ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದಲ್ಲಿ ನೀರಿಗಾಗಿ ಯುದ್ಧ: ನಾಣಯ್ಯ

Last Updated 9 ಸೆಪ್ಟೆಂಬರ್ 2017, 8:25 IST
ಅಕ್ಷರ ಗಾತ್ರ

ಮಡಿಕೇರಿ: ‘ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ಒಬ್ಬ ಧೀರ ಸೇನಾನಿ; ಎಲ್ಲಾ ಸೈನಿಕರಿಗೂ ಮಾದರಿ’ ಎಂದು ಮಾಜಿ ಸಚಿವ ಎಂ.ಸಿ. ನಾಣಯ್ಯ ಬಣ್ಣಿಸಿದರು.
ನಗರದಲ್ಲಿ ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸ್ಮರಣೆಯಲ್ಲಿ ಅವರು ಮಾತನಾಡಿದರು.

‘ಪಾಕಿಸ್ತಾನದ ವಿರುದ್ಧ ಹಳೆಯ ವಿಮಾನದಲ್ಲಿ ಶತ್ರುದೇಶದ ವಿರುದ್ಧ ದೇವಯ್ಯ ಹೋರಾಟ ನಡೆಸಿದ್ದರು. ಶತ್ರುಗಳಿಂದ ತಪ್ಪಿಸಿಕೊಂಡು ಬರಬಹುದಾದ ಅವಕಾಶವಿದ್ದರೂ ಉಳಿದ ಯೋಧರನ್ನು ರಕ್ಷಿಸುವ ಸಲುವಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದರು’ ಎಂದು ಸ್ಮರಿಸಿಕೊಂಡರು. ಅಜ್ಜಮಾಡ ದೇವಯ್ಯ ಯಾವುದೇ ಪ್ರದೇಶ, ಜನಾಂಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ ಎಂದು ನುಡಿದರು.

‘ಶಾಂತಿ, ಸೌಹಾರ್ದದ ಬದುಕುವ ದೇಶದಲ್ಲಿ ಯುದ್ಧ ಮಾಡುವ ಹಂಬಲ ಯಾರಿಗೂ ಇಲ್ಲ. ಆದರೆ, ದೇಶದ ರಕ್ಷಣೆಗೆ ಅನಿವಾರ್ಯ. ಮುಂದಿನ ದಿನದಲ್ಲಿ ಯುದ್ಧ ಆಗುವುದಾದರೆ ಅದು ನೀರಿಗಾಗಿ ಆಗುತ್ತದೆ’ ಎಂದು ಎಚ್ಚರಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಮಾತನಾಡಿ, ದೇಶಪ್ರೇಮವನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಬೇಕು. ಕೊಡಗಿನವರು ತಮ್ಮ ಒಗ್ಗಟ್ಟನ್ನು ಕಾಪಾಡಿಕೊಂಡು ತಮ್ಮಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗಿನವರು ಇತರೆಡೆಗೆ ತೆರಳುವಾಗ ಕೊಡಗಿನವರು ಎಂದು ಗುರುತಿಸಿಕೊಳ್ಳುವುದೇ ಹೆಮ್ಮೆಯ ವಿಷಯ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ, ಐತಿಚಂಡ ರಮೇಶ್ ಉತ್ತಪ್ಪ, ನಿವೃತ್ತ ಕರ್ನಲ್ ಕೆ.ಸಿ. ಸುಬ್ಬಯ್ಯ, ಅಜ್ಜಮಾಡ ಗಣೇಶ್ ಕರುಂಬಯ್ಯ ಹಾಜರಿದ್ದರು. ಇದೇ ವೇಳೆ 1965ರ ಯುದ್ಧ ಹಾಗೂ ಕೊಡಗಿನ ವೀರಯೋಧ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ದೇವಯ್ಯ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ನಂತರ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT