ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

ಮಾಸಿಕ ₹6,000 ವೇತನ ನಿಗದಿಗೆ ಆಗ್ರಹ: ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗಿ
Last Updated 7 ಸೆಪ್ಟೆಂಬರ್ 2017, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹6,000 ಕನಿಷ್ಠ ವೇತನ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿ ‘ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ ನೇತೃತ್ವದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ನಗರದಲ್ಲಿ ಗುರುವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತೆಯರು, ‘ಕಾರ್ಯಕರ್ತೆಯರನ್ನು ಕಾಯಂಗೊಳಿಸಿ’ ಸೇರಿ ಹಲವು ಘೋಷಣೆಯುಳ್ಳ ಫಲಕಗಳನ್ನು ಪ್ರದರ್ಶಿಸಿದರು. ಮೆರವಣಿಗೆ ಬಳಿಕ ಉದ್ಯಾನದಲ್ಲಿ ಬಹಿರಂಗ ಸಭೆ ನಡೆಸಿದರು. ರಾಜ್ಯ ಎಲ್ಲಾ ಜಿಲ್ಲೆಗಳ ಕಾರ್ಯಕರ್ತೆಯರು ಇದರಲ್ಲಿ ಪಾಲ್ಗೊಂಡಿದ್ದರು. 

‘ರಾಜ್ಯದಲ್ಲಿ 37,000 ಆಶಾ ಕಾರ್ಯಕರ್ತೆಯರಿದ್ದಾರೆ. ಕುಷ್ಠರೋಗ, ಆನೆಕಾಲು ರೋಗ, ಮಧುಮೇಹ ಸಮೀಕ್ಷೆ ಸೇರಿ 32 ಕೆಲಸಗಳಿಗೆ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ಅವರ ಕೆಲಸಕ್ಕೆ ತಕ್ಕ ವೇತನವನ್ನು ಮಾತ್ರ ಸರ್ಕಾರ ಕೊಡುತ್ತಿಲ್ಲ. ಇದರಿಂದ ಕಾರ್ಯಕರ್ತೆಯರು ಜೀವನ ನಡೆಸುವುದು ಕಷ್ಟಕರವಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೆಲಸಕ್ಕೆ ತಕ್ಕಂತೆ ಕಾರ್ಯಕರ್ತೆಯರಿಗೆ ಪ್ರತ್ಯೇಕವಾಗಿ ₹75, ₹150 ಹಾಗೂ ₹300 ವೇತನ ನೀಡುತ್ತಿವೆ. ಅದು ಸಹ ಸಮಯಕ್ಕೆ ಸರಿಯಾಗಿ ಕಾರ್ಯಕರ್ತೆಯರ ಕೈ ಸೇರುತ್ತಿಲ್ಲ. ಮಾಸಿಕ ವೇತನ ನಿಗದಿಪಡಿಸುವಂತೆ ಒತ್ತಾಯಿಸಿದರೂ ಸರ್ಕಾರಗಳು ಸ್ಪಂದಿಸುತ್ತಿಲ್ಲ’ ಎಂದರು.

‘ರಾಜ್ಯ ಸರ್ಕಾರವೇ ಮಾಸಿಕ ₹6,000 ವೇತನ ನಿಗದಿಪಡಿಸಬೇಕು ಎಂದು ಕಳೆದ ಡಿಸೆಂಬರ್‌ನಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಅಹೋರಾತ್ರಿ ಹೋರಾಟ ನಡೆಸಿದ್ದೆವು. ಅಂದು ಸರ್ಕಾರವು ನೀಡಿದ್ದ ಭರವಸೆ ಇದುವರೆಗೂ ಈಡೇರಿಲ್ಲ. ಅದರಿಂದ ನೊಂದು ಈಗ ಪುನಃ ಪ್ರತಿಭಟನೆ ಆರಂಭಿಸಿದ್ದೇವೆ. ಬಹುತೇಕ ಆಶಾ ಕಾರ್ಯಕರ್ತೆಯರು ವಿಧವೆಯರು, ವಿಚ್ಛೇದಿತರು, ಒಂಟಿ ಮಹಿಳೆಯರು ಮತ್ತು ಗಂಡನ ದುಡಿಮೆಯ ಬೆಂಬಲವಿಲ್ಲದೆ ಕುಟುಂಬ ನಿರ್ವಹಿಸುತ್ತಿರುವ ಮಹಿಳೆಯರಿದ್ದಾರೆ. ಅವರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ಆಶಾ ಸಾಫ್ಟ್‌ ಅವೈಜ್ಞಾನಿಕ: ‘ಆಶಾ ಕಾರ್ಯಕರ್ತೆಯರಿಗೆ ವೇತನ ನೀಡಲು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಆಶಾ ಸಾಫ್ಟ್‌ ಅವೈಜ್ಞಾನಿಕವಾದದ್ದು. ಇದನ್ನು ರದ್ದುಪಡಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಕಾರ್ಯಕರ್ತೆಯರು, ನಿತ್ಯವೂ ಮಾಡುವ ಕೆಲಸವನ್ನು ಈ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಅದನ್ನು ಪರಿಶೀಲಿಸಿ ಅಧಿಕಾರಿಗಳು ವೇತನ ನೀಡುವ ವ್ಯವಸ್ಥೆ ಇದೆ. ಆದರೆ, ಬಹುತೇಕ ಕಾರ್ಯಕರ್ತೆಯರಿಗೆ ಕಂಪ್ಯೂಟರ್ ಜ್ಞಾನವಿಲ್ಲ. ಅವರಿಂದ ಅಪ್‌ಲೋಡ್‌ ಮಾಡಲೂ ಸಾಧ್ಯವಾಗುತ್ತಿಲ್ಲ. ಜತೆಗೆ ಬೇರೆಯವರ ಸಹಾಯದಿಂದ ಅಪ್‌ಲೋಡ್‌ ಮಾಡಿದರೂ ಪ್ರತಿ ತಿಂಗಳು ವೇತನವೂ ಸಿಗುತ್ತಿಲ್ಲ’ ಎಂದು ದೂರಿದರು.

***

ಅಹೋರಾತ್ರಿ ಪ್ರತಿಭಟನೆ

‘ಬೇಡಿಕೆ ಈಡೇರಿಸುವವರೆಗೂ ಸ್ವಾತಂತ್ರ್ಯ ಉದ್ಯಾನದಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತಿಳಿಸಿದರು. ‘ರಾಜ್ಯದ ಪ್ರತಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಬರಲಿದ್ದಾರೆ. ರಸ್ತೆಗಳೇ ನಮ್ಮ ಮನೆಗಳಾಗಲಿವೆ’ ಎಂದರು.

***

ಶಾಲಿನಿ ರಜನೀಶ್‌ಗೆ ಮುಜುಗರ

ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮಾತನಾಡಿ, ‘ಕಳೆದ ಬಾರಿ ವೇತನ ಹೆಚ್ಚಳ ಮಾಡಿದ್ದೇವೆ. ಅದರಂತೆ ಪ್ರತಿ ತಿಂಗಳು ವೇತನ ನೀಡುತ್ತಿದ್ದೇವೆ’ ಎಂದರು.

‘ಯಾರ‍್ಯಾರು ವೇತನ ಪಡೆಯುತ್ತಿದ್ದಿರಾ. ಕೈ ಎತ್ತಿ’ ಎಂದಾಗ, ಯಾರೊಬ್ಬರೂ ಕೈ ಎತ್ತಲಿಲ್ಲ. ‘ವೇತನ ಬಂದಿಲ್ಲ’ ಎಂದೇ ಕಾರ್ಯಕರ್ತೆಯರು ಕೂಗಿ ಹೇಳಿದ್ದರಿಂದ, ಕಾರ್ಯದರ್ಶಿಗೆ ಮುಜುಗರ ಉಂಟಾಯಿತು.

***

ಪ್ರತಿಭಟನಾನಿರತ ಆಶಾ ಕಾರ್ಯಕರ್ತರು, ಸ್ವಾತಂತ್ರ್ಯ ಉದ್ಯಾನ ಹಾಗೂ ಅಕ್ಕ–ಪಕ್ಕದ ರಸ್ತೆ ಹಾಗೂ ಫುಟ್‌ಪಾತ್‌ನಲ್ಲೇ ಮಲಗಿ ಗುರುವಾರ ರಾತ್ರಿ ಕಳೆದರು.

ರಾಜ್ಯದ ಹಲವು ಜಿಲ್ಲೆಗಳಿಂದ ನಗರಕ್ಕೆ ಬಂದಿರುವ ಸಾವಿರಾರು ಕಾರ್ಯಕರ್ತೆಯರಿಗೆ ನೆಲವೇ ಹಾಸಿಗೆಯಾಗಿ, ಆಕಾಶವೇ ಹೊದಿಕೆಯಾಯಿತು. ಕೆಲವರು ತಮ್ಮೊಂದಿಗೆ ಕರೆತಂದಿದ್ದ ಮಕ್ಕಳನ್ನೂ ರಸ್ತೆಯಲ್ಲೇ ಮಲಗಿಸಿದ್ದು ಕಂಡುಬಂತು.

ಸಂಜೆ ಹಾಗೂ ರಾತ್ರಿ ಮಳೆ ಸುರಿದ ವೇಳೆಯಲ್ಲೂ ಕಾರ್ಯಕರ್ತೆಯರು ರಸ್ತೆ ಬಿಟ್ಟು ಏಳಲಿಲ್ಲ. ಮಳೆಯಲ್ಲೇ ನೆನೆದು ಪ್ರತಿಭಟನೆ ಮುಂದುವರಿಸಿದರು. ಮಧ್ಯಾಹ್ನ ರಸ್ತೆಯಲ್ಲಿ ಊಟ ಮಾಡಿ, ತ್ಯಾಜ್ಯವನ್ನೆಲ್ಲ ರಸ್ತೆ ಪಕ್ಕವೇ ಎಸೆಯಲಾಗಿತ್ತು. ಅದೇ ತ್ಯಾಜ್ಯದ ಪಕ್ಕವೇ ಹಲವರು ಮಲಗಿಕೊಂಡಿದ್ದರು. ದುರ್ವಾಸನೆ ಹಾಗೂ ಸೊಳ್ಳೆ ಕಾಟದಿಂದ ಕಿರಿಕಿರಿ ಅನುಭವಿಸಿದರು. ಸ್ಥಳದಲ್ಲಿ ಶೌಚಾಲಯಗಳ ಕೊರತೆ ಇದ್ದಿದ್ದರಿಂದ, ಕಾರ್ಯಕರ್ತೆಯರು ಪಡಿಪಾಟಲು ಅನುಭವಿಸಿದರು.

‘ಕಳೆದ ಬಾರಿ ಪ್ರತಿಭಟನೆ ನಡೆಸಿದಾಗ ನೀಡಿದ್ದ ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ. ನಾವು ಈಗ ರಸ್ತೆಯಲ್ಲಿ ಮಲಗಲು ಸರ್ಕಾರವೇ ಕಾರಣ. ಇಲ್ಲಿ ಯಾವುದೇ ಮೂಲಸೌಕರ್ಯವಿಲ್ಲ. ನಮ್ಮ ಆರೋಗ್ಯದಲ್ಲಿ ಏರುಪೇರಾದರೆ ಸರ್ಕಾರವೇ ಹೊಣೆ’ ಎಂದು ಕಾರ್ಯಕರ್ತೆಯರು ತಿಳಿಸಿದರು.

ಸಚಿವರ ಸಂಧಾನ ವಿಫಲ: ಪ್ರತಿಭಟನಾ ಸ್ಥಳಕ್ಕೆ ರಾತ್ರಿ ಭೇಟಿ ನೀಡಿದ್ದ ಆರೋಗ್ಯ ಸಚಿವ ರಮೇಶ್‌ಕುಮಾರ್‌, ಕಾರ್ಯಕರ್ತೆಯರೊಂದಿಗೆ ಮಾತುಕತೆ ನಡೆಸಿದರು.

‘ಕಳೆದ ಬಾರಿ ಪ್ರತಿಭಟನೆ ನಡೆಸಿದ್ದ ವೇಳೆ ಸ್ಪಂದಿಸಿದ್ದೇವೆ. ಈ ಬಾರಿಯೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಪ್ರತಿಭಟನೆ ಕೈಬಿಡಿ’ ಎಂದು ಸಚಿವರು ಮನವಿ ಮಾಡಿದರು. ಅವರ ಮಾತಿಗೆ ಒಪ್ಪದ ಕಾರ್ಯಕರ್ತೆಯರು, ‘ಬೇಡಿಕೆ ಈಡೇರಿಸಿದರೆ ಮಾತ್ರ ಪ್ರತಿಭಟನೆ ಕೈಬಿಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT