ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಹೊಸೂರು ವೃತ್ತ ಕೆಸರುಮಯ

Last Updated 15 ಸೆಪ್ಟೆಂಬರ್ 2017, 5:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪ್ರತಿ ಸಾರಿ ಮಳೆ ಬಂದಾಗ ಹೊಸೂರು ವೃತ್ತದಲ್ಲಿ ನೀರು ನಿಂತು ಸಣ್ಣ ಕೆರೆಯೇ ಸೃಷ್ಟಿಯಾಗುತ್ತದೆ. ಮಳೆ ಪ್ರಮಾಣ ಹೆಚ್ಚಾದಂತೆ ನೀರು ಮಳಿಗೆಗಳಿಗೆ ನುಗ್ಗುತ್ತದೆ. ಮಳೆ ನೀರಿನಿಂದ ತೊಂದರೆ ಅನುಭವಿಸುತ್ತಿರುವ ನಾಗರಿಕರ ಗೋಳು ಹೇಳತೀರದಾಗಿದೆ.

ಮಳೆ ಬಂತೆಂದರೆ ಸಾಕು ವೃತ್ತದ ಸಮೀಪ ಇರುವ ಹೋಟೆಲ್‌, ಆಫ್ಟಿಕಲ್ಸ್‌ ಮಳಿಗೆಯವರು ಷಟರ್‌ ಎಳೆದು ಕೂರುತ್ತಾರೆ. ನೀರು ಎಲ್ಲಿ ಮಳಿಗೆಗೆ ನುಗ್ಗುತ್ತದೆ ಎಂಬ ಆತಂಕ ಇವರನ್ನು ಕಾಡುತ್ತದೆ. ವೃತ್ತದ ಸುತ್ತಲೂ ನೀರು ನಿಲ್ಲುವುದರಿಂದ ಪಾದಚಾರಿಗಳೂ ಓಡಾಡಲು ಸಾಧ್ಯವಾಗುವುದಿಲ್ಲ.

ಮಳೆ ನಿಂತರೂ ವೃತ್ತದ ಸುತ್ತಲೂ ಮಣ್ಣಿನ ರಾಡಿ ಸದಾ ಇರುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೆ ಜಾರಿ ಬೀಳುವುದಂತೂ ಖಚಿತ. ನೀರು ನಿಂತಲ್ಲೇ ನಿಂತಿರುವುದರಿಂದ ಗಬ್ಬು ನಾರುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ.

ವೃತ್ತದ ಬದಿಯಲ್ಲೇ ಮುರಿದ ಬ್ಯಾರಿಕೇಡ್‌ವೊಂದನ್ನು ಇಡಲಾಗಿದ್ದು, ಅದರ ಪಕ್ಕದಲ್ಲೇ ದೊಡ್ಡ ಹೊಂಡವಿದೆ. ರಾತ್ರಿ ವೇಳೆ ಹೊಂಡಕ್ಕೆ ಬೀಳುವ ಅಪಾಯ ಹೆಚ್ಚಿದೆ. ಬಹಳಷ್ಟು ಬಹುತೇಕ ಮಂದಿ ಹೊಂಡಕ್ಕೆ ಬಿದ್ದಿರುವ ನಿದರ್ಶನಗಳೂ ಇವೆ.

ವೃತ್ತಕ್ಕೆ ಹೊಂದಿಕೊಂಡಿರುವ ಎಟಿಎಂ ಕೊಠಡಿ ಒಳಗೆ ನೀರು ನುಗ್ಗಿ ಯಂತ್ರ ಹಾಳಾಗುತ್ತಿತ್ತು. ನೀರು ಒಳ ನುಗ್ಗದಂತೆ ಎಟಿಎಂ ಕೇಂದ್ರದ ಮುಂದೆ ಬ್ಯಾಂಕ್‌ನವರು, ಕಾಂಕ್ರೀಟ್ ಬ್ಲಾಕ್‌ಗಳನ್ನು ಅಡ್ಡಲಾಗಿ ಹಾಕಿದ್ದಾರೆ. ಮಳೆ ಹೆಚ್ಚಾದರೆ ಕಾಂಕ್ರೀಟ್‌ ಬ್ಲಾಕ್‌ಗಳನ್ನು ದಾಟಿ ನೀರು ಒಳ ನುಗ್ಗುತ್ತದೆ.

‘ಮಳೆ ನೀರು ನಿಲ್ಲುವುದರಿಂದ ವ್ಯಾಪಾರ ನಡೆಸುವುದು ಕಷ್ಟ. ನಿಂತ ನೀರನ್ನು ದಾಟಿಕೊಂಡು ಬರಲು ಗ್ರಾಹಕರು ಹಿಂದೇಟು ಹಾಕುತ್ತಾರೆ. ಇದರಿಂದ ವ್ಯಾಪಾರ ಕ್ಷೀಣಿಸಿದೆ. ಪಾಲಿಕೆ ಅಧಿಕಾರಿಗಳು ಆಗಾಗ್ಗೆ ಬಂದು ಸ್ಥಳ ಪರಿಶೀಲನೆ ಮಾಡಿ ಹೋಗುತ್ತಾರೆ ಹೊರತು ಸಮಸ್ಯೆ ಪರಿಹರಿಸಿಲ್ಲ’ ಎಂದು  ಎಸ್‌. ಮುರಳಿ ದೂರಿದರು.

* * 

ಮಳೆ ಜೋರಾಗಿ ಬಂದರೆ ನೀರು ಸೀದಾ ಅಂಗಡಿಗಳ ಒಳಗೆ ನುಗ್ಗುತ್ತದೆ. ನೀರು ಹೊರಹಾಕುವುದೇ ಕೆಲಸವಾಗುತ್ತದೆ. ಪಾಲಿಕೆ ಅಧಿಕಾರಿಗಳು ಜಾಣ ಕುರುಡುತನ ತೋರುತ್ತಿದ್ದಾರೆ
ಮಹೇಶ್‌ ಹೋಜಾ
ಜವಾಹರ ಆಫ್ಟಿಕಲ್ಸ್‌, ಹೊಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT