ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ವಜಾಗೊಳಿಸದಿದ್ದರೆ ಜಿಲ್ಲಾ ಬಂದ್‌ಗೆ ಕರೆ

Last Updated 18 ಸೆಪ್ಟೆಂಬರ್ 2017, 9:06 IST
ಅಕ್ಷರ ಗಾತ್ರ

ಕೋಲಾರ: ಶಾಶ್ವತ ನೀರಾವರಿ ಹೋರಾಟಗಾರರ 11 ಮಂದಿ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ವಜಾಗೊಳಿಸಬೇಕು, ಇಲ್ಲವೇ ಸೆ.20ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸಿದ ವೇಳೆ ಕಪ್ಪು ಬಾವುಟ ಪ್ರದರ್ಶಿಸುವುದರ ಜತೆಗೆ ಶವಯಾತ್ರೆ ನಡೆಸುತ್ತೇವೆ, ಇಲ್ಲವಾದರೆ ಕೋಲಾರ ಜಿಲ್ಲೆ ಬಂದ್‌ಗೆ ಕರೆ ನೀಡಲಾಗುವುದು ಎಂದು ಪ್ರಗತಿ ಪರ ಸಂಘಟನೆಗಳ ಮುಖಂಡರು ಜಿಲ್ಲಾಡಳಿತಕ್ಕೆ ಭಾನುವಾರ ಎಚ್ಚರಿಕೆ ನೀಡಿದರು.

ಸೆ.20ರಂದು ಜಿಲ್ಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಪ್ರಗತಿಪರ ಸಂಘಟನೆಗಳ ಮುಖಂಡ ಸಭೆಯಲ್ಲಿ ಮುಖಂಡರು ಎಚ್ಚರಿಕೆಯನ್ನು ನೀಡಿದರು.

ನೀರಾವರಿ ಹೋರಾಟ ಸಮಿತಿ ಸಂಚಾಲಕ ವಿ.ಕೆ.ರಾಜೇಶ್‌ ಮಾತನಾಡಿ, ‘ನಮ್ಮ ಸ್ವಾರ್ಥಕ್ಕಾಗಿ ಹೋರಾಟ ನಡೆಸುತ್ತಿಲ್ಲ. ಜಿಲ್ಲೆಯ ಜನರಿಗಾಗಿ, ಭವಿಷ್ಯಕ್ಕಾಗಿ ನೀರು ಕೊಡಿ ಎಂದು ಒತ್ತಾಯಿಸಿ 150ನೇ ದಿನದಂದು ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ಹೋರಾಟ ಮಾಡಿದ್ದೆವು. ಆಕಸ್ಮಿಕವಾಗಿ ಗಾಜು ಹೊಡೆದು ಹೋಗಿದೆ. ಅದಕ್ಕಾಗಿ 11 ಮಂದಿಯ ವಿರುದ್ಧ ಇಲ್ಲ ಸಲ್ಲದ ಕಾಯದಸೆಗಳಡಿಯಲ್ಲಿ ಪ್ರಕರಣ ದಾಖಲಿಸುವುದು ಯಾವ ನ್ಯಾಯ ಪ್ರಶ್ನಿಸಿದರು.

ಸಚಿವ ರಮೇಶ್‌ಕುಮಾರ್ ಸಹ ನೀರಾವರಿ ಹೋರಾಟಗಾರರೆ. ಅವರ ಕಚೇರಿ ಎದುರು ಪ್ರತಿಭಟನೆ ಮಾಡಿದ ನೀರಾವರಿ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸಲು ಸೂಚಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ರಮೇಶ್‌ಕುಮಾರ್ ಪಾದಯಾತ್ರೆ ಮಾಡಬಹುದು. ಹೆದ್ದಾರಿ ಪ್ರಾಧಿಕಾರದವರನ್ನು ಹೆದರಿಸಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪೈಪ್‍ಲೈನ್ ಕಾಮಗಾರಿಯನ್ನು ನಡೆಸಬಹುದು ಆದರೆ, ಆದರೆ ರೈತರು, ವಿದ್ಯಾರ್ಥಿಗಳು ನೀರಿಗಾಗಿ ಹೋರಾಟ ಮಾಡುವುದು ತಪ್ಪೇ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಸಿದ್ದರಾಮ್ಯಯ ಜಿಲ್ಲೆಗೆ ಆಗಮಿಸುವ ವೇಳೆಗೆ ನೀರಾವರಿ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಜಾಗೊಳಿಸಲು ಹಾಗೂ ನೀರಾವರಿ ಯೋಜನೆಗಳ ಕುರಿತು ಸ್ಪಷ್ಟನೆ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಬೇಕು’ ಎಂದು ಸಂಚಾಲಕರಾದ ಪ್ರಕಾಶ್, ವೆಂಕಟೇಶ್ ಒತ್ತಾಯಿಸಿದರು.

ರಮೇಶ್‌ಕುಮಾರ್ ವಚನ ಭ್ರಷ್ಟ: ನೀರಾವರಿ ಹೋರಾಟಗಾರ ಕೆ.ಸಿ.ಸಂತೋಷ್ ಮಾತನಾಡಿ, ‘ಆ.15ರ ಒಳಗಾಗಿ ಜಿಲ್ಲೆಗೆ ಕೆಸಿವ್ಯಾಲಿ ನೀರು ಹರಿಸದಿದ್ದರೆ ಧ್ಜಜಾರೋಹಣ ನೆರವೇರಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಹೇಳಿದ್ದನ್ನು ನೆರವೇರಿಸಲಾಗದೆ ವಚನ ಭ್ರಷ್ಟರಾಗಿದ್ದಾರೆ. ಹೀಗಾಗಿ ನಾವೇ ದೂರು ಕೊಡುತ್ತೇವೆ. ಅವರ ವಿರುದ್ಧ 420 ಪ್ರಕರಣ ದಾಖಲಿಸಿ’ ಎಂದು ಎಚ್ಚರಿಸಿದರು.

ಸರ್ಕಾರಕ್ಕೆ ವರದಿ: ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಮಾತನಾಡಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಾರ್ಜ್‌ಶೀಟ್ ಆಗಿದೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದ್ದು, ಸರ್ಕಾರಕ್ಕೆ ಕೂಡಲೇ ವರದಿ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.

ಕೆಸಿ ವ್ಯಾಲಿ ಯೋಜನೆಯನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸಲು ಶಕ್ತಿ ಮೀರಿ ಪಯತ್ನ ನಡೆಸಲಾಗುತ್ತಿದೆ. ಈಗಾಗಲೇ ಕೆರೆಗಳ ಹಾಗೂ ರಾಜಕಾಲುವೆಗಳ ಪುನಶ್ಚೇತನ ಕಾರ್ಯ ಪ್ರಗತಿಯಲಿದೆ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ ಮಾತನಾಡಿ, ‘ಕೃಷಿ ಇಲಾಖೆಯಿಂದ ನೀಡಲಾಗಿರುವ ಬಿತ್ತನೆ ರಾಗಿಯು ಕಳಪೆಯಾಗಿದ್ದು, ಶೇ.50ರಷ್ಟು ಬೆಳೆ ಬಾರದೆ ರೈತ ಕಂಗಾಲಾಗಿದ್ದಾನೆ’ ಎಂದು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ, ‘ಈಗಾಗಲೇ ಕೃಷಿ ಇಲಾಖೆಯ ನಿರ್ದೇಶಕರ ಗಮನಕ್ಕೆ ತರಲಾಗಿದ್ದು, ತಿಂಗಳಾಂತ್ಯದೊಳಗೆ ವರದಿ ಸಿಗಲಿದೆ. ಆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗುವುದು’ ಎಂದು ತಿಳಿಸಿದರು.

ಸೆ.20ರಂದು ಮುಖ್ಯಮಂತ್ರಿಯವರು ಆಗಮಿಸಿದ ವೇಳೆ ಮನವಿ ಸಲ್ಲಿಸಲು ಹಾಗೂ ಮಾತನಾಡಲು ಅವಕಾಶ ಮಾಡಿಕೊಡಬೇಕು ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಮನವಿ ಮಾಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಜ್ ಸೆಪಟ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT