ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಎಸ್‌ಗೆ ₹60 ಲಕ್ಷ ನಿವ್ವಳ ಲಾಭ

Last Updated 14 ಸೆಪ್ಟೆಂಬರ್ 2017, 6:34 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ತಾಲ್ಲೂಕು ಮಾರ್ಕೆಟಿಂಗ್ ಸೊಸೈಟಿಯು (ಟಿಎಂಎಸ್) ಆರ್ಥಿಕ ವರ್ಷದ ಅಂತ್ಯದಲ್ಲಿ ₹60.10 ಲಕ್ಷ ನಿಕ್ಕಿ ಲಾಭಗಳಿಸಿದೆ. ಶೇರು ಸದಸ್ಯರಿಗೆ ಶೇ 15 ಡಿವಿಡೆಂಡ್ ಹಂಚಿಕೆ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ.

ಟಿಎಂಎಸ್‌ನ ಕಾರ್ಯಚಟುವಟಿಕೆ ಕುರಿತು ಅಧ್ಯಕ್ಷ ಜಿ.ಎಂ. ಹೆಗಡೆ ಹುಳಗೋಳ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಆರ್ಥಿಕ ವರ್ಷದಲ್ಲಿ ಸಂಘದಲ್ಲಿ 73,176 ಕ್ವಿಂಟಲ್ ಮಹಸೂಲು ವಿಕ್ರಿಯಾಗಿದ್ದು, ಇದು ಈವರೆಗಿನ ಗರಿಷ್ಠ ಪ್ರಮಾಣದ ವಿಕ್ರಿಯಾಗಿದೆ.

ಸ್ವಂತ ಬಂಡವಾಳವು ₹20.84 ಕೋಟಿಯಿಂದ ₹24.43 ಕೋಟಿಗೆ ಏರಿಕೆಯಾಗಿದೆ. ಠೇವಣಿ ಮೊತ್ತವು ₹27.08 ಕೋಟಿಗಳಿಂದ ₹33.61 ಕೋಟಿಗೆ ಹೆಚ್ಚಳವಾಗಿದೆ. ಸಂಘದ ವಹಿವಾಟು ₹189.78 ಕೋಟಿಯಿಂದ ₹208.33 ಕೋಟಿಗೆ, ದುಡಿಯುವ ಬಂಡವಾಳವು ₹71.20 ಕೋಟಿಯಿಂದ ₹92.32 ಕೋಟಿಗೆ ತಲುಪಿದೆ ಎಂದರು.

ನೇರ ಖರೀದಿ ವಿಭಾಗದಲ್ಲಿ 15,655 ಕ್ವಿಂಟಲ್ ಅಡಿಕೆ ಖರೀದಿಸಲಾಗಿದೆ. ಸಂಘದಲ್ಲಿ ಮಾರಾಟವಾದ ಅಡಿಕೆಯ ಶೇ 21ರಷ್ಟನ್ನು ಸಂಘವೇ ಖರೀದಿಸಿ ಗ್ರೇಡಿಂಗ್ ಮಾಡಿ ವಿಕ್ರಿ ಮಾಡಿದೆ. ಕೃಷಿ ವಿಭಾಗದಲ್ಲಿ ₹8.46 ಕೋಟಿ ವಿಕ್ರಿ ವ್ಯವಹಾರ ನಡೆದಿದೆ. ಬನವಾಸಿ ಶಾಖೆಯಲ್ಲಿ ₹2.75 ಕೋಟಿ ವ್ಯವಹಾರ ನಡೆಸಿ ₹24.53 ಲಕ್ಷ ಲಾಭ ಗಳಿಸಲಾಗಿದೆ.

ಸದಸ್ಯರಿಗೆ ಮಹಸೂಲು ವಿಕ್ರಿಯ ಆಧಾರದ ಮೇಲೆ ₹59.31 ಲಕ್ಷ ರಿಯಾಯಿತಿ ನೀಡಲಾಗಿದೆ. ಪಶು ಆಹಾರ ಘಟಕದಲ್ಲಿ ₹4.04 ಕೋಟಿ ಮೌಲ್ಯದ ಪಶು ಆಹಾರ ಮಾರಾಟ ಮಾಡಲಾಗಿದೆ. ಕೃಷಿ ವಿಭಾಗದಲ್ಲಿ ಡ್ರಿಪ್ಸ್, ಪೈಪ್‌, ಪಂಪ್‌ಸೆಟ್, ರೂಫ್ ಶೀಟ್ಸ್‌ಗಳು ಸಿಗುತ್ತವೆ. ಸಂಘದ ಸದಸ್ಯರು ಅಥವಾ ಅವರ ಕುಟುಂಬದ ಸದಸ್ಯರಿಗೆ ಅನಾರೋಗ್ಯವಾದಲ್ಲಿ ಆಸ್ಪತ್ರೆ ಖರ್ಚಿನ ಶೇ 25ರಷ್ಟನ್ನು ಆರೋಗ್ಯ ಸುರಕ್ಷಾ ನಿಧಿಯಿಂದ ನೀಡಲಾಗುತ್ತದೆ.

ಸದಸ್ಯರ ಹೊಲದಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರಿಗೆ ಕೃಷಿ ಕೆಲಸದಲ್ಲಿ ತೊಡಗಿರುವಾಗ ಅಪಘಾತವಾದಲ್ಲಿ ₹50ಸಾವಿರ, ಮೃತಪಟ್ಟಲ್ಲಿ ₹1ಲಕ್ಷ ಮೊತ್ತವನ್ನು ಅಪಘಾತ ವಿಮಾ ಯೋಜನೆ ಅಡಿಯಲ್ಲಿ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಹೈನುಗಾರಿಕೆಗೆ ಅನುಕೂಲವಾಗುವಂತೆ ಒಣಮೇವಿನ ವ್ಯವಸ್ಥಿತ ಪೂರೈಕೆ ಬಗ್ಗೆ ಮೇವಚ್ಚು ಘಟಕವನ್ನು ದಾಸನಕೊಪ್ಪದಲ್ಲಿ ಪ್ರಾರಂಭಿಸಲಾಗಿದೆ. ಜೋಳದ ದಂಟಿನಿಂದ ಪ್ರಾಯೋಗಿಕವಾಗಿ ಮೇವಚ್ಚು ಸಿದ್ಧಪಡಿಸಿ 70 ಕ್ವಿಂಟಲ್ ವಿಕ್ರಿ ಮಾಡಲಾಗಿದೆ. ಹೈಡ್ರೊಫೋನಿಕ್ಸ್ ತಂತ್ರಜ್ಞಾನದ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು. ನಿರ್ದೇಶಕ ಎಂ.ಪಿ. ಹೆಗಡೆ ಹೆಗಡೆಕಟ್ಟಾ, ಕೇಶವ ಹೆಗಡೆ ಗಡೀಕೈ, ಮುಖ್ಯ ಕಾರ್ಯನಿರ್ವಾಹಕ ಎಂ.ಎ. ಹೆಗಡೆ, ಕೃಷಿ ಅಧಿಕಾರಿ ಕಿಶೋರ ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT