ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇಡಲೋಕದ ವಿಸ್ಮಯ

Last Updated 4 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಈ ಜಗತ್ತಿನ ನಿಜವಾದ ಗಗನಯಾತ್ರಿಗಳು ಯಾರು ಗೊತ್ತೆ?

ಜೇಡಗಳು.

ಎತ್ತರದಲ್ಲಿ ಕೂತ ಅವು ಗಾಳಿ ಬೀಸುವ ಸಮಯ ನೋಡಿ ಜಂಪ್‌ ಮಾಡುತ್ತವೆ –‘ಸ್ಪೈಡರ್‌ಮ್ಯಾನ್‌’ ಸಿನಿಮಾದ ನಾಯಕನ ಹಾಗೆ. ನೆಗೆಯುವಾಗ ಪುಸ್ಸೆಂದು ದಾರವನ್ನು ಕಿಬ್ಬೊಟ್ಟೆಯಿಂದ ಕಕ್ಕುತ್ತವೆ. ದಾರ ಕಟ್ಟಿದ ಬಲೂನಿನಂತೆ, ಗಾಳಿ ಬೀಸಿದ ದಿಕ್ಕಿನಲ್ಲಿ ಗಗನದಲ್ಲಿ ಸಾಗುತ್ತ ಹೋಗುತ್ತವೆ. ಅಡೆತಡೆ ಸಿಕ್ಕಲ್ಲಿ ಸಿಕ್ಕಿದ್ದನ್ನು ಅಪ್ಪಿಕೊಂಡು, ಸಿಕ್ಕಿದ ಕೀಟಗಳನ್ನೋ ಇಲ್ಲವೆ ಸ್ವಜಾತಿಯ ಬಂಧುಗಳನ್ನೋ ತಿಂದುಕೊಂಡು ಅಲ್ಲೇ ಬದುಕು ಕಟ್ಟಿಕೊಳ್ಳುತ್ತವೆ. ಅದೃಷ್ಟ ಸರಿ ಇಲ್ಲದಿದ್ದರೆ, ಬೇರೊಂದು ಜೀವಿಯ ಹೊಟ್ಟೆಗೆ ಹೋಗುತ್ತವೆ. ಬದುಕಿ ಉಳಿದರೂ ನಾಳಿನ ಬದುಕು ಸರಿ ಇರಲಿಕ್ಕಿಲ್ಲವೆಂದು ಅನ್ನಿಸಿದರೆ ಮತ್ತೆ ನಾರಿನ ಪ್ಯಾರಾಶೂಟ್‌ ಬಿಚ್ಚಿ ಮತ್ತೆತ್ತಲೋ ನೆಗೆತ. ಮತ್ಯಾವುದೋ ಮರ, ಪೊದೆ, ಬಂಡೆ, ಮಣ್ಣಿನ ದಿಬ್ಬ. ನಿಸರ್ಗದ ಅದ್ಭುತ ಅಂದರೆ ಇದು. ಜಗತ್ತಿನ ಪಕ್ಷಿ ಹಾಗೂ ಕೀಟಗಳಿಗೆ ತಮ್ಮನ್ನೇ ಬಲಿ ಕೊಡುತ್ತ ಪ್ರಪಂಚವನ್ನೆಲ್ಲ ಸುತ್ತುತ್ತವೆ. ಅಂಟಿನ ದಾರ ಹಿಡಿದು ಇವು ಅಂಟಾರ್ಕ್‌ಟಿಕಕ್ಕೂ ಹೋಗುತ್ತವೆ. ಯಾರೂ ಮಧ್ಯೆ ಅಟಕಾಯಿಸದಿದ್ದರೆ ಅಟಕಾಮಾ ಮರುಭೂಮಿಗೂ ಹೋಗಿ ಇಳಿಯುತ್ತವೆ. ಅಲಾಸ್ಕಾದಿಂದ ಆಸ್ಟ್ರೇಲಿಯಾ, ಗ್ರೀನ್‌ಲ್ಯಾಂಡಿನ ಹಿಮದ ಹಾಸಿನಿಂದ ಕ್ಯಾನರಿ ಐಲ್ಯಾಂಡಿನವರೆಗೂ ಇವು ಲೋಕ ಸಂಚಾರ ಮಾಡುತ್ತವೆ. ವಿಮಾನದೊಳಗೂ ಪಯಣಿಸುತ್ತವೆ, ಹಡಗಿನ ಹಾಯಿಯ ಮೇಲೂ ಸವಾರಿ ಮಾಡುತ್ತವೆ. ಹೀಗಾಗಿ ಪ್ರಪಂಚದೆಲ್ಲೆಡೆ ಹರಡಿವೆ.

