ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಕ್ಕಲ್ಲಿ ಮೂತ್ರ ವಿಸರ್ಜನೆ; ಜಿಲ್ಲಾ ಕೇಂದ್ರದಲ್ಲೇ ಶೌಚಕ್ಕೆ ಸಂಕಟ

Last Updated 10 ಸೆಪ್ಟೆಂಬರ್ 2017, 4:11 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲಾ ಕೇಂದ್ರವಾಗಿ ಎರಡು ದಶಕಗಳು ಉರುಳಿದರೂ ವ್ಯವಸ್ಥಿತ ಸಾರ್ವಜನಿಕ ಶೌಚಾಲಯ ಇನ್ನೂ ಇಲ್ಲ. ಸಾರ್ವಜನಿಕರು ನಿತ್ಯ ಸಂಕಟಕ್ಕೆ ಸಿಲುಕುವಂತಾಗಿದೆ.
ಈ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಉತ್ತರ ಕರ್ನಾಟಕ ನಗರ ವಲಯ ಬಂಡವಾಳ ಹೂಡಿಕೆ ಕಾರ್ಯ ಕ್ರಮ, ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ನಿಯಮಿತ ಹಾಗೂ ನಗರಸಭೆಯ ಅನುದಾನದಲ್ಲಿ ಒಟ್ಟು ಐದು ಶೌಚಾಲಯಗಳು ಮಂಜೂರಾಗಿದ್ದವು.

‘ಈ ಪೈಕಿ ಬಾಲ ಭವನದ, ಜಿಲ್ಲಾ ಸರ್ಕಾರಿ ಆಸ್ವತ್ರೆ ಆವರಣದಲ್ಲಿನ ಶೌಚಾಲಯಗಳನ್ನು ಸಾರ್ಜನಿಕರ ಉಪಯೋಗಕ್ಕೆ ನೀಡಲಾಗಿದೆ. ಗೂಗಿಕಟ್ಟಿ ಯಲ್ಲಿ ಹಾಗೂ ಜಾನುವಾರ ಮಾರುಕಟ್ಟೆಯಲ್ಲಿನ ಶೌಚಾಲಯಗಳ ಕಾಮಗಾರಿ ಪ್ರಗತಿಯಲ್ಲಿದೆ. ಐದರಲ್ಲಿ ಇನ್ನೊಂದು ಶೌಚಾಲಯ ಕಟ್ಟುವುದು ಬಾಕಿ ಇದೆ’ ಎಂದು ನಗರಸಭೆ ಅಧ್ಯಕ್ಷೆ ಪಾರ್ವತೆಮ್ಮ ಹಲಗಣ್ಣನವರ ತಿಳಿಸಿದರು.

ಕಾಮಗಾರಿ ಪೂರ್ಣಗೊಂಡು ವರ್ಷ ಪೂರ್ಣಗೊಳ್ಳುವ ಮೊದಲೇ  ಬಾಲ ಭವನದ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿನ ಶೌಚಾಲಯಗಳ ಸ್ಥಿತಿ ಶೋಚನೀಯವಾಗಿದೆ. ಹಣ ಪಾವತಿಸಿ ಉಪಯೋಗಿಸುವ ಬಾಲ ಭವನದ ಶೌಚಾಲಯವು ಪುಂಡ –ಪೋಕರಿಗಳ ಹಾವಳಿಗೆ ತುತ್ತಾಗಿದ್ದು, ಅಲ್ಲಿನ ಟೈಲ್ಸ್‌, ಬಾಗಿಲು, ಕಿಟಕಿಯ ಗ್ಲಾಸ್‌, ಬೇಸಿನ್, ದೊಡ್ಡ ಗ್ಲಾಸ್‌ ಹಾಗೂ ಲೈಟಿಂಗ್‌ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳಿಗೆ ಹಾನಿಯಾಗಿದೆ.

ಅಷ್ಟೇ ಅಲ್ಲದೇ ಶೌಚಾಲಯದ ತುಂಬ ಮದ್ಯದ ಬಾಟಲಿ ಚೂರುಗಳು, ಸಿಗರೇಟ್‌ ತುಂಡುಗಳ ರಾಶಿ ಬಿದ್ದಿವೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿನ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ‘ನಗರದ ಗೂಗಿಕಟ್ಟಿಯಲ್ಲಿ ನಿರ್ಮಿಸಿದ ಪಾವತಿಸಿ ಉಪಯೋಗಿಸುವ ಶೌಚಾಲಯ ಪೂರ್ಣಗೊಂಡು ತಿಂಗಳು ಗಳೇ ಕಳೆದಿವೆ. ಆದರೆ, ಈಗ ಸೆಪ್ಟಿಕ್ ಟ್ಯಾಂಕ್‌ ಕಟ್ಟಲು ಪ್ರಾರಂಭಿ ಸಲಾಗಿದೆ’ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಪುರಸಿದ್ದೇಶ್ವರ ಉದ್ಯಾನ ಪಕ್ಕದಲ್ಲಿ ನಗರಸಭೆಯ 2015–16ನೇ ಹಣ ಕಾಸು ಯೋಜನೆ ಅಡಿಯಲ್ಲಿ, ₹9.55 ಲಕ್ಷದಲ್ಲಿ ಸಾರ್ವಜನಿಕ ಶೌಚಾಲಯ ಪೂರ್ಣಗೊಂಡಿದೆ. ನಗರಸಭೆ ಆವರಣದಲ್ಲಿಯೂ  ಶೌಚಾಲಯ ನಿರ್ಮಾಣ ಪೂರ್ಣಗೊಳಿಸಲಾಗಿದೆ. ಆದರೆ ಅವುಗಳು ನೀರಿನ ಸೌಲಭ್ಯವಿಲ್ಲದೇ ಗಬ್ಬೆದ್ದು ನಾರುತ್ತಿವೆ.

ಇಲ್ಲಿನ ಸುಭಾಷ್‌ ಸರ್ಕಲ್‌, ಅಂಬೇಡ್ಕರ್‌ ಕಾಲೊನಿ, ಲಾಲ್‌ ಬಹ್ದೂರ್‌ ಶಾಸ್ತ್ರಿ ತರಕಾರಿ ಮಾರುಕಟ್ಟೆ,  ಹುಕ್ಕೇರಿಮಠದ ಎಂ.ಜಿ.ರಸ್ತೆ ಪಕ್ಕದ ಸಾರ್ವ ಜನಿಕ ಶೌಚಾಲಯಗಳು ಸ್ವಚ್ಛತೆ ಹಾಗೂ ನೀರಿನ ಸೌಲಭ್ಯವಿಲ್ಲದೇ ಗಬ್ಬೆದ್ದಿವೆ.

ಜಿಲ್ಲಾ ಕೇಂದ್ರವಾದ ನಗರಕ್ಕೆ ಪ್ರತಿನಿತ್ಯ ಸಾವಿರಾರು ಜನ ಬರುತ್ತಾರೆ. ಆದರೆ, ಶೌಚಾಲಯ ಇಲ್ಲದೇ  ರಸ್ತೆ ಬದಿ, ಸರ್ಕಾರಿ ಕಚೇರಿ ಗೋಡೆ, ಆವರಣ ಗೋಡೆ, ಶಾಲಾ ಆವರಣ ಗೋಡೆ, ಹಳೇ ಗ್ರಂಥಾಲಯದ ಗೋಡೆ, ನಗರಸಭೆ ಗೋಡೆ, ಗಾಂಧಿ ವೃತ್ತ ಬಳಿ ಇರುವ ಪಾರ್ಕಿಂಗ್‌ ಹಿಂದೆ, ಜಿಲ್ಲಾ ಗುರುಭವನದ ಮುಂದಿನ ಭಂಗಿ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ.

‘ಈ ರಸ್ತೆಗಳಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಸಂಚರಿಸು ವುದೇ ಕಷ್ಟಕರವಾಗಿದೆ’ ಎನ್ನುತ್ತಾರೆ ವ್ಯಾಪಾರಿ ಸುಲೇಮಾನ ಬೇಗನವರ. ‘ನಗರದ ಕೇಂದ್ರೀಯ ಬಸ್‌ ನಿಲ್ದಾಣ ಹೊರತುಪಡಿಸಿ, ಬೇರೆಡೆ ಮಹಿಳೆಯರಿಗೆ ಶೌಚಾಲಯದ ಸುಸಜ್ಜಿತ ಶೌಚಾಲಯ ಇಲ್ಲ. ಹೀಗಾಗಿ ಗ್ರಾಮೀಣ ಭಾಗದಿಂದ ಬರುವ ಮಹಿಳೆಯರ ಸಂಕಟ ಹೇಳತೀರದು’ ಎಂದು ಸರ್ಕಾರಿ ಉದ್ಯೋಗಿಯೊಬ್ಬರು ತಿಳಿಸಿದರು.

* * 

‌ಗೂಗಿಕಟ್ಟಿ, ಜಾನುವಾರು ಮಾರುಕಟ್ಟೆಯಲ್ಲಿ ಪಾವತಿಸಿ ಉಪಯೋಗಿಸುವ ಶೌಚಾಲಯಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು
ಪಾರ್ವತೆಮ್ಮ ಹಲಗಣ್ಣನವರ
ಅಧ್ಯಕ್ಷೆ, ನಗರಸಭೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT