ಗೆಲುವಿನ ಹಾದಿ

ಬಲ ತಂದ ಮೌಲ್ಯವರ್ಧನೆ

ಕೃಷಿಯೊಂದಿಗೆ ಸಿರಿಧಾನ್ಯಗಳ ಮೌಲ್ಯವರ್ಧನೆ ಕೈಗೊಂಡು ಲಾಭದ ಹಾದಿಯಲ್ಲಿದ್ದಾರೆ ಇವರು. ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಸ್ವಾಮಿ ಅವರ ಗೆಲುವಿನ ಹಾದಿ ಹೀಗಿದೆ...

ಬಲ ತಂದ ಮೌಲ್ಯವರ್ಧನೆ

–ಕೋಡಕಣಿ ಜೈವಂತ ಪಟಗಾರ

*

ದಾವಣಗೆರೆಯ ಜಗಳೂರು ತಾಲ್ಲೂಕಿಗೆ ಎಂದಿನಂತೆಯೇ ಈ ಬಾರಿಯೂ ಮಳೆ ಕಡಿಮೆ. ಹಾಗೆಂದು ಮಳೆಯನ್ನೇ ಪೂರ್ಣ ನಂಬಿ ಕೂರದೆ ಒಂದೆರಡು ಬಾರಿ ಬಿದ್ದ ಮಳೆಯಿಂದಲೇ ಬೆಳೆ ಬೆಳೆದು ಬೀಗುತ್ತಿದ್ದಾರೆ ಇವರು.

ಫಸಲು ಕಡಿಮೆಯಾದರೂ ಚಿಂತಿಸದೇ ಮೌಲ್ಯವರ್ಧನೆ ಕೈಗೊಂಡು ಲಾಭದ ಹಾದಿಯಲ್ಲಿದ್ದಾರೆ ಜಗಳೂರಿನ ದತ್ತಿದುರ್ಗ ಗ್ರಾಮದ ಜಿ.ಎಂ. ಸ್ವಾಮಿ. ಸಿರಿಧಾನ್ಯಗಳ ಕೃಷಿ ವೈವಿಧ್ಯ ಇವರ ಯಶಸ್ಸಿಗೆ ದಾರಿ ಮಾಡಿಕೊಟ್ಟಿದೆ.

ಇವರದು ಮೂರು ಎಕರೆ ಕೃಷಿ ಜಮೀನು. ಅರ್ಧ ಎಕರೆ ಸಜ್ಜೆ, ಒಂದು ಎಕರೆ ಕೊರಲೆ, ಒಂದೂವರೆ ಎಕರೆಯಲ್ಲಿ ಅರ್ಕ ಬೆಳೆದಿದ್ದಾರೆ. ಜೊತೆಗೆ ನಾಲ್ಕೂವರೆ ಎಕರೆ ಲಾವಣಿ ಪಡೆದು ಅದರಲ್ಲಿ ಒಂದು ಎಕರೆ ನವಣೆ, ಒಂದು ಎಕರೆ ಸಾಮೆ, ಒಂದು ಎಕರೆ ಬರಗು, ಒಂದು ಎಕರೆ ಊದಲು, ಅರ್ಧ ಎಕರೆಯಲ್ಲಿ ರಾಗಿ ಬೆಳೆದಿದ್ದಾರೆ.

ಇವರದ್ದು ಮಳೆಯಾಧಾರಿತ ಕೃಷಿ. ಕೊಳವೆಬಾವಿ ಹೊಂದಿದ್ದರೂ ಅದರ ಮೇಲೆ ಪೂರ್ತಿ ಅವಲಂಬಿತವಾಗಿಲ್ಲ. ಏಳು ಎಕರೆಯಲ್ಲಿ ಬೆಳೆದ ಸಿರಿಧಾನ್ಯಗಳ ನಡುವೆ ದೇಶಿ ಕೆಂಪು ತೊಗರಿ ಬಿತ್ತನೆ ಮಾಡಿದ್ದಾರೆ.

ಜುಲೈ ಮೊದಲ ವಾರದಲ್ಲಿಯೇ ಸಿರಿ ಧಾನ್ಯಗಳನ್ನು ಬಿತ್ತಿದ್ದಾರೆ. ಮೂರು ತಿಂಗಳಿಗೆ ಅವು ಕಟಾವಿಗೆ ಸಿಗಲಿದೆ. ಬೆಳೆ ಕಟಾವಿನ ನಂತರ ಮಳೆ ಬೀಳುವ ಲಕ್ಷಣದ ಆಧಾರದಲ್ಲಿ ಹಿಂಗಾರಿನಲ್ಲಿ ಅರ್ಕ, ಕೊರಲೆ, ಹುರುಳಿ ಬಿತ್ತುವ ಸಿದ್ಧತೆ ನಡೆಸಿದ್ದಾರೆ.

ಬೆಳೆ ಕೈ ಕೊಟ್ಟಿದ್ದೂ ಇದೆ: ಕಳೆದ ಎರಡು ವರ್ಷಗಳಿಂದ ಜಗಳೂರನ್ನು ಮಳೆಯ ಅಭಾವ ಬಿಡದೇ ಕಾಡುತ್ತಿದೆ. ಆದರೆ ಸ್ವಾಮಿಯವರಿಗೆ ದೇಶೀಯ ಬೀಜಗಳು, ಸಿರಿಧಾನ್ಯಗಳು ಸಹಾಯ ಮಾಡಿವೆ. ಕಳೆದ ವರ್ಷದ ಜೂನ್ ವೇಳೆಗೆ ಆರು ಎಕರೆಯಲ್ಲಿ ಬಿತ್ತಿದ್ದ ತೊಗರಿ ಇಳುವರಿ ನೀಡಲು ಸೋತಿದ್ದವು. ಆದರೆ ನವಣೆ, ರಾಗಿ, ಸಾವಿ, ಬರಗು ಬೆಳೆಗಳು ಹೇಳಿಕೊಳ್ಳುವಷ್ಟು ಅಲ್ಲದಿದ್ದರೂ ನೀರಿನ ಕೊರತೆ ನಡುವೆ ಆಶಾದಾಯಕ ಫಸಲನ್ನೇ ನೀಡಿದ್ದವು.

ಹಿಂಗಾರಿನಲ್ಲಿ ಅರ್ಕ, ಕೊರಲು ಬಿತ್ತಿದರಾದರೂ ಮಳೆ ಹನಿಸದೇ ಬೀಜ ಮೊಳೆತು ಬಂದಿರಲಿಲ್ಲ. ಮೆಕ್ಕೆಜೋಳ, ಹತ್ತಿ, ಅವರೆ ಮತ್ತಿತರ ಬೆಳೆಗಳನ್ನು ಆಶ್ರಯಿಸಿರುವ ಸುತ್ತಮುತ್ತಲಿನ ರೈತರು ಪಡೆದ ಫಸಲಿಗೆ ಹೋಲಿಸಿದರೆ ಇವರು ನಂಬಿದ ಸಿರಿಧಾನ್ಯಗಳು ಉತ್ತಮ ಗಳಿಕೆ ತಂದುಕೊಟ್ಟವು.

ಕಡಿಮೆ ಖರ್ಚಿನ ಕೃಷಿ: ಹೊಲವನ್ನು ಹಸನು ಮಾಡುವಲ್ಲಿ ಬುದ್ಧಿವಂತಿಕೆ ತೋರಿದ್ದಾರೆ ಸ್ವಾಮಿ. ಪ್ರತೀ ವರ್ಷ ಜಮೀನಿನಲ್ಲಿ ಕುರಿ ಹಿಂಡುಗಳನ್ನು ನಿಲ್ಲಿಸುತ್ತಾರೆ. ಎಕರೆಯೊಂದಕ್ಕೆ ಎರಡು ಲೋಡ್ ತಿಪ್ಪೆಗೊಬ್ಬರ ಏರಿಸುತ್ತಾರೆ. ಮಳೆ ಹನಿಸಿದ ತಕ್ಷಣ ಕೂರಿಗೆ ಬಿತ್ತನೆ ಆರಂಭ.

ಬಿತ್ತನೆ ಮಾಡಿದ ಹದಿನೈದು ದಿನಕ್ಕೆ ಜೀವಾಮೃತ ಸಿಂಚನ. ಹತ್ತು ಕಿ.ಗ್ರಾಂ ಸೆಗಣಿ, ಹತ್ತು ಲೀಟರ್ ದೇಸಿ ಹಸುವಿನ ಗೋಮೂತ್ರ, ಎರಡು ಕಿ.ಗ್ರಾಂ ಕಡ್ಲೆ ಹಿಟ್ಟು, ಒಂದು ಹಿಡಿ ಮಣ್ಣು, ಎರಡು ಕಿಲೋ ಗ್ರಾಂ ಬೆಲ್ಲವನ್ನು 200 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಆರು ದಿನಗಳ ಕಾಲ ಸಂಗ್ರಹಿಸಿಟ್ಟು ದಿನನಿತ್ಯ ಬೆಳಿಗ್ಗೆ ಹಾಗೂ ಸಾಯಂಕಾಲ ದ್ರಾವಣವನ್ನು ತಿರುವುತ್ತಾರೆ.

ತಯಾರಾದ ಜೀವಾಮೃತವನ್ನು ಒಂದು ಎಕರೆಗೆ 200 ಲೀಟರ್‌ನಂತೆ ಬಿಸಿಲು ಅಡಗಿದ ಸಾಯಂಕಾಲದ ವೇಳೆ ಗಿಡಗಳ ಮೇಲೆ ಉಗ್ಗುತ್ತಾರೆ.

ಬೀಜ ಬಿತ್ತಿದ ಹದಿನೈದನೇ ದಿನಕ್ಕೆ ಮೊದಲ ಬಾರಿ ಹಾಗೂ ತೆನೆ ಬರುವ ಹಂತದಲ್ಲಿರುವಾಗ ಎರಡನೇ ಬಾರಿ ಜೀವಾಮೃತದ ಉಪಚಾರ ನಡೆಸುತ್ತಾರೆ. ಮುಂದಿನ ಬಿತ್ತನೆಗಾಗಿ ಉತ್ತಮ, ಆರೋಗ್ಯಪೂರ್ಣ ಕಾಳುಗಳನ್ನು ಬೀಜಕ್ಕಾಗಿ ತೆಗೆದಿರಿಸಿಕೊಳ್ಳುತ್ತಾರೆ.

ಬೇಕರಿ ತಿನಿಸುಗಳ ತಯಾರಿ: ಮಳೆಯ ಅಭಾವದಿಂದ ಇಳುವರಿ ಕಡಿಮೆಯಾಗಿ ನಷ್ಟ ಹೆಗಲೇರತೊಡಗಿದಾಗ ಸಿರಿ ಧಾನ್ಯಗಳ ಮೌಲ್ಯವರ್ಧನೆಯಲ್ಲಿ ತೊಡಗುವ ನಿರ್ಧಾರ ಕೈಗೊಂಡರು. ವಿವಿಧ ಬಗೆಯ ಬೇಕರಿ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಸ್ವ ಅನುಭವದಿಂದ ಅಲ್ಲಲ್ಲಿ ಓದಿ ತಿಳಿದಿದ್ದ ಮೌಲ್ಯವರ್ಧನೆ ವಿಚಾರಗಳನ್ನು ಕೃತಿರೂಪಕ್ಕಿಳಿಸಿ ಯಶಸ್ವಿಯಾಗಿದ್ದಾರೆ. ಪತ್ನಿ ಪ್ರೇಮಾ, ಬರಗು, ರಾಗಿ, ನವಣೆ, ಸಾಮೆ ಧಾನ್ಯವನ್ನು ಬಳಸಿ ಬಿಸ್ಕೆಟ್ ತಯಾರಿಸಿ ಗೆದ್ದರು. ನಿಧಾನವಾಗಿ ನವಣೆ ಮಾಲ್ಟ್, ನವಣೆ ಚಕ್ಕಲಿ, ಶೇಂಗಾ ಲಡ್ಡು, ದೊಡ್ಡ ಜೋಳಗ ಭತ್ತದ ಮಸಾಲೆ ಮಂಡಕ್ಕಿ, ಬರಗು ಹಿಟ್ಟಿನ ಖಾರ, ಕಡಲೆ ಹಿಟ್ಟಿನ ಸೇವು, ಗುರೆಳ್ಳು ಚಟ್ನಿ ಪುಡಿ, ಶೇಂಗಾ ಚಟ್ನಿ ಪುಡಿ, ಪಪ್ಪಾಯ ಪೇಡಾ ಹೀಗೆ ತರ ತರಹದ ತಿಂಡಿ ತಿನಿಸುಗಳನ್ನು ತಯಾರಿಸಿ ಪ್ರಾವೀಣ್ಯ ಗಳಿಸಿದರು.

ಸಾವಯವ ಧಾನ್ಯಗಳಿಂದ ತಯಾರಿಸಿದ ತಿನಿಸುಗಳು ರುಚಿಯಲ್ಲಿ, ಪೌಷ್ಟಿಕತೆಯಲ್ಲಿ ಗ್ರಾಹಕರನ್ನು ಸೆಳೆದವು. ಮೌಲ್ಯವರ್ಧಿತ ಉತ್ಪನ್ನ ತಯಾರಿಕೆಯಿಂದ ಲಾಭ ಇವರ ಕೈಗೆಟುಕಿದೆ. ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತು ಪ್ರತಿ ತಿಂಗಳು ನಡೆಸುವ ರೈತ ಮತ್ತು ಗ್ರಾಹಕ ಮಿಲನ ಸಂತೆಯಲ್ಲಿ ಭಾಗವಹಿಸಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಗ್ರಾಹಕರಿಗೆ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಿದ್ದು ಅಂತರ್ಜಾಲದಲ್ಲಿ ಬೇಡಿಕೆ ಸಲ್ಲಿಸಿದವರಿಗೂ ಉತ್ಪನ್ನಗಳನ್ನು ಪೂರೈಸುತ್ತಾರೆ.

ಕಳೆದ ಮುಂಗಾರಿನಲ್ಲಿ ಬೆಳೆದ ಬೆಳೆಯ ಫಸಲು ಇವರ ಸಂಗ್ರಹದಲ್ಲಿದೆ. ಬಿತ್ತಿದ ಬೆಳೆ ಕಟಾವಿಗೆ ಬರುವವರೆಗೆ ಧಾನ್ಯಗಳಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಯ ಕೈ ತುಂಬಾ ಕೆಲಸ ಇವರಿಗಿದೆ. ಬೆಳೆ ಇದ್ದರೂ ಬೆಲೆಯಿಲ್ಲ ಎಂದು ಕೊರಗುವ ಅನೇಕ ರೈತರ ಮಧ್ಯೆ ಇವರ ವಿಭಿನ್ನ ಪ್ರಯತ್ನ ಅಚ್ಚರಿ ಮೂಡಿಸುತ್ತದೆ. ಇವರ ಸಂಪರ್ಕಕ್ಕೆ: 9844249210.

Comments
ಈ ವಿಭಾಗದಿಂದ ಇನ್ನಷ್ಟು
ಮಾವಿನ ತೋಟಕ್ಕೆ ಲಗ್ಗೆ!

‘ಮ್ಯಾಂಗೊ ಪಿಕ್ಕಿಂಗ್ ಟೂರ್’
ಮಾವಿನ ತೋಟಕ್ಕೆ ಲಗ್ಗೆ!

12 Jun, 2018
ಗುಜರಿಯಲ್ಲಿ ಅರಳಿದ ಕೃಷಿ ಸಾಧನ

ಕೃಷಿ ಸಲಕರಣೆಗಳು
ಗುಜರಿಯಲ್ಲಿ ಅರಳಿದ ಕೃಷಿ ಸಾಧನ

12 Jun, 2018
ಉಪ ಆದಾಯದ ಅಂತರಬೆಳೆ ಬೇಸಾಯ

ಲಾಭ ಗಳಿಕೆ
ಉಪ ಆದಾಯದ ಅಂತರಬೆಳೆ ಬೇಸಾಯ

12 Jun, 2018
ಮುತ್ತಿನಾ ಕೂರಿಗೆ ಮುಗಿಲು ಮುಟ್ಟಾವು ಸೆಡ್ಡೆ...

ಬಿತ್ತನೆಗೆ ಸಿದ್ಧತೆ
ಮುತ್ತಿನಾ ಕೂರಿಗೆ ಮುಗಿಲು ಮುಟ್ಟಾವು ಸೆಡ್ಡೆ...

12 Jun, 2018
ಸವರಿ ನೋಡಿ ಹಲಸಿನ ಗೆಲ್ಲು

ವಾಣಿಜ್ಯ ಕೃಷಿ
ಸವರಿ ನೋಡಿ ಹಲಸಿನ ಗೆಲ್ಲು

5 Jun, 2018