(ಅಂಟುನೂಲಿನಿಂದ ಬೆಂಕಿಹುಳುವನ್ನು ಆವರಿಸಿಕೊಂಡ ಪರಿ)

ಸುಳ್ಳಲ್ಲ! ಜೀವವಿಜ್ಞಾನಿ ಚಾರ್ಲ್ಸ್‌ ಡಾರ್ವಿನ್‌ ತನ್ನ ಬೀಗಲ್‌ ಹಡಗಿನ ಮೇಲೆ ಸಾಗುತ್ತಿದ್ದಾಗ ನಡುಸಮುದ್ರದಲ್ಲೂ ಇವುಗಳನ್ನು ಗಮನಿಸಿದ್ದ; ಅಷ್ಟೇ ಅಲ್ಲ, ಕವಿಯಂತೆ ವರ್ಣಿಸಿದ್ದ ಕೂಡ: ‘ಸೂರ್ಯನ ಬೆಳಕಿಗೆ ಇವು ಪಳಪಳ

‌ಮಿನುಗುತ್ತ, ಚದುರುವ ಕಿರಣಗಳಂತೆ ಚಲಿಸುತ್ತವೆ; ಆದರೆ ಬೆಳಕಿನ ರೇಖೆಯಂತೆ ಇವು ನೇರ ಸಾಗುವುದಿಲ್ಲ. ಸೂರ್ಯನ ರಶ್ಮಿಯಲ್ಲಿ ಹೊಳೆಯುತ್ತ ತೇಲುವ ರೇಷ್ಮೆಯ ನವಿರು ನೂಲಿನ ಹಾಗೆ...’ ಎಂದು ಬರೆದಿದ್ದ.

ನೀರಿನಲ್ಲಿ ಈಜುತ್ತ ಸಾಗುವ ಜೀವಿಗಳನ್ನು ನಾವು ‘ಜಲಚರಗಳು’ ಎಂದು ಕರೆಯುವ ಹಾಗೆ, ಗಾಳಿಯಲ್ಲಿ ಈಜುತ್ತ ಸಾಗುವ ಜೇಡಗಳನ್ನು ‘ವಾಯುಚರಗಳು’ ಎನ್ನಬಹುದೇನೊ. ಇಂಗ್ಲಿಷ್‌ನಲ್ಲೂ ಇವಕ್ಕೆ ‘ಏರಿಯಲ್‌ ಪ್ಲಾಂಕ್ಟನ್‌’ ಎಂದೇ ವರ್ಣಿಸುತ್ತಾರೆ. ಎಲ್ಲೆಂದರಲ್ಲಿ ತೇಲುತ್ತ ಹೋಗುವ ಈ ನವಿರು ನೂಲು ತನ್ನೊಂದಿಗೆ ಇತರ ಪರಾಗರೇಣುವನ್ನು, ಕೆಲವೊಮ್ಮೆ ಸೂಕ್ಷ್ಮಜೀವಿಗಳನ್ನು, ನೀರಿನ ಹನಿಗಳನ್ನೂ ಸವಾರಿಯಲ್ಲಿ ಒಯ್ಯುತ್ತವೆ. ಅಂತರಿಕ್ಷ ನಿಲ್ದಾಣಕ್ಕೆ ಆಹಾರವನ್ನೊಯ್ಯುವ ಶಟ್ಲ್‌ನೌಕೆಯ ಹಾಗೆ. ಈ ಜೇಡರ ನೂಲು ತನ್ನೊಂದಿಗೆ ಒಯ್ಯುವ ದ್ರವ್ಯಗಳನ್ನು ಯಾವುದೋ ನಿರ್ಜೀವ ಲೋಕದಲ್ಲಿ ಇಳಿಸಿ ಅಲ್ಲಿ ಜೀವಾಂಕುರ ಮಾಡಬಹುದು. ಸೇಂಟ್‌ ಹೆಲೆನ್ಸ್‌ ದ್ವೀಪದಲ್ಲಿ ಜ್ವಾಲಾಮುಖಿ ಭುಗಿಲೆದ್ದು ಇದ್ದಬದ್ದ ಜೀವಿಗಳೆಲ್ಲ ನಿರ್ನಾಮವಾಗಿ, ಬೋಳುಭೂಮಿಯ ಬರಿ ಲಾವಾರಸದ ಹಾಸುಗಲ್ಲು ಕ್ರಮೇಣ ತಂಪಾಗುತ್ತ ಬಂದಾಗ, ಅಲ್ಲಿಗೆ ಮೊದಲು ಬಂದಿಳಿದ ಜೀವಿಗಳೇ ಜೇಡಗಳು.

ಗಾಳಿಯಲ್ಲಿ ತೇಲಿಬಂದ ಶಿಲೀಂಧ್ರ ಬೀಜಕಣಗಳು ಮತ್ತು ಹುಲ್ಲಿನ ಬೀಜಗಳು ಪ್ರಕೃತಿಯ ಮರುಸೃಷ್ಟಿಗೆ ದೊಡ್ಡ ಕೊಡುಗೆ ನೀಡುತ್ತವೆ ನಿಜ. ಅಷ್ಟೇ ಮಹತ್ವದ ಪಾತ್ರವನ್ನು ಜೇಡಗಳೂ ನಿರ್ವಹಿಸುತ್ತವೆ. ಭಣಗುಡುವ ಮರುಭೂಮಿಯಲ್ಲಿ ಜೇಡಗಳ ನವಿರು ದಾರದೊಂದಿಗೆ ಅಂಟಿಕೊಂಡು ಬರುವ ನೀರಿನ ಕಣಗಳೇ ಇರುವೆಗಳಂಥ ಕಿರುಜೀವಿಗಳಿಗೆ ಬಾಯಾರಿಕೆ ತಣಿಸುತ್ತವೆ.

ಜಗತ್ತನ್ನೆಲ್ಲ ಆವರಿಸಿರುವ ಈ ಜೇಡಗಳ ಬಗ್ಗೆ ಕೆಲವು ಪ್ರಾಥಮಿಕ ಮಾಹಿತಿಯನ್ನು ಕನ್ನಡಿಗರಿಗೆ ಜನಸಾಮಾನ್ಯರ ಭಾಷೆಯಲ್ಲಿ ಮೊದಲು ನೀಡಿದವರು ಪೂರ್ಣಚಂದ್ರ ತೇಜಸ್ವಿಯವರು. ಹೆಗಲಿಗೆ ಗಾಳ, ಬಗಲಿಗೆ ಕ್ಯಾಮೆರಾ ಹಿಡಿದು ಕಾಡು, ಬೆಟ್ಟ ಗುಡ್ಡಗಳಲ್ಲಿ ಅಲೆಯುತ್ತಿದ್ದ ಅವರು ಅಲ್ಲಿನ ಇತರ ನೂರಾರು ಸಂಗತಿಗಳನ್ನು ಬೆರಗುಗಣ್ಣುಗಳಿಂದ, ನಾನಾ ಬಗೆಯ ಲೆನ್ಸ್‌ಗಳಿಂದ ನೋಡಿದವರು. ಮುಂದಿನ ಒಂದಿಷ್ಟು ಮಾಹಿತಿಯನ್ನು ಅವರದೇ ವಿಸ್ಮಯಲೋಕದಿಂದ ಹೆಕ್ಕಿದ್ದು.

ಜೇಡರ ಹುಳುಗಳ ಪ್ರಯಾಣವೇ ಒಂದು ವಿಚಿತ್ರ. ಅವಕ್ಕೆ ನೆಲದ ಮೇಲೆ ನಡೆಯಲು ಕೈಕಾಲುಗಳಿವೆಯಾದರೂ ಅವುಗಳು ಕೈಕಾಲುಗಳನ್ನು ಆ ರೀತಿ ಉಪಯೋಗಿಸುವುದು ಅಪರೂಪ. ಸಾಧಾರಣವಾಗಿ ಒಂದು ಕೊಂಬೆಯನ್ನೋ ಮರದ ಕಾಂಡವನ್ನೋ ಏರಿ, ನಾಭಿಯಿಂದ ಉದ್ಭವಿಸುವ ನೂಲನ್ನು ನೂಲುತ್ತಾ ಗಾಳಿಯಲ್ಲಿ ತೇಲಿಬಿಡುತ್ತವೆ. ಆ ಸೂಕ್ಷ್ಮಾತಿಸೂಕ್ಷ್ಮ ತಂತು ತೇಲಾಡುತ್ತಾ ತೇಲಾಡುತ್ತಾ ಇನ್ಯಾವುದೋ ದೂರದ ಮರದ ಕೊಂಬೆಗೆ ತಾಗಿ ಹಿಡಿದ ಕೂಡಲೇ ಇವು ನೇಯುವುದನ್ನು ನಿಲ್ಲಿಸಿ ನುರಿತ ಸರ್ಕಸ್‌ ಪಟುವನ್ನೂ ನಾಚಿಸುವ ರೀತಿಯಲ್ಲಿ ಅಂತರಿಕ್ಷದಲ್ಲಿ ಬಹು ದೂರದ ಇನ್ನೊಂದು ಮರಕ್ಕೆ ಪ್ರಯಾಣ ಬೆಳೆಸುತ್ತವೆ. ಜೇಡರ ನೂಲು ಅದರ ದಪ್ಪಕ್ಕೆ ಹೋಲಿಸಿದರೆ ಅತ್ಯಂತ ಬಲಿಷ್ಠವಾದುದು. ಅಷ್ಟೇ ಸಪೂರವಾದ ಉಕ್ಕಿನ ತಂತಿ ಜೇಡರ ನೂಲಿಗಿಂತ ಕಡಿಮೆ ಬಲವಾಗಿರುತ್ತದೆ ಎನ್ನುವುದು ವೈಜ್ಞಾನಿಕ ಸತ್ಯ. ತಮ್ಮ ಹೊಟ್ಟೆಯಿಂದಲೇ ತಾವು ಓಡಾಡುವ ಹಗ್ಗದ ಏಣಿಯನ್ನು ಪ್ರಚಂಡ ವೇಗದಲ್ಲಿ ನಿರ್ಮಿಸಿಕೊಳ್ಳುತ್ತಾ ತಿರುಗುವ ಜೇಡ ನಿಜಕ್ಕೂ ಕೀಟ ಜಗತ್ತಿನ ಕೌತುಕ.

ಮಲೆನಾಡಿನಲ್ಲಿ ಚಿಕ್ಕ ಪುಟ್ಟ ಕಪ್ಪೆಗಳನ್ನು, ಹಲ್ಲಿಗಳನ್ನೂ ಹಿಡಿಯುವಷ್ಟು ದೊಡ್ಡ ದೊಡ್ಡ ಜೇಡಗಳಿದ್ದಾವೆ. ಜೇಡರ ಹುಳುಗಳು ಸಾಧಾರಣವಾಗಿ ಕೀಟಗಳನ್ನು ತಿನ್ನುವುದಿಲ್ಲ. ತಮ್ಮ ಬಾಯಲ್ಲಿ ಉತ್ಪತ್ತಿಯಾಗುವ ಒಂದು ಬಗೆಯ ವಿಷವನ್ನು ಅವಕ್ಕೆ ಚುಚ್ಚುತ್ತವೆ. ಅದನ್ನು ಚುಚ್ಚಿದ ಕೂಡಲೇ ಆ ಕೀಟಗಳ ಒಳಗಿನ ಅಂಗಾಂಗಗಳೆಲ್ಲಾ ಕರಗಿ ದ್ರವವಾಗತೊಡಗುತ್ತದೆ. ಆನಂತರ ಜೇಡರ ಹುಳುಗಳು ನಾವು ಎಳೆನೀರು ಕುಡಿಯುವಂತೆ ಅದನ್ನು ಹೀರಿಬಿಡುತ್ತವೆ. ಜೇಡರ ಬಲೆಗಳಲ್ಲಿ ಕುಬ್ಜವಾಗಿ ಸೆಟೆದುಕೊಂಡು ಈಜಿಪ್ಟಿನ ಮಮ್ಮಿಗಳಂತೆ ಮರುಟಿದ ಕೀಟಗಳು ಬರಿಯ ಚಿಪ್ಪು ಮಾತ್ರವಾಗಿ ನೇತಾಡುತ್ತಿರುವುದನ್ನು ನೀವು ನೋಡಿರಬಹುದು.

ಕೋಟ್ಯಂತರ ಜೇಡರ ಹುಳುಗಳು ಜಗತ್ ಸರ್ವವೂ ವ್ಯಾಪಿಸಿದಂತೆ ಬಲೆ ನೇದು ದಿನವೂ ಅಗಣಿತ ಕೀಟಗಳನ್ನು ಭಕ್ಷಿಸದಿದ್ದರೆ, ಇಂದು ಜಗತ್ತೆಲ್ಲಾ ಹುಳು ಹುಪ್ಪಟೆಗಳಿಂದ ತುಂಬಿ ಹೋಗುತ್ತಿತ್ತೆಂದು ಕಾಣುತ್ತದೆ. ಜೇಡಗಳಿಲ್ಲದಿದ್ದರೆ ನಾವು ಬೆಳೆಯುತ್ತಿರುವ ಧಾನ್ಯಗಳೆಲ್ಲಾ ಕೀಟಗಳೇ ತಿಂದು ಹಾಕುತ್ತಿದ್ದವು. ಕೀಟಾಹಾರಿಯಾದ ಇವುಗಳು, ತಾರತಮ್ಯಜ್ಞಾನ ಇಲ್ಲದ ಬಲೆಗೆ ತಾಗಿದ ಸ್ವಜಾತಿ ಬಂಧುಗಳನ್ನೇ ಒಮ್ಮೊಮ್ಮೆ ತಿಂದು ಹಾಕುತ್ತವೆ. ಈ ಅಪಾಯದ ದೆಸೆಯಿಂದಲೇ ಗಂಡು ಜೇಡರ ಹುಳುಗಳು ಹೆಣ್ಣು ಹುಳುಗಳೊಡನೆ ವ್ಯವಹರಿಸುವುದೇ ಕಷ್ಟಕರವಾಗಿದೆ.ಹೆಣ್ಣು ಜೇಡದಿಂದ ಕಚ್ಚಿಸಿಕೊಂಡು ಜಾಲದೊಳಗೆ ಸಿಲುಕಿ ಅದಕ್ಕೆ ಆಹಾರವಾಗಿ ಎಷ್ಟೋ ಗಂಡುಗಳು ಕಾಮಕೇಳಿಯ ನಂತರ ಬಲಿಯಾಗುತ್ತವೆ. ತಮ್ಮ ಮೊಟ್ಟೆಗಳನ್ನೆಲ್ಲಾ ತಮ್ಮ ಬಲೆಯಿಂದಲೇ ನೇಯ್ದ ಸುಂದರವಾದ ಕೈ ಚೀಲ ಒಂದರಲ್ಲಿ ಇಟ್ಟುಕೊಂಡು ಗೋಲಿಯಂಥ ಈ ಚೀಲವನ್ನು ಹೋದಲ್ಲಿಯ ತನಕ ಹೊತ್ತುಕೊಂಡೇ ತಿರುಗಾಡುವ ಜೇಡಗಳಿವೆ.

ತೇಜಸ್ವಿ ಅವರು ತೆರೆದಿಡುವ ವಿಸ್ಮಯ ಲೋಕದ ಪರಿಯಿದು.

ಜೇಡರ ಹುಳುಗಳಲ್ಲಿ ನಾವು ಸಾಮಾನ್ಯವಾಗಿ ನೋಡುವಂಥವು ಸಣ್ಣವು. ಆದರೆ, ಭಾರತದಲ್ಲಿ ಅಪೂರ್ವವಾಗಿ ದೊಡ್ಡ ಜೇಡಗಳು ಕೂಡ ಕಾಣಸಿಗುವುದುಂಟು. ಅವುಗಳಲ್ಲಿ ಸಹ್ಯಾದ್ರಿಯ ಅಡವಿಗಳಲ್ಲಿ ಕಾಣಸಿಗುವ ಹುಲಿ ಜೇಡನೂ ಒಂದು. ಪಟ್ಟೆ ಪಟ್ಟೆಯ ನಾಮಗಳು ಮೈತುಂಬಾ ಇರುವುದರಿಂದ ಇವುಗಳನ್ನು ಹುಲಿ ಜೇಡ ಎಂದು ಕರೆಯುತ್ತಾರೆ. ಕಳ್ಳಕಿಂಡಿ ಜೇಡ, ಕೆಂಜಿಗ ಜೇಡ, ಲಾಗಾ ಜೇಡ, ಚಂದದ ಪೇಟದ ಜೇಡ... ಒಂದೊಂದರ ಚರ್ಯೆಯೂ ವಿಸ್ಮಯ, ಒಂದೊಂದರ ಬದುಕುಳಿಯುವ ಹೋರಾಟವೂ ನಾಟಕೀಯ. ಅವುಗಳ ಅಧ್ಯಯನಕ್ಕೆ ದೂರದ ಆಸ್ಟ್ರೇಲಿಯಾಕ್ಕೊ, ಹವಾಯಿಗೊ, ಲ್ಯಾಟಿನ್‌ ಅಮೆರಿಕಕ್ಕೊ ಹೋಗಬೇಕಿಲ್ಲ. ನಮ್ಮ ತೋಟದ ಸಮೀಪ ವಾಸಿಸುವ ತೀರ ಸಾಮಾನ್ಯ ಜೇಡದಲ್ಲೂ ಎಷ್ಟೊಂದು ವಿಸ್ಮಯಗಳನ್ನು ಕಾಣಲು ಸಾಧ್ಯವಿದೆ.

(ಪರಿಸರ–ನಿಸರ್ಗ ಸಂರಕ್ಷಣಾ ಸಂಸ್ಥೆ ಹೊರತರುತ್ತಿರುವ ‘ಜೇಡಲೋಕ’ ಕಿರುಹೊತ್ತಿಗೆಯ ಆಯ್ದಭಾಗ)

**

ರಾಜನ ಕಥೆಯಲ್ಲಿ ಬಲೆ ಹೆಣೆದ ಜೇಡ

ಒಂದೂರಲ್ಲಿ ಒಬ್ಬ ರಾಜ ಇದ್ದ. ಒಂದು ಮುಂಜಾನೆ ಉದ್ಯಾನದಲ್ಲಿ ವಿಹಾರಕ್ಕೆ ಹೋಗಿದ್ದಾಗ ಮುಖಕ್ಕೆ ಜೇಡರ ಬಲೆಯೊಂದು ತಗುಲಿ ಗಲಿಬಿಲಿ ಉಂಟಾಗಿ ರಾಜನಿಗೆ ಮಹಾಕೋಪ ಬಂತು. ತನ್ನ ರಾಜ್ಯದ ಎಲ್ಲ ಜೇಡಗಳನ್ನೂ ಕೊಂದು ಹಾಕಿ ಎಂದ. ಮಂತ್ರಿ ‘ಬೇಡ, ಜಗತ್ತಿನಲ್ಲಿ ಜೇಡ ಇದ್ರೆ ಒಳ್ಳೇದು’ ಅಂದ. ರಾಜ ಅರೆಮನಸ್ಸಿನಿಂದ ತನ್ನ ವನದಲ್ಲಿದ್ದಷ್ಟನ್ನು ಕೊಲ್ಲಿಸಿ ಸಮಾಧಾನ ಪಟ್ಟುಕೊಂಡ.

ಎರಡು ವರ್ಷಗಳ ನಂತರ ವೈರಿ ಸೈನ್ಯ ದಂಡೆತ್ತಿ ಬಂದಾಗ ರಾಜ ಪಲಾಯನ ಮಾಡಬೇಕಾಯ್ತು. ಓಡಿ ಓಡಿ ಒಂದು ಗುಹೆಯನ್ನು ಹೊಕ್ಕು ಉಸ್ಸಪ್ಪಾ ಎಂದು ಕೂತ. ಅಷ್ಟರಲ್ಲಿ ಜೇಡ ಬಂದು ಗುಹೆಯ ಬಾಗಿಲಿಗೆ ದೊಡ್ಡ ಬಲೆ ಕಟ್ಟಿಬಿಟ್ಟಿತು. ರಾಜನನ್ನು ಹುಡುಕುತ್ತ ಬಂದ ವೈರಿಯ ಸೈನಿಕರು ಈ ಗುಹೆಯೊಳಕ್ಕೆ ಮಾತ್ರ ಹೋಗಲಿಲ್ಲ. ಏಕೆಂದರೆ, ಅಲ್ಲಿ ರಾಜ ನುಗ್ಗಿರಲಿಕ್ಕಿಲ್ಲ, ನುಗ್ಗಿದ್ರೆ ಬಲೆ ಚಿಂದಿಯಾಗಿರೋದು ಅಂತ ಅಂದಾಜು ಮಾಡಿ ಮುಂದಕ್ಕೆ ಹೋದರು. ರಾಜ ಬಚಾವಾದ. ತನ್ನ ತೋಟದ ಜೇಡಗಳನ್ನು ಕೊಲ್ಲಿಸಿದ್ದಕ್ಕೆ ಪಶ್ಚಾತ್ತಾಪ ಪಟ್ಟ.

ಕಥೆ ಇಲ್ಲಿಗೇ ಮುಗಿಯಲಿಲ್ಲ. ಜೇಡಗಳಿಗೂ ಈ ಕಥೆ ಗೊತ್ತಾಗಿರಬೇಕು. ರಾಜನ ತೋಟದಲ್ಲಿ ತೀರಾ ಸಪೂರದ, ಕಣ್ಣಿಗೆ ಕಾಣದಂತಹ ಅಂಟು ನೂಲಿನ ಬಲೆಯನ್ನು ನಿರ್ಮಿಸಿದ್ದು ತಪ್ಪೆಂದು ಅನ್ನಿಸಿರಬೇಕು. ಅದಕ್ಕೂ ಅವುಗಳು ಉಪಾಯವೊಂದನ್ನು ಕಂಡುಕೊಂಡವು. ತಾವು ನಿರ್ಮಿಸಿದ ಬಲೆ ಚಿಕ್ಕಪುಟ್ಟ ಕೀಟಗಳಿಗೆ ಕಾಣಿಸಬಾರದು. ಆದರೆ, ದೊಡ್ಡ ಜೀವಿಗಳಿಗೆ ಇಂಥದ್ದೊಂದು ಬಲೆ ಇರುವುದು ಗೊತ್ತಾಗಬೇಕು –ಅಂಥದ್ದೊಂದು ತಂತ್ರದಿಂದ ಬಲೆ ಹೆಣೆಯಲು ಕಲಿತವು. ಬಲೆಯನ್ನು ನಿರ್ಮಿಸಿದ ಬಳಿಕ ಅದರ ಒಂದು ಭಾಗದಲ್ಲಿ ದಪ್ಪನ್ನ ಎಳೆಗಳ ಎಚ್ಚರಿಕೆ ಫಲಕ ಹಾಕತೊಡಗಿದವು. ಚಿತ್ರವನ್ನು ಬರೆದ ನಂತರ ಕಲಾವಿದರು ತಮ್ಮ ಸಿಗ್ನೇಚರ್‌ ಹಾಕುವ ಹಾಗೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT