ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಾಂತಗಳು ಕೊಲೆಯಾಗುತ್ತಿವೆ...

ಲಂಕೇಶರಷ್ಟೇ ಆಧುನಿಕ, ಅವರಷ್ಟೇ ಕೋಪಿಷ್ಟೆ
Last Updated 6 ಸೆಪ್ಟೆಂಬರ್ 2017, 19:38 IST
ಅಕ್ಷರ ಗಾತ್ರ

ಬರ್ಬರತೆಯೇ ಬದುಕಾಗತೊಡಗಿದೆ. ಬದುಕು ಸಾಯತೊಡಗಿದೆ. ಕೇಂದ್ರವೆಂಬುದು ಭದ್ರವಾಗಿರದಿದ್ದರೆ ಸುತ್ತಸುತ್ತುವುದೆಲ್ಲವೂ ಚೆಲ್ಲಾಪಿಲ್ಲಿ ಚೆಲ್ಲುತ್ತವೆ ಎಂದು ಹೆಸರಾಂತ ಯುರೋಪಿಯನ್ ಲೇಖಕನೊಬ್ಬ ನುಡಿದಿದ್ದಾನೆ. ಆತನ ನುಡಿಗಳು ನೆನಪಿಗೆ ಬಂದವು ನನಗೆ.

ಸಭ್ಯ ಧಾರವಾಡವೂ ವಚನ ವಿದ್ವಾಂಸ ಕಲಬುರ್ಗಿಯವರನ್ನು ಚೆಲ್ಲಾಡಿತು. ಸಭ್ಯ ಬೆಂಗಳೂರು ಪತ್ರಕರ್ತೆ ಗೌರಿಯನ್ನು ಚೆಲ್ಲಾಡಿತು. ದೇಶದ ಹಲವು ಚಿಂತಕರು, ಕಳೆದೆರೆಡು ವರ್ಷಗಳಲ್ಲಿ, ತಮ್ಮ ಚಿಂತನೆಗಳ ಕಾರಣಕ್ಕಾಗಿಯೇ ಚೆಲ್ಲಾಡಲ್ಪಟ್ಟರು.

ರಕ್ತ ಚೆಲ್ಲಾಡುವ ಘಟನೆಗಳು ಇನ್ನು ಮುಂದೆ ಅನಿವಾರ್ಯವಾಗಿ ಬಿಡಬಹುದೇನೋ ಎಂಬ ಹೆದರಿಕೆ ಕಾಡ ತೊಡಗಿದೆ ನನಗೆ. ಭದ್ರ ಕೇಂದ್ರವೆಂದರೆ ಮತ್ತೇನೂ ಅಲ್ಲ, ಸರಳ ಸಭ್ಯತೆಯೇ ಆಗಿದೆ. ಅದು ಸಡಿಲಾಗತೊಡಗಿದೆ. ಅಸಹಿಷ್ಣುತೆ ಅಧಿಕವಾಗತೊಡಗಿದೆ. ಮಕ್ಕಳಾಡಿಕೆಯಂತಾಗಿವೆ ಬೈಕುಗಳು ಹಾಗೂ ಬಂದೂಕುಗಳು. ಹಣವು ಸುಲಭ ಸುಪಾರಿಯಾಗತೊಡಗಿದೆ. ಸಣ್ಣ ತರ್ಕಗಳು, ಸ್ವಾಯತ್ತವಾಗಿ, ಪರಿಶುದ್ಧವಾಗಿ, ಕೊಲೆಗಡುಕವಾಗತೊಡಗಿವೆ.

ತಂದೆ ಲಂಕೇಶರಿಗೆ ತಕ್ಕ ಮಗಳು ಗೌರಿ. ಆದರೆ ಹಾಗೆ ತೋರಿಸಿ ಕೊಳ್ಳುತ್ತಿರಲಿಲ್ಲ. ಹೇಗೆ, ಪೂರ್ಣಚಂದ್ರ ತೇಜಸ್ವಿ ಬದುಕಿನ ವಿವರಗಳಲ್ಲಿ ತಂದೆ ಕುವೆಂಪುಗಿಂತ ತಾನು ಭಿನ್ನ ಎಂದು ಸಾಧಿಸಿಕೊಂಡರೋ ಹಾಗೆಯೇ ಗೌರಿಯೂ ಸಹ ಸಣ್ಣ ವಿವರಗಳಲ್ಲಿ ತಂದೆಗಿಂತ ಭಿನ್ನವಾಗಿಯೂ ಮೂಲದಲ್ಲಿ ತಂದೆ ಲಂಕೇಶರಷ್ಟೇ ಹೃದಯವಂತಳಾಗಿಯೂ ಮೂಡಿಬಂದಳು. ಲಂಕೇಶರಷ್ಟೇ ಆಧುನಿಕಳಾಗಿದ್ದಳು ಗೌರಿ. ಲಂಕೇಶರಷ್ಟೇ ಕೋಪಿಷ್ಠೆಯಾಗಿದ್ದಳು ಕೂಡ.

ಗೌರಿಯದು ಸಾತ್ವಿಕ ಕೋಪ. ದುರಂತವೆಂದರೆ, ವಿಚಾರವಾದಿಗಳಲ್ಲಿ ಸಾಮಾನ್ಯವಾಗಿ ಇರುವ ಈ ಸಾತ್ವಿಕ ಕೋಪವು, ಸಣ್ಣತರ್ಕಗಳ ಮನಸ್ಸುಗಳನ್ನು ಕೆರಳಿಸಿ ಬಿಡುತ್ತವೆ. ಉದಾಹರಣೆಗೆ ಹಿಂದೂ ಮುಸಲ್ಮಾನ ಕಲಹವನ್ನೇ ತೆಗೆದುಕೊಳ್ಳಿ. ಈ ದೇಶದ ಪ್ರತಿಯೊಬ್ಬ ಮುಸಲ್ಮಾನನೂ ತಪ್ಪಿತಸ್ಥ ಎಂದು ಘಟ್ಟಿಸಿ ಹೇಳಿ ನೀವು ಹಾಗೆಯೇ ಹೇಳಿ ಎಂದು ಪೀಡಿಸತೊಡಗಿದ್ದಾರೆ ಅನೇಕ ಹಿಂದೂಗಳು. ದೇಶ ವಿಭಜನೆಯ ದುರಂತದಿಂದ ಇನ್ನೂ ಹೊರಬಂದಿಲ್ಲ ಇವರು. ಹೊರಬರಲು, ಕೆಲವರು ಬಿಡುತ್ತಿಲ್ಲ.

ಇತರರ ತಪ್ಪುಗಳನ್ನು ಪೀಡಿಸಿ ಹೇಳುವವರನ್ನು, ಲಂಕೇಶರಂತೆ ಅಥವಾ ಗೌರಿಯಂತೆ, ಕೋಪದಿಂದ ತಿರಸ್ಕರಿಸಬಾರದು ಎಂದು ನನಗೆ ಈಗೀಗ ಅನ್ನಿಸತೊಡಗಿದೆ. ಮುಸಲ್ಮಾನರು ಹಾಗೂ ಹಿಂದೂಗಳ ನಡುವೆ ಇರುವ, ಮೂಲತಃ, ಅಣ್ಣ ತಮ್ಮಂದಿರ ಜಗಳವು ಮಹಾಭಾರತದ ಕುರುಕ್ಷೇತ್ರವಿದ್ದಂತೆ. ಅಣ್ಣನ ಪಕ್ಷ ತಮ್ಮನ ಪಕ್ಷ ಎರಡನ್ನೂ ಸಂಪೂರ್ಣವಾಗಿ ನಿರ್ನಾಮ ಮಾಡಿ ಬಿಡುತ್ತದೆ ಅದು. ಇದು ಗೊತ್ತಿದ್ದೂ ಮಾಡುವ ಕ್ರೋಧವೆಂಬುದು ರೋಗಿಷ್ಠ ಜಗಳ.

ಸಮಸ್ಯೆಯೆಂದರೆ ಪ್ರತಿಯೊಬ್ಬ ರೋಗಿಗೂ ತಾನೇ ಶ್ರೀಕೃಷ್ಣ ಪರಮಾತ್ಮನ ಪಕ್ಷವೆಂದೂ ತನ್ನ ವಿರೋಧಿಗಳು ಕೌರವ ಪಕ್ಷವೆಂದೂ ಬಲವಾದ ನಂಬಿಕೆಯಿರುತ್ತದೆ. ಇಂತಹ ರೋಗಗಳಿಗೆ ಬುದ್ಧನ ಔಷಧ ಮಾತ್ರವೇ ಮದ್ದು, ಕರುಣೆ ಮಾತ್ರವೇ ಮದ್ದು ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಹೇಳಿದಷ್ಟು ಸುಲಭವಲ್ಲ ಮದ್ದು ಮಾಡುವುದು. ಕಷ್ಟಪಟ್ಟು ಆಚರಣೆಗೆ ತರಬೇಕಾದದ್ದು ಕರುಣೆ.

ನಾನೇ ಕೋಪಿಷ್ಠ. ಇತರರಿಗೆ ಸುಲಭವಾಗಿ ಹೇಗೆ ಹೇಳಲಿ ಕರುಣೆ ತೋರಿಸು ಎಂದು. ನಾವೆಲ್ಲರೂ ಸಣ್ಣ ತರ್ಕಗಳ ಹಿಂಸೆಗೆ ಗುರಿಗಳೇ ಹೌದು. ಹೆದರಿಕೆಯಿಂದ ಹೇಳುತ್ತಿಲ್ಲ ಈ ಮಾತನ್ನು ನಾನು. ಅರಿವಿನಿಂದ ಹೇಳುತ್ತಿದ್ದೇನೆ.‌

ಗೌರಿಯ ತಾಯಿ ಇಂದಿರಮ್ಮ, ತಂಗಿ ಕವಿತಾ ಹಾಗೂ ಇತರೆ ಹೆಣ್ಣು ಮಕ್ಕಳ ತಾಯಿ ಕರುಳು ಅರ್ಥವಾಗುತ್ತದೆ ನನಗೆ. ಆದರೂ ನಾನವರಿಗೆ ಹೇಳುತ್ತೇನೆ. ದುಃಖಿಸಬೇಡಿ ಎಂದು. ಗೌರಿ ಕಾಯಿಲೆ ಬಿದ್ದು ನರಳಿ ಸಾಯಲಿಲ್ಲ. ದೇಶಭಕ್ತ ಯೋಧನಂತೆ ಸತ್ತಳು. ಅವಳ ವಿರೋಧಿಗಳೂ ಸಹ ಗೌರಿ ದೇಶಭಕ್ತಳೆಂಬ ಮಾತನ್ನು ಅಲ್ಲಗೆಳೆಯಲಾರರು. ಆದರೆ ನಾನು ಅದಕ್ಕಿಂತ ಮಿಗಿಲಾದ ವಿಶೇಷವೊಂದನ್ನು ಗೌರಿಗೆ ಬಳಸಲು ಇಷ್ಟಪಡುತ್ತೇನೆ. ಹುತಾತ್ಮಳೆಂದು ಕರೆಯಲು ಇಷ್ಟಪಡುತ್ತೇನೆ. ನಕ್ಸಲೀಯರನ್ನು ಶಾಂತ ಸಭ್ಯತೆಯ ಹಾದಿಗೆ ಮರಳಿ ತರಲು ಹೆಣಗಿದ ಗೌರಿ ಹಿಂಸೆಗೆ ಹುತಾತ್ಮಳಾದಳು.

ಗೌರಿಯ ಸಾತ್ವಿಕತೆಯು ಇಡೀ ದೇಶವನ್ನು ಪಸರಿಸಲಿ ಎಂದು ಬಯಸುತ್ತೇನೆ. ಕಾಳಿಯೂ ಹೆಂಗಸಲ್ಲವೇ? ಕಾಳಿಯನ್ನು ಕೊಲ್ಲಬಲ್ಲೆನೆಂದು ಹೊರಟ ಮಹಿಷಾಸುರನಂತೆ ಈ ಪುರುಷ ಪ್ರಧಾನ ವ್ಯವಸ್ಥೆಯು ಹತವಾಗಿ ಹೋಗಲಿ ಎಂದು ಆಶಿಸುತ್ತೇನೆ. ಭವಿಷ್ಯದಲ್ಲಿ ಪುರುಷರು ತಮ್ಮ ಪುರುಷತ್ವದ ಅನಗತ್ಯ ಅಹಂಕಾರವನ್ನು ಕಳಚಿ ಸರಳ ಸಭ್ಯ ನಾಗರೀಕರಾಗಲಿ ಎಂದು ಬಯಸುತ್ತೇನೆ. ಅದು ಸಾಧಿಸುವವರೆಗೆ ತಾಳ್ಮೆಯಿಂದ ಸಹಬಾಳ್ವೆ ಮಾಡೋಣ ಬನ್ನಿ.

ಗೌರಿ, ನಿನಗಿದು ನುಡಿ ನಮನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT