಂದು ಕಲಾವಿದ ವೆಂಕಿ ಪಲಿಮಾರು ತಿಳಿಸಿದರು. ವೆಂಕಿ ಅವರೊಂದಿಗೆ ಕಲಾವಿದರಾದ ಲಾರೆನ್ ಪಿಂಟೋ, ಅಕ್ಷಯರಾಜ್ ಮತ್ತು ದುರ್ಗಾಪ್ರಸಾದ್ ಪ್ರಾತ್ಯಕ್ಷಿಕೆಗೆ ಸಾಥ್ ನೀಡಿದರು.

‘ಆ. 28ರಂದು ಮಣಿಪಾಲಕ್ಕೆ ಬಂದಿರುವ ವಿದೇಶಿ ವಿದ್ಯಾರ್ತಿಗಳು ಸೆ. 8 ರವರೆಗೆ ಸುತ್ತಮುತ್ತಲಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಕುಂದಾಪುರದ ನಮ್ಮ ಭೂಮಿ, ನೀಲಾವರ ಗೋಶಾಲೆ, ಆ ಪ್ರದೇಶದಲ್ಲಿನ ಭತ್ತದ ಕೃಷಿ ಬಗ್ಗೆ ಮಾಹಿತಿ ಪಡೆದಿದ್ದಾರೆ’ ಎಂದು ಮಣಿಪಾಲ ವಿಶ್ವವಿದ್ಯಾಲಯದ ಯೂರೋಪಿಯನ್ ಅಧ್ಯಯನ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಪೂಜಾ ಬಡಿಗೇರ್ ತಿಳಿಸಿದರು.

ಮಣಿಪಾಲ ಎಂಐಟಿಯ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಶೆಟ್ಟಿ ನಿರ್ದೇಶನದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಬಲರಾಮ ಭಟ್, ಮಣಿಪಾಲ ವಿವಿ ಪ್ರೆಸ್ ಚೀಫ್ ಎಕ್ಸಿಕ್ಯೂಟಿವ್ ರೇವತಿ ನಾಡಿಗೀರ್, ಗುರುಪ್ರಸಾದ್ ರಾವ್, ಜ್ಯೋತಿ ಪಿಂಟೋ, ಪಲಿಮಾರು ಗ್ರಾಮ ಪಂಚಾಯಿತಿ ಸದಸ್ಯೆ ಗಾಯತ್ರಿ ಪ್ರಭು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT