ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚಾಲಯ ಈ ರುದ್ರಭೂಮಿ

Last Updated 15 ಸೆಪ್ಟೆಂಬರ್ 2017, 9:55 IST
ಅಕ್ಷರ ಗಾತ್ರ

ಮಾಯಕೊಂಡ: ಮಾಯಕೊಂಡದಲ್ಲಿ ಊರಿಗೆ ಕೂಗಳತೆ ದೂರದ  ರುದ್ರಭೂಮಿ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಗ್ರಾಮದ ಬಯಲು ಶೌಚಾಲಯವಾಗಿದೆ!
ಕಾಲಿಡಲೂ ಅಸಹ್ಯ ಪಡುವಂಥ ಹೇಸಿಗೆ, ದಟ್ಟವಾಗಿ ಬೆಳೆದ ಗಿಡಗಂಟಿ, ಮುಳ್ಳು ಪೊದೆ, ಅಲ್ಲಲ್ಲಿ ಬಿದ್ದ ಹೆಣ ತಂದ ಚಟ್ಟ, ಕೊಳೆತ ಹಾಸಿಗೆ, ಪ್ರಾಣಿಗಳ ಕಳೇಬರಗಳು ಬೀರುವ ದುರ್ನಾತ ರುದ್ರಭೂಮಿಯ ದುರಾವಸ್ಥೆ ಸಾರುತ್ತಿವೆ.

ಮಾಯಕೊಂಡದ 190ರಲ್ಲಿ 3ಎಕರೆ 1ಗುಂಟೆ ಸ್ಮಶಾನ ಮತ್ತು ರಿ.ಸ.ನಂ.196ರಲ್ಲಿ 4ಎಕರೆ ಸರ್ಕಾರಿ ಕರಾಬಿನಲ್ಲಿ ರುದ್ರಭೂಮಿಗೆ ಲಗತ್ತಾದ ಹೊಂಡವಿದೆ. ರುದ್ರಭೂಮಿಗೆ ಹದ್ದುಬಸ್ತು, ಕಾಂಪೌಂಡು ಇಲ್ಲದೇ ಬಹು ಹಿಂದಿನಿಂದಲೂ ಬಹಿರ್ದೆಸೆಯ ತಾಣವಾಗಿದೆ. ಬೆಳಿಗ್ಗೆ ಎದ್ದೊಡನೆ ಜನ ಅನಾಯಾಸ ಇಲ್ಲಿಗೆ ಬಹಿರ್ದೆಸೆ‌ಗೆ ತೆರಳುತ್ತಾರೆ. 

ಮನೆಗಳಲ್ಲಿ ಶೌಚಾಲಯವಿದ್ದವರೂ ಇಲ್ಲಿಗೇ ಬಹಿರ್ದೆಸೆಗೆ ಬರುವ ಅಭ್ಯಾಸವಿದೆ. ಬಯಲು ಬಹಿರ್ದೆಸೆ ತಡೆಯಲು ಸರ್ಕಾರ, ಜಿಲ್ಲಾ ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳು ಕ್ರಮ ಕೈಗೊಂಡಿದ್ದರೂ, ಪರಿಸ್ಥಿತಿ ಮುಂದುವರಿದಿದೆ.

ಅಂತ್ಯಸಂಸ್ಕಾರಕ್ಕೆ ರುದ್ರಭೂಮಿಗೆ ಬಂದವರು ಮುಳ್ಳು ಪೊದೆ , ಹೇಸಿಗೆ, ಕೆಸರಿನ ನಡುವೆಯೇ ಪರದಾಡಬೇಕು. ಹೆಣ ಹೊತ್ತವರಂಥೂ ಹೇಸಿಗೆಯಿಲ್ಲದ ಜಾಗದಲ್ಲಿ ಕಾಲಿಡಲು ಹುಡುಕಾಡಬೇಕು, ಮಳೆ ಬಂದಾಗ ಕೆಸರಿನಲ್ಲಿ ಕಾಲು ಕಿತ್ತಿಡುವುದೂ ಕಷ್ಟವಾಗುತ್ತದೆ, ಸಂಸ್ಕಾರ ಮಾಡಿ 3 ದಿನದ ನಂತರ ಸಂಪ್ರದಾಯದಂತೆ ಸಮಾಧಿ ಪೂಜೆ ಮಾಡಲು ಹೋದರೆ ಸಮಾಧಿ ಬಳಿಯೇ ಹೊಲಸಾಗಿರುತ್ತದೆ ಎಂದು  ಅಂತ್ಯಸಂಸ್ಕಾರಕ್ಕೆ ಬರುವವರು ಬೇಸರ ವ್ಯಕ್ತಪಡಿಸುತ್ತಾರೆ.

ರುದ್ರಭೂಮಿ ಊರಿಗೆ ಹತ್ತಿರವಿದ್ದು, ಸತ್ತ ಪ್ರಾಣಿ ಇತ್ಯಾದಿ ಮಾಂಸತ್ಯಾಜ್ಯವನ್ನು ಜನ ಇಲ್ಲಿ ಹಾಕುವುದರಿಂದ ಇಡೀ ಪ್ರದೇಶವೇ ಆಗಾಗ ದುರ್ನಾತ ಬೀರುತ್ತದೆ. ಸತ್ತ ಪ್ರಾಣಿಗಳ ಅಂಗಾಗಳನ್ನು ನಾಯಿ, ನರಿ ಅಕ್ಕಪಕ್ಕದ ಜಮೀನು, ಖಣಗಳಿಗೂ, ಒಮ್ಮೊಮ್ಮೆ ಊರೊಳಗೂ ಎಳೆದು ತಂದು ಹಾಕುತ್ತವೆ. ಪಂಚಾಯ್ತಿಯವರು ಜಂಗಲ್ ತೆಗೆಯಿಸಿ, ಸ್ವಚ್ಛಗೊಳಿಸುವ ಗೋಜಿಗೆ ಹೋಗುವುದಿಲ್ಲ ಎನ್ನುತ್ತಾರೆ ಎಸ್. ಆರ್. ಜಗದೀಶ, ಹರಿಶಂಕರ, ರಾಮಸ್ವಾಮಿ, ಮಹೇಶಪ್ಪ.

‘ರುದ್ರಭೂಮಿ ಅಭಿವೃದ್ಧಿ ಪಡಿಸದಿರುವುದೇ ಬಯಲು ಶೌಚಾಲಯವಾಗಲು ಕಾರಣ. ಹೊಂಡದ ಸುತ್ತ ಬೆಳೆದ ಜಾಲಿ ರಸ್ತೆಗೆ ಆವರಿಸಿದೆ ಕೇಳುವವರಿಲ್ಲ. ಕಾಂಪೋಂಡ್, ದೇವಾಲಯ ನಿರ್ಮಿಸಿ, ನೀರಿನ ಸೌಲಭ್ಯ, ಆಧುನಿಕ ಬರ್ನರ್ ಒದಗಿಸಲು ಶಾಸಕರು ಮತ್ತು ಗ್ರಾಮ ಪಂಚಾಯ್ತಿ ಮುಂದಾಗಬೇಕು, ಎಂದು ಮಂಜುನಾಥ, ನಾಗರಾಜ, ಸಿದ್ದೇಶ, ಶೇಖರಪ್ಪ   ಒತ್ತಾಯಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT