ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿ: ಕಾಲವೇ ಸೃಷ್ಟಿಸಿದ ದಿಟ್ಟ ಜಾತ್ಯತೀತ ನಾಯಕಿ

Last Updated 5 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹೃದಯವುಳ್ಳ ಎಲ್ಲರಲ್ಲೂ ದಿಗ್ಭ್ರಮೆ ಹುಟ್ಟಿಸಿರುವ ಗೌರಿ ಲಂಕೇಶರ ಭೀಕರ ಹತ್ಯೆಯ ಜೊತೆಜೊತೆಗೇ ಕರ್ನಾಟಕದ ಚರಿತ್ರೆಯಲ್ಲಿ ಪ್ರಜ್ಞಾವಂತರ ಹತ್ಯೆಗಳ ಕರಾಳ ಪುಟಗಳು ಆರಂಭವಾಗತೊಡಗುವ ಭಯಾನಕ ಸೂಚನೆಗಳು ಕಾಣುತ್ತಿವೆ. ಈ ಹತ್ಯೆಯ ಕಾರಣಗಳು ಏನೇ ಇರಲಿ, ಮೊದಲು ಎಲ್ಲೆಡೆ ಹಿಂಸೆ ಬಿತ್ತುತ್ತಿರುವ ಗುಂಪುಗಳು, ಪಕ್ಷಗಳು ಯಾವ ರಕ್ಷಣೆಯೂ ಇಲ್ಲದ ಒಬ್ಬ ಕನ್ನಡ ಚಿಂತಕಿಯನ್ನು ಕೊಲ್ಲುವ ಭಯಾನಕ ಸ್ಥಿತಿಗೆ ಕರ್ನಾಟಕ ಹೇಗೆ ತಲುಪಿತು ಎಂಬ ಬಗ್ಗೆ ತೀವ್ರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.

ಗೌರಿಯವರ ನಿರ್ಗಮನದಿಂದ ಕರ್ನಾಟಕದ ಒಂದು ದಿಟ್ಟ ಸೆಕ್ಯುಲರ್ ಸ್ತ್ರೀವಾದಿ ದನಿ ಉಡುಗಿದಂತಾಗಿದೆ. ಅದರಲ್ಲೂ ಮುಖ್ಯವಾಗಿ, ಅಲ್ಪಸಂಖ್ಯಾತರ ಪರವಾಗಿ ನಿಲ್ಲುವ ಬೆರಳೆಣಿಕೆಯಷ್ಟು ಚಿಂತಕ, ಚಿಂತಕಿಯರಿರುವ ಕರ್ನಾಟಕದಲ್ಲಿ ಈ ದಾರುಣ ಸಾವು ಒಂದು ಶೂನ್ಯವನ್ನೇ ಸೃಷ್ಟಿಸಿದೆ.

ಇಪ್ಪತ್ತನೇ ಶತಮಾನದ ಕೊನೆಯ ದಶಕದಲ್ಲಿ ‘ಸಂಡೇ’ ಇಂಗ್ಲಿಷ್ ವಾರಪತ್ರಿಕೆ, ಈಟೀವಿ ಚಾನೆಲ್‌ಗಳಲ್ಲಿ ಪತ್ರಕರ್ತೆಯಾಗಿದ್ದ ಗೌರಿ ತಮ್ಮ ತಂದೆ ಪಿ. ಲಂಕೇಶರ ನಿರ್ಗಮನದ ನಂತರ ‘ಲಂಕೇಶ್ ಪತ್ರಿಕೆ’ಯ ಸಂಪಾದಕರಾದ ಗಳಿಗೆ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. 2000ನೆಯ ಇಸವಿಯ ಜನವರಿ ತಿಂಗಳ ಕೊನೆಯ ವಾರ ಅಪ್ಪನ ಫೋಟೊದೆದುರು ಕಣ್ಣೀರಿಡುತ್ತಲೇ ಗೌರಿ ತಮ್ಮ ಮಾತುಗಳನ್ನು ಬರೆಯಲೆತ್ನಿಸಿದರು. ಕೆಲವು ವರ್ಷಗಳ ನಂತರ ತಮ್ಮದೇ ಪತ್ರಿಕೆ ಶುರು ಮಾಡಿದರು. ಸರ್ಕಾರಗಳನ್ನು ನಡುಗಿಸುತ್ತಿದ್ದ ಲಂಕೇಶರು ನಿರ್ಭಯವಾಗಿ ಬದುಕಬಲ್ಲ ಮುಕ್ತ ವಾತಾವರಣ ಕರ್ನಾಟಕದಲ್ಲಿತ್ತು; ಆದರೆ ಗೌರಿಯವರ ಕಾಲದಲ್ಲಿ ಆ ಮುಕ್ತ ವಾತಾವರಣ ಇಲ್ಲವಾಗುತ್ತಾ ಬಂದಿರುವುದಕ್ಕೆ ಬಲಪಂಥೀಯ ಗುಂಪುಗಳ ಉಗ್ರ ರಾಜಕಾರಣವೇ ಮುಖ್ಯ ಕಾರಣ ಎನ್ನುವುದರಲ್ಲಿ ಯಾರಿಗೂ ಅನುಮಾನ ಬೇಡ. ಲಂಕೇಶರಿಂದ ಉಗ್ರವಾಗಿ ಟೀಕಿಸಿಕೊಂಡ ಕೋಮುವಾದಿ ಪಕ್ಷಗಳೂ ಸೇರಿದಂತೆ ಎಲ್ಲ ಪಕ್ಷಗಳ ನಾಯಕರೂ ಲಂಕೇಶರನ್ನು ಎಲ್ಲೋ ಒಂದೆಡೆ ಗೌರವಿಸುತ್ತಿದ್ದರು.

ಆದರೆ ಗೌರಿಯವರ ಕಾಲಕ್ಕೆ ಕೋಮುವಾದಿ ಪಕ್ಷಗಳು, ಗುಂಪುಗಳು ತಮ್ಮ ಅಷ್ಟಿಷ್ಟು ಸಭ್ಯತೆಯ ಮುಖವಾಡವನ್ನೂ ಕಳಚಿ ಇಡೀ ದೇಶವನ್ನೇ ನಿರ್ಲಜ್ಜವಾಗಿ ಒಡೆಯತೊಡಗಿದ್ದು, ಹಿಂಸೆ ಬಿತ್ತತೊಡಗಿದ್ದು ಈಗ ಎಲ್ಲರಿಗೂ ಗೊತ್ತಿದೆ. ಮಾಧ್ಯಮಗಳೂ ಕೋಮುವಾದಿಯಾಗತೊಡಗಿದ ಕಾಲದಲ್ಲಿ ಗೌರಿ ತಮ್ಮ ತಂದೆ ಲಂಕೇಶರ ಪ್ರಖರ ಜಾತ್ಯತೀತ ತತ್ವಗಳನ್ನು ಸದಾ ತಮ್ಮ ಪತ್ರಿಕೆಯ ಮೂಲಕ ಬಿತ್ತಿದರು; ಕೆಲ ಕಾಲ ಮಾನವ ಹಕ್ಕುಗಳ ಚಳವಳಿಗೆ ಇಳಿದು ಉಗ್ರ ಎಡಪಂಥೀಯರನ್ನು ತಾತ್ವಿಕವಾಗಿ ಬೆಂಬಲಿಸಿದರೆಂಬ ಆಪಾದನೆಗೆ ಗೌರಿ ಗುರಿಯಾದರೂ, ಗೌರಿ ಎಂದೂ ಹಿಂಸೆಯನ್ನು ಪ್ರತಿಪಾದಿಸಿದವರಲ್ಲ. ಈಚಿನ ವರ್ಷಗಳಲ್ಲಂತೂ ಅನೇಕ ತಬ್ಬಲಿ ಸಂಘಟನೆಗಳು, ಮಹಿಳಾ ಸಂಘಟನೆಗಳು ತೊಂದರೆಗೊಳಗಾದಾಗಲೆಲ್ಲ ಸರ್ಕಾರದ ಯಾವುದೇ ಅಧಿಕಾರಿಗಳನ್ನು. ಮಂತ್ರಿಗಳನ್ನು ನಿರ್ಭಯವಾಗಿ ಭೇಟಿ ಮಾಡುತ್ತಾ, ಅವರೊಡನೆ ವಾದ ಮಾಡುತ್ತಾ, ಜಗಳವಾಡುತ್ತಾ, ಅಸಹಾಯಕರಿಗೆ ನ್ಯಾಯ ದೊರಕಿಸಲು ಗೌರಿ ಎಲ್ಲೆಡೆ ಓಡಾಡುತ್ತಿದ್ದರು. ಕೋಮು ಶಕ್ತಿಗಳ ವಿರುದ್ಧ ಸೆಣಸಲು ಹಗಲುರಾತ್ರಿಯೆನ್ನದೆ ಇಡೀ ಕರ್ನಾಟಕವನ್ನು ಸುತ್ತುತ್ತಿದ್ದರು. ಈಚೆಗೆ ಕರ್ನಾಟಕದ ಎಲ್ಲ ಪ್ರಗತಿಪರ ಹೋರಾಟಗಳ ಮುಂಚೂಣಿಯಲ್ಲಿರುತ್ತಿದ್ದ ಗೌರಿಯಂಥ ಮಹಿಳಾನಾಯಕರು ಸುಲಭವಾಗಿ ರೂಪುಗೊಳ್ಳುವುದಿಲ್ಲ. ಲಂಕೇಶರ ನಿರ್ಗಮನದ ಶೂನ್ಯ ಕೂಡ ಗೌರಿಯಂಥ ದಿಟ್ಟ ನಾಯಕಿಯನ್ನು ಕರ್ನಾಟಕದ ಕೇಂದ್ರರಂಗಕ್ಕೆ ತಂದು ನಿಲ್ಲಿಸಿತು. ಗೌರಿ ಕೋಮು ಸೌಹಾರ್ದದ ತತ್ವಕ್ಕಾಗಿ ನಿರಂತರ ದುಡಿದು ಕೂಡ ನವೆದರು ಎಂಬ ಕಾರಣಕ್ಕಾಗಿಯೂ ಕರ್ನಾಟಕ ಅವರಿಗೆ ಕೃತಜ್ಞವಾಗಿರಬೇಕಾಗುತ್ತದೆ.

ಈ ಭೀಕರ ಸುದ್ದಿ ಬಂದಾಗ ನನ್ನೊಡನಿದ್ದ ಅಧಿಕಾರಿಯೊಬ್ಬರು ನಿನ್ನೆ ತಾನೇ ಗೌರಿಯವರನ್ನು ನೋಡಿದ್ದರಿಂದ ಗೌರಿ ಈಚೆಗೆ ಕೃಶವಾಗಿದ್ದರೂ ಅಪಾರ ಚಟುವಟಿಕೆಯಲ್ಲಿದ್ದುದನ್ನು ಗಮನಿಸುತ್ತಲೇ ‘ಅವರು ಒಂದು ನಿಟ್ಟಿನಿಂದ ನನಗೆ ಗಾಂಧೀಜಿಯಂತೆ ಕಾಣತೊಡಗಿದರು’ ಎಂದು ಪ್ರಾಮಾಣಿಕವಾದ ಗೌರವದಿಂದ ಹೇಳುತ್ತಿದ್ದರು. ಕಳೆದ ಕೆಲವು ವರ್ಷಗಳಲ್ಲಿ ನಕ್ಸಲೈಟ್ ತತ್ವಗಳಲ್ಲಿ ನಂಬಿಕೆಯಿಟ್ಟವರನ್ನು ಮುಖ್ಯವಾಹಿನಿಗೆ ತರಲು ಗೌರಿ ಕೂಡ ಅಪಾರ ಶ್ರಮ ವಹಿಸಿದ್ದರು. ಗಾಂಧೀಜಿಯನ್ನು ಕೊಂದ ಕಾಲದ ಬಲಪಂಥೀಯ ಐಡಿಯಾಲಜಿಯೇ ಗೌರಿಯವರನ್ನು ಕೊನೆಗಾಣಿಸಿರಬಹುದು ಎಂದು ನಂಬಲು ಎಲ್ಲ ಕಾರಣಗಳಿವೆ.

ಆದರೆ ಈ ರೋಗಮೂಲವನ್ನು ಬುಡಸಹಿತ ಕಿತ್ತು ಹಾಕಲು ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಹಾಗೂ ಎಲ್ಲ ಬಗೆಯ ಸಾರ್ವಜನಿಕ ಸಂಘಟನೆಗಳೂ ಮುಂದಾಗದಿದ್ದರೆ ಕರ್ನಾಟಕದಲ್ಲಿ ಹಾಗೂ ಇಂಡಿಯಾದಲ್ಲಿ ಸರಣಿ ಕೊಲೆಗಳ ದುರಂತವನ್ನು ನಾವು ನೋಡಬೇಕಾದೀತು. ಒಂದು ಬಗೆಯ ವಿಚಾರವನ್ನು ಗುಂಡಿನ ಮೂಲಕ ಮುಗಿಸುತ್ತೇವೆಂದು ಹೊರಡುವವರ ಹಿನ್ನೆಲೆಯಲ್ಲಿರುವ ಕಾಣದ ತಾತ್ವಿಕ ಶಕ್ತಿಗಳು ಕರ್ನಾಟವನ್ನಷ್ಟೇ ಅಲ್ಲ, ಇಡೀ ಇಂಡಿಯಾವನ್ನು ನರಕ ಮಾಡಲಿರುವ ಸೂಚನೆಗಳು ನಿಚ್ಚಳವಾಗಿ ಕಾಣುತ್ತಿವೆ. ಗುಂಡು ಹಾರಿಸುವ ಹುಂಬರ ಹಿಂದೆ ನಿಂತು ಕುಮ್ಮಕ್ಕು ಕೊಡುತ್ತಿರುವ ಪರಮಹೇಡಿಗಳಾದ ಹುಸಿಮಾತುಗಾರರನ್ನು ತಮ್ಮ ಕುಮ್ಮಕ್ಕಿನಿಂದ ಚೆಲ್ಲಿದ ಮಹಿಳೆಯೊಬ್ಬರ ರಕ್ತವಾದರೂ ದಿಗ್ಭ್ರಮೆಗೆ ಈಡು ಮಾಡಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT